ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಮುಖ್ಯರಸ್ತೆ ಮೇಲೆಯೇ ರಾತ್ರೋರಾತ್ರಿ ಮನೆ ನಿರ್ಮಾಣ

Last Updated 18 ಫೆಬ್ರುವರಿ 2023, 8:37 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ಬೇಗೂರು ರಸ್ತೆಯ ಮೈಕೋ ಬಡಾವಣೆಯ ಡಾಂಬರೀಕರಣಗೊಂಡ 15ನೇ ಮುಖ್ಯರಸ್ತೆಯಲ್ಲಿ ರಾತ್ರೋರಾತ್ರಿ ಮನೆ ನಿರ್ಮಿಸುವ ಯತ್ನ ನಡೆದಿದೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ರಸ್ತೆಯ ಮೇಲೆ ಮನೆ ನಿರ್ಮಾಣಕ್ಕೆ ಯತ್ನಿಸಿರುವ ಟಿ.ಎನ್.ಶ್ರೀನಿವಾಸ್ ಎನ್ನುವವರ ವಿರುದ್ಧ ಬೇಗೂರು –ಹೊಂಗಸಂದ್ರ ಮೈಕೋ ಲೇಔಟ್ ನಿವಾಸಿಗಳ ಅಸೋಸಿಯೇಷನ್ ವತಿಯಿಂದ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

‘ಸರ್ವೆ ನಂ.79ರಲ್ಲಿ ನಿವೇಶನ ಸಂಖ್ಯೆ 5ಎ ಎಂಬ ನಕಲಿ ದಾಖಲೆ ಸೃಷ್ಟಿಸಿ ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ದೂರಲಾಗಿದೆ. ಆದರೆ, ಬಡಾವಣೆಯಲ್ಲಿ ಈ ಸಂಖ್ಯೆಯ ಯಾವ ನಿವೇಶನವೂ ಇಲ್ಲ. ಬಡಾವಣೆಯ ನಕ್ಷೆ ಪ್ರಕಾರ ಇದು 15ನೇ ಮುಖ್ಯರಸ್ತೆಯಾಗಿದೆ. ರಸ್ತೆಯ ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ನಿವೇಶನಗಳಿದ್ದು, ಪೂರ್ವ ಮತ್ತು ಪಶ್ಚಿಮಕ್ಕೆ ರಸ್ತೆ ಇದೆ’ ಎಂದು ನಿವಾಸಿಗಳ ಸಂಘದ ಸದಸ್ಯರು ವಿವರಿಸಿದ್ದಾರೆ.

ಮೈಕೋ ಬಡಾವಣೆಯಲ್ಲಿ 30 ವರ್ಷಕ್ಕೂ ಮೊದಲು ಬಿಡಿಎಯಿಂದ ಅನುಮೋದನೆಗೊಂಡಿದೆ. ಮೈಕೋ ಗೃಹ ನಿರ್ಮಾಣ ಸಹಕಾರ ಸಂಘದಿಂದ ನಿವೇಶನಗಳನ್ನು ಷೇರುದಾರರಿಗೆ ವಿತರಿಸಲಾಗಿದೆ. ಇದರಲ್ಲಿ 5ಎ ಎಂಬ ನಿವೇಶನವೇ ಇಲ್ಲ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೊಟ್ಟಿರುವ ಅಧಿಕಾರಿಗಳ ವಿರುದ್ಧವೂ ಕ್ರಮಕೈಗೊಳ್ಳಬೇಕೆಂದು ನಿವಾಸಿಗಳು ಆಗ್ರಹಿಸಿದರು.

ಮನೆ ಕಟ್ಟಲು ಮೂರನೇ ಬಾರಿ ಯತ್ನ: ಬಡಾವಣೆಯ 15ನೇ ಮುಖ್ಯ ರಸ್ತೆಯಲ್ಲಿ ಮನೆ ಕಟ್ಟಲು ಕೆ.ಟಿ.ಶ್ರೀನಿವಾಸ್ ಎಂಬ ವ್ಯಕ್ತಿ ಮೂರನೇ ಬಾರಿ ಪ್ರಯತ್ನಿಸಿದ್ದಾರೆ. 2018 ಜುಲೈನಲ್ಲಿ ಮತ್ತು 2019 ಜೂನ್ ತಿಂಗಳಲ್ಲಿ ರಾತ್ರೋರಾತ್ರಿ ಮನೆ ನಿರ್ಮಾಣ ಮಾಡಿದ್ದರು. ಈ ಬಗ್ಗೆ ದೂರು ಸ್ವೀಕರಿಸಿದ್ದ ಆಗಿನ ಜಂಟಿ ಆಯುಕ್ತರು, ದಾಖಲಾತಿಗಳನ್ನು ಪರಿಶೀಲಿಸಿ, ಸುಳ್ಳು ದಾಖಲಾತಿ ಸೃಷ್ಟಿಸಿ ಅಕ್ರಮವಾಗಿ ಮನೆ ನಿರ್ಮಿಸಿದ್ದು, ಸಾಬೀತಾಗಿದ್ದರಿಂದ ಕಟ್ಟಡ ನೆಲಸಮಕ್ಕೆ ಆದೇಶ ನೀಡಿದ್ದರು. ಇದೀಗ ಮತ್ತೊಮ್ಮೆಮ್ಮೆ ಈ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

‘ಭೂ ದಂಧೆಕೋರರಿಗೆ ಪಾಲಿಕೆ ಅಧಿಕಾರಿಗಳು ಸಹಕರಿಸುತ್ತಿದ್ದು, ಖೊಟ್ಟಿ ದಾಖಲೆಗಳನ್ನು ಸೃಷ್ಟಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಭೂ ಮಾಫಿಯಾಗೆ ಕಡಿವಾಣ ಹಾಕಲು ಸಾಧ್ಯವಿಲ್ಲ’ ಎಂದು ಮೈಕೋ ಗೃಹ ನಿರ್ಮಾಣ ಸಹಕಾರ ಸಂಘದ ಕಾರ್ಯದರ್ಶಿ ಶಿವಕುಮಾರಯ್ಯ ದೂರಿದರು.

’ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಸ್ಥಳ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಬೊಮ್ಮನಹಳ್ಳಿ ಜಂಟಿ ಆಯುಕ್ತ ಕೃಷ್ಣಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT