ಮಂಗಳವಾರ, ಮಾರ್ಚ್ 21, 2023
29 °C
ಬಿಎಂಟಿಸಿಯಲ್ಲಿ ಮತ್ತೊಂದು ಗೋಲ್‌ಮಾಲ್: ಮಂಡಳಿ ನಿರ್ದೇಶಕನ ವಿರುದ್ಧ ಎಫ್ಐಆರ್

ಎಂ.ಡಿಗಳ ಸಹಿಯನ್ನೇ ನಕಲು ಮಾಡಿದ ಅಧಿಕಾರಿ: ಬಿಎಂಟಿಸಿಯಲ್ಲಿ ಮತ್ತೊಂದು ಗೋಲ್‌ಮಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಿರಂತರ ಆರ್ಥಿಕ ಸಂಕಷ್ಟದಲ್ಲಿರುವ ಬಿಎಂಟಿಸಿಯಲ್ಲಿ ಈಗ ಮತ್ತೊಂದು ಅಕ್ರಮ ನಡೆದಿದೆ. ಮೂವರು ಐಎಎಸ್ ಅಧಿಕಾರಿಗಳ ಸಹಿಯನ್ನು ಹಿರಿಯ ಅಧಿಕಾರಿಗಳೇ ನಕಲು ಮಾಡಿ ಟೆಂಡರ್ ನವೀಕರಣ ಮಾಡಿ ಕೋಟ್ಯಂತರ ರೂಪಾಯಿ ವಂಚಿಸಿರುವುದು ತಡವಾಗಿ ಗೊತ್ತಾಗಿದೆ.

ಸಹಿ ನಕಲು ಪ್ರಕರಣದ ಪ್ರಮುಖ ರೂವಾರಿ ಎನ್ನಲಾಗಿರುವ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿದ್ದ(ವಾಣಿಜ್ಯ) ಶ್ರೀರಾಮ್‌ ಮುಲ್ಕಾವಾನ್‌ ಮತ್ತು ಆ ವಿಭಾಗದ ಸಿಬ್ಬಂದಿ ವಿರುದ್ಧ ಬಿಎಂಟಿಸಿ ಸಹಾಯಕ ಭದ್ರತಾ ಮತ್ತು ಜಾಗೃತ ಅಧಿಕಾರಿ ಸಿ.ಕೆ.ರಮ್ಯಾ ಅವರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಶ್ರೀರಾಮ್ ಮುಲ್ಕಾವಾನ್ ಅವರು ಕಲಬುರ್ಗಿಗೆ ವರ್ಗಾವಣೆಯಾಗಿದ್ದು, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಆಡಳಿತ ಮಂಡಳಿ ನಿರ್ದೇಶಕರಾಗಿದ್ದರು.

‘ಬಿಎಂಟಿಸಿ ಹಾಲಿ ವ್ಯವಸ್ಥಾಪಕಿ ನಿರ್ದೇಶಕಿ ಜಿ.ಸತ್ಯವತಿ, ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕರಾದ ವಿ.ಅನ್ಬುಕುಮಾರ್, ಸಿ.ಶಿಖಾ, ಭದ್ರತಾ ಮತ್ತು ಜಾಗೃತಿ ವಿಭಾಗದ ನಿರ್ದೇಶಕಿ ಜಿ.ರಾಧಿಕಾ, ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಸೂರ್ಯಸೇನ ಅವರ ಸಹಿಗಳನ್ನು ನಕಲು ಮಾಡಿ ಕರಾರು ಒಪ್ಪಂದ ಮತ್ತು ಆದೇಶ ಪತ್ರಗಳನ್ನು ಹೊರಡಿಸಿ ಬಿಎಂಟಿಸಿಗೆ ದ್ರೋಹ ಮಾಡಿದ್ದಾರೆ’ ಎಂದು ಶ್ರೀರಾಮ್ ಮುಲ್ಕಾವಾನ್ ವಿರುದ್ಧ ಎಫ್‌ಐಆರ್‌ನಲ್ಲಿ ದೂರಲಾಗಿದೆ.

ಸಹಿ ನಕಲು ಹೇಗೆ?

ಹಿರಿಯ ಅಧಿಕಾರಿಗಳು ಬೇರೆ ಪತ್ರಗಳಿಗೆ ಮಾಡಿದ್ದ ಸಹಿಯನ್ನು ಕಲರ್‌ ಜೆರಾಕ್ಸ್ ಮಾಡಿಸಿ ಬೇರೆ ಒಪ್ಪಂದ ಪತ್ರಗಳಿಗೆ ಅದನ್ನು ಜೋಡಿಸಿ ಆದೇಶ ಹೊರಡಿಸುತ್ತಿದ್ದರು ಎಂದು ಜಿ.ಸತ್ಯವತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೆಜೆಸ್ಟಿಕ್‌ ಬಿಎಂಟಿಸಿ ಬಸ್ ನಿಲ್ದಾಣದಲ್ಲಿರುವ ನಂದಿನಿ ಪಾರ್ಲರ್‌ನಲ್ಲಿ ಹಾಲಿನ ಉತ್ಪನ್ನದ ಜತೆಗೆ ಬೇರೆ ವಸ್ತುಗಳನ್ನೂ ಮಾರಾಟ ಮಾಡುತ್ತಿರುವ ಆರೋಪ ಬಂದಾಗ ತನಿಖೆಗೆ ಆದೇಶಿಸಿ ಕಡತ  ತರಿಸಿ ನೋಡಿದೆ. ಟಿಪ್ಪಣಿ ಪತ್ರದಲ್ಲಿ ತಮ್ಮದೇ ಸಹಿ ನಕಲು ಮಾಡಿರುವುದನ್ನು ಗಮನಕ್ಕೆ ಬಂತು’ ಎಂದರು.

‘ಅನುಮಾನ ಬಂದು ಎಲ್ಲಾ ಕಡತ ತರಿಸಲು ಪ್ರಯತ್ನಿಸಿದೆ. ಆದರೂ, ಆ ವಿಭಾಗದಿಂದ ಕಡತ ಬಂದಿರಲಿಲ್ಲ. ಅದೇ ಸಂದರ್ಭದಲ್ಲಿ ಅವರನ್ನು ಕಲಬುರ್ಗಿಗೆ ವರ್ಗಾವಣೆ ಮಾಡಲಾಗಿತ್ತು. ಅದಾದ ಬಳಿಕ ಕೆಲವು ಕಡತಗಳನ್ನು ತರಿಸಿ ನೋಡಿದಾಗ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕರ ಸಹಿಗಳನ್ನೂ ನಕಲು ಮಾಡಿರುವುದು ಗೊತ್ತಾಯಿತು ಎಂದು ಹೇಳಿದರು.

ಅಧಿಕಾರಿ ಅಮಾನತು: ಸಮಗ್ರ ತನಿಖೆಗೆ ಆದೇಶ

ಪ್ರಾಥಮಿಕ ತನಿಖೆಯಲ್ಲಿ ಕೆಲವು ಪ್ರಕರಣಗಳಷ್ಟೇ ಬಹಿರಂಗವಾಗಿದ್ದು, ಅವರ ಅವಧಿಯಲ್ಲಿನ ಎಲ್ಲಾ ಕಡತಗಳ ಸಮಗ್ರ ತನಿಖೆಗೆ ಆದೇಶಿಸಲಾಗಿದೆ ಎಂದು ಜಿ.ಸತ್ಯವತಿ ತಿಳಿಸಿದರು.

ಶ್ರೀರಾಮ್ ಮುಲ್ಕಾವಾನ್ ಅವರನ್ನು ಅಮಾನತು ಮಾಡಲು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಶಿಫಾರಸು ಮಾಡಲಾಗಿತ್ತು. ಕೂಡಲೇ ಅಮಾನತು ಆದೇಶವನ್ನು ಅವರು ಹೊರಡಿಸಿದ್ದಾರೆ. ಆ ವಿಭಾಗದ ಸಿಬ್ಬಂದಿಯೂ ಈ ಅಕ್ರಮದಲ್ಲಿ ಭಾಗಿಯಾಗಿರುವ ಅನುಮಾನ ಇದೆ. ತನಿಖೆಯಿಂದ ಬಹಿರಂಗವಾಗಲಿದೆ ಎಂದು ಹೇಳಿದರು.

ನಕಲು ಸಹಿ ಪ್ರಕರಣಗಳು

* ಮೆಜೆಸ್ಟಿಕ್‌ನಲ್ಲಿರುವ ಕೆಎಂಎಫ್ ಮೂರು ಹಾಲಿನ ಮಳೆಗೆಗಳಿಗೆ ಪರವಾನಗಿ ವಿಸ್ತರಣೆ ಒಪ್ಪಂದ.

* ಶಿವಾಜಿನಗರ ಬಸ್ ನಿಲ್ದಾಣದಲ್ಲಿ ಎರಡು ಶೌಚಾಲಯ ಪರವಾನಗಿ ವಿಸ್ತರಿಸುವ ಒಪ್ಪಂದ.

* ಬಿಟಿಎಂ ಲೇಔಟ್‌ ಮತ್ತು ವಿಜಯನಗರ ಟಿಟಿಎಂಸಿ ಹೆಚ್ಚುವರಿ ಜಾಗ ಹಂಚಿಕೆ ಒಪ್ಪಂದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು