ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹೋರಾತ್ರಿ ಇಷ್ಟಲಿಂಗ ಪೂಜೆ: ಆಚರಣೆಗೆ ಸಾಕ್ಷಿಯಾದ ಸ್ವಾತಂತ್ರ್ಯ ಉದ್ಯಾನ

Last Updated 11 ಮಾರ್ಚ್ 2021, 21:21 IST
ಅಕ್ಷರ ಗಾತ್ರ

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಧರಣಿ ನಡೆಸುತ್ತಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ, ಸತ್ಯಾಗ್ರಹ ಸ್ಥಳದಲ್ಲಿಯೇ ಮಹಾಶಿವರಾತ್ರಿ ಆಚರಿಸಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಸುತ್ತಿರುವ ಸ್ವಾಮೀಜಿ ಗುರುವಾರ ಸಾಮೂಹಿಕ ಇಷ್ಟಲಿಂಗ ಪೂಜೆಗೆ ಚಾಲನೆ ನೀಡಿದರು‌. ಧರಣಿ ಸ್ಥಳದಲ್ಲಿಯೇ ಶಿವಲಿಂಗ ಮೂರ್ತಿಯನ್ನು ಇಡಲಾಗಿತ್ತು. ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಭಜನೆ ಪದ, ಭಕ್ತಿಗೀತೆಗಳು, ಬಸವಣ್ಣನವರ ವಚನಗಳನ್ನು ಹೇಳುವ ಮೂಲಕ ಶಿವರಾತ್ರಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಸ್ವಾಮೀಜಿ, ‘ಹಕ್ಕೊತ್ತಾಯ, ಪ್ರತಿಭಟನೆ, ಧಿಕ್ಕಾರಗಳಿಗೆ ಸಾಕ್ಷಿಯಾಗುತ್ತಿದ್ದ ಸ್ವಾತಂತ್ರ್ಯ ಉದ್ಯಾನವು ಇಂದು ಶಿವನಾಮ ಸ್ಮರಣೆಗೆ ಸಾಕ್ಷಿಯಾಗುತ್ತಿದೆ. ಫ್ರೀಡಂ ಪಾರ್ಕ್‌ ಈಗ ಕೂಡಲಸಂಗಮವಾಗಿ ಬದಲಾಗಿದೆ’ ಎಂದರು.

‘ಒಂದೆರಡು ದಿನ ಧರಣಿ ಮಾಡಿ ವಾಪಸ್ ಹೋಗುತ್ತಾರೆ ಎಂದು ಮುಖ್ಯಮಂತ್ರಿಯವರು ಎಂದುಕೊಂಡಿದ್ದರು. ಅವರು ನಡೆಸಿದ ಅಗ್ನಿ ಪರೀಕ್ಷೆಯಲ್ಲಿ ನಾವು ಗೆದ್ದಿದ್ದೇವೆ’ ಎಂದೂ ಹೇಳಿದರು.

‘ಮುಖ್ಯಮಂತ್ರಿಯವರು ನಮ್ಮ ಸಮುದಾಯದವರು ಎಂಬ ಖುಷಿ ಇತ್ತು. ನಮ್ಮವರೇ ನಮ್ಮನ್ನು 39 ದಿನಗಳ ಕಾಲ 712 ಕಿ.ಮೀ. ನಡೆಸಿದರು. 19 ದಿನಗಳಿಂದ ಧರಣಿ ಕೂರುವಂತೆ ಮಾಡಿದರು. ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿದರು. ಈ ಎಲ್ಲ ಪರೀಕ್ಷೆಗಳನ್ನೂ ನಾವು ಗೆದ್ದಿದ್ದೇವೆ. ಪಂಚಮಸಾಲಿ ಸಮುದಾಯದ ಮಕ್ಕಳಿಗೆ ಶಿಕ್ಷಣ, ಯುವಸಮೂಹಕ್ಕೆ ಉದ್ಯೋಗದ ಮೀಸಲಾತಿ ಸಿಗುವವರೆಗೆ ಹೋರಾಟ ನಿಲ್ಲುವುದಿಲ್ಲ’ ಎಂದೂ ಹೇಳಿದರು.

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸದನದಲ್ಲಿ ಸೋಮವಾರ ಪಂಚಮಸಾಲಿ ಸಮುದಾಯದವರಿಗೆ 2ಎ ಮೀಸಲಾತಿ ಘೋಷಿಸಬೇಕು’ ಎಂದೂ ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT