ಭಾನುವಾರ, ಆಗಸ್ಟ್ 1, 2021
27 °C
ಸಂವಿಧಾನ, ಧರ್ಮ, ವಿಜ್ಞಾನ, ವೈಚಾರಿಕೆ ಚಿಂತನೆಯ ಮೇಲೆ ನಡೆಯುತ್ತಿರುವ ದಾಳಿಯನ್ನು ಪ್ರತಿರೋಧಿಸದಿದ್ದರೆ ಉಳಿಗಾಲವಿಲ್ಲ

ತುರ್ತು ಪರಿಸ್ಥಿತಿಯಂತೆ ಸಂಘಟನೆ, ವಿರೋಧ ಪಕ್ಷಗಳು ಒಗ್ಗೂಡಬೇಕು: ಪ್ರಶಾಂತ್ ಭೂಷಣ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಾರ್ವಜನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಂವಿಧಾನ, ಧರ್ಮ, ವಿಜ್ಞಾನ, ವೈಚಾರಿಕೆ ಚಿಂತನೆಯ ಮೇಲೆ ದಾಳಿ ನಡೆಸಲಾಗುತ್ತಿದೆ. ಇಂತಹ ಬೆಳವಣಿಗೆಗಳ ವಿರುದ್ಧ ಪ್ರತಿರೋಧ ವ್ಯಕ್ತಪಡಿಸದಿದ್ದರೆ ಯಾರಿಗೂ ಉಳಿಗಾಲವಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಹೇಳಿದರು. 

‘ನಾವು ಭಾರತೀಯರು’ ಸಂಘಟನೆಯು ಭಾನುವಾರ ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ‘ಈ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾಗ, ಜಯಪ್ರಕಾಶ್‌ ನಾರಾಯಣ ಅವರ ನೇತೃತ್ವದಲ್ಲಿ ವಿರೋಧಪಕ್ಷಗಳು ಒಗ್ಗೂಡಿದ್ದವು. ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ದಾಳಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಎಲ್ಲ ವಿರೋಧ ಪಕ್ಷಗಳು, ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ಸಮಾನ ಮನಸ್ಕರು ಒಗ್ಗೂಡಿ ಹೋರಾಡಬೇಕಾದ ಅಗತ್ಯವಿದೆ’ ಎಂದರು. 

‘ನ್ಯಾಯಾಂಗವನ್ನು ದುರ್ಬಲಗೊಳಿಸುವ, ಶಿಕ್ಷಣ ರಂಗವನ್ನು ದುರ್ಬಳಕೆ ಮಾಡಿಕೊಳ್ಳುವ ಕಾರ್ಯ ನಡೆಯುತ್ತಿದೆ. ಆರ್‌ಎಸ್‌ಎಸ್‌ ಚಿಂತನೆ ಹೊಂದಿರುವವರನ್ನು ವಿಶ್ವವಿದ್ಯಾಲಯಗಳ ಕುಲಪತಿಯನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ನಾಯಕನನ್ನು ಪ್ರಶ್ನಿಸಬಾರದು, ಅವನು ಹೇಳಿದಂತೆಯೇ ಕೇಳಬೇಕು ಎಂಬ  ಆರ್‌ಎಸ್‌ಎಸ್‌ನ ಸಿದ್ಧಾಂತವನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಕೆಲಸ ನಡೆಯುತ್ತಿದೆ’ ಎಂದು ದೂರಿದರು. 

‘ಯಾವುದೇ ಪೂರ್ವಸಿದ್ಧತೆಯಿಲ್ಲದೆ ಲಾಕ್‌ಡೌನ್‌ ಘೋಷಿಸಿದ್ದರಿಂದ ಜನ ಸಂಕಷ್ಟಕ್ಕೆ ಒಳಗಾದರು. ಅವರ ಖಾತೆಗೆ ನೇರವಾಗಿ ಹಣ ವರ್ಗಾಯಿಸುವ, ಆಹಾರ–ಆಶ್ರಯ ಕಲ್ಪಿಸುವ ಕೆಲಸ ಮಾಡಬೇಕು. ನರೇಗಾ ಅಡಿ ಗ್ರಾಮೀಣ ಭಾಗದವರಿಗೆ ಮಾತ್ರವಲ್ಲದೆ, ನಗರ ಪ್ರದೇಶದವರಿಗೂ ಕೆಲಸ ಕೊಡುವ ಕಾರ್ಯವಾಗಬೇಕು’ ಎಂದರು. 

ಭಾಷಾತಜ್ಞ ಪ್ರೊ. ಗಣೇಶ್ ದೇವಿ, ‘ಧರ್ಮ, ಜಾತಿ, ಬಣ್ಣದ ಅಡಿ ಜನರನ್ನು ವಿಭಜಿಸಲಾಗುತ್ತಿದೆ. ಇಂತಹ ಯಾವುದೇ ವಿಭಜನೆ ವಿರುದ್ಧ ಹೋರಾಟ ನಡೆಸಬೇಕು. ರಾಷ್ಟ್ರೀಯ ಮಹತ್ವದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಸಂಘಟನೆಗಳು ಹೋರಾಟವನ್ನು ಸಂಘಟಿಸಬೇಕು’ ಎಂದರು. 

‘ತಪ್ಪು ವಿದೇಶಾಂಗ ನೀತಿಯಿಂದ ಗುಲ್ವಾನ್‌ನಲ್ಲಿ ಮೃತಪಟ್ಟ ವೀರಯೋಧರು, ಪೂರ್ವಸಿದ್ಧತೆಯಿಲ್ಲದೆ ಘೋಷಿಸಿದ ಲಾಕ್‌ಡೌನ್‌ನಿಂದ ಸಾವಿಗೀಡಾದವರು, ಕೊರೊನಾ ಸೋಂಕಿನಿಂದ ಮೃತರಾದವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ದೇಶದ ಎಲ್ಲೆಡೆ ಮೌನ ಶೋಕಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಮೌನದಿಂದಲೇ ಕೇಂದ್ರ ಸರ್ಕಾರದ ದುರಾಡಳಿತವನ್ನು ಪ್ರಶ್ನಿಸಬೇಕು’ ಎಂದು ಸಲಹೆ ನೀಡಿದರು. 

ಸಂಘಟನೆಯ ವಿನಯ್‌ ಶ್ರೀನಿವಾಸ್ ಸೇರಿದಂತೆ ಹಲವರು ಸಂವಾದದಲ್ಲಿ ಪಾಲ್ಗೊಂಡಿದ್ದರು. 

***

ಲಾಕ್‌ಡೌನ್‌ನಿಂದ ಸಂಕಷ್ಟ

‘ಪೂರ್ವಸಿದ್ಧತೆಯಿಲ್ಲದೆ ಲಾಕ್‌ಡೌನ್‌ ಘೋಷಿಸಿದ್ದರಿಂದ ಜನರು ಸಂಕಷ್ಟದಲ್ಲಿದ್ದಾರೆ. ಅವರ ಖಾತೆಗೆ ನೇರವಾಗಿ ಹಣ ವರ್ಗಾಯಿಸುವ, ಆಹಾರ–ಆಶ್ರಯ ಕಲ್ಪಿಸುವ ಕೆಲಸ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ನಗರ ಪ್ರದೇಶದವರಿಗೂ ಕೆಲಸ ಕೊಡಬೇಕು’.

- ಪ್ರಶಾಂತ್‌ ಭೂಷಣ್‌, ಹಿರಿಯ ವಕೀಲ

***

ಸುಗ್ರೀವಾಜ್ಞೆಗಳ ಸುಗ್ಗಿ

‘ಕೋವಿಡ್‌ನಿಂದ ಜನ ಸಾಯುತ್ತಿದ್ದರೆ, ಕೇಂದ್ರ ಸರ್ಕಾರ ಕಾಯ್ದೆಗಳಿಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆಗಳ ಸುಗ್ಗಿ ಹಮ್ಮಿಕೊಂಡಿದೆ. ಸರ್ಕಾರದ ಆದ್ಯತೆ ಏನಿರಬೇಕಿತ್ತು, ಏನಾಗಿವೆ ಎಂದು ಪ್ರಶ್ನಿಸುವವರ ಧ್ವನಿ ಅಡಗಿಸಲಾಗುತ್ತಿದೆ’

- ಭಾನು ಮುಷ್ತಾಕ್‌, ಲೇಖಕಿ 

***

ಸಂಘಟಿತ ಹೋರಾಟ ಅಗತ್ಯ

‘ಧರ್ಮ, ಜಾತಿ, ಬಣ್ಣದ ಅಡಿ ಜನರನ್ನು ವಿಭಜಿಸಲಾಗುತ್ತಿದೆ. ಇಂತಹ ಬೆಳವಣಿಗೆಗಳ ವಿರುದ್ಧ ಹೋರಾಟ ನಡೆಸಬೇಕು. ರಾಷ್ಟ್ರೀಯ ಮಹತ್ವದ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಸಂಘಟನೆಗಳು ಹೋರಾಟವನ್ನು ಸಂಘಟಿಸಬೇಕು’

- ಪ್ರೊ.ಗಣೇಶ್ ದೇವಿ, ಭಾಷಾತಜ್ಞ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು