ಶನಿವಾರ, ಜುಲೈ 31, 2021
25 °C
ತುರ್ತು ಸಮಯದಲ್ಲಿ ಸಿಗುತ್ತಿಲ್ಲ ಸ್ಪಂದನೆ * ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವಿಗೀಡಾಗುತ್ತಿದ್ದಾರೆ ಸೋಂಕಿತರು

ಮೂರು ತಾಸು ರಸ್ತೆಯಲ್ಲೇ ಉಳಿದ ಸೋಂಕಿತನ ಶವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ರೋಗಿಗಳಿಂದ ಹಾಸಿಗೆಗಳು ಭರ್ತಿಯಾಗುತ್ತಿದ್ದರೆ, ಸಕಾಲದಲ್ಲಿ ಆಂಬುಲೆನ್ಸ್‌ ಹಾಗೂ ಸೂಕ್ತ ಚಿಕಿತ್ಸೆ ಸಿಗದೆ ಸೋಂಕಿತರು ಅಸುನೀಗುತ್ತಿದ್ದಾರೆ. ಹನುಮಂತನಗರದಲ್ಲಿ ಸೋಂಕಿತರೊಬ್ಬರು ರಸ್ತೆಯಲ್ಲಿಯೇ ಮೃತಪಟ್ಟಿದ್ದಾರೆ. ಸಕಾಲಕ್ಕೆ ಸಿಬ್ಬಂದಿ ಬಾರದ ಕಾರಣ ಅವರ ಶವ ಮೂರು ತಾಸು ರಸ್ತೆಯಲ್ಲಿಯೇ ಉಳಿದಿತ್ತು. 

ಹನುಮಂತನಗರದ 55 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಶುಕ್ರವಾರ ಬೆಳಿಗ್ಗೆ ದೃಢಪಟ್ಟಿತ್ತು. ವರದಿ ಬರುತ್ತಿದ್ದಂತೆ ಆಸ್ಪತ್ರೆಗೆ ಸೇರಲು ಮುಂದಾಗಿದ್ದ ಅವರು, ಆಂಬುಲೆನ್ಸ್‌ಗೆ ಕರೆ ಮಾಡಿದ್ದರು. ಸಂಜೆ ನಾಲ್ಕು ಗಂಟೆಯಾದರೂ ಆಂಬುಲೆನ್ಸ್‌ ಬಂದಿಲ್ಲ. ಸಂಜೆಯ ವೇಳೆಗೆ ಆಂಬುಲೆನ್ಸ್‌ ಬರುವುದು ಖಚಿತ ಪಡಿಸಿಕೊಂಡು ಮನೆಯಿಂದ ಹೊರಗೆ ಬಂದಿದ್ದಾರೆ. 15 ದಿನಗಳಿಗಾಗುವಷ್ಟು ಬಟ್ಟೆಗಳನ್ನು ತುಂಬಿಕೊಂಡು ಕಾಯುತ್ತಿದ್ದ ವೇಳೆ ರಸ್ತೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ಅಲ್ಲಿಯೇ ಮೃತಪಟ್ಟಿದ್ದಾರೆ. ಮೂರು ತಾಸುಗಳಾದರೂ ಶವ ಸಾಗಿಸಲು ಯಾರೂ ಮುಂದಾಗಿಲ್ಲ. ಸಂಜೆ ಮಳೆ ಬಂದಿದ್ದು, ಶವ ನೀರಿನಲ್ಲಿ ನೆನೆದಿದೆ. 

‘ಸಕಾಲದಲ್ಲಿ ಆಂಬುಲೆನ್ಸ್‌ ಬಾರದಿರುವುದೇ ಸಾವಿಗೆ ಕಾರಣ’ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ಕೊರೊನಾದಿಂದ ಮೃತಪಟ್ಟವರ ಶವದ ಬಳಿ ಹೋಗಲು ಜನರಿಗೆ ಆತಂಕವಾಗುತ್ತದೆ. ಎಲ್ಲ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಶವದ ಬಳಿ ಹೋಗಬೇಕಾಗುತ್ತದೆ. ಈ ವೇಳೆ ಮಳೆಯೂ ಬಂದಿದ್ದರಿಂದ ಶವ ಸಾಗಿಸಲು ವಿಳಂಬವಾಗಿದೆ’ ಎಂದು ಹನುಮಂತನಗರದ ಪಾಲಿಕೆ ಸದಸ್ಯ ಎಚ್.ಎ. ಕೆಂಪೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. 

ವೃದ್ಧ ಸಾವು: ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಕಲಾಸಿಪಾಳ್ಯದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು (56 ವರ್ಷ) ಮೃತಪಟ್ಟಿದ್ದಾರೆ. 

‘ಅಣ್ಣ ಎಂಟು ವರ್ಷಗಳಿಂದ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದರು. ಡಯಾಲಿಸಿಸ್‌ ಮಾಡಿಸಿಕೊಳ್ಳಲು ನಾಲ್ಕು ದಿನಗಳ ಹಿಂದೆ ರಂಗದೊರೈ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯವರು ಕೋವಿಡ್‌ ಪರೀಕ್ಷೆ ನಂತರ ಡಯಾಲಿಸಿಸ್‌ ಮಾಡುವುದಾಗಿ ಹೇಳಿ, ಗಂಟಲು ದ್ರವದ ಮಾದರಿ ತೆಗೆದುಕೊಂಡು ಕಳಿಸಿದ್ದರು. ಕೊರೊನಾ ಸೋಂಕು ತಗುಲಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ಹೇಳಿದರು’ ಎಂದು ಮೃತರ ಸಿಬ್ಬಂದಿ ಹಸೀನಾ ‘ಪ್ರಜಾವಾಣಿ’ಗೆ ತಿಳಿಸಿದರು. 

‘ತಕ್ಷಣಕ್ಕೆ ಬಿಬಿಎಂಪಿ ಅಧಿಕಾರಿಗಳು, ಸಂಬಂಧಪಟ್ಟ ವೈದ್ಯರನ್ನು ಸಂಪರ್ಕಿಸಲು ಸತತವಾಗಿ ಪ್ರಯತ್ನಿಸಿದೆವು. ಯಾರೊಬ್ಬರೂ ಕರೆ ಸ್ವೀಕರಿಸಲಿಲ್ಲ’ ಎಂದು ಅವರು ಕಣ್ಣೀರಿಟ್ಟರು.

ವೃದ್ಧ ಸಾವು: ಜ್ವರದಿಂದ ಬಳಲುತ್ತಿದ್ದ ಕಾಚರಕನಹಳ್ಳಿಯ ವೃದ್ಧರೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಮೂರು ದಿನಗಳ ಹಿಂದೆ ದೃಢಪಟ್ಟಿತ್ತು. ಖಾಸಗಿ ಆಸ್ಪತ್ರೆಯ ವೈದ್ಯರು ಸಕಾಲಕ್ಕೆ ಚಿಕಿತ್ಸೆ ನೀಡದೆ ಅಲೆದಾಡಿಸಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಪತ್ನಿ ಹಾಗೂ ಪುತ್ರನನ್ನು ಪ್ರತ್ಯೇಕ ಆಸ್ಪತ್ರೆಗಳಲ್ಲಿ ಕ್ವಾರಂಟೈನ್‌ನಲ್ಲಿಡಲಾಗಿದೆ. 

ಮನೆಯಲ್ಲೇ ಸಾವು: ಸಂಪಂಗಿರಾಮನಗರದ 55 ವರ್ಷದ ವ್ಯಕ್ತಿ ಮನೆಯಲ್ಲೇ ಮೃತಪಟ್ಟಿದ್ದಾರೆ. ಇತ್ತೀಚೆಗೆ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲು ಮಾಡಬೇಕು ಎನ್ನುವಷ್ಟರಲ್ಲಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ. 

‌ವೈದ್ಯರ ನಿರ್ಲಕ್ಷ್ಯ ಆರೋಪ: ಕಾಮಾಕ್ಷಿಪಾಳ್ಯದ 50 ವರ್ಷದ ವ್ಯಕ್ತಿಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. 

ಆ ವ್ಯಕ್ತಿ ಶುಕ್ರವಾರ ಬೆಳಿಗ್ಗೆ ಎಂದಿನಂತೆ ಉದ್ಯಾನಕ್ಕೆ ವಾಯುವಿಹಾರಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆ ಸಿಬ್ಬಂದಿ ಆ ವ್ಯಕ್ತಿಯನ್ನು ಒಳಗೆ ಸೇರಿಸಿಕೊಳ್ಳಲಿಲ್ಲ ಎಂದು ಸ್ಥಳೀಯರು ಹೇಳಿದರು.

ಯುವಕ ಸಾವು: ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 37 ವರ್ಷದ ಯುವಕರೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ.

ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಯುವಕ ಓಡಾಡಿದ್ದಾರೆ. ಉಸಿರಾಟದ ತೊಂದರೆ ಇರುವುದರಿಂದ ಕೊರೊನಾ ಸೋಂಕು ತಗುಲಿರಬಹುದು ಎಂದುಕೊಂಡು ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಯವರು ನಿರಾಕರಿಸಿದ್ದಾರೆ. ಕೊನೆಗೆ ಯುವಕ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು.

ತನಿಖೆಗೆ ಆದೇಶ
‘ಹನುಮಂತನಗರದ ಘಟನೆ ವಿಷಾದನೀಯ. ನೀವು ಮನೆಯ ಹತ್ತಿರ ಬರುವುದು ಬೇಡ, ನಾನೇ ಆಂಬುಲೆನ್ಸ್‌ ಕಡೆಗೆ ಬರುತ್ತೇನೆ ಎಂದು ಸೋಂಕಿತರು ಹೇಳಿದ್ದರಿಂದ ಆಂಬುಲೆನ್ಸ್‌ ಸಿಬ್ಬಂದಿ ದೂರದಲ್ಲಿದ್ದರು. ಈ ವೇಳೆ ರಸ್ತೆಯಲ್ಲಿ ಕುಸಿದುಬಿದ್ದು ಅವರು ಮೃತಪಟ್ಟಿದ್ದಾರೆ. ಆದರೂ, ಈ ಘಟನೆ ಕುರಿತು ತನಿಖೆಗೆ ಆದೇಶ ನೀಡಿದ್ದೇನೆ. ಉಪ ಆಯುಕ್ತ (ಆಡಳಿತ) ಜಿ. ಲಿಂಗಮೂರ್ತಿ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಿದ್ದೇನೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್‌ ತಿಳಿಸಿದರು. 

‘ಸೋಂಕಿತರು ಕರೆ ಮಾಡಿದ ತಕ್ಷಣ ಆಂಬುಲೆನ್ಸ್‌ ಕಳಿಸಿಕೊಡಬೇಕು. ಕೂಡಲೇ ಆಸ್ಪತ್ರೆಗೆ ಸೇರಿಸಿಕೊಳ್ಳಬೇಕು’ ಎಂದು ಅವರು ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದಾರೆ. 

ರಸ್ತೆಯಲ್ಲೇ ಬಿದ್ದಿವೆ ಪಿಪಿಇ ಕಿಟ್‌
ನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿಯೇ, ಕೊರೊನಾ ರೋಗಿಗಳು, ವೈದ್ಯರು ಮತ್ತು ಇತರರು ಬಳಸಿದ ಪಿಪಿಇ ಕಿಟ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ. ಮಾನ್ಯತಾ ಟೆಕ್‌ ಪಾರ್ಕ್ ಬಳಿಯ ಲುಂಬಿನಿ ಗಾರ್ಡನ್‌ ಸಮೀಪದ ಮೇಲ್ಸೇತುವೆಯಲ್ಲಿ ಎರಡು ಮೂಟೆಗಳಲ್ಲಿ ಪಿಪಿಇ ಕಿಟ್‌ಗಳನ್ನು ಮತ್ತು ವೈದ್ಯಕೀಯ ತ್ಯಾಜ್ಯ ಇಡಲಾಗಿತ್ತು. ಬಳಸಿದ ಮುಖಗವಸುಗಳು ಈ ಮೂಟೆಯಲ್ಲಿದ್ದವು. 

‘ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಪಿಪಿಇ ಕಿಟ್‌ಗಳನ್ನು, ವೈದ್ಯಕೀಯ ತ್ಯಾಜ್ಯವನ್ನು ಸುರಿದರೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುವುದಿಲ್ಲವೇ? ಗಾಳಿಯ ಮೂಲಕ ಸೋಂಕು ವ್ಯಾಪಿಸಿದರೆ ಯಾರು ಹೊಣೆ’ ಎಂದು ಪಾದಚಾರಿ ನರಸಿಂಹಮೂರ್ತಿ ಪ್ರಶ್ನಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು