ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರಿಗೆ ಶೇ 12ರಷ್ಟು ಮೀಸಲಾತಿ ಹೆಚ್ಚಿಸಿ: ಗಾ.ನಂ. ಶ್ರೀಕಂಠಯ್ಯ

ಎಚ್. ಕಾಂತರಾಜು ವರದಿ ತಿರಸ್ಕರಿಸಲು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಕರೆ
Published 20 ಜುಲೈ 2023, 23:45 IST
Last Updated 20 ಜುಲೈ 2023, 23:45 IST
ಅಕ್ಷರ ಗಾತ್ರ

ಬೆಂಗಳೂರು: ಒಕ್ಕಲಿಗ ಸಮುದಾಯವನ್ನು ಮುಂದುವರಿದ ಜನಾಂಗವೆಂದು ಪರಿಗಣಿಸಿರುವ ಎಚ್. ಕಾಂತರಾಜ್ ಸಮಿತಿಯ ಜಾತಿ ಗಣತಿ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು ಎಂದು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಆಗ್ರಹಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಗಾ.ನಂ. ಶ್ರೀಕಂಠಯ್ಯ, ‘ಹಿಂದಿನ ಬಿಜೆಪಿ ಸರ್ಕಾರವು ಒಕ್ಕಲಿಗ ಸಮುದಾಯವನ್ನು ‘ಪ್ರವರ್ಗ-3ಎ’ ಯಿಂದ ‘2ಸಿ’ ಗೆ ಬದಲಾಯಿಸಿ ಶೇ 4ರಷ್ಟಿದ್ದ ಮೀಸಲಾತಿಯನ್ನು ಶೇ 6ಕ್ಕೆ ಹೆಚ್ಚಿಸಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಪರವಾಗಿ ಸರ್ಕಾರವೇ ವಾದ ಮಂಡಿಸುವಂತೆ ರಾಜಕೀಯ ಮುಖಂಡರು ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಜತೆಗೆ ಮೀಸಲಾತಿ ಪ್ರಮಾಣವನ್ನು ಶೇ 12ಕ್ಕೆ ಹೆಚ್ಚಿಸಿ ಸಂವಿಧಾನದ ಪರಿಚ್ಛೇದ 9ರಲ್ಲಿ ಸೇರಿಸಬೇಕು’ ಎಂದು ಒತ್ತಾಯಿಸಿದರು.

‘ಎಚ್. ಕಾಂತರಾಜು ವರದಿ ಅವೈಜ್ಞಾನಿಕವಾಗಿದ್ದು, ವಸ್ತುನಿಷ್ಠತೆಯಿಂದ ಕೂಡಿಲ್ಲ. ಇದರಿಂದ, ಒಕ್ಕಲಿಗರಿಗೆ ಉದ್ಯೋಗ ಸೇರಿ ರಾಜಕೀಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ದೊರೆಯುವ ಮೀಸಲಾತಿ ಸೌಲಭ್ಯದಿಂದ ವಂಚಿತವಾಗುವ ಅಪಾಯವಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಒಕ್ಕಲಿಗರ ಜನಸಂಖ್ಯೆ ಶೇ 16ರಷ್ಟಿದೆ. ಆದರೆ, ವರದಿಯಲ್ಲಿ ಶೇ 8ರಷ್ಟು ಎಂದು ಹೇಳಲಾಗಿದೆ. ಕಾಂತರಾಜು ಸಮಿತಿಯು ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯ ಸೋಗಿನಲ್ಲಿ ಜನಗಣತಿ ಮಾಡಿದೆ. ಇತ್ತೀಚೆಗೆ ಮಂಡನೆಯಾದ ಬಜೆಟ್‌ನಲ್ಲಿ ಪ್ರವರ್ಗ 1 ಮತ್ತು ಪ್ರವರ್ಗ 2 (ಕುರುಬ) ಸಮುದಾಯಗಳಿಗೆ ₹1 ಕೋಟಿವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ನೀಡಲಾಗಿದೆ. ಇದರಲ್ಲೂ ಪ್ರವರ್ಗ 3–ಎ (ಒಕ್ಕಲಿಗ), 3 ಬಿ (ಲಿಂಗಾಯತ) ಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ’ ಎಂದು ದೂರಿದರು.

‘ಚಿನ್ನಪ್ಪರೆಡ್ಡಿ (ಎಸ್‌.ಟಿ), ಕಾಂತರಾಜು (ಕುರುಬ) ಮತ್ತು ಭಕ್ತ ವತ್ಸಲಂ (ಎಸ್.ಸಿ) ಆಯೋಗಗಳು ಸಲ್ಲಿಸಿರುವ ವರದಿಗಳಲ್ಲಿ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಭಕ್ತವತ್ಸವಲಂ ಆಯೋಗವು ಸ್ಥಳೀಯ ಸಂಸ್ಥೆಗಳಲ್ಲಿ ಒಕ್ಕಲಿಗರಿಗೆ ಕಡಿಮೆ ಮೀಸಲಾತಿ ನೀಡಲು ಒಳಸಂಚು ರೂಪಿಸಿತ್ತು. ಈ ಎಲ್ಲ ವರದಿಗಳನ್ನು ಸರ್ಕಾರ ತಿರಸ್ಕರಿಸಬೇಕು’ ಎಂದು ಆಗ್ರಹಿಸಿದರು.

ಪ್ರತ್ಯೇಕ ನೀತಿ ಅನುಸರಿಸಲಿ’: ‘ಹೈದರಾಬಾದ್ ಕರ್ನಾಟಕ (ಹೈ–ಕ) ಪ್ರದೇಶದ ಸರ್ಕಾರಿ ಹುದ್ದೆಗಳಿಗೆ ಪ್ರತ್ಯೇಕವಾದ ನೇಮಕಾತಿ, ಜೇಷ್ಠತೆ, ಬಡ್ತಿ ಮತ್ತು ವರ್ಗಾವಣೆ ನೀತಿ ಅನುಸರಿಸಬೇಕು’ ಎಂದು ಒತ್ತಾಯಿಸಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT