ಮಂಗಳವಾರ, ಮೇ 17, 2022
23 °C

ನಿರ್ಮಾಣ ಹಂತದ ಕಟ್ಟಡದಲ್ಲಿ ಪತ್ನಿ ಕೊಲೆ; ವಿಧಾನಸೌಧ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸೌಧ ಠಾಣೆ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಸಂಚಿ ಉರವ್ (36) ಎಂಬ ಮಹಿಳೆಯನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಪತಿ ಫೂಲಚಂದ್ ಉರವ್ (40) ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಮೃತ ಸಂಚಿ, ಪಶ್ಚಿಮ ಬಂಗಾಳದವರು. ಕೆಲಸ ಹುಡುಕಿಕೊಂಡು ಪತಿ ಫೂಲಚಂದ್ ಜೊತೆ ನಗರಕ್ಕೆ ಬಂದಿದ್ದರು. ವಿಧಾನಸೌಧ ಸಮೀಪದ ಹೋಟೆಲೊಂದರ ಬಳಿ ಬಹುಮಹಡಿ ಕಟ್ಟಡ ನಿರ್ಮಿಸಲಾಗುತ್ತಿದ್ದು, ಅಲ್ಲಿಯೇ ದಂಪತಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕಟ್ಟಡದ ನೆಲಮಹಡಿಯಲ್ಲಿ ಕೊಠಡಿಗಳಿದ್ದು, ಅಲ್ಲಿಯೇ ದಂಪತಿ ಹಾಗೂ ಇತರೆ ಕಾರ್ಮಿಕರು ಉಳಿದುಕೊಂಡಿದ್ದರು. ಅಡುಗೆ ಹಾಗೂ ಇತರೆ ವಿಚಾರಗಳಿಗಾಗಿ ದಂಪತಿ ನಿತ್ಯವೂ ಜಗಳ ಮಾಡುತ್ತಿದ್ದರು. ಇದರಿಂದ ಕಿರಿಕಿರಿ ಅನುಭವಿಸಿದ್ದ ಅಕ್ಕ–ಪಕ್ಕದ ಕೊಠಡಿಗಳ ಕಾರ್ಮಿಕರು, ಮೇಲ್ವಿಚಾರಕರಿಗೆ ಮಾಹಿತಿ ನೀಡಿದ್ದರು.’

‘ದಂಪತಿಗೆ ಬುದ್ಧಿವಾದ ಹೇಳಿದ್ದ ಮೇಲ್ವಿಚಾರಕ, ‘ಜಗಳ ಮಾಡುವುದಾದರೆ, ಕೆಲಸ ಬಿಟ್ಟು ಹೋಗಿ’ ಎಂದಿದ್ದರು. ಜಗಳ ಮಾಡುವುದಿಲ್ಲವೆಂದು ದಂಪತಿ ಭರವಸೆ ನೀಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

ಎರಡು ದಿನ ಕೊಠಡಿಯಲ್ಲಿದ್ದ ಮೃತದೇಹ: ‘ಮಾರ್ಚ್ 26ರಂದು ಸಂಚಿ ಜೊತೆ ಜಗಳ ತೆಗೆದಿದ್ದ ಫೂಲಚಂದ್, ಮುಖ ಹಾಗೂ ತಲೆಗೆ ಹೊಡೆದು ಕೊಲೆ ಮಾಡಿದ್ದರು. ಮೃತದೇಹವನ್ನು ಕೊಠಡಿಯಲ್ಲಿ ಇರಿಸಿ ಪರಾರಿಯಾಗಿದ್ದರು. ಎರಡು ದಿನ ಕೊಠಡಿಯಲ್ಲೇ ಮೃತದೇಹವಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ದಂಪತಿ ಕೆಲಸಕ್ಕೆ ಬಾರದಿದ್ದರಿಂದ ಅನುಮಾನಗೊಂಡಿದ್ದ ಮೇಲ್ವಿಚಾರಕ, ಮಾರ್ಚ್ 28ರಂದು ಕೊಠಡಿಗೆ ಹೋಗಿ ಪರಿಶೀಲಿಸಿದಾಗಲೇ ಮೃತದೇಹ ಕಂಡಿತ್ತು. ಫೂಲಚಂದ್ ಮೇಲೆ ಅನುಮಾನ ವ್ಯಕ್ತಪಡಿಸಿ ಠಾಣೆಗೆ ದೂರು ನೀಡಿದ್ದರು. ತಮ್ಮೂರಿಗೆ ಹೊರಡಲು ಸಜ್ಜಾಗಿದ್ದ ಆರೋಪಿಯನ್ನು ಬಂಧಿಸಲಾಯಿತು’ ಎಂದೂ ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು