ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: 280 ಮರಗಳಿಗೆ ಮೂರು ಸಾವಿರ ಮೊಳೆ !

ವಿನೋದ್‌ ಕರ್ತವ್ಯ ತಂಡದಿಂದ ಮೊಳೆ ಮುಕ್ತ ಮರಗಳು ಅಭಿಯಾನ
Last Updated 27 ಡಿಸೆಂಬರ್ 2020, 21:04 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಎಸ್‌. ವಿನೋದ್‌ (ವಿನೋದ್‌ ಕರ್ತವ್ಯ) ಅವರ ನೇತೃತ್ವದಲ್ಲಿ ಭಾನುವಾರ ಹತ್ತಾರು ಯುವಕರು ‘ಮೊಳೆ ಮುಕ್ತ ಮರಗಳು’ ಅಭಿಯಾನದ ಅಡಿ ಮರಗಳಿಂದ ಮೊಳೆಗಳನ್ನು ತೆಗೆದು ಹಾಕಿದರು. ಈ ತಂಡ ಕಳೆದ ನ.15ರಿಂದ ಈ ಅಭಿಯಾನ ನಡೆಸುತ್ತಿದೆ.

‘ಮರಗಳಿಗೂ ಜೀವ ಇದೆ ಎಂದು ಹೇಳುತ್ತೇವೆ. ಆದರೆ, ಅವುಗಳನ್ನು ಜೀವಿಗಳಂತೆ ಕಾಣುವುದಿಲ್ಲ. ಮರಗಳಿಗೆ ಮೊಳೆಗಳನ್ನು, ಪಿನ್‌ಗಳನ್ನು ಚುಚ್ಚುವುದರಿಂದ ಅನೇಕ ತೊಂದರೆಗಳು ಉಂಟಾಗುತ್ತವೆ. ಈ ನಿಟ್ಟಿನಲ್ಲಿ, ಸಮಾನ ಮನಸ್ಕರು ಸೇರಿ ಪ್ರತಿ ಶನಿವಾರ, ಭಾನುವಾರ ಈ ಅಭಿಯಾನ ಹಮ್ಮಿಕೊಳ್ಳುತ್ತಿದ್ದೇವೆ. ಈ ಬಾರಿ ವಸಂತ ನಗರ ಮತ್ತು ಸಂಪಂಗಿರಾಮನಗರದಲ್ಲಿ ಅಭಿಯಾನ ನಡೆಸಲಾಯಿತು’ ಎಂದು ವಿನೋದ್‌ ಕರ್ತವ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇವಲ ಒಂದೂವರೆ ತಿಂಗಳಿನಲ್ಲಿ 280 ಮರಗಳಿಂದ ಮೂರು ಸಾವಿರ ಮೊಳೆಗಳನ್ನು ತೆಗೆದಿದ್ದೇವೆ. ಮರಗಳಿಗೆ ಚುಚ್ಚಿದ್ದ ಸ್ಟ್ಯಾಪಲ್‌ ಪಿನ್‌ಗಳಿಗಂತೂ ಲೆಕ್ಕವೇ ಇಲ್ಲ’ ಎಂದು ಅವರು ತಿಳಿಸಿದರು.

‘ಮೊಳೆ ಹೊಡೆಯುವುದಲ್ಲದೆ, ಮರಕ್ಕೆ ತಂತಿಯನ್ನು ಸುತ್ತಿರುತ್ತಾರೆ. ಮರ ಬೆಳೆದಂತೆ ತಂತಿಯು ಬಿಗಿಯಾಗುತ್ತದೆ. ಇದರಿಂದ ಮರದ ಬೆಳವಣಿಗೆ ಸರಿಯಾಗುವುದಿಲ್ಲ. ಬೇರಿನಿಂದ ನೀರು ಮತ್ತಿತರ ಅಂಶಗಳು ರೆಂಬೆಗಳಿಗೆ ಪೂರೈಕೆಯಾಗುವುದಿಲ್ಲ. ಆಗ ರೆಂಬೆಗಳು, ಮರಗಳು ಮುರಿದು ಬೀಳುತ್ತಿವೆ.100 ವರ್ಷ ಆಯಸ್ಸು ಹೊಂದಿರುವ ಮರಗಳು 70 ವರ್ಷಕ್ಕೇ ಮುರಿದು ಬೀಳುತ್ತಿವೆ. ಅಲ್ಲದೆ, ನಗರದಲ್ಲಿ ಮರಗಳು ಬಿದ್ದು ವರ್ಷಕ್ಕೆ 30ರಿಂದ 40 ಜನ ಸಾವಿಗೀಡಾಗುತ್ತಿದ್ದಾರೆ’ ಎಂದು ಅವರು ಹೇಳಿದರು.

ದಂಡ ಬೀಳುತ್ತದೆ: ‘ಮರಗಳಿಗೆ ಮೊಳೆ ಹೊಡೆದರೆ ದಂಡ ವಿಧಿಸುವ ಅವಕಾಶವೂ ಕಾನೂನಿನಲ್ಲಿದೆ. ಹೀಗೆ ಮೊಳೆ ಹೊಡೆಯುತ್ತಿದ್ದವರು ನೇರವಾಗಿ ಸಿಕ್ಕಿಬಿದ್ದಾಗ ಅವರಿಗೆ ಕಳೆದ ವಾರ ಬಿಬಿಎಂಪಿ ₹2,500 ದಂಡ ಹಾಕಿದೆ. ಇದನ್ನು ತನ್ನ ಫೇಸ್‌ಬುಕ್‌ ಖಾತೆಯಲ್ಲಿಯೂ ಬಿಬಿಎಂಪಿ ಹಾಕಿಕೊಂಡಿದೆ’ ಎಂದು ವಿನೋದ್ ಹೇಳಿದರು.

ಈವರೆಗೆ ಈ ಅಭಿಯಾನದಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್‌ ರಾವ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ನಟ ಕಿಶೋರ್, ಅಣ್ಣಾಮಲೈ ಸೇರಿದಂತೆ ಹಲವು ಗಣ್ಯರು, ಖ್ಯಾತನಾಮರು ಪಾಲ್ಗೊಂಡಿದ್ದಾರೆ.

‘ಮೊಳೆ ಹಾಕಿದವರ ವಿರುದ್ಧ ದೂರು ನೀಡಲು ಮತ್ತು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡುವಂತೆ ನಾವು ಭಾಸ್ಕರ್ ರಾವ್‌ ಅವರಿಗೆ ಮನವಿ ಮಾಡಿದ್ದೆವು. ಅವರು ಈಗಿನ ನಗರ ಪೊಲೀಸ್ ಕಮಿಷನರ್‌ ಕಮಲ್‌ ಪಂತ್ ಅವರಿಗೆ ಪತ್ರ ಬರೆದಿದ್ದಾರೆ. ಶೀಘ್ರದಲ್ಲಿಯೇ ಎಲ್ಲ ಪೊಲೀಸ್‌ ಠಾಣೆಗಳಿಗೆ ಈ ಸೂಚನೆ ತಲುಪಲಿದೆ. ಇದರಿಂದ ನಾವು ದೂರು ನೀಡಲು ಸಹಾಯವಾಗುತ್ತದೆ. ದೂರು ದಾಖಲಾದರೆ ದಂಡ ವಿಧಿಸಲು ಬಿಬಿಎಂಪಿಗೂ ಅನುಕೂಲವಾಗಲಿದೆ’ ಎಂದು ಅವರು ಹೇಳಿದರು.

ಡಿಆರ್‌ಡಿಒದಲ್ಲಿ ತಾಂತ್ರಿಕ ಅಧಿಕಾರಿಯಾಗಿರುವ ವಿನೋದ್‌ ಕರ್ತವ್ಯ, ಬೆಂಗಳೂರು ಹುಡುಗರು ಹೆಸರಿನಲ್ಲಿ ತಂಡ ರಚಿಸಿಕೊಂಡಿದ್ದು, ಈವರೆಗೆ 12 ವಾರ್ಡ್‌ಗಳಲ್ಲಿ ಈ ಅಭಿಯಾನ ನಡೆಸಿದ್ದಾರೆ. ಶನಿವಾರ ವಸಂತನಗರದ ಸಿಟಿಜನ್‌ ಫಾರ್ ಸಿಟಿಜನ್‌ ತಂಡದ ಹತ್ತು ಯುವಕರು ಈ ತಂಡದೊಂದಿಗೆ ಕೈ ಜೋಡಿಸಿ, ಅಭಿಯಾನದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT