ಎಚ್‌ಬಿಆರ್‌ ಮೆಟ್ರೊ ನಿಲ್ದಾಣ ಪ್ರಸ್ತಾವ ಕೈಬಿಡಿ

ಬುಧವಾರ, ಜೂಲೈ 24, 2019
28 °C
ಎರಡನೇ ಹಂತದಲ್ಲಿ 2ಬಿ ಮಾರ್ಗದಲ್ಲಿ ಕಲ್ಯಾಣನಗರ– ನಾಗವಾರ ನಡುವಿನ ನಿಲ್ದಾಣಕ್ಕೆ ಸ್ಥಳೀಯರ ವಿರೋಧ

ಎಚ್‌ಬಿಆರ್‌ ಮೆಟ್ರೊ ನಿಲ್ದಾಣ ಪ್ರಸ್ತಾವ ಕೈಬಿಡಿ

Published:
Updated:
Prajavani

ಬೆಂಗಳೂರು: 'ನಮ್ಮ ಮೆಟ್ರೊ' ಎರಡನೇ ಹಂತದಲ್ಲಿ 2ಬಿ ಮಾರ್ಗದಲ್ಲಿ ಕಲ್ಯಾಣನಗರ– ನಾಗವಾರ ನಡುವೆ ಎಚ್‌ಬಿಆರ್‌ ಬಡಾವಣೆಯ ಬಳಿ ಮೆಟ್ರೊ ನಿಲ್ದಾಣ ನಿರ್ಮಿಸುವ ಪ್ರಸ್ತಾವ ಕೈಬಿಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

‘ಎಚ್‌ಬಿಆರ್‌ ಬಡಾವಣೆಯಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸಲು ಉದ್ದೇಶಿಸಿರುವ ಪ್ರದೇಶವು ಕಲ್ಯಾಣನಗರದಲ್ಲಿ ನಿರ್ಮಾಣವಾಗಲಿರುವ ಮೆಟ್ರೊ ನಿಲ್ದಾಣದಿಂದ ಕೇವಲ 1.2 ಕಿ.ಮೀ ದೂರದಲ್ಲಿ ಹಾಗೂ ನಾಗವಾರ ಮೆಟ್ರೊ ನಿಲ್ದಾಣದಿಂದ 0.9 ಕಿ.ಮೀ ದೂರದಲ್ಲಿದೆ. ಎಚ್‌ಬಿಆರ್‌ ಬಡಾವಣೆ ಬಳಿ ಮೆಟ್ರೊ ನಿಲ್ದಾಣ ನಿರ್ಮಿಸದಿದ್ದರೂ ಇಲ್ಲಿನ ನಿವಾಸಿಗಳು ಹೆಚ್ಚೂ ಕಡಿಮೆ 1 ಕಿ.ಮೀ ವ್ಯಾಪ್ತಿಯಲ್ಲಿ ಮೆಟ್ರೊ ಸೌಲಭ್ಯವನ್ನು ಪಡೆಯಲು ಸಾಧ್ಯ. ಹಾಗಾಗಿ ಈ ನಿಲ್ದಾಣಕ್ಕೆ ₹ 150 ಕೋಟಿ ವೆಚ್ಚ ಮಾಡುವುದು ಮೂರ್ಖತನದ ನಿರ್ಧಾರ’ ಎನ್ನುತ್ತಾರೆ ಸ್ಥಳೀಯ ನಿವಾಸಿ ರಾಜ್‌ ಕೆ.ಸೂರಿ.

'ಹೊರ ವರ್ತುಲ ರಸ್ತೆಯು ಕೆ.ಆರ್‌.ಪುರದಿಂದ ಹೆಣ್ಣೂರು ಜಂಕ್ಷನ್‌ವರಗೆ 100 ಮೀ ಅಗಲ ಇದೆ. ಇಲ್ಲಿ 90 ಅಡಿ ಅಗಲದ ರಸ್ತೆ ಹಾಗೂ 40 ಅಡಿ ಅಗಲದ ಸರ್ವಿಸ್‌ ರಸ್ತೆಗಳಿವೆ. ಭವಿಷ್ಯದ ವಿಸ್ತರಣೆಗಾಗಿ ರಸ್ತೆಯ ಇಕ್ಕೆಲಗಳಲ್ಲಿ 33 ಅಡಿಗಳಷ್ಟು ಮೀಸಲು ಪ್ರದೇಶವನ್ನು ಕಾಯ್ದಿರಿಸಲಾಗಿದೆ. ಕಲ್ಯಾಣ ನಗರದಲ್ಲಿ ಮೆಟ್ರೊ ನಿಲ್ದಾಣಕ್ಕೆ ಗೊತ್ತುಪಡಿಸಿರುವ ಜಾಗ ಅತ್ಯಂತ ಪ್ರಶಸ್ತವಾದುದು. ಆದರೆ, ಎಚ್‌ಬಿಆರ್‌ ಬಡಾವಣೆ ಬಳಿಯ ಜಾಗ ಮೆಟ್ರೊ ನಿಲ್ದಾಣಕ್ಕೆ ಸೂಕ್ತವಲ್ಲ. ಇಲ್ಲಿ ಹೊರ ವರ್ತುಲ ರಸ್ತೆಯ ಸರ್ವಿಸ್‌ ರಸ್ತೆಯೂ ತೀರಾ ಕಿರಿದಾಗಿದೆ’ ಎಂದು ಸ್ಥಳೀಯ ನಿವಾಸಿ ಡಾ. ಕೆ.ಪಿ.ದೇವದಾಸ್‌ ವಿವರಿಸಿದರು.

‘ಎಚ್‌ಬಿಆರ್‌ ಬಡಾವಣೆ ಬಳಿ ಹೊರ ವರ್ತುಲ ರಸ್ತೆ 50 ಅಡಿ ಅಗಲವಿದೆ. ಸರ್ವಿಸ್‌ ರಸ್ತೆ ಕೇವಲ 18 ಅಡಿ ಇದೆ. ಹಾಗಾಗಿ ಇಲ್ಲಿ ನಿತ್ಯವೂ ಸಂಚಾರ ದಟ್ಟಣೆ ಕಿರಿಕಿರಿ ಅನುಭವಿಸಬೇಕಾದ ಪರಿಸ್ಥಿತಿ ಇದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ಬಸ್ ಹಾಗೂ ಕಾರುಗಳು ಸಾಲುಗಟ್ಟಿ ನಿಂತಿರುತ್ತವೆ. ಇಲ್ಲಿ ಮೆಟ್ರೊ ನಿಲ್ದಾಣ ನಿರ್ಮಿಸಿದ್ದೇ ಆದರೆ ಕಾಮಗಾರಿ ವೇಳೆ ಸಂಚಾರ ದಟ್ಟಣೆಯ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ. ಮೆಟ್ರೊ ಸೇವೆ ಆರಂಭವಾದ ಬಳಿಕ ಈ ಸರ್ವಿಸ್‌ ರಸ್ತೆಯಲ್ಲಿ ವಾಹನ ದಟ್ಟಣೆ ಮತ್ತಷ್ಟು ಹೆಚ್ಚಳವಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಈ ಸಮಸ್ಯೆಗಳ ಬಗ್ಗೆ ಬೆಂಗಳೂರು ಮಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಅವರಿಗೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ. ಈ ಮೆಟ್ರೊ ನಿಲ್ದಾಣವು ನಿಗಮಕ್ಕೆ ಹೇಗೆ ಹೊರೆ ಆಗಲಿದೆ ಎಂಬುದನ್ನು ಅಂಕಿ–ಅಂಶ ಸಹಿತ ವಿವರಿಸಿದ್ದೇವೆ. ನಮ್ಮ ಕೋರಿಕೆಯನ್ನು ನಿಗಮವು ಪರಿಗಣಿಸಲಿದೆ ಎಂಬ ವಿಶ್ವಾಸದಲ್ಲಿದ್ದೇವೆ’ ಎಂದರು.

‘ವಸತಿ ಪ್ರದೇಶದಲ್ಲಿ ಪ್ರತಿ ಕಿ.ಮೀ.ಗೆ ನಿಲ್ದಾಣ’
‘ವಸತಿ ಪ್ರದೇಶಗಳಲ್ಲಿ ಬಿಎಂಆರ್‌ಸಿಎಲ್‌ ಪ್ರತಿ ಕಿಲೊ ಮೀಟರ್‌ಗೆ ಒಂದು ಮೆಟ್ರೊ ನಿಲ್ದಾಣವನ್ನು ನಿರ್ಮಿಸುತ್ತದೆ. ಆದರೆ, ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎತ್ತರಿಸಿದ ಮಾರ್ಗದಲ್ಲಿ ಹೆಬ್ಬಾಳದ ಬಳಿಕ ಪ್ರತಿ ನಾಲ್ಕು ಕಿ.ಮೀ. ದೂರಕ್ಕೆ ಒಂದರಂತೆ ನಿಲ್ದಾಣ ನಿರ್ಮಿಸುತ್ತೇವೆ. ಎಚ್‌ಬಿಆರ್‌ ಬಡಾವಣೆ ಬಳಿ ನಿಲ್ದಾಣ ನಿರ್ಮಿಸುವ ಪ್ರಸ್ತಾವ ಕೈಬಿಡುವಂತೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ನಿಗಮ ಇನ್ನೂ ನಿರ್ಧಾರ ಕೈಗೊಂಡಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !