ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದಲ್ಲಿ ಸಮಸ್ಯೆ ಇಲ್ಲ: ಎಚ್‌.ಡಿ. ಕುಮಾರಸ್ವಾಮಿ

Published 19 ಮಾರ್ಚ್ 2024, 7:41 IST
Last Updated 19 ಮಾರ್ಚ್ 2024, 7:41 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದಲ್ಲಿ ಯಾವ ಸಮಸ್ಯೆಯೂ ಇಲ್ಲ. ಜೆಡಿಎಸ್‌ನ ಮೂರು ಮತ್ತು ಬಿಜೆಪಿಯ 25 ಅಭ್ಯರ್ಥಿಗಳ ಗೆಲುವಿಗೆ ನಾವು ಒಗ್ಗಟ್ಟಿನಿಂದ ಹೋರಾಡುತ್ತೇವೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರನ್ನು ಮಂಗಳವಾರ ಭೇಟಿ ಮಾಡಿ ಚರ್ಚಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಾನು ಹೃದಯದ ಚಿಕಿತ್ಸೆಗಾಗಿ ಚೆನ್ನೈಗೆ ತೆರಳುತ್ತಿದ್ದೇನೆ. ಈ ಕಾರಣದಿಂದ ಮೈತ್ರಿ ಧರ್ಮವನ್ನು ಪಾಲಿಸಿಕೊಂಡು ಒಟ್ಟಾಗಿ ಚುನಾವಣಾ ಪ್ರಚಾರ ನಡೆಸುವಂತೆ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರಿಗೆ ಸೋಮವಾರ ಕರೆ ನೀಡಿದ್ದೆ. ನಮ್ಮ ಮಧ್ಯೆ ಯಾವ ಗೊಂದಲವೂ ಇಲ್ಲ' ಎಂದರು.

ಮಂಡ್ಯ, ಹಾಸನ ಮತ್ತು ಕೋಲಾರದಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಕೋಲಾರ ಅಭ್ಯರ್ಥಿಗೆ ಸಂಬಂಧಿಸಿದ ವಿಷಯ ಶೀಘ್ರ ಇತ್ಯರ್ಥವಾಗಲಿದೆ. ಚಿಕಿತ್ಸೆ ಮುಗಿಸಿ ಬಂದ ಬಳಿಕ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು ಎಂದು ಹೇಳಿದರು.

ʼಮಂಡ್ಯದ ಜೆಡಿಎಸ್‌ ಕಾರ್ಯಕರ್ತರಿಗೆ ನಿರಾಸೆಯಾಗದಂತಹ ನಿರ್ಧಾರವನ್ನು ಕೈಗೊಳ್ಳುತ್ತೇನೆ. ಅಲ್ಲಿನ ನನ್ನ ಕಾರ್ಯಕರ್ತರಿಗಾಗಿ ಯಾವುದೇ ರೀತಿಯ ನಿರ್ಧಾರ ಕೈಗೊಳ್ಳುವುದಕ್ಕೂ ನಾನು ಸಿದ್ಧ. ಕಾರ್ಯಕರ್ತರೇ ಅಲ್ಲಿ ನಮ್ಮ ಅಭ್ಯರ್ಥಿಗಳು. ಇಂದಿನಿಂದಲೇ ಚುನಾವಣಾ ಕೆಲಸವನ್ನು ಆರಂಭಿಸುತ್ತಾರೆʼ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್‌ನ ನಾಯಕರು ನಮ್ಮ ಪಕ್ಷದ ಬಗ್ಗೆ ಈಗ ಅನುಕಂಪದ ಮಾತನಾಡುತ್ತಿದ್ದಾರೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಕಾರಣಕ್ಕೆ ಜೆಡಿಎಸ್‌ ಮುಗಿದು ಹೋಯಿತು ಎಂದು ಹೇಳುತ್ತಿದ್ದಾರೆ. ಇವರ ಅನುಕಂಪ ನನಗೆ ಬೇಕಿಲ್ಲ. ರಾಜ್ಯದಲ್ಲಿರುವ ಪಾಪದ ಸರ್ಕಾರದ ವಿರುದ್ಧ ನಾವು ಒಟ್ಟಾಗಿದ್ದೇವೆ ಎಂದು ಹೇಳಿದರು.

2018ರಲ್ಲಿ ನಮ್ಮ ಮನೆ ಬಾಗಿಲಿಗೆ ಬಂದು ಮೈತ್ರಿ ಸರ್ಕಾರ ರಚಿಸಿದ ಕಾಂಗ್ರೆಸ್‌, ಅದೇ ಅವಕಾಶ ಬಳಸಿಕೊಂಡು ಜೆಡಿಎಸ್‌ ಪಕ್ಷವನ್ನು ದುರ್ಬಲಗೊಳಿಸುವ ಪ್ರಯತ್ನ ಆರಂಭಿಸಿತ್ತು. ನಮ್ಮ ಮುಖಂಡರು, ಕಾರ್ಯಕರ್ತರಿಗೆ ಆಮಿಷ ಒಡ್ಡಿ ತನ್ನತ್ತ ಸೆಳೆಯುವ ಕೆಲಸ ಮಾಡಿತ್ತು. ಜೆಡಿಎಸ್‌ ಅನ್ನು ದುರ್ಬಲಗೊಳಿಸುವ ಕಾಂಗ್ರೆಸ್‌ನ ಪ್ರಯತ್ನವನ್ನು ತಡೆಯುವುದಕ್ಕಾಗಿಯೇ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.

ʼನನ್ನನ್ನು ಕಾಂಗ್ರೆಸ್‌ ನಾಯಕರು ಹೇಗೆ ನಡೆಸಿಕೊಂಡಿದ್ದರು ಎಂಬುದು ಗೊತ್ತಿದೆ. ಬಿಜೆಪಿಯವರು ಯಾವತ್ತೂ ಅಗೌರವದಿಂದ ನಡೆಸಿಕೊಂಡಿಲ್ಲ. ಮೈತ್ರಿ ಸರ್ಕಾರ ಪತನಗೊಳಿಸುವುದಲ್ಲಿ ನಿಮ್ಮ ಪಾತ್ರ ಏನು ಎಂಬುದು ಗೊತ್ತಿದೆ. ನಿಮ್ಮಂತೆ ಬಿಜೆಪಿಯವರು ನಮ್ಮ ಕತ್ತು ಕೊಯ್ದಿಲ್ಲʼ ಎಂದು ಶಿವಕುಮಾರ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನುದ್ದೇಶಿಸಿ ವಾಗ್ದಾಳಿ ನಡೆಸಿದರು.

ದೇವೇಗೌಡರ 60 ವರ್ಷದ ರಾಜಕೀಯವನ್ನು ಮುಗಿಸಲು ಕಾಂಗ್ರೆಸ್‌ ನಾಯಕರು ಪ್ರಯತ್ನಿಸುತ್ತಿದ್ದಾರೆ. ಸಂವಿಧಾನ ಉಳಿಸಿ ಎಂದು ಮನವಿ ಮಾಡುತ್ತಾ ಹೊರಟಿದ್ದಾರೆ. ಕುಕ್ಕರ್‌, ಸೀರೆ ಹಂಚಿ ಚುನಾವಣೆ ಗೆಲ್ಲುವುದು ಯಾವ ಸೀಮೆಯ ಘನಂದಾರಿ ಕೆಲಸ? ಇದರಿಂದ ಸಂವಿಧಾನ ಉಳಿಯುತ್ತದಾ? ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT