ಭಾನುವಾರ, ಜನವರಿ 17, 2021
18 °C
ಸದ್ಯಕ್ಕೆ ನಗರದ 6 ಕೇಂದ್ರಗಳಲ್ಲಿ ಮಾತ್ರ ಲಸಿಕೆ

ಬಿಬಿಎಂಪಿಗೆ 1.05 ಲಕ್ಷ ಕೋವಿಶೀಲ್ಡ್‌; ಇದೇ 16ರಂದು ಲಸಿಕೆ ನೀಡುವಿಕೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆರೋಗ್ಯ ಕಾರ್ಯಕರ್ತರಿಗೆ ನೀಡುವ ಸಲುವಾಗಿ ಸರ್ಕಾರವು ಬಿಬಿಎಂಪಿಗೆ ಮೊದಲ ಹಂತದಲ್ಲಿ 1,05,000 ಕೋವಿಶೀಲ್ಡ್ ಲಸಿಕೆಗಳನ್ನು ಹಂಚಿಕೆ ಮಾಡಿದೆ. ಈ ಲಸಿಕೆಗಳನ್ನು ದಾಸಪ್ಪ ಆಸ್ಪತ್ರೆಯ ದಾಸ್ತಾನು ಕೇಂದ್ರದಲ್ಲಿ ಸಂಗ್ರಹಿಸಿಡಲಾಗಿದೆ.

ಆನಂದರಾವ್ ವೃತ್ತದ ಆರೋಗ್ಯ ಇಲಾಖೆ ದಾಸ್ತಾನು ಕೇಂದ್ರದಲ್ಲಿ ಸಂಗ್ರಹಿಸಿಟ್ಟಿದ್ದ ಲಸಿಕೆಗಳನ್ನು ದಾಸಪ್ಪ ಆಸ್ಪತ್ರೆಯ ದಾಸ್ತಾನು ಕೇಂದ್ರಕ್ಕೆ ಬುಧವಾರ ರವಾನಿಸಲಾಯಿತು. ಆಸ್ಪತ್ರೆಯ ಐಸ್ ಲೈನ್ ರೆಫ್ರಿಜರೇಟರ್‌ಗಳಲ್ಲಿ ಅವುಗಳನ್ನು ಶೇಖರಿಸಿಡಲಾಯಿತು. ಪಾಲಿಕೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್, ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್ ಹಾಗೂ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ. ವಿಜಯೇಂದ್ರ ಅವರು ಲಸಿಕೆಗಳನ್ನು ಪರಿಶೀಲಿಸಿದರು.

‘ಮೊದಲನೇ ಕಂತಿನಲ್ಲಿ ಲಸಿಕೆ ನೀಡಲು 1.70 ಲಕ್ಷ ಫಲಾನುಭವಿಗಳನ್ನು ಗುರುತಿಸಿದ್ದೇವೆ. ಸರ್ಕಾರ ಸದ್ಯಕ್ಕೆ 1.05 ಲಕ್ಷ ಕೋವಿಶೀಲ್ಡ್ ಲಸಿಕೆಗಳನ್ನು ಮಾತ್ರ ನಮಗೆ ಹಸ್ತಾಂತರಿಸಿದೆ. ಉಳಿದ ಲಸಿಕೆಗಳನ್ನು ಮುಂದಿನ ಕಂತಿನಲ್ಲಿ ನೀಡಲಿದೆ’ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.

‘ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇದೇ 16ರಂದು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ಮೊದಲ ಹಂತದಲ್ಲಿ 760 ಕಡೆ ಲಸಿಕಾ ಕೇಂದ್ರಗಳನ್ನು ಗುರುತಿಸಿದ್ದೇವೆ. ಅವುಗಳಲ್ಲಿ ವಿಕ್ಟೋರಿಯಾ ಆಸ್ಪತ್ರೆ, ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆ, ಸಿ.ವಿ.ರಾಮನ್ ನಗರದ ಸರ್ಕಾರಿ ಆಸ್ಪತ್ರೆ, ಜಯನಗರದ ಸರ್ಕಾರಿ ಆಸ್ಪತ್ರೆ, ಸೆಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ ಒಟ್ಟು ಆರು ಕೇಂದ್ರಗಳಲ್ಲಿ ಮಾತ್ರ ಇದೇ 16ರಿಂದ ಲಸಿಕೆ ನೀಡಲಾಗುತ್ತದೆ. ಉಳಿದ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ಸೂಚನೆ ಬಂದ ಬಳಿಕ ಲಸಿಕೆ ನೀಡಲು ಶುರು ಮಾಡುತ್ತೇವೆ’ ಎಂದರು.

‘ಪ್ರತಿಯೊಂದು ಲಸಿಕಾ ಕೇಂದ್ರದಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಲಸಿಕೆ ನೀಡಲಾಗುತ್ತದೆ. ಪ್ರತಿ ಕೇಂದ್ರದಲ್ಲಿಯೂ ನಿತ್ಯ ತಲಾ 100 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ಪಡೆಯಲು ಗೊತ್ತುಪಡಿಸಲಾದ ಆರೋಗ್ಯ ಕಾರ್ಯಕರ್ತರಿಗೆ ದೂರವಾಣಿ ಕರೆ ಮಾಡಿ ಹಾಗೂ ಸಂದೇಶ ಕಳುಹಿಸುವ ಮೂಲಕ ಮಾಹಿತಿ ನೀಡಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರು ಕಾರ್ಯ ನಿರ್ವಹಿಸುವ ಆಸ್ಪತ್ರೆಯ ಮುಖ್ಯಸ್ಥರಿಗೂ ಈ ಬಗ್ಗೆ ಮಾಹಿತಿ ತಿಳಿಸಲಾಗುತ್ತದೆ. ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಕಾರ್ಯಕ್ರಮ ಮೂರು ದಿನಗಳಲ್ಲಿ ಮುಗಿಯಲಿದೆ’ ಎಂದು ಅವರು ಮಾಹಿತಿ ನೀಡಿದರು.

‘ಪ್ರತಿಯೊಂದು ಕೇಂದ್ರದಲ್ಲಿ ಯಾರಿಗೆ ಲಸಿಕೆ ನೀಡಲಾಗುತ್ತದೆ ಎಂಬುದನ್ನು ಮೊದಲೇ ಪಟ್ಟಿಮಾಡಲಾಗಿದೆ. ಲಸಿಕಾ ಕೇಂದ್ರದಲ್ಲಿ ಕಾಯುವ ಕೊಠಡಿ, ಲಸಿಕೆ ನೀಡುವ ಕೊಠಡಿ ಹಾಗೂ ಪರಿವೀಕ್ಷಣಾ ಕೊಠಡಿಗಳಿರುತ್ತವೆ. ಅಲ್ಲಿಗೆ ವೈ-ಫೈ, ಸೌಲಭ್ಯವನ್ನೂ ಕಲ್ಪಿಸಿದ್ದೇವೆ. ಲಸಿಕೆ ನೀಡುವ ಸಿಬ್ಬಂದಿ ಹಾಗೂ ಸೆಕ್ಟರ್ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ’ ಎಂದರು.

‘ಕೋವಿಶೀಲ್ಡ್ ಲಸಿಕೆಯನ್ನು ಎರಡು ರೆಫ್ರಿಜರೇಟರ್‌ಗಳಲ್ಲಿ ಸಂಗ್ರಹಿಸಿಡಲಾಗಿದೆ. ಪಾಲಿಕೆ ವ್ಯಾಪ್ತಿಯ 148 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕೋಲ್ಡ್ ಚೈನ್ ಪಾಯಿಂಟ್‌ಗಳನ್ನಾಗಿ ಗುರುತಿಸಲಾಗಿದೆ. ಲಸಿಕೆ ನೀಡುವ ಮುನ್ನಾದಿನ ಅಗತ್ಯವಿರುವಷ್ಟು ಸಂಖ್ಯೆಯ ಲಸಿಕೆಗಳನ್ನು ವಾಹನದ ಮೂಲಕ ಕೋಲ್ಡ್ ಚೈನ್ ಪಾಯಿಂಟ್‌ಗಳಿಗೆ ಕಳುಹಿಸಲಾಗುತ್ತದೆ. ಲಸಿಕೆಯನ್ನು ನೀಡುವ ದಿನದಂದು ಕೋಲ್ಡ್ ಚೈನ್ ಪಾಯಿಂಟ್‌ಗಳಿಂದ ಲಸಿಕೆ ನೀಡುವ ಕೇಂದ್ರಗಳಿಗೆ ಅವುಗಳನ್ನು ರವಾನಿಸಲಾಗುತ್ತದೆ. ಇದರ ಮಾರ್ಗ ನಕ್ಷೆಯನ್ನೂ ಸಿದ್ಧಪಡಿಸಲಾಗಿದೆ’ ಎಂದರು.

ಆರೋಗ್ಯದ ಮೇಲೆ ನಿಗಾ–ಸಜ್ಜಾಗಿರಲಿದೆ ಆಂಬುಲೆನ್ಸ್‌

‘ಲಸಿಕೆ ನೀಡುವ ವೇಳೆ ಪ್ರತಿ ಲಸಿಕೆ ಕೇಂದ್ರಕ್ಕೂ ಸೇವೆ ಒದಗಿಸಲು ಆಂಬ್ಯುಲೆನ್ಸ್ ಸಜ್ಜಾಗಿರಲಿದೆ. ಲಸಿಕೆ ಪಡೆದವರ ಆರೋಗ್ಯ ಏರುಪೇರಾದರೆ ಕೂಡಲೆ ಗೊತ್ತುಪಡಿಸಲಾದ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗುತ್ತದೆ’ ಎಂದು ಬಿಬಿಎಂಪಿ ಆಯುಕ್ತರು ಮಾಹಿತಿ ನೀಡಿದರು.

‘ಕೊರೊನಾ ನಿಯಂತ್ರಣ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದ ಬಿಬಿಎಂಪಿಯ ಎಲ್ಲಾ ಸಿಬ್ಬಂದಿ, ಪೊಲೀಸ್ ಇಲಾಖೆ ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಎರಡನೇ ಹಂತದಲ್ಲಿ ಲಸಿಕೆ ಲಭ್ಯವಾಗಲಿದ್ದು, ಅವರ ಪಟ್ಟಿಯನ್ನೂ ಸಿದ್ದಪಡಿಸಲಾಗುತ್ತಿದೆ. ಫಲಾನುಭವಿಗಳು ಎಷ್ಟು ಮಂದಿ ಇರುತ್ತಾರೆ ಎಂಬ ಆಧಾರದಲ್ಲಿ ಎರಡನೇ ಹಂತದಲ್ಲಿ ಲಸಿಕೆ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸುತ್ತೇವೆ. ಕಾಲೇಜುಗಳನ್ನೂ ಈ ಉದ್ದೇಶಕ್ಕೆ ಬಳಸಿಕೊಳ್ಳಲಿದ್ದೇವೆ. ಈಗಾಗಲೇ ಕೆಲವು ಕಾಲೇಜುಗಳನ್ನು ಗುರುತಿಸಿದ್ದೇವೆ’ ಎಂದರು.

‘50 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಮೂರನೇ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. 50 ವರ್ಷಕ್ಕಿಂತ ಕೆಳಗಿರುವವರು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ, ಅಂತಹವರಿಗೂ ಲಸಿಕೆ ನೀಡಲಾಗುತ್ತದೆ. 50 ವರ್ಷ ಮೇಲ್ಪಟ್ಟವರನ್ನು ಮತದಾರರ ಪಟ್ಟಿಯ ಆಧಾರದಲ್ಲಿ ಗುರುತಿಸುತ್ತೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು