ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ: ವಿದ್ಯುತ್ ತಂತಿ ತುಳಿದು ತಾಯಿ-ಮಗು ಸಾವು

Published 19 ನವೆಂಬರ್ 2023, 5:01 IST
Last Updated 19 ನವೆಂಬರ್ 2023, 5:01 IST
ಅಕ್ಷರ ಗಾತ್ರ

ಬೆಂಗಳೂರು: ಕಂಬದಿಂದ ತುಂಡರಿಸಿ ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ತಾಯಿ– ಮಗು ಮೃತಪಟ್ಟಿದ್ದು, ನಿರ್ಲಕ್ಷ್ಯದ ಆರೋಪದಡಿ ಬೆಸ್ಕಾಂನ ಇಬ್ಬರು ಎಂಜಿನಿಯರ್‌ಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

‘ಹೋಪ್‌ ಫಾರ್ಮ್‌ ಜಂಕ್ಷನ್ ಬಳಿಯ ಎ.ಕೆ. ಗೋಪಾಲ್ ಕಾಲೊನಿ ನಿವಾಸಿ ಸೌಂದರ್ಯ (23) ಹಾಗೂ ಅವರ 9 ತಿಂಗಳ ಹೆಣ್ಣು ಮಗು ಸುವಿಕ್ಸಾ ಲಿಯ ಮೃತರು. ನಿರ್ಲಕ್ಷ್ಯದಿಂದಾಗಿ ಇವರಿಬ್ಬರ ಸಾವಿಗೆ ಕಾರಣವಾಗಿರುವ ಆರೋಪದಡಿ ಬೆಸ್ಕಾಂನ ಐವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ಪತಿ ಮನೆಯಿಂದ ಬಂದಿದ್ದ ಬಾಣಂತಿ: ‘ಸೌಂದರ್ಯ ಅವರನ್ನು ಕೆಲ ವರ್ಷಗಳ ಹಿಂದೆಯಷ್ಟೇ ಚೆನ್ನೈನ ವ್ಯಕ್ತಿಯೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಸೌಂದರ್ಯ ಹಾಗೂ ಪತಿ, ತಮಿಳುನಾಡಿನಲ್ಲಿ ನೆಲೆಸಿದ್ದರು. ಸೌಂದರ್ಯ, ತಾಯಿ ನೋಡಲೆಂದು ಮಗುವಿನ ಜೊತೆ ಭಾನುವಾರ ಬೆಳಿಗ್ಗೆ ಬೆಂಗಳೂರಿಗೆ ಬಂದಿದ್ದರು’ ಎಂದು ಹೇಳಿದರು.

ಬೆಂಕಿ ಹೊತ್ತಿಕೊಂಡು ಸಾವು:

‘ವೈಟ್‌ಫೀಲ್ಡ್‌ ಸಮೀಪದ ಹೋಪ್‌ ಫಾರ್ಮ್‌ ಜಂಕ್ಷನ್ ಬಳಿಯ ಬಿಎಂಟಿಸಿ ತಂಗುದಾಣದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಬಸ್‌ನಿಂದ ಇಳಿದಿದ್ದ ಸೌಂದರ್ಯ, ಮಗುವನ್ನು ಎತ್ತಿಕೊಂಡು ತಾಯಿ ಮನೆಯತ್ತ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೊರಟಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಪಾದಚಾರಿ ಮಾರ್ಗದಲ್ಲಿ ವಿದ್ಯುತ್ ತಂತಿ ತುಂಡರಿಸಿ ಬಿದ್ದಿತ್ತು. ಸೌಂದರ್ಯ ಇದನ್ನು ಗಮನಿಸಿರಲಿಲ್ಲ. ನಡೆಯುವಾಗ ತಂತಿ ಮೇಲೆ ಕಾಲಿಟ್ಟಿದ್ದರು. ವಿದ್ಯುತ್ ತಗುಲಿ ಬೆಂಕಿ ಹೊತ್ತಿಕೊಂಡು ತಾಯಿ– ಮಗು ಸ್ಥಳದಲ್ಲೇ ಮೃತಪಟ್ಟರು. ಅವರಿಬ್ಬರನ್ನು ನೋಡಿದ್ದ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಹೇಳಿದರು.

ನಸುಕಿನಲ್ಲಿ ತುಂಡರಿಸಿ ಬಿದ್ದಿದ್ದ ತಂತಿ:

‘ಭಾನುವಾರ ನಸುಕಿನಲ್ಲಿ ಕಂಬದಿಂದ ವಿದ್ಯುತ್ ತಂತಿ ತುಂಡರಿಸಿ ಬಿದ್ದಿದ್ದ ಬಗ್ಗೆ ಮಾಹಿತಿ ಇದೆ. ಆದರೆ, ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿರಲಿಲ್ಲ. ಇವರ ನಿರ್ಲಕ್ಷ್ಯದಿಂದಲೇ ತಾಯಿ–ಮಗು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀರಾಮ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಸುಬ್ರಹ್ಮಣ್ಯ, ಸಹಾಯಕ ಎಂಜಿನಿಯರ್ ಚೇತನ್, ಕಿರಿಯ ಎಂಜಿನಿಯರ್ ರಾಜಣ್ಣ ಹಾಗೂ ಸ್ಟೇಷನ್ ಆಪರೇಟರ್ ಮಂಜುನಾಥ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದರು.

ತಜ್ಞರ ವರದಿ ಪಡೆದು ಕಾನೂನು ಕ್ರಮ: ‘ಘಟನೆ ಸಂಬಂಧ ಬೆಸ್ಕಾಂನ ಐವರನ್ನು ವಶಕ್ಕೆ ಪಡೆಯಲಾಗಿದೆ. ಘಟನೆಗೆ ಕಾರಣ ಯಾರು ಎಂಬ ಬಗ್ಗೆ ತಜ್ಞರ ವರದಿ ಪಡೆಯಲಾಗುವುದು. ಅದಾದ ನಂತರವೇ ಪುರಾವೆಗಳನ್ನು ಆಧರಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸರು ಹೇಳಿದರು. ಮೃತ ತಾಯಿ–ಮಗುವಿನ ಕುಟುಂಬಕ್ಕೆ ತಲಾ ₹ 5 ಲಕ್ಷ ಪರಿಹಾರ ನೀಡಲಾಗುವುದು. ಘಟನೆಗೆ ಕಾರಣವಾಗಿರುವ ಎಲ್ಲರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು
-ಕೆ.ಜೆ. ಜಾರ್ಜ್‌ ಇಂಧನ ಸಚಿವ
ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ: ಆರ್‌. ಅಶೋಕ
ವಿದ್ಯುತ್‌ ತಂತಿ ತಗುಲಿ ತಾಯಿ–ಮಗು ಮೃತಪಟ್ಟಿರುವ ಘಟನೆ ನಿಜಕ್ಕೂ ಆಘಾತಕಾರಿ. ಐ.ಟಿ ಸಿಟಿಯಲ್ಲಿ ಇಂತಹ ಘಟನೆ ನಡೆಯುತ್ತಿರುವುದು ನಾಚಿಕೆಯ ಸಂಗತಿ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT