ಶುಕ್ರವಾರ, ಸೆಪ್ಟೆಂಬರ್ 17, 2021
29 °C

ಕೋವಿಡ್‌ ಸೋಂಕಿತ ಕಾರ್ಮಿಕರ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿ:ಪೌರಕಾರ್ಮಿಕರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೌರಕಾರ್ಮಿಕರ ಆರೋಗ್ಯ ರಕ್ಷಣೆ ವಿಚಾರದಲ್ಲಿ ಬಿಬಿಎಂಪಿ ಮತ್ತು ಸರ್ಕಾರ ನಿರ್ಲಕ್ಷ್ಯ ವಹಿಸಿವೆ. ಪೌರಕಾರ್ಮಿಕರು ಕೋವಿಡ್‌ಗೆ ಬಲಿಯಾಗುತ್ತಿದ್ದರೂ ಅವರಿಗೆ ಕನಿಷ್ಠಪಕ್ಷ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯನ್ನೂ ಮಾಡಿಲ್ಲ ಎಂದು ಆರೋಪಿಸಿ ಪೌರಕಾರ್ಮಿಕರು ಪುಲಿಕೇಶಿನಗರದಲ್ಲಿ ಸೋಮವಾರ ಧರಣಿ ನಡೆಸಿದರು.

ಮಾದಿಗ ದಂಡೋರಾ ಹಾಗೂ ಬಿಬಿಎಂಪಿಯ ಪೌರಕಾರ್ಮಿಕರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪೌರಕಾರ್ಮಿಕರು ಪುಲಿಕೇಶಿನಗರದ ಬಿಬಿಎಂಪಿ ಕಚೇರಿಯಿಂದ ರಾಬರ್ಟ್ಸನ್‌ ರಸ್ತೆ ಬಳಿಯ ಕೋವಿಡ್‌ ವಾರ್‌ ರೂಂ ವರೆಗೆ ಮೆರವಣಿಗೆ ನಡೆಸಿದರು.

‘ಕೋವಿಡ್‌ ಸೋಂಕಿತರಾಗುತ್ತಿರುವ ಪೌರಕಾರ್ಮಿಕರ ಹಾಗೂ ದಲಿತ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದುವರೆಗೆ ಐವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ನಮ್ಮವರ ಆರೋಗ್ಯ ರಕ್ಷಣೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಪ್ರತಿಭಟನಕಾರರು ದೂರಿದರು.

ಕೋವಿಡ್‌ ಪೀಡಿತ ಪೌರಕಾರ್ಮಿಕರ ಚಿಕಿತ್ಸೆ ಸಲುವಾಗಿ ವೆಂಟಿಲೇಟರ್‌ ಸೌಲಭ್ಯ ಇರುವ 200 ಹಾಸಿಗೆಗಳನ್ನು ಕಾಯ್ದಿರಿಸಬೇಕು. ಅವರ ಕೆಲಸದ ಅವಧಿಯನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು.

‘ಪೌರಕಾರ್ಮಿಕೆ ಪುಷ್ಪಾ ಹಾಗೂ ಬಿಬಿಎಂಪಿ ಅಟೆಂಡರ್‌ ರಘುವೇಲು ಅವರು ವೆಂಟಿಲೇಟರ್‌ ಸೌಲಭ್ಯ ಸಿಗದೆ ಕೊನೆಯುಸಿರೆಳೆದರು. ಇನ್ನಾದರೂ ಬಿಬಿಎಂಪಿ ಹಾಗೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು’ ಎಂದು ಮಾದಿಗ ದಂಡೋರಾ ಬೆಂಗಳೂರು ನಗರದ ಘಟಕದ ಅಧ್ಯಕ್ಷ ಸಿ.ದಾಸ್‌ ಒತ್ತಾಯಿಸಿದರು.

ಪೌರಕಾರ್ಮಿಕ ಸಂಘಟನೆಗಳ ಮುಖಂಡರಾದ ಡಾ.ಬಾಬು, ದಲಿತ ಸಂಘಟನೆಗಳ ಮುಖಂಡರಾದ ಶೇಖರ್‌, ರಾಜೇಂದ್ರ, ಲಕ್ಷ್ಮಣ್‌, ಮದಿ, ಪ್ರೇಮ್‌ ಕುಮಾರ್‌ ಭಾಗವಹಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು