ಭಾನುವಾರ, ಜೂಲೈ 5, 2020
27 °C
ವಾಣಿಜ್ಯ ಉದ್ದೇಶಕ್ಕೆ ‘ಶೇರ್‌ ರೈಡಿಂಗ್‌’ಗೆ ಸಾರಿಗೆ ಪ್ರಾಧಿಕಾರ ಆಕ್ಷೇಪ

ಓಲಾ–ಉಬರ್‌ ಕಾರ್ ಪೂಲಿಂಗ್‌ ನಿಷೇಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಣಿಜ್ಯ ಉದ್ದೇಶಕ್ಕೆ ಕಾರ್‌ ಪೂಲಿಂಗ್‌ ಮಾಡುವುದನ್ನು ಶುಕ್ರವಾರ ನಿಷೇಧಿಸಿರುವ ಸಾರಿಗೆ ಇಲಾಖೆ, ತಕ್ಷಣದಿಂದಲೇ ‘ಶೇರ್‌ ರೈಡಿಂಗ್‌’ ಆಯ್ಕೆಯನ್ನು ಸ್ಥಗಿತಗೊಳಿಸುವಂತೆ ಓಲಾ ಮತ್ತು ಉಬರ್‌ ಸಂಸ್ಥೆಗಳಿಗೆ ಸೂಚನೆ ನೀಡಿದೆ. 

‘ಕಾರ್‌ ಪೂಲಿಂಗ್‌ ವ್ಯವಸ್ಥೆ ಮುಂದುವರಿಸಿದರೆ ಅಂಥ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಸಾರಿಗೆ ಇಲಾಖೆಯ ಆಯುಕ್ತ ವಿ.ಪಿ. ಇಕ್ಕೇರಿ ಎಚ್ಚರಿಸಿದರು. 

ಓಲಾ–ಉಬರ್‌ ವಾಹನಗಳ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಶುಕ್ರವಾರ ಕರೆಯಲಾಗಿದ್ದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಈ ಎರಡೂ ಕಂಪನಿಗಳ ಅಧಿಕಾರಿಗಳೂ ಸಭೆಯಲ್ಲಿ ಹಾಜರಿದ್ದರು. 

‘ಪರವಾನಗಿ ಷರತ್ತುಗಳು ಮತ್ತು ನಿಯಮಗಳಿಗೆ ಒಲಾ ಮತ್ತು ಉಬರ್‌ ಬದ್ಧವಾಗಿರಬೇಕು. ಯಾವುದೇ ಹೊಸ ಆಯ್ಕೆ ಅಥವಾ ಸೇವೆಯನ್ನು ಒದಗಿಸುವುದಿದ್ದರೆ ಅದಕ್ಕೆ ಕಾನೂನು ಅನುಮತಿಯನ್ನು ಪಡೆದಿರಲೇಬೇಕು’ ಎಂದು ಅವರು ಹೇಳಿದರು.

‘ಕಾರ್‌ ಪೂಲಿಂಗ್‌ ಆಯ್ಕೆಯಿಂದ ನಮ್ಮ ಆದಾಯಕ್ಕೆ ಕತ್ತರಿ ಬಿದ್ದಿದೆ. ಇಂಧನಕ್ಕೆ ಮಾಡುವ ವೆಚ್ಚವೂ ಕೂಡ ಇಂತಹ ಆಯ್ಕೆಯಿಂದ ನಮಗೆ ಸಿಗುತ್ತಿಲ್ಲ’ ಎಂದು ಓಲಾ–ಉಬರ್ ಚಾಲಕರ ಸಂಘದ ಮುಖಂಡ ವಿಜಯ್‌ಕುಮಾರ್‌ ಗೌಡ ಅಳಲು ತೋಡಿಕೊಂಡರು. 

ಈ ವ್ಯವಸ್ಥೆ ನಿಷೇಧಿಸಿರುವ ಇಲಾಖೆಯ ನಿರ್ಧಾರವನ್ನು ಅವರು ಸ್ವಾಗತಿಸಿದರು.  

ಕಾರ್‌ ಪೂಲಿಂಗ್‌ ಅವಕಾಶ ಕಲ್ಪಿಸುವ ‘ಓಲಾ ಶೇರ್’ ಮತ್ತು ‘ಉಬರ್‌ ಪೂಲ್‌’ ಆಯ್ಕೆಗಳನ್ನು ಎರಡು ಕಂಪನಿಗಳು ನೀಡಿವೆ. ಬೇರೆ–ಬೇರೆ ಪ್ರಯಾಣಿಕರು ಒಂದೇ ಸ್ಥಳಕ್ಕೆ ತೆರಳುವುದಿದ್ದರೆ, ಈ ಆಯ್ಕೆಯನ್ನು ಅವರು ಮಾಡಿಕೊಳ್ಳಬಹುದಿತ್ತು. ಪ್ರಯಾಣ ವೆಚ್ಚವೂ ಕಡಿಮೆಯಾಗುತ್ತಿತ್ತು. ಸಂಚಾರ ದಟ್ಟಣೆ ಸಮಸ್ಯೆಗೂ ಅಲ್ಪ ಪರಿಹಾರ ಸಿಕ್ಕಂತಾಗುತ್ತಿತ್ತು.

2017ರಲ್ಲಿಯೂ ಈ ಆಯ್ಕೆಯನ್ನು ನಿಷೇಧಿಸಲು ಇಲಾಖೆ ಮುಂದಾಗಿತ್ತು. ಸಾರಿಗೆ ತಜ್ಞರು ಇದನ್ನು ವಿರೋಧಿಸಿದ್ದರು. ಈಗಲೂ, ‘ನಾವು ಕಾರ್‌ ಪೂಲಿಂಗ್‌ ವಿರುದ್ಧ ಇಲ್ಲ’ ಎಂದು ಇಕ್ಕೇರಿ ಸ್ಪಷ್ಟಪಡಿಸಿದರು.

‘ನಿಯಮದಲ್ಲಿ ಬದಲಾವಣೆ ತರುವಂತೆ ರಾಜ್ಯಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಇಂತಹ ಸೇವೆಗಳನ್ನು ಓಲಾ–ಉಬರ್‌ನಂತಹ ಕಂಪನಿಗಳಿಗೂ ವಿಸ್ತರಿಸಬೇಕು ಎಂದು ಕೋರಲಾಗಿದೆ. ಕಾನೂನಿನಡಿ ಒಪ್ಪಿಗೆ ದೊರೆತರೆ, ವಾಣಿಜ್ಯ ಉದ್ದೇಶಕ್ಕೂ ಇಂತಹ ಆಯ್ಕೆ ಒದಗಿಸಬಹುದಾಗಿದೆ’ ಎಂದು ಅವರು ಹೇಳಿದರು.

ಕ್ಯಾಬ್‌ ಪ್ರಯಾಣ ದರ ಪರಿಷ್ಕರಣೆಗೆ ಸಮಿತಿ’

‘ಟ್ಯಾಕ್ಸಿ ಅಥವಾ ಕ್ಯಾಬ್‌ ಪ್ರಯಾಣ ದರ ಪರಿಷ್ಕರಣೆ ಮಾಡಲು ಮತ್ತು ಕ್ಯಾಬ್‌ ಚಾಲಕರ ಸಮಸ್ಯೆಗಳು ಮತ್ತು ಬೇಡಿಕೆ ಕುರಿತು ವರದಿ ಸಲ್ಲಿಸಲು ಶೀಘ್ರವೇ ಸಮಿತಿಯೊಂದನ್ನು ರಚಿಸಲಾಗುವುದು’ ಎಂದು ವಿ.ಪಿ. ಇಕ್ಕೇರಿ ಹೇಳಿದರು. 

ಕಮಿಷನ್‌ ರೂಪದಲ್ಲಿ ಕಂ‍ಪನಿಗಳು ನಮ್ಮಿಂದ ಹೆಚ್ಚು ಹಣವನ್ನು ವಸೂಲಿ ಮಾಡುತ್ತಿವೆ. ಅಲ್ಲದೆ, ವಿಮಾನ ನಿಲ್ದಾಣದಲ್ಲಿ ಕ್ಯಾಬ್‌ಗಳ ನಿಲುಗಡೆಗೂ ಸ್ಥಳದ ಕೊರತೆ ಇದೆ ಎಂದು ಸಭೆಯಲ್ಲಿ ದೂರಿದ ಚಾಲಕರು, ಕೆಲಸದ ಅವಧಿಯನ್ನು ನಿಗದಿ ಪಡಿಸಬೇಕು ಹಾಗೂ ಆಟೊಗಳಂತೆ ಫೇರ್‌ ಮೀಟರ್‌ಗಳನ್ನು ಕ್ಯಾಬ್‌ಗಳಲ್ಲಿಯೂ ಅಳವಡಿಸಬೇಕು ಎಂದು ಮನವಿ ಮಾಡಿದರು. ನಂತರ, ಇಕ್ಕೇರಿ ಈ ನಿರ್ಧಾರ ಪ್ರಕಟಿಸಿದರು. 

‘ಚಾಲಕರ ದೂರುಗಳ ಕುರಿತು ಸಮಿತಿಯು ಪರಿಶೀಲನೆ ನಡೆಸಲಿದೆ. ಇದಕ್ಕೆ ಸೂಕ್ತ ಪರಿಹಾರ ಕ್ರಮಗಳ ಬಗ್ಗೆಯೂ ತಿಳಿಸಲಿದೆ’ ಎಂದು ಅವರು ತಿಳಿಸಿದರು.  

‘ಚೈಲ್ಡ್‌ಲಾಕ್‌’ ತೆರವಿಗೆ ಸೂಚನೆ:  ಕಾರುಗಳಲ್ಲಿ ‘ಚೈಲ್ಡ್‌ಲಾಕ್‌’ ವ್ಯವಸ್ಥೆ ನಿಷೇಧಿಸಿ ತಿಂಗಳಾದರೂ ಈ ಬಗ್ಗೆ ಓಲಾ–ಉಬರ್‌ ಕಂಪನಿಗಳು ಚಾಲಕರಿಗೆ ಸೂಚನೆ ನೀಡಿಲ್ಲ. ಈ ಕುರಿತು ಅರಿವು ಮೂಡಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು