ಸೋಮವಾರ, ಮೇ 23, 2022
21 °C

ಲಾಲ್‌ಬಾಗ್: 2.42 ಕೋಟಿ ಲೀಟರ್ ನೀರು ಇಂಗಿಸುವಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಲಾಲ್‌ ಬಾಗ್‌ನಲ್ಲಿ 209 ಇಂಗು ಗುಂಡಿಗಳಿಂದ ಪ್ರತಿವರ್ಷ 2.42 ಕೋಟಿ ಲೀಟರ್ ಮಳೆ ನೀರನ್ನು ಭೂಮಿಗೆ ಇಂಗಿಸಲಾಗುತ್ತಿದೆ. ಇದರಿಂದಾಗಿ ಅಂತರ್ಜಲ ಮಟ್ಟವು ಗಣನೀಯವಾಗಿ ಏರಿಕೆಯಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕಿ ಫೌಜಿಯಾ ತರನಮ್ ತಿಳಿಸಿದರು.

ಯುನೈಟೆಡ್ ವೇ ಆಫ್ ಬೆಂಗಳೂರು ಹಾಗೂ ಬಾಷ್ ಕಂಪನಿಯು ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್‌) ಲಾಲ್‌ ಬಾಗ್‌ನಲ್ಲಿ ನಿರ್ಮಿಸಿರುವ 124 ಇಂಗು ಗುಂಡಿಗಳನ್ನು ಪರಿಶೀಲಿಸಿ, ಮಾತನಾಡಿದರು. ‘240 ಎಕರೆ ಪ್ರದೇಶಕ್ಕೆ ವಿಸ್ತರಿಸಿಕೊಂಡಿರುವ ಲಾಲ್‌ ಬಾಗ್, ವಿವಿಧ ಸಸ್ಯ ಪ್ರಭೇದಗಳಿಂದ ಕೂಡಿದೆ. ಭೌಗೋಳಿಕವಾಗಿ ದಕ್ಷಿಣ ಪ್ರದೇಶವು ಎತ್ತರದಿಂದ ಹಾಗೂ ಉತ್ತರ ಪ್ರದೇಶವು ಇಳಿಜಾರು ಪ್ರದೇಶದಿಂದ ಕೂಡಿದೆ. ಮಳೆ ಬಂದ ಸಂದರ್ಭದಲ್ಲಿ ನೀರು ಕಾಲುವೆಗಳ ಮೂಲಕ ಹಾದುಹೋಗಿ, ಪೋಲಾಗುತ್ತಿತ್ತು. ಇದನ್ನು ತಡೆಯಲು ಇಂಗು ಗುಂಡಿಗಳು ಸಹಕಾರಿಯಾಗಿವೆ’ ಎಂದರು.

‘ಹೊಸದಾಗಿ ನಿರ್ಮಿಸಲಾಗಿರುವ ಇಂಗು ಗುಂಡಿಗಳು 18 ಅಡಿ ಆಳ ಹಾಗೂ 3 ಅಡಿ ಅಗಲವಿದೆ. ಪ್ರತಿ ಇಂಗು ಗುಂಡಿಯಿಂದ ವರ್ಷಕ್ಕೆ 3,600 ಲೀ. ಮಳೆ ನೀರನ್ನು ಸಂಗ್ರಹಿಸಬಹುದು. 124 ಇಂಗು ಗುಂಡಿಗಳಿಂದ ಒಂದು ಮಳೆಗೆ 4.46 ಲಕ್ಷ ಲೀ. ನೀರನ್ನು ಇಂಗಿಸಬಹುದು. ವರ್ಷಕ್ಕೆ 1.34 ಕೋಟಿ ಲೀ. ನೀರನ್ನು ಸಂಗ್ರಹಿಸಲು ಸಾಧ್ಯ’ ಎಂದು ವಿವರಿಸಿದರು.

ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ. ಜಗದೀಶ್, ‘ಇಲಾಖೆಯ ವತಿಯಿಂದ 12 ಅಡಿ X 4 ಅಡಿ ಅಳತೆಯ ಒಟ್ಟು 85 ಇಂಗು ಗುಂಡಿಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಒಂದು ಮಳೆಗೆ ಪ್ರತಿ ಇಂಗು ಗುಂಡಿಯಲ್ಲಿ 4,268 ಲೀ. ನೀರನ್ನು ಸಂಗ್ರಹಿಸಬಹುದಾಗಿದೆ. ಎಲ್ಲ 85 ಇಂಗು ಗುಂಡಿಗಳಿಂದ ವರ್ಷಕ್ಕೆ 1.08 ಕೋಟಿ ಲೀ. ನೀರು ಭೂಮಿಯಲ್ಲಿ ಇಂಗಲಿದೆ. ಇದರಿಂದಾಗಿ ಅಂತರ್ಜಲ ಮಟ್ಟವು ಸುಧಾರಿಸುತ್ತಿದೆ‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು