ಮಂಗಳವಾರ, ಮಾರ್ಚ್ 21, 2023
27 °C
ಬೆಂಗಳೂರು ದಕ್ಷಿಣ ಭಾಗದಲ್ಲಿ ಹಾಲು ಪೂರೈಕೆಯಲ್ಲಿ ಕೊಂಚ ವ್ಯತ್ಯಯ

‘ನಂದಿನಿ’ ವಾಹನ ಮಾಲೀಕರ ಮುಷ್ಕರ: ಬೆಂಗಳೂರು ದಕ್ಷಿಣದಲ್ಲಿ ಪೂರೈಕೆ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಹಾಲು ಒಕ್ಕೂಟದ (ಬಮೂಲ್‌) ಹಾಲು ಸರಬರಾಜು ಮಾಡುವ ವಾಹನಗಳ ಮಾಲೀಕರು ದಿಢೀರ್ ಮುಷ್ಕರ ಆರಂಭಿಸಿದ್ದಾರೆ. ಇದರಿಂದಾಗಿ ಬೆಂಗಳೂರು ದಕ್ಷಿಣ ಭಾಗದಲ್ಲಿ ಹಾಲು, ಮೊಸರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ಹಾಲಿನ ಪ್ಯಾಕೇಟ್‌ಗಳನ್ನು ಸಾಗಿಸುವ 300ಕ್ಕೂ ಹೆಚ್ಚು ವಾಹನಗಳನ್ನು ಬಮೂಲ್ ಬಾಡಿಗೆಗೆ ಪಡೆದಿದ್ದು, ಕೆಲ ವಾಹನಗಳಿಗಗೆ ಟ್ರಿಪ್ ಲೆಕ್ಕದಲ್ಲಿ, ಮತ್ತೆ ಕೆಲವು ವಾಹನಗಳಿಗೆ ಕಿಲೋ ಮೀಟರ್ ಲೆಕ್ಕದಲ್ಲಿ ದರ ನಿಗದಿ ಮಾಡಿದೆ.

ಎರಡು ವರ್ಷಗಳ ಅವಧಿಗೆ ಟೆಂಡರ್ ಕರೆದು ವಾಹನಗಳ ಬಾಡಿಗೆ ನಿಗದಿ ಮಾಡಲಾಗುತ್ತದೆ.‌ ಅವಧಿ ಮುಗಿದಿರುವುದರಿಂದ ಟೆಂಡರ್ ಕರೆಯಲು ಬಮೂಲು ಮುಂದಾಗಿದೆ. ಕೇಂದ್ರ ಸರ್ಕಾರದ ‘ಗುಜರಿ ನೀತಿ’ ಪ್ರಕಾರ 15 ವರ್ಷಗಳಷ್ಟು ಹಳೆಯದಾದ ವಾಹನಗಳನ್ನು ಬಾಡಿಗೆಗೆ ಪಡೆಯದಿರಲು ನಿರ್ಧರಿಸಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ವಾಹನಗಳ ಮಾಲೀಕರು, ಟೆಂಡರ್ ಕರೆಯದೆ ಬಾಡಿಗೆ ದರ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. 

‘15 ವರ್ಷ ಮೀರಿದ ವಾಹನಗಳು ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ನೀಡದಿದ್ದರೆ ಆ ಮಾಲೀಕರು ಏನು ಮಾಡಬೇಕು? ಇಲ್ಲ ಸಲ್ಲದ ನಿಯಮಗಳನ್ನು ಹೇರಿ ವಾಹನ ಮಾಲೀಕರಿಗೆ ತೊಂದರೆ ನೀಡಲು ಬಮೂಲ್ ಹೊರಟಿದೆ’ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ಹಗಲು–ರಾತ್ರಿ ಎನ್ನದೆ ಹಾಲು ಸರಬರಾಜು ಮಾಡುವ ವಾಹನ ಚಾಲಕರಿಗೆ ಕೂರಲು ವ್ಯವಸ್ಥೆ ಇಲ್ಲ. ಈಗ ಅವರ ಹೊಟ್ಟೆ ಮೇಲೆ ಹೊಡೆಯಲು ಬಮೂಲ್ ಹೊರಟಿದೆ. ಮುಷ್ಕರ ನಡೆಸುತ್ತಿರುವ ಲಾರಿ ಮಾಲಿಕರನ್ನು ಕರೆದು ಸಮಸ್ಯೆ ಕೇಳುವ ಸೌಜನ್ಯವನ್ನೂ ಆಡಳಿತ ಮಂಡಳಿ ತೋರಿಸುತ್ತಿಲ್ಲ. ಇದೇ ಧೋರಣೆ ಮುಂದುವರಿದರೆ ಹಳ್ಳಿಗಳಿಂದ ಹಾಲು ತರುವ ವಾಹನಗಳು ಮತ್ತು ಹಾಲಿನ ಟ್ಯಾಂಕರ್‌ಗಳ ಸೇವೆಯನ್ನೂ ಸ್ಥಗಿತಗೊಳಿಸಲಾಗುವುದು’ ಎಂದು ಎಚ್ಚರಿಸಿದರು.

‘ಹಾಲು ಪೂರೈಕೆಯಲ್ಲಿ ವ್ಯತ್ಯಯವಿಲ್ಲ’

‘ಬೂತ್‌ಗಳಿಗೆ ಹಾಲು ಮತ್ತು ಮೊಸರು ಪೂರೈಕೆಯಲ್ಲಿ ಯಾವುದೇ ತೊಂದರೆಯಾಗಿಲ್ಲ’ ಎಂದು ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದರು.

ವಿತರಕರೇ ವಾಹನಗಳನ್ನು ತಂದು ಹಾಲು ಪಡೆದುಕೊಂಡು ಹೋಗುತ್ತಿದ್ದಾರೆ. ಬೇರೆ ಡೇರಿಗಳಿಂದಲೂ ವಾಹನಗಳನ್ನು ತರಿಸಿ ಹಾಲು ಪೂರೈಸಲಾಗುತ್ತಿದೆ. ಬಮೂಲ್ ಪ್ರತಿನಿತ್ಯ 10 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತಿದ್ದು, ಕೇವಲ 25 ಸಾವಿರ ಲೀಟರ್‌ ಹಾಲು ಪೂರೈಕೆಯಲ್ಲಿ ವ್ಯತ್ಯಯವಾಗಿದೆ ಎಂದರು.

ಟೆಂಡರ್ ಕರೆಯಲು ವಾಹನಗಳ ಮಾಲೀಕರು ಒಪ್ಪುತ್ತಿಲ್ಲ. ಸರ್ಕಾರದ ನಿಯಮ ಮೀರಿ 15 ವರ್ಷ ಮೇಲ್ಪಟ್ಟ ವಾಹನಗಳನ್ನು ಪಡೆಯಲು ಅವಕಾಶ ಇಲ್ಲ. ಮುಷ್ಕರ ಮುಂದುವರಿದರೂ ತೊಂದರೆ ಇಲ್ಲ. ಹಾಲು ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಹಾಲು ಸರಬರಾಜಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲಾಗುತ್ತಿದೆ‘ ಎಂದು ಹೇಳಿದರು.

ದಕ್ಷಿಣ ಭಾಗಕ್ಕೆ ಬಮೂಲ್ ಹಾಲು

ರಾಜಾಜಿನಗರ, ಮಲ್ಲೇಶ್ವರದಿಂದ ಆರಂಭವಾಗಿ ಚಾಮರಾಜಪೇಟೆ, ಬಸವನಗುಡಿ, ಬನಶಂಕರಿ ಸೇರಿ ದಕ್ಷಿಣ ಭಾಗದ ಪ್ರದೇಶಗಳಿಗೆ ಬಮೂಲ್‌ನಿಂದ ಬರುವ ಹಾಲು ಸರಬರಾಜಾಗುತ್ತಿದೆ. ಈ ಪ್ರದೇಶಗಳಲ್ಲಿ ಮಾತ್ರ ಹಾಲು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.

ಮಹಾಲಕ್ಷ್ಮಿಲೇಔಟ್, ಯಶವಂತಪುರ, ಪೀಣ್ಯ ಭಾಗಕ್ಕೆ ತುಮಕೂರು ಡೇರಿಯಿಂದ, ಯಲಹಂಕ, ಹೆಬ್ಬಾಳ ಸುತ್ತಮುತ್ತಲ ಪ್ರದೇಶಕ್ಕೆ ಮದರ್ ಡೇರಿಯಿಂದ, ವಿಜಯನಗರ, ರಾಜರಾಜೇಶ್ವರಿನಗರ, ಕೆಂಗೇರಿ ಸುತ್ತಮುತ್ತಲ ಭಾಗಕ್ಕೆ ಮಂಡ್ಯ ಡೇರಿಯಿಂದ, ಇಂದಿರಾನಗರ, ಕೆ.ಆರ್.ಪುರ, ಮಹದೇವಪುರ, ವೈಟ್‌ಫೀಲ್ಡ್‌ ಭಾಗಕ್ಕೆ ಕೋಲಾರ ಡೇರಿಯಿಂದ ಹಾಲು ಪೂರೈಕೆಯಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು