ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ‘ಕೊರೊನಾ ಹಾಡಿಗೆ’ ಪುನೀತ್‌ ಪವರ್‌!

ಹಾಡಿನ ವಿಡಿಯೊ ಮೂಲಕ ಗೌರವ ಸಮರ್ಪಣೆ
Last Updated 10 ಮೇ 2020, 19:34 IST
ಅಕ್ಷರ ಗಾತ್ರ

ಬೆಂಗಳೂರು: ಜೀವದ ಹಂಗು ತೊರೆದು ಹಗಲಿರಳು ಕೋವಿಡ್‌–19 ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್‌ಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಿಡಿಯೊ ಹಾಡೊಂದರ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

ಅರಮನೆ ರಸ್ತೆಯಲ್ಲಿರುವ ಸೋಫಿಯಾ ಶಾಲೆಯ ಇಂಟರ‍್ಯಾಕ್ಟ್‌ ಕ್ಲಬ್‌ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಅದಕ್ಕಾಗಿ ಏಳು ನಿಮಿಷಗಳ ‘ಉಪಕಾರ ಸ್ಮರಣೆ’ (ಓಡ್‌ ಆಫ್‌ ಗ್ರ್ಯಾಟಿಟ್ಯೂಡ್‌) ಎಂಬ ವಿಡಿಯೊ ಹಾಡು ಸಿದ್ಧಪಡಿಸಿದ್ದಾರೆ. ಈ ವಿಡಿಯೊ ವಿಶೇಷವೆಂದರೆ ಕನ್ನಡ ಚಿತ್ರರಂಗದ ನಟ, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಕೂಡ ಈ ಹಾಡಿಗೆ ಧ್ವನಿ ನೀಡಿರುವುದು!

ಕನ್ನಡದ ಮೇರುನಟ ಡಾ. ರಾಜ್‌ಕುಮಾರ್‌ ಅವರ ‘ಬಂಗಾರದ ಮನುಷ್ಯ’ ಚಲನಚಿತ್ರದ ‘ನಗುನಗುತಾ ನಲಿ, ನಲಿ. ಎಲ್ಲ ದೇವನ ಕಲೆ ಎಂದೇ ನೀ ತಿಳಿ... ಅದರಿಂದ ನೀ ಕಲಿ. ನಗು ನಗುತಾ ನಲಿ ಏನೇ ಆಗಲಿ’ ಈ ಜನಪ್ರಿಯ ಹಾಡಿನ ಮೊದಲ ನಾಲ್ಕು ಸಾಲುಗಳನ್ನು ಗುನುಗುವ ಮೂಲಕ ಪುನೀತ್‌ ಅವರು ಕೊರೊನಾ ವಾರಿಯರ್ಸ್‌ಗೆ ಧ್ಯನವಾದ ಅರ್ಪಿಸಿದ್ದಾರೆ.

ಪುನೀತ್ ಅವರ ಇಬ್ಬರೂ ಹೆಣ್ಣುಮಕ್ಕಳು ಇದೇ ಶಾಲೆಯ ವಿದ್ಯಾರ್ಥಿನಿಯರು. ಮೊದಲನೇ ಮಗಳು ಈಗಾಗಲೇ 10ನೇ ತರಗತಿ ತೇರ್ಗಡೆಯಾಗಿದ್ದರೆ, ಎರಡನೇ ಮಗಳು ಹೈಸ್ಕೂಲ್‌ನಲ್ಲಿದ್ದಾಳೆ. ಹಾಗಾಗಿ ಈ ಶಾಲೆಯ ಸಾಂಸ್ಕೃತಿಕ ಹಾಗೂ ಇತರ ಚಟುವಟಿಕೆಗಳಲ್ಲಿ ಪುನೀತ್ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.

ಮನೆಯಲ್ಲಿ ಕುಳಿತೇ ವಿಡಿಯೊ

ಲಾಕ್‌ಡೌನ್‌ ಸಮಯದಲ್ಲಿ ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರು ಮನೆಯಲ್ಲಿಯೇ ಕುಳಿತು ಈ ವಿಡಿಯೊ ತಯಾರಿಸಿದ್ದಾರೆ.ಇಂಟರ‍್ಯಾಕ್ಟ್‌ ಕ್ಲಬ್‌ನ ನಾಲ್ಕು ಶಿಕ್ಷಕಿಯರು ಮತ್ತು ಐದಾರು ವಿದ್ಯಾರ್ಥಿನಿಯರು ತಾವೇ ಸಾಹಿತ್ಯ ರಚಿಸಿ, ಧ್ವನಿ ನೀಡಿದ್ದಾರೆ.

ವೈದ್ಯರು, ಶುಶ್ರೂಷಕಿಯರು, ಪೊಲೀಸರು, ಪೌರಕಾರ್ಮಿಕರು, ಕೂಲಿಕಾರ್ಮಿಕರು, ಬಿಬಿಎಂಪಿ ಮತ್ತು ಬೆಸ್ಕಾಂ ಸಿಬ್ಬಂದಿ, ಸ್ವಯಂಸೇವಕರು, ಸಮಾಜ ಸೇವಕರು ಹಾಗೂ ವಿಜ್ಞಾನಿಗಳು ಸೇರಿದಂತೆ ಎಲ್ಲ ಕೋವಿಡ್‌–19 ಯೋಧರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇಂಟರ‍್ಯಾಕ್ಟ್‌ ಕ್ಲಬ್‌ ಸದಸ್ಯರ ಇಂಥದೊಂದು ಪರಿಕಲ್ಪನೆಗೆ ಬೆಂಬಲವಾಗಿ ನಿಂತವರು ಪ್ರಾಚಾರ್ಯೆ ಸಿಸ್ಟರ್‌ ಅಲ್ಪನಾ. ಆಗ ಸಿದ್ಧವಾಗಿದ್ದೆ ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿರುವ ಏಳು ನಿಮಿಷಗಳ ಈ ವಿಡಿಯೊ.

ಇಂಟರ‍್ಯಾಕ್ಟ್‌ ಕ್ಲಬ್‌ ವಿದ್ಯಾರ್ಥಿನಿ

ಇಂಟರ‍್ಯಾಕ್ಟ್‌ ಕ್ಲಬ್‌ನ ಶಿಕ್ಷಕಿಯರಾದ ಅಲ್ಫೋನ್ಸಾ ಮಹೇಶ್, ಪೃಥ್ವಿ ಶಾಸ್ತ್ರಿ, ಸ್ನೇಹಾರಾಮ್‌, ಅನಿತಾ ಸಲ್ಡಾನಾ ಅವರು ಸಾಹಿತ್ಯ ಮತ್ತು ಧ್ವನಿ ನೀಡುವ ಮೂಲಕ ‘ಮನೆಯಲ್ಲೇ ಇರಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ’ ಎಂಬ ಸಂದೇಶ ಸಾರಿದ್ದಾರೆ. ವಿದ್ಯಾರ್ಥಿನಿಯರು ಪ್ಲಕಾರ್ಡ್‌ ಹಿಡಿದು ಎಲ್ಲ ಕೊರೊನಾ ಯೋಧರಿಗೂ ಧನ್ಯವಾದ ಸಮರ್ಪಿಸುತ್ತಾರೆ. ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಲ್ಲಿ ಈ ವಿಡಿಯೊ ಅಪ್‌ಲೋಡ್ ಮಾಡಲಾಗಿದೆ.ಎರಡು ದಿನದಲ್ಲಿ ಯೂಟ್ಯೂಬ್‌ನಲ್ಲಿ 1.500 ಜನರು ಈ ಹಾಡನ್ನು ವೀಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT