ಸೋಮವಾರ, ಜನವರಿ 24, 2022
20 °C
ಹುಡುಕಿದರೂ ಗುಂಡಿ ರಹಿತ ರಸ್ತೆಗಳು ಸಿಗುವುದಿಲ್ಲ l ದುಸ್ತರವಾದ ವಾಹನ ಸಂಚಾರ

ಮೊದಲು ಗುಂಡಿ ಮುಚ್ಚಿ: ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡಿ ಬಿದ್ದಿರುವ ರಸ್ತೆ

ಬೆಂಗಳೂರು: ನಗರದಲ್ಲೀಗ ಗುಂಡಿಗಳಿಲ್ಲದ ರಸ್ತೆಗಳೇ ಇಲ್ಲ, ಹುಡುಕಿ–ತಡಕಿದರೂ ಗುಂಡಿ ರಹಿತ ರಸ್ತೆಗಳು ಸಿಗುವುದಿಲ್ಲ. ಗುಂಡಿಗಳನ್ನು ಮುಚ್ಚಿ ವಾಹನ ಸಂಚಾರ ಯೋಗ್ಯಗೊಳಿಸುವ ಬದಲು ವೈಟ್‌ ಟಾಪಿಂಗ್‌ ಹಾಗೂ ಅತಿ ದಟ್ಟಣೆಯ 12 ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ₹1,120 ಕೋಟಿ ಖರ್ಚು ಮಾಡಲು ಹೊರಟಿರುವ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಒಟ್ಟು 191 ಕಿ.ಮೀ ಉದ್ದದ 12 ಕಾರಿಡಾರ್‌ಗಳ ಉನ್ನತೀಕರಣಕ್ಕೆ ಒಟ್ಟು ₹335.17 ಕೋಟಿ, ದೈನಂದಿನ ನಿರ್ವಹಣೆಗೆ ಮೊದಲ ವರ್ಷಕ್ಕೆ ₹ 142.12 ಕೋಟಿ, ಇನ್ನುಳಿದ ನಾಲ್ಕು ವರ್ಷಗಳ ನಿರ್ವಹಣೆಗೆ ₹643.19 ಕೋಟಿ ವೆಚ್ಚವಾಗುತ್ತದೆ ಎಂದು ಕೆಆರ್‌ಡಿಸಿಎಲ್‌ ಅಂದಾಜಿಸಿತ್ತು. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕೈಬಿಟ್ಟಿದ್ದ ಈ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ.

₹2,191 ಕೋಟಿ ಮೊತ್ತದ ವೈಟ್‌ ಟಾಪಿಂಗ್ ಎರಡನೇ ಹಂತದ ಯೋಜನೆಗೂ ಚಾಲನೆ ಸಿಕ್ಕಿದೆ. ಒಂದೆಡೆ ಸಾವಿರಾರು ಕೋಟಿ ಮೊತ್ತದ ಯೋಜನೆಗಳಿಗೆ ಆಸಕ್ತಿ ವಹಿಸಿರುವ ಸರ್ಕಾರ, ವಾಹನ ಸಂಚಾರವೇ ಸಾಧ್ಯವಾಗದಷ್ಟು ದುಃಸ್ಥಿತಿಯಲ್ಲಿರುವ ರಸ್ತೆಗಳ ಗುಂಡಿ ಮುಚ್ಚಲು ಮುಂದಾಗುತ್ತಿಲ್ಲ. ಕಾರಿಡಾರ್‌ಗಳ ಉನ್ನತೀಕರಣ ಕೈಬಿಟ್ಟು ಮೊದಲು ರಸ್ತೆ ಗುಂಡಿಗಳನ್ನು ಮುಚ್ಚಿ ಎಂಬುದು ನಗರದ ನಾಗರಿಕ ಸಂಘಟನೆಗಳ ಒತ್ತಾಯ.

‘ನಿರ್ವಹಣೆ ಹೆಸರಿನಲ್ಲಿ ಲೂಟಿಗೆ ಯೋಜನೆ’

ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡಲು ಸರ್ಕಾರ ಮತ್ತೊಂದು ದಾರಿ ಹುಡುಕಿಕೊಂಡಿದೆ. ನಗರದಲ್ಲಿ ಗುಂಡಿ ಬೀಳದ ಒಂದು ಕಿಲೋ ಮೀಟರ್ ಉದ್ದದ ರಸ್ತೆ ಯಾವ ದಿಕ್ಕಿಗೆ ಹೋದರೂ ಸಿಗುವುದಿಲ್ಲ. ವಾಹನ ಸಂಚಾರಕ್ಕೆ ಯೋಗ್ಯ ಮಾಡುವ ಯೋಗ್ಯತೆ ಇಲ್ಲದ ಸರ್ಕಾರ ಕಾರಿಡಾರ್‌ಗಳ ಉನ್ನತೀಕರಣಕ್ಕೆ ಮುಂದಾಗಿರುವುದು ಮತ್ತೊಂದು ಲೂಟಿಯ ಪ್ರಯತ್ನ. ಸಾರ್ವಜನಿಕರ ಹಣ ಕೊಳ್ಳೆ ಹೊಡೆಯುವುದು ಒಂದೆಡೆಯಾದರೆ, ಗುಂಡಿಮಯ ರಸ್ತೆಯಲ್ಲಿ ವಾಹನಗಳ ಸಂಚಾರ ವೇಗ ಶೇ 50ರಷ್ಟು ಕಡಿಮೆಯಾಗಿದೆ. ಗುಂಡಿಮಯ ರಸ್ತೆಗಳಿಂದಾಗಿ ವಾಹನಗಳ ಇಂಧನ ಜಾಸ್ತಿ ಖರ್ಚಾಗುತ್ತಿದೆ. ವಾಹನ ಮತ್ತು ಆರೋಗ್ಯ ಎರಡೂ ಹಾಳಾಗುತ್ತಿವೆ. ಗುಂಡಿಗಳಲ್ಲಿ ಬಿದ್ದು ಕೆಲವರು ತಮ್ಮ ಜೀವವನ್ನೇ ಬಲಿಕೊಟ್ಟಿದ್ದಾರೆ. ಯಾರಿಗೂ ಉತ್ತರದಾಯಿತ್ವ ಇಲ್ಲದಿರುವುದು ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ. ಎರಡೇ ವರ್ಷಗಳಲ್ಲಿ ಹಾಳಾದ ರಸ್ತೆಗಳನ್ನು ನಿರ್ಮಿಸಿದ ಎಷ್ಟು ಗುತ್ತಿಗೆದಾರರನ್ನು ಜೈಲಿಗೆ ಕಳುಹಿಸಲಾಗಿದೆ? ಬಿಲ್ ಪಾಸ್ ಮಾಡಿದ ಎಂಜಿನಿಯರ್‌ಗಳ ವಿರುದ್ಧ ಏನು ಕ್ರಮವಾಗಿದೆ? ಮುಖ್ಯಮಂತ್ರಿ ಅವರೇ ಸ್ವತಃ ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿದ್ದು, ಯೋಜನೆಯ ಪುನರ್‌ ಪರಿಶೀಲನೆ ನಡೆಸಬೇಕು.

-ಡಿ.ಎಸ್. ರಾಜಶೇಖರ್, ಬೆಂಗಳೂರು ಪ್ರಜಾ ವೇದಿಕೆ

‘ಲೂಟಿಗೆ ಹೊಸ ದಾರಿ’

ಲೂಟಿ ನಡೆಸಲು ಹೊಸ ಹೊಸ ದಾರಿಗಳನ್ನು ಸರ್ಕಾರ ಹುಡುಕಿಕೊಳ್ಳುತ್ತಿದೆ. ಪಶ್ಚಿಮ ಕಾರ್ಡ್‌ ರಸ್ತೆಯನ್ನು ಸಿಗ್ನಲ್ ಮುಕ್ತ ಮಾಡುವ ನೆಪದಲ್ಲಿ ಕಿತ್ತು ಹಾಳು ಮಾಡಲಾಯಿತು. ಈಗ ರಾಜ್‌ಕುಮಾರ್ ರಸ್ತೆಯನ್ನು ಹಾಳು ಮಾಡಲಾಗುತ್ತಿದೆ. ಇದ್ದ ರಸ್ತೆಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಅನಾವಶ್ಯಕವಾಗಿ ಅಗೆದು ಸಂಚಾರಕ್ಕೆ ತೊಂದರೆ ಮಾಡಲಾಗುತ್ತಿದೆ. ವೈಟ್‌ ಟಾಪಿಂಗ್ ಕಾಮಗಾರಿ ಎಂದರೆ ಹಣ ಮಾಡಲು ಇರುವ ದೊಡ್ಡ ಮಾರ್ಗ. ಗುಣಮಟ್ಟದಲ್ಲಿ ಅವುಗಳನ್ನು ನಿರ್ವಹಿಸುತ್ತಿಲ್ಲ. ಮನೆಯ ಆರ್‌ಸಿಸಿ ರೀತಿ ಕಂಬಿಗಳನ್ನು ಕಟ್ಟಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಅದ್ಯಾವುದನ್ನೂ ಮಾಡದೆ ಸ್ವಯಂ ಚಾಲಿತ ಯಂತ್ರ ಬಳಸಿ ಕಾಮಗಾರಿ ನಡೆಸಲಾಗುತ್ತಿದೆ. ಉತ್ತರಹಳ್ಳಿಯಿಂದ ಕೆಂಗೇರಿ ತನಕ ₹26 ಕೋಟಿ ಮೊತ್ತದ ವೈಟ್‌ ಟಾಪಿಂಗ್ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ವಿಭಜಕ ಅಳವಡಿಸಿ ಗುಣಮಟ್ಟದ ಡಾಂಬರ್ ರಸ್ತೆ ಮಾಡಿದ್ದರೆ ಸಾಕಿತ್ತು. ದೊಡ್ಡ ಮಟ್ಟದ ಭ್ರಷ್ಟಾಚಾರ ಮಾಡಲು ಈ ರೀತಿಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

-ಜಿ.ವಿ.ಸತೀಶ್‌, ಬನಶಂಕರಿ 6ನೇ ಹಂತದ 2ನೇ ಬ್ಲಾಕ್‌ ಹಾಗೂ ಕರಿಯನಪಾಳ್ಯ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ

‘ಚಿಕ್ಕ ಚಿಕ್ಕ ರಸ್ತೆಗಳ ಸ್ಥಿತಿ ನೋಡಿ’

ದೊಡ್ಡದಾಗಿ ಹಣ ಸಿಗುತ್ತದೆ ಎಂಬ ಕಾರಣಕ್ಕೆ ದೊಡ್ಡ ದೊಡ್ಡ ಯೋಜನೆಗಳನ್ನು ರೂಪಿಸಲಾಗುತ್ತಿದೆ. ನಗರದಲ್ಲಿ ಚಿಕ್ಕ ಚಿಕ್ಕ ರಸ್ತೆಗಳು ಸಾವಿರಾರು ಕಿಲೋ ಮೀಟರ್ ಇವೆ. ಅಲ್ಲಿ ರಸ್ತೆ ಬದಲಿಗೆ ಗುಂಡಿಗಳೇ ಹೆಚ್ಚಾಗಿದ್ದು, ರಸ್ತೆಯೇ ಕಾಣಿಸುತ್ತಿಲ್ಲ. ಇವುಗಳನ್ನು ಸರಿಪಡಿಸುವ ಬದಲು ವೈಟ್‌ ಟಾಪಿಂಗ್ ಹೆಸರಿನಲ್ಲಿ ಸಾವಿರಾರು ಕೋಟಿ ಖರ್ಚು ಮಾಡಲು ಹೊರಟಿದ್ದಾರೆ. ಈ ರೀತಿಯ ದೊಡ್ಡ ಯೋಜನೆಗಳನ್ನು ನಗರದ ಜನ ಕೇಳುತ್ತಿಲ್ಲ. ಆದರೂ ಭ್ರಷ್ಟಾಚಾರಕ್ಕೆ ಬೇಕಿರುವ ಯೋಜನೆಗಳನ್ನು ಸರ್ಕಾರ ರೂಪಿಸಿಕೊಳ್ಳುತ್ತಿದೆ. ತಳಮಟ್ಟದ ಸಮಸ್ಯೆಗಳಿಗೆ ಈ ಯೋಜನೆಗಳು ಪರಿಹಾರವಲ್ಲ. ನಮಗೆ ನಿಜವಾದ ಸಮಸ್ಯೆ ಪರಿಹಾರವಾಗಬೇಕಿದೆ. ವೈಟ್ ಟಾಪಿಂಗ್ ಮತ್ತು ಕಾರಿಡಾರ್‌ಗಳ ಉನ್ನತೀಕರಣಕ್ಕೆ ನಮ್ಮ ವಿರೋಧವಿಲ್ಲ. ಮೊದಲು ಗುಂಡಿಗಳನ್ನು ಮುಚ್ಚಲು ಆದ್ಯತೆ ನೀಡಬೇಕು.

-ಶ್ರೀಕಾಂತ್ ನರಸಿಂಹನ್, ಬಿಎನ್‌ಪಿ ಪ್ರಧಾನ ಕಾರ್ಯದರ್ಶಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು