ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಡವಾಗಿ ದುಡ್ಡು ಕಟ್ಟಿದ್ದರೆ ಬಡ್ಡಿ ಕಟ್ಟಿ: ಬಿಡಿಎ ಹೊಸ ತಗಾದೆ

ನಾಡಪ್ರಭು ಕೆಂಪೇಗೌಡ ಬಡಾವಣೆ * ಬಡ್ಡಿರಹಿತವಾಗಿ ಶುಲ್ಕ ಪಾವತಿ ಅವಧಿ ವಿಸ್ತರಣೆಗೆ ಸಿಗದ ಅನುಮೋದನೆ * ಆತಂಕದಲ್ಲಿ ನಿವೇಶನದಾರರು
Last Updated 3 ಜೂನ್ 2019, 14:42 IST
ಅಕ್ಷರ ಗಾತ್ರ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎರಡನೇ ಹಂತದಲ್ಲಿ ನಿವೇಶನ ಹಂಚಿಕೆಯಾದವರು120 ದಿನದೊಳಗೆ ಹಣ ಕಟ್ಟಿದರೆ ಬಡ್ಡಿ ವಿಧಿಸುವುದಿಲ್ಲ ಎಂದಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಈಗ ಏಕಾಏಕಿ ‘ನೀವೂ ಬಡ್ಡಿ ಕಟ್ಟಬೇಕಾಗುತ್ತದೆ’ ಎಂದು ವರಸೆ ಬದಲಾಯಿಸಿದೆ.

ಸೈಟ್‌ ಹಂಚಿಕೆಯಾಗಿ 60 ದಿನಗಳ ಬಳಿಕ ಹಾಗೂ 120 ದಿನಗಳ ಒಳಗೆ ನಿವೇಶನದ ಮೌಲ್ಯವನ್ನು ಪಾವತಿಸಿದವರು ಬಿಡಿಎ ಈ ದ್ವಂದ್ವ ನಿಲುವಿನಿಂದಾಗಿ ಆತಂಕದಲ್ಲಿ ದಿನ ಕಳೆಯುವಂತಾಗಿದೆ.

ಬಿಡಿಎ ಬಡಾವಣೆಯಲ್ಲಿ ನಿವೇಶನ ಪಡೆದವರು ನಿವೇಶನ ಹಂಚಿಕೆಯಾದ 60 ದಿನಗಳ ಒಳಗೆ ನಿವೇಶನದ ಮೌಲ್ಯವನ್ನು ಪಾವತಿಸಿದರೆ ಅದಕ್ಕೆ ಬಡ್ಡಿ ಇರುವುದಿಲ್ಲ. 60 ದಿನಗಳ ಬಳಿಕ 90 ದಿನಗಳ ಒಳಗೆ ಪಾವತಿಸಿದರೆ ಶೇ 18ರಷ್ಟು ಹಾಗೂ 90 ದಿನಗಳ ಬಳಿಕ ‍ಪಾವತಿಸಿದರೆ ಶೇ 22ರಷ್ಟು ಬಡ್ಡಿಯನ್ನೂ ನೀಡಬೇಕಾಗುತ್ತದೆ.

ಕೆಂಪೇಗೌಡ ಬಡಾವಣೆಯಲ್ಲಿ ಎರಡನೇ ಹಂತದಲ್ಲಿ ನಿವೇಶನ ಹಂಚಿಕೆಯಾದವರು ನಿವೇಶನದ ಮೌಲ್ಯವನ್ನು ಪಾವತಿಸಲು ಹೆಚ್ಚುವರಿ ಕಾಲಾವಕಾಶ ಕೋರಿದ್ದರು. ಅವರ ಮನವಿಗೆ ಸ್ಪಂದಿಸಿದ್ದ ಬಿಡಿಎ ಆಡಳಿತ ಮಂಡಳಿ, ‘ನಿವೇಶನದ ಮೌಲ್ಯವನ್ನು 90ಗಳೊಳಗೆ ಪಾವತಿಸಿದರೆ ಬಡ್ಡಿ ನೀಡಬೇಕಾಗಿಲ್ಲ’ ಎಂದು ನಿರ್ಣಯ ಕೈಗೊಂಡಿತ್ತು. ನಂತರ ಈ ಕಾಲಾವಕಾಶವನ್ನು ಮತ್ತಷ್ಟು ವಿಸ್ತರಿಸಿದ ಮಂಡಳಿ, ‘120 ದಿನಗಳ ಒಳಗೆ ಪಾವತಿಸಿದರೂ ಬಡ್ಡಿ ನೀಡಬೇಕಾಗಿಲ್ಲ’ ಎಂದು ಹೇಳಿತ್ತು.

ಬಡ್ಡಿರಹಿತವಾಗಿ ನಿವೇಶನದ ಮೌಲ್ಯ ಪಾವತಿಸಲು ಹೆಚ್ಚುವರಿ ಕಾಲಾವಕಾಶ ನೀಡಿರುವ ಆಡಳಿತ ಮಂಡಳಿಯ ನಿರ್ಣಯಕ್ಕೆ ನಗರಾಭಿವೃದ್ಧಿ ಇಲಾಖೆಯ ಅನುಮೋದನೆ ಇನ್ನೂ ಸಿಕ್ಕಿಲ್ಲ. ಒಂದು ವೇಳೆ ಈ ನಿರ್ಣಯಕ್ಕೆ ಅನುಮೋದನೆ ಸಿಗದಿದ್ದಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎಂದು ಬಿಡಿಎ ಉಪಕಾರ್ಯದರ್ಶಿ ಕಚೇರಿಯ ಸಿಬ್ಬಂದಿ ನಿವೇಶನದಾರರಿಗೆ ಹೇಳುತ್ತಿದ್ದಾರೆ.

ಬಿಡಿಎ ನಿವೇಶನ ಹಂಚಿಕೆಯ ಕ್ರಯಪತ್ರದಲ್ಲೂ ಈ ಕುರಿತ ಷರತ್ತನ್ನು ಉಲ್ಲೇಖಿಸಲಾಗಿದೆ. ನಿವೇಶನ ಹಂಚಿಕೆಯಾದ 60 ದಿನಗಳ ಬಳಿಕ ನಿವೇಶನದ ಮೌಲ್ಯ ಪಾವತಿಸಿದವರಿಗೆ ಬಡ್ಡಿ ವಿಧಿಸುವುದು ಬಿಡಿಎ ಆಡಳಿತ ಮಂಡಳಿಯ ನಿರ್ಣಯಕ್ಕೆ ಸರ್ಕಾರ ಘಟನೋತ್ತರ ಮಂಜೂರಾತಿಯ ಷರತ್ತಿಗೆ ಒಳಪಟ್ಟಿದೆ ಎಂಬ ಸಾಲನ್ನು ಕ್ರಯಪತ್ರದಲ್ಲಿ ಸೇರಿಸಲಾಗಿದೆ.

‘ನಮಗೆ ಮಂಜೂರಾದ 30x40 ಅಡಿ ನಿವೇಶನದ ಮೌಲ್ಯವನ್ನು ಜನವರಿ ಅಂತ್ಯದೊಳಗೆ ಪಾವತಿಸಬೇಕಿತ್ತು. ಬಡ್ಡಿರಹಿತವಾಗಿ ಮೌಲ್ಯವನ್ನು ಪಾವತಿಸಲು ಬಿಡಿಎ ಹೆಚ್ಚುವರಿ ಕಾಲಾವಕಾಶ ನೀಡಿದ್ದರಿಂದ ನಾವು ತಡವಾಗಿ ಹಣ ಕಟ್ಟಿದ್ದೇವೆ. ಈಗ ಬಡ್ಡಿಯನ್ನೂ ಕಟ್ಟುವಂತೆ ಉಪಕಾರ್ಯದರ್ಶಿ ಕಚೇರಿ ಸಿಬ್ಬಂದಿ ಹೇಳುತ್ತಿದ್ದಾರೆ’ ಎಂದು ಸುನಿಲ್‌ ರಾಜ್ ಅರಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಖಾಸಗಿ ಬಡಾವಣೆಗಳ ನಿವೇಶನಗಳಿಗೆ ಹೋಲಿಸಿದರೆ ಬಿಡಿಎ ನಿವೇಶನಗಳ ಬೆಲೆ ಮೊದಲೇ ಜಾಸ್ತಿ. ಸಾಲ ಮಾಡಿ ಹೇಗೋ ಹಣ ಹೊಂದಿಸಿ ನಿವೇಶನದ ಮೌಲ್ಯವನ್ನು ತುಂಬಿಸಿದ್ದೇವೆ. ಈಗ ಮತ್ತೆ ಬಡ್ಡಿ ಕಟ್ಟಿ ಎಂದರೆ ನಾವು ಎಲ್ಲಿಂದ ದುಡ್ಡು ತರಲು ಸಾಧ್ಯ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

‘ಎಷ್ಟು ದಂಡವನ್ನು ಕಟ್ಟಬೇಕಾಗುತ್ತದೆ ಎಂಬ ಪ್ರಶ್ನೆಗೂ ಉಪಕಾರ್ಯದರ್ಶಿ ಕಚೇರಿಯ ಸಿಬ್ಬಂದಿ ಬಳಿ ಉತ್ತರವಿಲ್ಲ. ಈಗ ದಂಡ ಕಟ್ಟಬೇಕು ಎನ್ನುವವರು ಹೆಚ್ಚುವರಿ ಕಾಲಾವಕಾಶ ನೀಡಿದ್ದಾದರೂ ಏಕೆ’ ಎಂದು ಅವರು ಪ್ರಶ್ನಿಸಿದರು.

‘ಬಿಡಿಎ ನಿರ್ಣಯಕ್ಕೆ ಶೀಘ್ರ ಅನುಮೋದನೆ ಕೊಡಿಸಿ’
‘ಈ ಬಡಾವಣೆಯಲ್ಲಿ ಎರಡನೇ ಹಂತದಲ್ಲಿ ನಿವೇಶನ ಮಂಜೂರಾದವರ ಪೈಕಿ ಶೇ 80ರಷ್ಟು ಮಂದಿ ಸೈಟ್‌ ಹಂಚಿಕೆಯಾದ 60 ದಿನಗಳ ಬಳಿಕವೇ ಹಣ ಕಟ್ಟಿದ್ದಾರೆ. ಆಡಳಿತ ಮಂಡಳಿಯ ನಿರ್ಣಯಕ್ಕೆ ಸರ್ಕಾರದ ಅನುಮೋದನೆ ಪಡೆಯುವುದು ಬಿಡಿಎ ಜವಾಬ್ದಾರಿ. ಹಾಗಾಗಿ ಬಿಡಿಎ ಅಧ್ಯಕ್ಷರು, ಬೆಂಗಳೂರು ಅಭಿವೃದ್ಧಿ ಸಚಿವರು ಮಂಡಳಿಯ ನಿರ್ಣಯಕ್ಕೆ ಆದಷ್ಟು ಬೇಗ ಅನುಮೋದನೆ ಕೊಡಿಸಬೇಕು’ ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನದಾರರ ಮುಕ್ತವೇದಿಕೆಯ ಸೂರ್ಯಕಿರಣ್‌ ಒತ್ತಾಯಿಸಿದರು.

ಆತಂಕ ಬೇಡ: ಬಿಡಿಎ
‘ನಿವೇಶನ ಹಂಚಿಕೆಯಾದ 60 ದಿನಗಳ ಬಳಿಕ ಹಣ ಕಟ್ಟಿದವರು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎಂದು ಆತಂಕಪಡುವುದು ಬೇಡ. ಬಿಡಿಎ ನಿರ್ಣಯಕ್ಕೆ ಶೀಘ್ರವೇ ಸರ್ಕಾರದಿಂದಲೂ ಅನುಮೋದನೆ ಸಿಗಲಿದೆ. ಬಡ್ಡಿ ಹಣ ಪಾವತಿಗೆ ಒತ್ತಾಯ ಮಾಡದಂತೆಉಪಕಾರ್ಯದರ್ಶಿಗಳ ಕಚೇರಿ ಸಿಬ್ಬಂದಿಗೂ ಸೂಚನೆ ನೀಡುತ್ತೇವೆ’ ಎಂದು ಬಿಡಿಎ ಕಾರ್ಯದರ್ಶಿ ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT