ಮಂಗಳವಾರ, ಮಾರ್ಚ್ 2, 2021
19 °C
ಕಾಣದ ‘ಮದ್ಯ’ ರಾತ್ರಿ ಸಂಭ್ರಮ * ಎಂಟು ಗಂಟೆಯ ವೇಳೆಗೇ ರಸ್ತೆಗಳು ಖಾಲಿ–ಖಾಲಿ

ನಿರ್ಬಂಧಗಳ ನಡುವೆಯೇ ನೂತನ ವರ್ಷಾಚರಣೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾರ್ಚ್‌ನಿಂದ ವರ್ಷಪೂತಿ ನಿರ್ಬಂಧಗಳ ನಡುವೆಯೇ ದಿನ ದೂಡಿದ ಸಾರ್ವಜನಿಕರು, ಹೊಸ ವರ್ಷವನ್ನೂ ನಿರ್ಬಂಧಗಳ ನಡುವೆಯೇ ಸ್ವಾಗತಿಸಿದರು. ಡಿ.31ರ ಮಧ್ಯರಾತ್ರಿಯವರೆಗೆ ಜನರಿಂದ ತುಂಬಿರುತ್ತಿದ್ದ, ಮೇರೆ ಮೀರಿದ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದ್ದ ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆಯಂತಹ ತಾಣಗಳು ಗುರುವಾರ ರಾತ್ರಿ 8 ಗಂಟೆಯಷ್ಟೊತ್ತಿಗೇ ಬಣಗುಡುತ್ತಿದ್ದವು. ಈ ಸ್ಥಳಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದರೂ, ಸಂಭ್ರಮಿಸಬೇಕಾದವರ ಸಂಖ್ಯೆ ಬೆರಳೆಣಿಕೆಯಷ್ಟಿತ್ತು.

ಪಬ್‌, ರೆಸ್ಟೊರೆಂಟ್‌ಗಳಲ್ಲಿ ಮೊದಲೇ ಸೀಟು ಕಾಯ್ದಿರಿಸಿದವರಿಗೆ ಮಾತ್ರ ಅಲ್ಲಿಗೆ ತೆರಳಲು ಅವಕಾಶವಿತ್ತು. ಎಂಟು ಗಂಟೆಯ ನಂತರ ಜನ ಸಂಚಾರವನ್ನು ನಿರ್ಬಂಧಿಸಿದ್ದರಿಂದ ‘ಮದ್ಯರಾತ್ರಿ’ಯ ಸಂಭ್ರಮ ಹೆಚ್ಚು ಕಾಣಲಿಲ್ಲ. ಅನಿಲ್‌ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್‌ವರೆಗೆ ವಾಹನ ಸಂಚಾರ ಮಾತ್ರವಲ್ಲದೆ, ಜನ ಸಂಚಾರವನ್ನೂ ನಿರ್ಬಂಧಿಸಿದ್ದರಿಂದ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳು ಎಂದಿನ ‘ಆಕರ್ಷಣೆ’ ಕಳೆದುಕೊಂಡಿದ್ದವು.

ಎಂಟು ಗಂಟೆಯ ಮುಂಚೆ ಈ ಸ್ಥಳಗಳಿಗೆ ಬಂದವರು ಮಾತ್ರ ಸ್ವಲ್ಪ ಸುತ್ತಾಡಿ ಸಂಭ್ರಮಿಸಿದರು. ಸೆಲ್ಫಿ ತೆಗೆದುಕೊಂಡು ಬೀಗಿದರು. ಆದರೆ, ಮಾಸ್ಕ್‌ ಹಾಕದ ಕೆಲವರಿಗೆ ಪೊಲೀಸರು ದಂಡ ವಿಧಿಸಿದ್ದರಿಂದ ಇದ್ದ ಅಲ್ಪ ಸಂತೋಷವೂ ಮಾಯವಾಗಿತ್ತು !

ಸಾರ್ವಜನಿಕ ಸ್ಥಳಗಳಲ್ಲಿ ಓಡಾಟದ ಬದಲಿಗೆ ಮನೆಯಲ್ಲಿ, ಸ್ನೇಹಿತರ ಮನೆಯಲ್ಲಿ ಹೊಸ ವರ್ಷಾಚರಣೆಗೆ ಹೆಚ್ಚು ಜನ ಸಿದ್ದತೆ ಮಾಡಿಕೊಂಡಿದ್ದರು. ಮನೆಗಳಲ್ಲಿ, ಅಪಾರ್ಟ್‌ಮೆಂಟ್‌ಗಳಲ್ಲಿ ‘ಪಾರ್ಟಿ’ ಎಂದಿನಂತೆ ನಡೆಯಿತು. ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ವಿನಿಮಯ ಜೋರಾಗಿತ್ತು. ಬಹುತೇಕರು ಟಿವಿ, ಸಿನಿಮಾ ನೋಡುವ ಮೂಲಕ ವರ್ಷದ ಕೊನೆಯ ದಿನಕ್ಕೆ ವಿದಾಯ ಹೇಳಿದರು.


ನಗರದ ಬ್ರಿಗೇಡ್ ರಸ್ತೆ ಹೊಸ ವರ್ಷದ ಸಂಭ್ರಮಾಚರಣೆ ಕಾಣಲಿಲ್ಲ

ನಿಷೇಧಾಜ್ಞೆ: ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ರಾತ್ರಿ ಗಂಟೆಯ ವೇಳೆಗೆ ಮೇಲ್ಸೇತುವೆಗಳನ್ನು ಬಂದ್ ಮಾಡಲಾಗಿತ್ತು. 11ರ ನಂತರ ಸಂಚರಿಸುತ್ತಿದ್ದ ವಾಹನಗಳ ಸಂಖ್ಯೆ, ಚಾಲಕರ ದೂರವಾಣಿ ಸಂಖ್ಯೆಯನ್ನು ಪೊಲೀಸರು ದಾಖಲು ಮಾಡಿಕೊಳ್ಳುತ್ತಿದ್ದರು.

ಕರ್ಫ್ಯೂನಿಂದ ಆದಾಯಕ್ಕೆ ಹೊಡೆತ
ರಾಜ್ಯ ಸರ್ಕಾರವು ರಾತ್ರಿ 8ರಿಂದ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಜಾರಿ ಮಾಡಿದ್ದರಿಂದ ಆದಾಯಕ್ಕೆ ದೊಡ್ಡ ಹೊಡೆತ ಬಿತ್ತು ಎಂದು ಪಬ್‌ ಮತ್ತು ರೆಸ್ಟೋರೆಂಟ್‌ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದರು.

‘ಕೋವಿಡ್‌ನಿಂದ ಮೊದಲೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೆವು. ಹೊಸ ವರ್ಷದ ಸಂದರ್ಭದಲ್ಲಿಯೇ ಹೆಚ್ಚು ವ್ಯಾಪಾರ ಆಗುತ್ತಿತ್ತು. ಆದರೆ, ಸರ್ಕಾರ ಇದೇ ಅವಧಿಯಲ್ಲಿ ಕರ್ಫ್ಯೂ ಜಾರಿ ಮಾಡಿದ್ದರಿಂದ ಸಾಕಷ್ಟು ತೊಂದರೆಯಾಯಿತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 80ರಷ್ಟು ವ್ಯಾಪಾರ ವಹಿವಾಟು ಕಡಿಮೆಯಾಗಿದೆ’ ಎಂದು ಪಬ್‌ ಒಂದರ ಮಾಲೀಕ ಅಮಿತ್‌ ಅಹುಜಾ ಬೇಸರ ವ್ಯಕ್ತಪಡಿಸಿದರು.

‘ಈ ನಷ್ಟದ ಪರಿಣಾಮ ಉದ್ಯೋಗಿಗಳು ಅಥವಾ ಸಿಬ್ಬಂದಿಗೆ ವೇತನ ಕೊಡುವುದೂ ಕಷ್ಟವಾಗುತ್ತದೆ’ ಎಂದು ಅವರು ಅಳಲು ತೋಡಿಕೊಂಡರು.

‘ಕೋವಿಡ್‌ ನಿಯಂತ್ರಿಸಬೇಕು ಎಂಬ ಸರ್ಕಾರ ಉದ್ದೇಶ ನಮಗೆ ಅರ್ಥವಾಗುತ್ತದೆ. ಆದರೆ, ಮೊದಲೇ ಸೀಟು ಕಾಯ್ದಿರಿಸಿದವರು ಮತ್ತು ಕೂಪನ್‌ ಪಡೆದವರನ್ನೂ ಪಬ್‌ಗೆ ಬಾರದಂತೆ ತಡೆಯಲಾಗಿದೆ. ಇದು ಸರಿಯಾದ ಕ್ರಮ ಅಲ್ಲ’ ಎಂದು ಚರ್ಚ್‌ಸ್ಟ್ರೀಟ್‌ ವರ್ತಕರ ಸಂಘದ ದೀಪ್‌ ಬಟಾವಿಯಾ ಅಸಮಾಧಾನ ವ್ಯಕ್ತಪಡಿಸಿದರು.

‘800 ಜನ ಸೀಟು ಕಾಯ್ದಿರಿಸಿದ್ದರು. ಕೆಲವೇ ಗಂಟೆಗಳಲ್ಲಿ ಅವಧಿಯಲ್ಲಿ 400 ಜನ ರದ್ದು ಮಾಡಿದರು. ಲಾಭ ನಿರೀಕ್ಷಿಸುವುದಕ್ಕಿಂತ ಖರ್ಚು, ಸಿಬ್ಬಂದಿ ವೇತನ ಸರಿದೂಗಿಸಿಕೊಳ್ಳುವುದೇ ಸವಾಲಾಗಿದೆ’ ಎಂದು ಪಬ್‌ನ ಮಾಲೀಕರೊಬ್ಬರು ಹೇಳಿದರು.


ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ತಡೆಯಲು ಕೆ.ಆರ್‌.ಮಾರುಕಟ್ಟೆ ಬಳಿಯ ಬಿಜಿಎಸ್‌ ಮೇಲ್ಸೇತುವೆಯನ್ನು ಪೊಲೀಸರು ನಿರ್ಬಂಧಿಸಿದರು–ಪ್ರಜಾವಾಣಿ ಚಿತ್ರ

ಕೆಲವೆಡೆ ಕಾಣದ ನಿರ್ಬಂಧ
ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾ ನಗರ ಹಾಗೂ ಕೋರಮಂಗಲದ ಪ್ರಮುಖ ವಾಣಿಜ್ಯ ಕೇಂದ್ರಗಳ ಸುತ್ತ–ಮುತ್ತ ಹೊರತು ಪಡಿಸಿದರೆ, ಬೇರೆ ಸ್ಥಳಗಳಲ್ಲಿ ಕರ್ಫ್ಯೂ ಪರಿಣಾಮ ಅಷ್ಟಾಗಿರಲಿಲ್ಲ.

ಬಸವನಗುಡಿ, ಬನಶಂಕರಿ ಮತ್ತಿತರ ಕಡೆಗಳಲ್ಲಿ ಮದ್ಯ ಮಾರಾಟ ಮಳಿಗೆಗಳು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಲ್ಲಿ ಎಂದಿನಂತೆ ಹೆಚ್ಚು ಜನ ಸೇರಿದ್ದರು. ಬೇಕರಿ, ಹೋಟೆಲ್‌, ಅಂಗಡಿಗಳು, ಎಲೆಕ್ಟ್ರಾನಿಕ್‌ ಅಂಗಡಿಗಳಲ್ಲಿಯೂ ರಾತ್ರಿ 11ರವರೆಗೆ ಎಂದಿನಂತೆ ಚಟುವಟಿಕೆ ನಡೆಯುತ್ತಿತ್ತು.


ಆರ್‌.ಆರ್‌. ನಗರದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಂಡ ನಿವಾಸಿಗಳು  –ಪ್ರಜಾವಾಣಿ ಚಿತ್ರ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು