ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸಜಾ ಬಂದಿಗಳು ಹಾಗೂ ವಿಚಾರಣಾಧೀನ ಕೈದಿಗಳಿಗೆ ವಿಶೇಷ ಆತಿಥ್ಯ ನೀಡಿರುವ ವಿಡಿಯೊ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ ಜೈಲು ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಈ ಘಟನೆ ಮಾಸುವ ಮುನ್ನವೇ ಮದ್ಯ ಸೇವಿಸಿ ಜೈಲಿನಲ್ಲಿ ವಿಚಾರಣಾ ಕೈದಿಗಳು ನೃತ್ಯ ಮಾಡುತ್ತಿರುವ ಮತ್ತೊಂದು ವಿಡಿಯೊ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಯಾವ ಜೈಲಿನ ವಿಡಿಯೊ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ಎಡಿಜಿಪಿ ಬಿ.ದಯಾನಂದ್ ಸೂಚನೆ ಮೇರೆಗೆ ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿ ಶನಿವಾರ ಹಾಗೂ ಭಾನುವಾರ ಪರಪ್ಪನ ಅಗ್ರಹಾರ ಜೈಲಿನ ಸಂಬಂಧಪಟ್ಟ ಕೈದಿಗಳ ಬ್ಯಾರಕ್ಗಳಲ್ಲಿ ಪೂರ್ಣ ತಪಾಸಣೆ ನಡೆಸಿದರು. ಸುಮಾರು ನೂರಕ್ಕೂ ಹೆಚ್ಚು ಬ್ಯಾರಕ್ಗಳಲ್ಲಿ ತಪಾಸಣೆ ನಡೆಸಿದ್ದು, ಈ ವೇಳೆ ಮೊಬೈಲ್ ಸೇರಿ ಯಾವುದೇ ವಸ್ತು ಪತ್ತೆಯಾಗಿಲ್ಲ.

ಕೈದಿಗಳಾದ ಜುಹಾದ್ ಹಮೀದ್, ಉಮೇಶ್ ರೆಡ್ಡಿ ಇರುವ ಬ್ಯಾರಕ್ ಮೇಲೆ ಭಾನುವಾರ ಮುಂಜಾನೆ ಕಾರಾಗೃಹ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ, ಪರಿಶೀಲನೆ ನಡೆಸಿತು. ಉಮೇಶ್ ರೆಡ್ಡಿ ಇರುವ ಕೊಠಡಿಯಲ್ಲಿನ ಟಿ.ವಿ ಸಹಿತ ಹಲವು ವಸ್ತುಗಳು ಮಾಯವಾಗಿರುವುದು ಅಧಿಕಾರಿಗಳಿಗೆ ಅಚ್ಚರಿಯುಂಟು ಮಾಡಿದೆ.

ಈ ನಡುವೆ ಕಾರಾಗೃಹ ಇಲಾಖೆ ಹೆಚ್ಚುವರಿ ಡಿಐಜಿ ಪಿ.ವಿ.ಆನಂದ ರೆಡ್ಡಿ ಅವರು ಕಾರಾಗೃಹಕ್ಕೆ ಭೇಟಿ ನೀಡಿ, ಅಧೀನ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿಚಾರಣೆ ನಡೆಸಿ, ಘಟನೆ ಕುರಿತು ಮಾಹಿತಿ ಪಡೆದುಕೊಂಡರು.

ಕೈದಿಗಳ ಬಳಿ ಇದ್ದ ಮೊಬೈಲ್ಗಳು ಒಂದೇ ದಿನದಲ್ಲಿ ಮಾಯವಾಗಲು ಹೇಗೆ ಸಾಧ್ಯ ಎಂಬುದರ ಬಗ್ಗೆ ಜೈಲು ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ. ಇದರ ಜತೆಗೆ ಜೈಲಿನ ಕೆಲ ಸಿಬ್ಬಂದಿಯೇ ಕೈದಿಗಳೊಂದಿಗೆ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲೂ ತನಿಖೆ ನಡೆಸಲಾಗುವುದು ಎಂದು ಮೂಲಗಳು ಹೇಳಿವೆ.

ಅತ್ಯಾಚಾರ ಪ್ರಕರಣದ ಅಪರಾಧಿ ಉಮೇಶ್ ರೆಡ್ಡಿ, ಲಷ್ಕರ್ –ಎ–ತಯಬಾ ಸಂಘಟನೆಯ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ, ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡಿದ ಪ್ರಕರಣದ ಆರೋಪಿ ತರುಣ್ ರಾಜ್ ಅವರು ಮೊಬೈಲ್ ಫೋನ್ ಹಿಡಿದುಕೊಂಡು ತಮ್ಮ ಸಹಚರರು ಹಾಗೂ ಸಂಬಂಧಿಕರ ಜತೆ ಮಾತುಕತೆ ನಡೆಸುತ್ತಿರುವುದು, ಕೊಠಡಿಯಲ್ಲಿ ಟಿ.ವಿ.ಸೌಲಭ್ಯ ಇರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ವಿಚಾರಣಾಧೀನ ಕೈದಿಗಳ ನೃತ್ಯ

ಬ್ಯಾರಕ್ನ ಕೊಠಡಿಯಲ್ಲಿ 10ರಿಂದ 15 ಮಂದಿ ವಿಚಾರಣಾಧೀನ ಕೈದಿಗಳು ಮದ್ಯದ ಬಾಟಲ್ ಇಟ್ಟುಕೊಂಡು ಪಾರ್ಟಿ ಹಾಗೂ ನೃತ್ಯ ಮಾಡಿದ್ದಾರೆ. ಮೋಜು-ಮಸ್ತಿ ಮಾಡುತ್ತಿರುವ 1 ನಿಮಿಷ 44 ಸೆಕೆಂಡಿನ ವಿಡಿಯೊ ಇದಾಗಿದ್ದು, ಡ್ರಮ್, ತಟ್ಟೆಗಳೇ ಕೈದಿಗಳಿಗೆ ಮ್ಯೂಸಿಕ್ ಬ್ಯಾಂಡ್ ಆಗಿದ್ದವು.

ಜೈಲು ಅಧಿಕಾರಿಗಳ ಬೆಂಬಲ

ಈ ಹಿಂದೆ ಕೇರಳದ ಶಂಕಿತ ಉಗ್ರ ಟಿ.ನಾಸೀರ್ನ ಸೂಚನೆ ಮೇರೆಗೆ ಬೆಂಗಳೂರು, ತಮಿಳುನಾಡು ಹಾಗೂ ದೇಶದ ಕೆಲವೆಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಹತ್ತು ಮಂದಿಯನ್ನು ಬಂಧಿಸಲಾಗಿತ್ತು.

ಈ ಪ್ರಕರಣದ ತನಿಖೆ ನಡೆಸಿದ್ದ ಎನ್ಐಎ ಅಧಿಕಾರಿಗಳು, ಟಿ.ನಾಸೀರ್ಗೆ ಮೊಬೈಲ್ ಹಾಗೂ ಹಣದ ಸಹಾಯ ಮಾಡಿದ್ದ ಆರೋಪದ ಮೇಲೆ ಸಿಎಆರ್ ಎಎಸ್ಐ ಚಾಂದ್ ಪಾಷಾ, ಜೈಲಿನ ಮನೋವೈದ್ಯ ಡಾ.ನಾಗರಾಜ್, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉಗ್ರ ಜುನೈದ್ ಅಹ್ಮದ್ನ ತಾಯಿ ಅನೀಸ್ ಫಾತಿಮಾ ಅವರನ್ನು ಬಂಧಿಸಿದ್ದರು.

ಕಳೆದ ತಿಂಗಳು ಕೈದಿಯೊಬ್ಬನಿಗೆ ಮೊಬೈಲ್ ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ ಜೈಲಿನ ವಾರ್ಡನ್ ಅಮರ್ ಪಾಂಜೆ ಎಂಬವರನ್ನು ಬಂಧಿಸಲಾಗಿತ್ತು. ಜೈಲಿನಲ್ಲಿ ರೌಡಿಶೀಟರ್ ಶ್ರೀನಿವಾಸ್ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ವಿಡಿಯೊ ಸಹ ಇತ್ತೀಚೆಗೆ ಹರಿದಾಡಿತ್ತು.

ವಿಡಿಯೊ ಅಸಲಿ: ಡಿಐಜಿ

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳಿಗೆ ವಿಶೇಷ ಆತಿಥ್ಯ ದೊರೆಯುತ್ತಿರುವ ದೃಶ್ಯಗಳು ಬಹಿರಂಗಗೊಂಡ ಬೆನ್ನಲ್ಲೇ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದ್ದು ವಿಡಿಯೊದಲ್ಲಿನ ದೃಶ್ಯಗಳು ಅಸಲಿಯೆಂದು ಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ಕಾರಾಗೃಹ ಇಲಾಖೆ ಹೆಚ್ಚುವರಿ ಡಿಐಜಿ ಪಿ.ವಿ.ಆನಂದರೆಡ್ಡಿ ತಿಳಿಸಿದ್ದಾರೆ.

ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊಗಳ ಪೈಕಿ ಕೆಲವನ್ನು 2023ರಲ್ಲಿ ಚಿತ್ರೀಕರಿಸಲಾಗಿದೆ. ಇನ್ನೂ ಕೆಲವನ್ನು 2025ರಲ್ಲಿ ಚಿತ್ರೀಕರಿಸಿರುವುದು ಮೇಲ್ನೋಟಕ್ಕೆ ಖಚಿತವಾಗಿದೆ. ಮೊಬೈಲ್ಗಳು ಸಿಕ್ಕಿದ್ದು ಹೇಗೆ? ಕೊಟ್ಟವರು ಯಾರು? ಯಾವಾಗ ಚಿತ್ರೀಕರಿಸಲಾಯಿತು? ಮಾಧ್ಯಮಗಳಿಗೆ ವಿಡಿಯೊಗಳನ್ನು ಹರಿಬಿಟ್ಟವರು ಯಾರು? ಎಂಬುದನ್ನು ತಿಳಿಯಲು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಸೂಚಿಸಲಾಗಿದೆ. ಅಲ್ಲದೇ ಇಲಾಖಾ ವತಿಯಿಂದಲೂ ತನಿಖೆ ನಡೆಸಿ ವರದಿ ನೀಡುವಂತೆ ದಕ್ಷಿಣ ವಲಯದ ಉಪ ಮಹಾನಿರೀಕ್ಷಕರಿಗೆ ಸೂಚಿಸಲಾಗಿದೆ. ಆ ವರದಿ ಆಧಾರದ ಮೇಲೆ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ವರದಿ ನೀಡಲು ಪರಮೇಶ್ವರ ಸೂಚನೆ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಗೆ ವಿಶೇಷ ಆತಿಥ್ಯ ನೀಡಿರುವ ಪ್ರಕರಣದ ಬಗ್ಗೆ ಎಡಿಜಿಪಿ ಬಿ.ದಯಾನಂದ್ ಅವರಿಂದ ವರದಿ ಕೇಳಿದ್ದೇನೆ. ವರದಿ ಸಮಾಧಾನ ಆಗದಿದ್ದರೆ ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.

ಪದೇ ಪದೇ ಇಂತಹ ಘಟನೆಗಳು ಜೈಲಿನಲ್ಲಿ ನಡೆಯುತ್ತಿವೆ. ಜೈಲಿನ ಉಸ್ತುವಾರಿ ಯಾರಿದ್ದಾರೆ ಅವರ ವಿರುದ್ಧ ಕ್ರಮ ಆಗಲೇಬೇಕು. ಶೀಘ್ರ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ಹಳೆಯ ವಿಡಿಯೊ ಎಂಬುದು ಗೊತ್ತಿಲ್ಲ. ತನಿಖೆ ಬಳಿಕ ಗೊತ್ತಾಗಲಿದೆ. ಹಳೆಯ ವಿಡಿಯೊ ಆಗಿದ್ದರೂ ಯಾರಿಗೂ ಮೊಬೈಲ್ ಕೊಡುವಂತಿಲ್ಲ. ನಟ ದರ್ಶನ್ ಅವರು ದಿಂಬು ಹಾಸಿಗೆಗೆ ನ್ಯಾಯಾಲಯದಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೈದಿಗಳಿಗೆ ಎಲ್ಲವೂ ಸುಲಭವಾಗಿ ಸಿಗುತ್ತದೆ ಎಂದು ಜೈಲು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.