ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊದಲ್ಲಿ ಮಹಿಳೆಗೆ ಕಿರುಕುಳ ಆರೋಪ: ಯುವಕನ ವಿಚಾರಣೆ, ಬಿಡುಗಡೆ

ದಾಖಲಾಗದ ದೂರು
Published 8 ಡಿಸೆಂಬರ್ 2023, 14:42 IST
Last Updated 8 ಡಿಸೆಂಬರ್ 2023, 14:42 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ ರೈಲಿನಲ್ಲಿ ಯುವತಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಲೋಕೇಶ್‌ ಎಂಬುವವರನ್ನು ವಶಕ್ಕೆ ಪಡೆದಿರುವ ಉಪ್ಪಾರಪೇಟೆ ಠಾಣೆ ಪೊಲೀಸರು, ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ.

‘ನೆಲಮಂಗಲದ ನಿವಾಸಿ ಲೋಕೇಶ್, ಅಪರಾಧ ಹಿನ್ನೆಲೆಯುಳ್ಳವ (ಎಂಒಬಿ). ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಕಳೆದ ವರ್ಷ ಜೈಲು ಸೇರಿ, ಜಾಮೀನು ಮೇಲೆ ಹೊರಗೆ ಬಂದಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಮೆಟ್ರೊ ರೈಲಿನಲ್ಲಿ ರಾಜಾಜಿನಗರದಿಂದ ಎಂ.ಜಿ.ರಸ್ತೆ ನಿಲ್ದಾಣಕ್ಕೆ 22 ವರ್ಷದ ಯುವತಿಯೊಬ್ಬರು ಗುರುವಾರ (ಡಿ. 7) ಬೆಳಿಗ್ಗೆ ಪ್ರಯಾಣಿಸುತ್ತಿದ್ದರು. ಇದೇ ರೈಲಿನಲ್ಲಿ ಆರೋಪಿ ಲೋಕೇಶ್ ಸಹ ಇದ್ದ. ಮೈ ಕೈ ಮುಟ್ಟಿ ಕಿರುಕುಳ ನೀಡಿದ್ದಾನೆಂದು ಆರೋಪಿಸಿದ್ದ ಯುವತಿ, ಲೋಕೇಶ್‌ನನ್ನು ಹಿಡಿದುಕೊಳ್ಳುವಂತೆ ಕೂಗಿದ್ದರು. ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಇಳಿದು ಓಡಲಾರಂಭಿಸಿದ್ದ ಲೋಕೇಶ್‌ನನ್ನು ಭದ್ರತಾ ಸಿಬ್ಬಂದಿ ಬೆನ್ನಟ್ಟಿ ಹಿಡಿದಿದ್ದರು. ನಂತರ, ಸ್ಥಳಕ್ಕೆ ಹೋದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಲೋಕೇಶ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು’ ಎಂದು ತಿಳಿಸಿದರು.

ದಾಖಲಾಗದ ದೂರು

‘ಮೆಟ್ರೊ ರೈಲಿನಲ್ಲಿ ನಡೆದಿರುವ ಲೈಂಗಿಕ ಕಿರುಕುಳ ಸಂಬಂಧ ಯುವತಿ ಅಥವಾ ಬಿಎಂಆರ್‌ಸಿಎಲ್‌ ದೂರು ನೀಡಿಲ್ಲ. ಜೊತೆಗೆ, ಲೈಂಗಿಕ ಕಿರುಕುಳಕ್ಕೆ ಸಂಬಂಧಪಟ್ಟಂತೆ ಪುರಾವೆಗಳು ಲಭ್ಯವಾಗಿಲ್ಲ. ಹೀಗಾಗಿ, ಸದ್ಯಕ್ಕೆ ಯಾವುದೇ ದೂರು ದಾಖಲಿಸಿಕೊಂಡಿಲ್ಲ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಲೋಕೇಶ್‌ನನ್ನು ವಿಚಾರಣೆ ನಡೆಸಿದಾಗ, ಮೊಬೈಲ್ ಕಳ್ಳನೆಂಬುದು ತಿಳಿಯಿತು. ಯುವತಿ ಬಳಿ ಮೊಬೈಲ್ ಕಳ್ಳತನ ಮಾಡಲು ಈತ ಯತ್ನಿಸಿದ್ದನೆಂದು ಗೊತ್ತಾಗಿದೆ. ಹೀಗಾಗಿ, ವಿಚಾರಣೆ ನಡೆಸಿ ನೋಟಿಸ್ ಕೊಟ್ಟು ಆರೋಪಿಯನ್ನು ಬಿಟ್ಟು ಕಳುಹಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT