ಭಾನುವಾರ, ನವೆಂಬರ್ 28, 2021
20 °C
ಶಿಕ್ಷಣ ಉಳಿಸಿ ಸಮ್ಮೇಳನದಲ್ಲಿ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ

‘ಬಹುತ್ವ ಸಂಸ್ಕೃತಿಗೆ ಧಕ್ಕೆ ತರಲಿರುವ ಎನ್‌ಇಪಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮೂಲಕ ಬಹುತ್ವ ಸಂಸ್ಕೃತಿ ನಾಶ ಮಾಡಲು ಸರ್ಕಾರ ಮುಂದಾಗಿದೆ’ ಎಂದು ಸಾಹಿತಿ ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‌ಇಸಿ) ಭಾನುವಾರ ಆಯೋಜಿಸಿದ್ದ ಎರಡನೇ ರಾಜ್ಯಮಟ್ಟದ ಶಿಕ್ಷಣ ಉಳಿಸಿ ಸಮ್ಮೇಳನದಲ್ಲಿ ಮಾತನಾ ಡಿದ ಅವರು, ‘ಭಾರತ ವೈವಿಧ್ಯತೆಯ ರಾಷ್ಟ್ರ. ಆದರೆ, ಸರ್ಕಾರ ಏಕ ಭಾಷೆ, ಏಕ ಸಂಸ್ಕೃತಿಯನ್ನು ಹೇರಲು ಯತ್ನಿಸುತ್ತಿರುವುದು ಅಪಾಯಕಾರಿ’ ಎಂದರು.

‘ಕೆಲವು ಭಾಷೆಗಳಿಗೆ ಆದ್ಯತೆ ನೀಡುವ ಮೂಲಕ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಲಾಗುತ್ತಿದೆ. ಆಕ್ರಮಣಕಾರಿ ರೀತಿಯಲ್ಲಿ ಹಿಂದಿ ಹೇರ ಲಾಗುತ್ತಿದೆ. ಈಗ ಶಿಕ್ಷಣ ಕ್ಷೇತ್ರದಲ್ಲಿ ಹಿಂದಿ ಭಾಷೆಯ ಪ್ರಭಾವ ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ದೂರಿದರು.

‘ಮಾನವೀಯ ಸಂವೇದನೆಯುಳ್ಳ ಶಿಕ್ಷಣ ನೀತಿಯನ್ನು ರೂಪಿಸುವ ಬದಲು ಕೋಮುದ್ವೇಷವನ್ನು ಬಿತ್ತುವ ಪ್ರಯತ್ನ ನಡೆಸಲಾಗುತ್ತಿದೆ. ಈ ಮೂಲಕ ಯುವಪೀಳಿಗೆಯ ಮನಸ್ಸುಗಳನ್ನು ಮಲಿನಗೊಳಿಸಿ ಧರ್ಮದ ಸೈನಿಕರನ್ನಾಗಿ ಪರಿವರ್ತಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ’ ಎಂದು ಅಸಮಾಧಾನ
ವ್ಯಕ್ತಪಡಿಸಿದರು.

ಎಐಎಸ್‌ಇಸಿ ರಾಜ್ಯ ಕಾರ್ಯದರ್ಶಿ ಕೆ. ಉಮಾ ಮಾತನಾಡಿ, ‘ಬಿಜೆಪಿ ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ. ತಾನು ಅಧಿಕಾರದಲ್ಲಿ ಇಲ್ಲದಿದ್ದಾಗ ಕಾಂಗ್ರೆಸ್‌ ರೂಪಿಸಿದ್ದ ಶಿಕ್ಷಣ ನೀತಿಯನ್ನು ವಿರೋಧಿಸಿತ್ತು. ಆದರೆ, ಅಧಿಕಾರಕ್ಕೆ ಬಂದ ಮೇಲೆ ಅದೇ ರೀತಿಯ ನೀತಿಯನ್ನು ಬಿಜೆಪಿ ಜಾರಿಗೊಳಿಸಿದೆ’ ಎಂದು ಟೀಕಿಸಿದರು.

‘ವಿಶ್ವವಿದ್ಯಾಲಯಗಳ ಸಿಂಡಿಕೇಟ್‌ ಮತ್ತು ಸೆನೆಟ್‌ಗಳ ಅಧಿಕಾರ ಕಸಿಯುವ ಪ್ರಯತ್ನ ಮಾಡಲಾಗುತ್ತಿದೆ. ಪ್ರತಿಯೊಂದು ಕಾಲೇಜುಗಳು ಈಗ ವಿಶ್ವವಿದ್ಯಾಲಯಗಳಾಗುತ್ತಿವೆ. ಇದರಿಂದ, ಸಾವಿರಾರು ವಿಶ್ವವಿದ್ಯಾಲಯಗಳು ಹುಟ್ಟಿಕೊಂಡಿವೆ. ಆದರೆ, ಗುಣಮಟ್ಟದ ಬಗ್ಗೆ ಗಮನಹರಿಸಿಲ್ಲ’ ಎಂದರು.

ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಟಿ.ಆರ್‌. ಚಂದ್ರ ಶೇಖರ್‌, ‘ಜನಸಾಮಾನ್ಯರ ಶಿಕ್ಷಣದ ಹಕ್ಕನ್ನು ಎನ್‌ಇಪಿ ಕಿತ್ತುಕೊಳ್ಳಲಿದೆ. ಈ ನೀತಿ ಮೂಲಕ ಸಂವಿಧಾನದ ಮೂಲ ಆಶಯಗಳನ್ನೇ ತಿರುಚಲಾಗುತ್ತಿದೆ. ರಾಜ್ಯದ ಶೈಕ್ಷಣಿಕ ವಾತಾ ವರಣ ಈಗಾಗಲೇ ದುಃಸ್ಥಿತಿ ತಲುಪಿದೆ. ಹೀಗಿರುವಾಗ ಈ ನೀತಿ ಕರ್ನಾಟಕಕ್ಕೆ ಸೂಕ್ತವಲ್ಲ. ಪೂರ್ವ ಸಿದ್ಧತೆಗಳು ಇಲ್ಲ ದೆಯೇ ಜಾರಿಗೊಳಿಸುವ ನೀತಿಗಳಿಂದ ಅನುಕೂಲಕ್ಕಿಂತ ಅಪಾಯವೇ ಹೆಚ್ಚು’ ಎಂದರು. 

ಎಐಎಸ್‌ಇಸಿಯ ಆರ್‌.ಕೆ. ವೀರಭದ್ರಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು