ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಪ್ರಯಾಣ ದರ ನಿಗದಿಗೆ ಮೂಡದ ಒಮ್ಮತ

ಬೇಡಿಕೆ ಆಧರಿಸಿ ದರ ಪರಿಷ್ಕರಣೆಗೆ ಓಲಾ, ಉಬರ್, ರ್‍ಯಾಪಿಡೊ ಕಂಪನಿಗಳು ಪಟ್ಟು
Last Updated 29 ಅಕ್ಟೋಬರ್ 2022, 21:15 IST
ಅಕ್ಷರ ಗಾತ್ರ

ಬೆಂಗಳೂರು: ಆ್ಯಪ್ ಆಧಾರಿತ ಆಟೊರಿಕ್ಷಾ ಸೇವೆಗೆ ದರ ನಿಗದಿ ಸಂಬಂಧ ಹಗ್ಗಜಗ್ಗಾಟ ಮುಂದುವರಿದ್ದು, ಶನಿವಾರ ನಡೆದ ಸಭೆಯಲ್ಲೂ ಒಮ್ಮತ ಮೂಡಲಿಲ್ಲ.

ಸಾರಿಗೆ ಇಲಾಖೆ ಕಾರ್ಯದರ್ಶಿ ಕಚೇರಿಯಲ್ಲಿ ಸಾರಿಗೆ ಅಧಿಕಾರಿಗಳು ಅಗ್ರಿಗೇಟರ್ ಕಂಪನಿಗಳಾದ ಓಲಾ, ಉಬರ್, ರ್‍ಯಾಪಿಡೊ ಪ್ರತಿನಿಧಿಗಳ ಜತೆಶನಿವಾರ ಸಭೆ ನಡೆಸಿದರು. ಬೇಡಿಕೆಗೆ ತಕ್ಕಂತೆ ದರ ನಿಗದಿ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳು ಒಪ್ಪಲಿಲ್ಲ. ಒಮ್ಮತ ಮೂಡದೆ ಸಭೆ ಅಂತ್ಯಗೊಂಡಿತು.

‘ವಾಹನ ದಟ್ಟಣೆ ಅವಧಿಯಲ್ಲಿ ಸಿಗ್ನಲ್‌ಗಳಲ್ಲೇ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ. ಸಾಮಾನ್ಯ ಆಟೊರಿಕ್ಷಾಗಳಿಗೆ ವಿಧಿಸಿದಂತೆ ದರ ನಿಗದಪಡಿಸಿದರೆ ತೆರಿಗೆ, ಚಾಲಕರಿಗೆ ನೀಡುವ ಪ್ರೋತ್ಸಾಹಧನ ಸೇರಿ ಮತ್ತಿತರ ಸೇವೆ ಒದಗಿಸುವುದು ಕಷ್ಟ. ಆದ್ದರಿಂದ ಬೇಡಿಕೆ ತಕ್ಕಂತೆ ದರ ಪರಿಷ್ಕರಣೆ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಕಂಪನಿಗಳು ಬೇಡಿಕೆ ಇಟ್ಟಿವೆ’ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.

‘ರಿಕ್ಷಾ ಪ್ರಯಾಣ ದರ 2021ರಲ್ಲಿ ದರ ನಿಗದಿಯಾಗಿದ್ದು, ಈಗ ಸಾಕಷ್ಟು ವ್ಯತ್ಯಾಸ ಆಗಿದೆ. ಇದೇ ದರದಲ್ಲಿ ಆ್ಯಪ್ ಆಧಾರಿತ ಸೇವೆ ನೀಡುವುದು ಸಾಧ್ಯವೇ ಇಲ್ಲ ಎಂಬ ಪಟ್ಟನ್ನು ಅಗ್ರಿಗೇಟರ್ ಕಂಪನಿಗಳು ಸಡಿಲಗೊಳಿಸಲಿಲ್ಲ. ಆದ್ದರಿಂದ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ’ ಎಂದೂ ಮೂಲಗಳು ಹೇಳಿವೆ.

ಬೇಡಿಕೆ ಆಧರಿಸಿ ದರ ಪರಿಷ್ಕರಣೆ ಮಾಡಿಕೊಳ್ಳಲು ಅವಕಾಶ ನೀಡಿದರೆ ಪ್ರಯಾಣಿಕರಿಗೆ ಹೊರೆಯಾಗಲಿದೆ. ಅವಕಾಶ ನೀಡಿದರೆ ಮತ್ತೊಮ್ಮೆ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆ ಇದೆ. ಆದ್ದರಿಂದ ಸಾಮಾನ್ಯ ದರದಲ್ಲೇ ಆಟೊ ಸೇವೆ ನೀಡಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

‘ಕಂಪನಿಗಳು ಸಲ್ಲಿಸಿರುವ ಪ್ರಸ್ತಾವನೆ, ಸಭೆಯಲ್ಲಿ ನಡೆದ ಚರ್ಚೆಗಳ ನಡಾವಳಿಯನ್ನು ಸಾರಿಗೆ ಇಲಾಖೆ ಕಾರ್ಯದರ್ಶಿಯವರುಹೈಕೋರ್ಟ್‌ಗೆ ಸಲ್ಲಿಸಲಿದ್ದಾರೆ. ಎಷ್ಟು ದರ ಕೇಳಿದ್ದಾರೆ ಎಂಬುದನ್ನು ಈಗ ಹೇಳಲು ಆಗುವುದಿಲ್ಲ’ ಎಂದು ಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್ ತಿಳಿಸಿದರು.

ಸಾರಿಗೆ ಇಲಾಖೆ ಮತ್ತು ಅಗ್ರಿಗೇಟರ್ ಕಂಪನಿಗಳು ಮಾತುಕತೆ ನಡೆಸಿ ದರ ನಿಗದಿ ಮಾಡಲು ಹದಿನೈದು ದಿನಗಳ ಕಾಲಾವಕಾಶವನ್ನು ಹೈಕೋರ್ಟ್‌ ನೀಡಿತ್ತು. ನ.7ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT