ಸೋಮವಾರ, ಏಪ್ರಿಲ್ 19, 2021
31 °C
ನೊ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸುವುದು ಸರಿಯೇ

ನೆಟ್ಟಕಲ್ಲಪ್ಪ ಸರ್ಕಲ್‌ನಲ್ಲಿ ಫುಟ್‌ಪಾತ್‌ ಅತಿಕ್ರಮಣ

ನೀನಾ ಸಿ ಜಾರ್ಜ್‌/ಸಂಗೀತಾ ಗೊಂಧಳೆ  Updated:

ಅಕ್ಷರ ಗಾತ್ರ : | |

Prajavani

ಪಾರ್ಕಿಂಗ್‌ ಸಮಸ್ಯೆ ಕೇವಲ ವಾಣಿಜ್ಯ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಜನವಸತಿ ಬಡಾವಣೆಗಳಿಗೂ ಇದು ವ್ಯಾಪಿಸಿದೆ. ಪ್ರಶಾಂತ ಬಡಾವಣೆಗಳ ವಿಶಾಲ ರಸ್ತೆ, ಫುಟ್‌ಪಾತ್‌ಗಳು ವೈಟ್‌ ಟಾಪಿಂಗ್‌ ಪಾಲಾಗಿದ್ದರೆ, ಇನ್ನೂ ಕೆಲವು ಪಾರ್ಕಿಂಗ್‌ ತಾಣಗಳಾಗಿ ಬದಲಾಗಿವೆ. ಇದಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗೆ ಬಿಬಿಎಂಪಿ ಮತ್ತು ಟ್ರಾಫಿಕ್‌ ಪೊಲೀಸರು ಪರಸ್ಪರ ಬೆರಳು ತೋರಿಸುತ್ತಾರೆ. ಈ ಬಗ್ಗೆ ‘ಮೆಟ್ರೊ’ ಪ್ರತ್ಯಕ್ಷ ವರದಿ.

ಬೆಂಗಳೂರಿನ ಸೊಗಡನ್ನು ಇನ್ನೂ ಉಳಿಸಿಕೊಂಡಿರುವ ಬಸವನಗುಡಿಯ ಪ್ರಮುಖ ಸ್ಥಳವಾದ ನೆಟ್ಟಕಲ್ಲಪ್ಪ ಸರ್ಕಲ್‌ ಸರಕು ಸಾಗಣೆ ವಾಹನಗಳ ಅಕ್ರಮ ಪಾರ್ಕಿಂಗ್‌ ತಾಣವಾಗಿ ಮಾರ್ಪಟ್ಟಿದೆ. ನೆಟ್ಟಕಲ್ಲಪ್ಪ ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ಸುತ್ತಮುತ್ತಲಿನ ರಸ್ತೆಗಳ ಎರಡೂ ಬದಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ವಾಹನಗಳ ಸಂಚಾರ ಮತ್ತು ಜನರ ಓಡಾಟಕ್ಕೆ ಜಾಗವಿಲ್ಲದಷ್ಟು ರಸ್ತೆಗಳು ಕಿರಿದಾಗಿದ್ದು, ಸಂಚಾರ ವ್ಯವಸ್ಥೆ ಬಿಗಡಾಯಿಸಿದೆ. ಬಸವನಗುಡಿಯ ಸುಬ್ಬರಾಮ ಚೆಟ್ಟಿ ರಸ್ತೆ ಬದಿಯ  ಮರಗಳ ನಡುವಿನ ಖಾಲಿ ಜಾಗದಲ್ಲಿ ಬಿಡಾರ ಹೂಡಿರುವ ಗೂಡ್ಸ್‌ ವಾಹನಗಳು

ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದಿಂದ ಸುಬ್ಬರಾಮ ಚೆಟ್ಟಿ ರಸ್ತೆಯ ಒಂದು ಬದಿಯಲ್ಲಿರುವ ಪಾರ್ಕಿಂಗ್‌ ಸ್ಥಳವನ್ನು ಸರಕು ಸಾಗಣೆ ಲಾರಿಗಳು ಆಕ್ರಮಿಸಿಕೊಂಡಿವೆ. ಪಾರ್ಕಿಂಗ್‌ ಸ್ಥಳವಷ್ಟೇ ಅಲ್ಲದೇ ರಸ್ತೆಯ ಉದ್ದಕ್ಕೂ ಲಾರಿ, ಸರಕು ಸಾಗಣೆ ಆಟೊಗಳು ಠಿಕಾಣಿ ಹೂಡಿರುತ್ತವೆ. ಆಟೊಗಳನ್ನು ಕೂಡ ಇಲ್ಲಿಯೇ ನಿಲ್ಲಿಸುವುದರಿಂದ ರಸ್ತೆಗಳಲ್ಲಿ ಟ್ರಾಫಿಕ್‌ ದಟ್ಟನೆ ಉಂಟಾಗುತ್ತದೆ. ದೇವಸ್ಥಾನಕ್ಕೆ ತೆರಳುವ ಸಣ್ಣ ರಸ್ತೆಯನ್ನೂ ಬಿಡದೇ ವಾಹನಗಳನ್ನು ಪಾರ್ಕ್‌ ಮಾಡಲಾಗುತ್ತದೆ. 

ಸುಬ್ಬರಾಮ ಚೆಟ್ಟಿ ರಸ್ತೆಗೆ ಸಮಾಂತರವಾಗಿರುವ ರತ್ನವಿಲಾಸ ರಸ್ತೆಯಲ್ಲಿ ಪಾರ್ಕಿಂಗ್‌ಗೆ ಜಾಗ ಇಲ್ಲದ ಕಾರಣ ಫುಟ್‌ಪಾತ್‌ಗಳೇ ಪಾರ್ಕಿಂಗ್ ತಾಣಗಳಾಗಿ ಬದಲಾಗಿವೆ. ಫುಟ್‌ಪಾತ್‌ಗಳಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಅನಿವಾರ್ಯವಾಗಿ ಜನರು ರಸ್ತೆಗೆ ಇಳಿಯುತ್ತಾರೆ. ಅವರನ್ನು ಚದುರಿಸಲು ವಾಹನ ಸವಾರರು ಕಿವಿಗಡಚಿಕ್ಕುವಂತೆ ಹಾರ್ನ್‌ ಹಾಕುತ್ತಾರೆ. 


ರಸ್ತೆ ಬದಿ ಜಾಗವನ್ನು ಲಾರಿಗಳು ಆಕ್ರಮಿಸಿಕೊಂಡಿದ್ದರಿಂದ ನಡು ರಸ್ತೆಯಲ್ಲಿಯೇ ವಾಹನ ನಿಲ್ಲಿಸಿಕೊಂಡ ಪರಿ

ಎಲ್ಲ ರಸ್ತೆಗಳ ಕಥೆಯೂ ಒಂದೇ

ಇಲ್ಲಿಯೇ ಇರುವ ಸನ್ನಿಧಿ ರಸ್ತೆಯ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ಈ ರಸ್ತೆಯ ಎರಡೂ ಬದಿ ಸರಕು ಸಾಗಣೆ ವಾಹನಗಳದ್ದೇ ಪಾರುಪತ್ಯ. ಜನರು ಓಡಾಡಲು ಪರದಾಡುವಂತಾಗಿದೆ. ರಸ್ತೆ ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ ಗೋಡೆಗಳು ಮೂತ್ರ ವಿಸರ್ಜನೆಯ ತಾಣಗಳಾಗಿವೆ. ಸಾರ್ವಜನಿಕರು ಕಸ ತಂದು ಸುರಿಯುತ್ತಾರೆ. ಇದರಿಂದ ಇಡೀ ಪ್ರದೇಶದಲ್ಲಿ ಗಬ್ಬು ನಾತ ಹರಡಿದೆ. ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ನಿರಾಳವಾಗಿ ಓಡಾಡುತ್ತಿದ್ದ ಕಿರಿದಾದ ರಸ್ತೆಗಳಲ್ಲಿ ವಾಹನಗಳು ನುಗ್ಗುತ್ತಿವೆ. 

ಪಾರ್ಕಿಂಗ್‌ ಇಲ್ಲದ ಜನವಸತಿ ಪ್ರದೇಶಗಳಲ್ಲಿ ಸರಕು ಸಾಗಣೆ ವಾಹನ ನಿಲ್ಲಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಬಸವನಗುಡಿ ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ. ಕಿರಿದಾದ ರಸ್ತೆಯ ಎರಡೂ ಬದಿ ವಾಹನ ನಿಲ್ಲಿಸುವುದರಿಂದ ಜನಸಾಮಾನ್ಯರಿಗೆ ಓಡಾಡಲು ತೊಂದರೆಯಾಗುತ್ತಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ‘ಮೆಟ್ರೊ’ ಎದುರು ಮಹಿಳೆಯರು ಗೋಳು ತೋಡಿಕೊಂಡರು.

ನಲ್ವತ್ತು ವರ್ಷಗಳಿಂದ ಇದೇ ಜಾಗದಲ್ಲಿ ವಾಹನ ನಿಲ್ಲಿಸುತ್ತಿದ್ದೇವೆ. ಈಗ ಏಕಾಏಕಿ ವಾಹನ ನಿಲ್ಲಿಸಬೇಡಿ ಎಂದರೆ ಹೇಗೆ ಎಂದು ವಾಹನ ಚಾಲಕರು ಪ್ರಶ್ನಿಸುತ್ತಾರೆ. ವಾಹನಗಳ ಪಾರ್ಕಿಂಗ್‌ನಿಂದಲೇ ದಿನನಿತ್ಯ ಹತ್ತಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎನ್ನುವುದು ಸ್ಥಳೀಯರ ಆಕ್ರೋಶ. 

ಮನೆ ಮುಂದೆ ವಾಹನಗಳ ಸಾಲು

ಶತಮಾನದಷ್ಟು ಹಳೆಯದಾದ ಸುಬ್ಬರಾಮ ಚೆಟ್ಟಿ ರಸ್ತೆಯಲ್ಲಿ ಟ್ರಾಫಿಕ್ ಸಿಗ್ನಲ್‌ ಮತ್ತು ಸಂಚಾರ ದಟ್ಟನೆ ವೇಳೆ ಮನೆ ಅಂಗಳದ ಮುಂದೆ ವಾಹನಗಳ ಸಾಲು ನಿಲ್ಲುತ್ತದೆ. ಮನೆಗಳಿಂದ ಹೊರಗಡೆ ಅಂಗಳಕ್ಕೆ ಕಾಲಿಡಲು ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಹೆದರುತ್ತಿದ್ದಾರೆ.

‘ಇಲ್ಲಿ ವಾಹನಗಳನ್ನು ನಿಲ್ಲಿಸುವುದು ತಪ್ಪು. ಆದರೂ ನಿಲ್ಲಿಸುತ್ತಾರೆ. ಇದನ್ನು ತಡೆಗಟ್ಟಲು ನಾವು ಎಷ್ಟೇ ‍ಪ್ರಯತ್ನಪಟ್ಟರೂ ಸಾಧ್ಯವಾಗುತ್ತಿಲ್ಲ. ಅದನ್ನು ಪ್ರಶ್ನಿಸಿದರೆ ವಾಹನ ಚಾಲಕರು ನಮ್ಮ ಮೇಲೆ ಗುಂಪಾಗಿ ಏರಿ ಬರುತ್ತಾರೆ. ನಮ್ಮನ್ನೇ ಬೈಯುತ್ತಾರೆ. ಹಲವಾರು ವರ್ಷಗಳಿಂದ ಇಲ್ಲಿ ವಾಹನ ನಿಲ್ಲಿಸುತ್ತಿದ್ದೇವೆ. ಮುಂದೆಯೂ ಇಲ್ಲಿಯೇ ನಿಲ್ಲಿಸುವುದಾಗಿ ಸವಾಲು ಹಾಕುತ್ತಾರೆ’ ಎಂದು ಸ್ಥಳೀಯರು ದೂರುತ್ತಾರೆ.ನೆಟ್ಟಕಲ್ಲಪ್ಪ ಸರ್ಕಲ್‌ ಬಳಿಯ ರತ್ನ ವಿಲಾಸ ರಸ್ತೆಯ ಫುಟ್‌ಪಾತ್‌ಗಳಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಪಾದಚಾರಿಗಳಿಗೆ ಓಡಾಡಲು ರಸ್ತೆ ಇಲ್ಲದಂತಾಗಿದೆ!

‘ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 9ಗಂಟೆವರೆಗೆ ಇಲ್ಲಿ ಸರಕು ಸಾಗಣೆ ವಾಹನಗಳನ್ನು ನಿಲ್ಲಿಸಲಾಗುತ್ತದೆ‘ ಎಂಬ ಫಲಕವನ್ನೂ ವಾಹನ ಚಾಲಕರೇ ನೇತು ಹಾಕಿದ್ದಾರೆ. ಇಂತಹ ಫಲಕಗಳನ್ನು ಟ್ರಾಫಿಕ್‌ ಪೊಲೀಸರು ಮಾತ್ರ ನಿಲ್ಲಿಸಬೇಕೇ ಹೊರತು ವಾಹನ ಚಾಲಕರಲ್ಲ ಎನ್ನುವುದು ನಿವಾಸಿಗಳ ವಾದ.

ದಿನವಿಡಿ ಹಾಗೂ ಕೆಲವೊಮ್ಮೆ ರಾತ್ರಿ 9 ಗಂಟೆಯ ನಂತರವೂ ಇಲ್ಲಿ ವಾಹನಗಳು ಬಿಡಾರ ಹೂಡಿರುವ ದೃಶ್ಯ ‘ಮೆಟ್ರೊ’ ಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿದಾಗ ಕಂಡು ಬಂತು.

ಜನರು ಓಡಾಟ ಮತ್ತು ವಾಹನಗಳ ನಿಲುಗಡೆಗೆ ಸ್ಥಳವಿಲ್ಲದಂತೆ ಸರಕು ಸಾಗಣೆ ವಾಹನಗಳ ಪಾರ್ಕಿಂಗ್‌ ಮಾಡಲಾಗುತ್ತಿದೆ. ಇಲ್ಲಿ ನಿಲ್ಲಿಸುತ್ತಿರುವ ವಾಹನಗಳನ್ನು ತಡೆದರೆ ತುಂಬಾ ಸಹಾಯವಾಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಸ್ಥಳೀಯರೊಬ್ಬರು ಮನವಿ ಮಾಡಿದರು.

ಜನವಸತಿ ಪ್ರದೇಶಗಳಲ್ಲಿ ಅನ್ಯರು ವಾಹನ ನಿಲ್ಲಿಸಿಕೊಂಡು ನಿಂತುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ?  ಯಾವುದೇ ಕಾರಣಕ್ಕೂ ಜನವಸತಿ ಪ್ರದೇಶಗಳಲ್ಲಿ ಪಾರ್ಕಿಂಗ್‌ಗೆ ಅವಕಾಶ ಕೊಡಬಾರದು. ಟ್ರಾಫಿಕ್‌ ಪೊಲೀಸರು ಏನು ಮಾಡುತ್ತಿದ್ದಾರೆ? ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ. 

ಪುರಾತನ ಕಟ್ಟಡಕ್ಕೆ ಧಕ್ಕೆ

ಇದೇ ರಸ್ತೆಯಲ್ಲಿರುವ ನೂರು ವರ್ಷ ಹಳತಾದ ಕಟ್ಟಡದಲ್ಲಿರುವ ಭರತನಾಟ್ಯ ಕಲಿಸುವ ಶಾಲೆ ಇದೆ. ಅದರ ಒಳಗೆ ಹೋಗಲು ಸಾಧ್ಯವಾಗದಂತೆ ಕಟ್ಟಡದ ಮುಂದೆ ಲಾರಿಗಳು ನಿಂತಿರುತ್ತವೆ. ಇದರಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರು ಹೆದರುತ್ತಿದ್ದಾರೆ.  ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಡಾನ್ಸ್‌ ಶಾಲೆ ಸಿಬ್ಬಂದಿ. ಕನಿಷ್ಠ ನೂರು ಸಹಿ ಸಂಗ್ರಹಿಸಿಕೊಂಡು ಬರುವಂತೆ ಪೊಲೀಸರು ತಿಳಿಸಿದ್ದರು. ಆದರೂ, ಅವರಿಂದ ಏನೂ ಮಾಡಲಾಗಲಿಲ್ಲ. ಮಕ್ಕಳನ್ನು ಡಾನ್ಸ್‌ ಶಾಲೆಗೆ ಬಿಡುವ ಪೋಷಕರಿಗೂ ವಾಹನ ನಿಲ್ಲಿಸಲು ಇಲ್ಲಿ ಸ್ಥಳವಿಲ್ಲ. ಇಲ್ಲಿ ಲಾರಿಗಳನ್ನು ನಿಲ್ಲಿಸುವುದರಿಂದ ಶತಮಾನದ ಕಟ್ಟಡಕ್ಕೆ ಧಕ್ಕೆಯಾಗುತ್ತದೆ ಎನ್ನುವುದು ಡಾನ್ಸ್‌ ಶಾಲೆಯ ಶಿಕ್ಷಕರ ಆತಂಕವಾಗಿದೆ. 

 

* ಬಿಬಿಎಂಪಿ ಮತ್ತು ಟ್ರಾಫಿಕ್‌ ಪೊಲೀಸ್‌ ಇಲಾಖೆ ಜಂಟಿಯಾಗಿ ನಗರದ ಸಂಚಾರ ದಟ್ಟನೆ ಆಧರಿಸಿ ಪಾರ್ಕಿಂಗ್‌ ಸ್ಥಳಗಳನ್ನು ನಿಗದಿ ಮಾಡುತ್ತದೆ. ಎಲ್ಲ ರೀತಿಯ ವಾಹನಗಳಿಗೂ ಪಾರ್ಕಿಂಗ್‌ ಸ್ಥಳ ಒದಗಿಸುವುದು ಬಿಬಿಎಂಪಿ ಜವಾಬ್ದಾರಿ. ಪಾರ್ಕಿಂಗ್‌ ಸ್ಥಳಗಳ ವಾಸ್ತವ ಸ್ಥಿತಿ ಅರಿಯದೆ ಸಾರಿಗೆ ಇಲಾಖೆ ಹೊಸ ವಾಹನಗಳ ನೋಂದಣಿಗೆ ಅವಕಾಶ ನೀಡಬಾರದು. ಅಕ್ರಮ ಪಾರ್ಕಿಂಗ್ ತಾಣಗಳನ್ನು ತೆರವುಗೊಳಿಸಲು ಆದ್ಯತೆ ನೀಡಲಾಗಿದೆ. ವಾಹನಗಳ ಸಂಖ್ಯೆ ಮಿತಿ ಮೀರಿ ಬೆಳೆಯುತ್ತಿದೆ. ನಗರದ ರಸ್ತೆಗಳ ಉದ್ದ, ಅಗಲ, ಸಂಚಾರ ದಟ್ಟನೆಯನ್ನು ಅಧ್ಯಯನ ನಡೆಸಿ ಬಿಬಿಎಂಪಿಯು ಪಾರ್ಕಿಂಗ್‌ ಸ್ಥಳಗಳನ್ನು ನಿಗದಿ ಮಾಡಬೇಕು.

- ಪಿ. ಹರಿಶೇಖರನ್‌, ಹೆಚ್ಚುವರಿ ಟ್ರಾಫಿಕ್‌ ಪೊಲೀಸ್‌ ಆಯುಕ್ತ

* ಪಾರ್ಕಿಂಗ್‌ ಸ್ಥಳ ಬಿಬಿಎಂಪಿ ನಿಗದಿ ಮಾಡುತ್ತದೆ.ರಸ್ತೆ ಬದಿ ವಾಹನಗಳಿಗೆ ಇಂತಿಷ್ಟು ಪಾರ್ಕಿಂಗ್‌ ಜಾಗ ಎಂದು ಮೀಸಲಾಗಿಡಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಹಲವೆಡೆ ಉಚಿತ, ಕೆಲವೆಡೆ ಹಣ ಪಾವತಿಸಿ ವಾಹನ ನಿಲುಗಡೆಗೆ ಅವಕಾಶ ನೀಡಲಾಗಿದೆ. ಸರಕು ಸಾಗಣೆ ವಾಹನಗಳಿಗೆ ನಿರ್ದಿಷ್ಟ ಪಾರ್ಕಿಂಗ್ ಜಾಗ ನೀಡಿರುವ ಬಗ್ಗೆ ಮಾಹಿತಿ ಇಲ್ಲ.

- ಬಿಬಿಎಂಪಿ ಅಧಿಕಾರಿ

* ನೆಟ್ಟಕಲ್ಲಪ್ಪ ಸರ್ಕಲ್‌ ಬಳಿ ಸರಕು ಸಾಗಣೆ ವಾಹನ ನಿಲ್ಲುವುದು ಪೊಲೀಸರ ಗಮನಕ್ಕೂ ಬಂದಿದೆ. 40 ವರ್ಷಗಳಿಂದ ಇದೇ ಜಾಗದಲ್ಲಿ ವಾಹನ ನಿಲ್ಲಿಸುತ್ತಿರುವುದಾಗಿ ಚಾಲಕರು ಹೇಳುತ್ತಾರೆ. ಬೇರೆ ಜಾಗ ನೋಡಿಕೊಳ್ಳುವಂತೆ ಈಗಾಗಲೇ ಸೂಚನೆ ಕೊಟ್ಟಿದ್ದೇವೆ

- ಕೊಟ್ರೇಶಿ ಬಿ.ಎಂ., ಟ್ರಾಫಿಕ್‌ ಇನ್‌ಸ್ಪೆಕ್ಟರ್‌, ಬಸವನಗುಡಿ ಸಂಚಾರ ಪೊಲೀಸ್‌ ವಿಭಾಗ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು