ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮೊದಲ ಕೋವಿಡ್‌ ಪ್ರಕರಣಕ್ಕೆ ತುಂಬಿತು ವರ್ಷ, ನೆನಪು ಇನ್ನೂ ಹಸಿ ಹಸಿ

Last Updated 7 ಮಾರ್ಚ್ 2021, 21:05 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮೊಟ್ಟಮೊದಲ ಕೋವಿಡ್‌ ಪ್ರಕರಣ ಪತ್ತೆಯಾಗಿ ಸೋಮವಾರಕ್ಕೆ ಒಂದು ವರ್ಷ ತುಂಬಿದೆ. ಕೋವಿಡ್‌ ನಿಯಂತ್ರಣಕ್ಕೆ ಮಾದರಿ ಮಾರ್ಗಸೂಚಿಗಳೇ ಇಲ್ಲದ ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸುವುದರಿಂದ ಹಿಡಿದು, ಅವರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಿ,ಸೋಂಕು ಹರಡದಂತೆ ನಿಯಂತ್ರಿಸುವ ಸವಾಲಿನ ಕ್ಷಣಗಳು ನಗರ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ಅಧಿಕಾರಿಗಳ ಮನಸ್ಸಿನಲ್ಲಿ ಈಗಲೂ ಹಸಿ ಹಸಿಯಾಗಿವೆ.

ಅಮೆರಿಕದಿಂದ ಮರಳಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ (40) ಒಬ್ಬರು ಕೋವಿಡ್‌ ಹೊಂದಿರುವುದು2020ರ ಮಾರ್ಚ್‌ 8ರಂದು ದೃಢಪಟ್ಟಿತ್ತು. ಕಾಡುಗೋಡಿ ನಿವಾಸಿಯಾಗಿದ್ದ ಅವರು ಮಾರ್ಚ್‌ 1 ರಂದು ಬೆಂಗಳೂರಿಗೆ ಮರಳಿದ್ದರು. ಆಗ ಅವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ. ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಮಾರ್ಚ್‌ 4ರಂದು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಫಲಿತಾಂಶ ಬಂದಾಗ ಅವರು ಸೋಂಕು ಹೊಂದಿರುವುದು ಖಚಿತವಾಗಿತ್ತು. ಬಳಿಕ ಅವರ ಪತ್ನಿ ಹಾಗೂ ಮಗಳೂ ಕೋವಿಡ್‌ ಹೊಂದಿರುವುದು ಕಂಡು ಬಂದಿತ್ತು.

‘ನಗರದಲ್ಲಿ ಮೊದಲ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಾಗ, ಕೋವಿಡ್‌ ಪೀಡಿತರ ಚಿಕಿತ್ಸೆ ಹಾಗೂ ಅವರ ಸಂಪರ್ಕಕ್ಕೆ ಬಂದವರ ಪತ್ತೆ ಹಾಗೂ ಸೋಂಕು ನಿಯಂತ್ರಣಕ್ಕೆ ಯಾವುದೇ ಖಚಿತ ಮಾರ್ಗಸೂಚಿಗಳೂ ಇರಲಿಲ್ಲ. ರೋಗದ ಬಗ್ಗೆ ಜನರಲ್ಲಿ ಮಾತ್ರವಲ್ಲ ಅಧಿಕಾರಿ ಮತ್ತು ಸಿಬ್ಬಂದಿಯಲ್ಲೂ ಭಾರಿ ಆತಂಕವಿತ್ತು. ಸೋಂಕಿತರನ್ನು ಪತ್ತೆ ಹಚ್ಚಿ ಅವರನ್ನು ಆಸ್ಪತ್ರೆಗೆ ದಾಖಲಿಸುವುದು ಹಾಗೂ ಸೋಂಕು ಹರಡದಂತೆ ತಡೆಯಲು ಕ್ರಮ ಕೈಗೊಳ್ಳುವುದು ನಿಜಕ್ಕೂ ಸವಾಲಿನ ಕ್ಷಣಗಳು’ ಎಂದು ನಗರ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀನಿವಾಸ್‌ ಮೆಲುಕು ಹಾಕಿದರು.

‘ರೋಗಿಯು ವಾಸವಾಗಿದ್ದ ಕಾಡುಗೋಡಿಯ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರ ಜೊತೆ ಅಂದು ರಾತ್ರಿ 1 ಗಂಟೆವರೆಗೆ ಸಮಾಲೋಚನೆ ನಡೆಸಿ, ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿವರಿಸಿದ್ದೆ. ಇಡೀ ಅಪಾರ್ಟ್‌ಮೆಂಟ್‌ ಸಮುಚ್ಚಯಕ್ಕೆ ಸೋಂಕು ನಿವಾರಕ ಸಿಂಪಡಿಸಿದ್ದೆವು. ಅಲ್ಲಿನ ಪ್ರತಿ ಮನೆಗಳಿಗೂ ದಿನಸಿ, ಹಾಲು ಇತರ ಅಗತ್ಯ ವಸ್ತುಗಳನ್ನು ಪೂರೈಸಲು ಕ್ರಮ ಕೈಗೊಂಡೆವು. ಅಲ್ಲಿನ ನಿವಾಸಿಗಳ್ಯಾರೂ ಹೊರಗಡೆ ಬರುವುದಕ್ಕೆ ಅವಕಾಶ ನೀಡಲಿಲ್ಲ. ಅವರೂ ನಮ್ಮೊಂದಿಗೆ ಸಹಕರಿಸಿದ್ದರು’ ಎಂದು ಅವರು ತಿಳಿಸಿದರು.

‘ಕರ್ತವ್ಯವನ್ನು ನಿರ್ವಹಿಸಲೇಬೇಕಿತ್ತು.ನನ್ನ ಪತ್ನಿ ಪ್ರಸೂತಿ ತಜ್ಞೆ. ನಾವಿಬ್ಬರೂ ಸೋಂಕಿಗೆ ಒಳಗಾಗದಂತೆ ಬಹಳ ಮುನ್ನೆಚ್ಚರಿಕೆ ವಹಿಸಿದ್ದೆವು. ಈ ನಡುವೆಯೂ, ನನ್ನ ಮಕ್ಕಳನ್ನು ಊರಿಗೆ ಕಳುಹಿಸಿದ್ದೆ’ ಎಂದು ಅವರು ತಿಳಿಸಿದರು.

ಆಗ ಕಾಡುಗೋಡಿ ಪ್ರದೇಶದ ಸೋಂಕು ನಿಯಂತ್ರಣ ಕಾರ್ಯವನ್ನು ನಗರ ಜಿಲ್ಲಾಡಳಿತ ನಿಭಾಯಿಸುತ್ತಿತ್ತು.

‘ಸೋಂಕಿತನನ್ನು ರಾತ್ರೋರಾತ್ರಿ ಕರೆದೊಯ್ದೆವು’
ಬಿಬಿಎಂಪಿ ವ್ಯಾಪ್ತಿಯಲ್ಲಿ ಮೊದಲ ರೋಗ ಪತ್ತೆಯಾಗಿದ್ದು ಇಂದಿರಾ ನಗರದಲ್ಲಿ. ಅಮೆರಿಕದಿಂದ ಮರಳಿದ್ದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿತ್ತು.

‘ಆ ಯುವಕನ್ನು ಆಸ್ಪತ್ರೆಗೆ ಸೇರಿಸಲು ಮನೆಯಿಂದ ಕರೆದೊಯ್ದಿದ್ದು ರಾತ್ರಿ ವೇಳೆ. ಜನ ಆತಂಕಕ್ಕೆ ಒಳಗಾಗುತ್ತಾರೆ ಎಂಬ ಕಾರಣಕ್ಕೆ ಆಂಬುಲೆನ್ಸ್‌ ಮನೆಗಿಂತ ಸ್ವಲ್ಪ ದೂರದಲ್ಲೇ ನಿಲ್ಲಿಸಿದ್ದೆವು. ಸೋಂಕಿತ ವ್ಯಕ್ತಿಯು ಸ್ವಲ್ಪ ದೂರ ನಡೆದುಕೊಂಡೇ ಬಂದು ನಂತರ ಆಂಬುಲೆನ್ಸ್‌ ಹತ್ತಿದ್ದರು’ ಎಂದು ಸ್ಮರಿಸುತ್ತಾರೆ ಬಿಬಿಎಂಪಿಯ ಪೂರ್ವ ವಲಯದ ಆರೋಗ್ಯಾಧಿಕಾರಿ ಎ.ಸಿದ್ದಪ್ಪಾಜಿ.

‘ಆ ಯುವಕ ವಿಮಾನನಿಲ್ದಾಣದಿಂದ ಯಾವ ಟ್ಯಾಕ್ಸಿಯಲ್ಲಿ ಬಂದ, ಎಲ್ಲೆಲ್ಲಿ ಅಡ್ಡಾಡಿದ್ದ ಎಂಬೆಲ್ಲ ಮಾಹಿತಿ ಕಲೆ ಹಾಕಿದ್ದು, ಅವನ ಸಂಪರ್ಕಕ್ಕೆ ಬಂದವನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ಗೆ ಒಳಪಡಿಸಿದ್ದು ಎಲ್ಲವೂ ಒಂದು ವಿಶೇಷ ಅನುಭವ’ ಎಂದು ಮೆಲುಕು ಹಾಕಿದರು.

‘ಒಬ್ಬೊಬ್ಬ ರೋಗಿಯ ಮನೆಯನ್ನು ಪತ್ತೆ ಹಚ್ಚುವುದಕ್ಕೂ ಹರಸಾಹಸ ಪಟ್ಟಿದ್ದೆವು. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ಗೆ ಒಳಗಾಗುವಂತೆ ಮನವೊಲಿಸಲು ಹೆಣಗಾಡಬೇಕಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT