ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಫ್ಯೂ ಜಾರಿಯಲ್ಲಿದ್ದರೂ ಅನಗತ್ಯ ಓಡಾಟ: ಬೀದಿಗೆ ಇಳಿದ ಕಮಿಷನರ್‌

ಮಾಸ್ಕ್‌ ಧರಿಸದವರಿಂದ ₹ 2.57 ಕೋಟಿ ದಂಡ ಸಂಗ್ರಹ
Last Updated 30 ಏಪ್ರಿಲ್ 2021, 21:34 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ಕರ್ಫ್ಯೂ ಜಾರಿ ಮಾಡಲಾಗಿದ್ದು, ಇದರ ನಡುವೆಯೂ ನಗರದಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದೆ. ಪೊಲೀಸ್ ಆಯುಕ್ತ ಕಮಲ್‌ ಪಂತ್‌ ಸ್ವತಃ ಬೀದಿಗೇ ಇಳಿದು ಪರಿಶೀಲನೆ ನಡೆಸಿದ್ದಾರೆ. ಜೊತೆಗೆ, ಮಾಸ್ಕ್ ಧರಿಸಿದ ಹಾಗೂ ಅಂತರ ಕಾಯ್ದುಕೊಳ್ಳದವರಿಂದ ಪೊಲೀಸರು ಇದುವರೆಗೂ ₹ 2.57 ಕೋಟಿ ದಂಡ ಸಂಗ್ರಹಿಸಿದ್ದಾರೆ.

ಅಗತ್ಯ ವಸ್ತುಗಳ ಖರೀದಿ, ಕಟ್ಟಡ ನಿರ್ಮಾಣ, ಕೇಬಲ್, ದೂರವಾಣಿ, ವೈದ್ಯಕೀಯ ತುರ್ತು ಸೇವೆಗಳಿಗೆ ಅನುಮತಿ ನೀಡಲಾಗಿದೆ. ಇದರ ನೆಪದಲ್ಲಿ ಕೆಲವರು ಅನಗತ್ಯವಾಗಿ ಓಡಾಡುತ್ತಿದ್ದು, ಅಂಥವರಿಂದ ನಗರದ ಹಲವು ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಉಂಟಾಗುತ್ತಿದೆ.

ಯಶವಂತಪುರ, ಹೆಬ್ಬಾಳ, ಮೆಜೆಸ್ಟಿಕ್, ಕಾರ್ಪೋರೇಷನ್ ವೃತ್ತ, ಸ್ಯಾಟಲೈಟ್ ಬಸ್ ನಿಲ್ದಾಣ ಹಾಗೂ ಹಲವೆಡೆ ಶುಕ್ರವಾರ ಬೆಳಿಗ್ಗೆ 6ರಿಂದ ವಾಹನಗಳ ಸಂಚಾರ ಹೆಚ್ಚಿತ್ತು. ಬೆಳಿಗ್ಗೆ 10ರ ನಂತರ ಅಗತ್ಯ ವಸ್ತುಗಳ ಮಾರಾಟ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದರು. ಅದಾದ ಬಳಿಕವೂ ನಗರದಲ್ಲಿ ವಾಹನಗಳು ಓಡಾಡಿದವು.

5,085 ವಾಹನಗಳ ಜಪ್ತಿ: ಏಪ್ರಿಲ್ 10ರಿಂದ 30ರವರೆಗೆ ನಗರದಲ್ಲಿ ಅನಗತ್ಯವಾಗಿ ಓಡಾಡಿದ್ದವರ 5,085 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ರಸ್ತೆಯಲ್ಲಿ ಪ್ರತಿಯೊಂದು ವಾಹನಗಳನ್ನು ಸಿಬ್ಬಂದಿ ಪರಿಶೀಲನೆ ಮಾಡುತ್ತಿದ್ದಾರೆ. 4,632 ದ್ವಿಚಕ್ರ ವಾಹನಗಳು, 205 ಆಟೊ ಹಾಗೂ 248 ಕಾರುಗಳನ್ನು ಜಪ್ತಿ ಮಾಡಲಾಗಿದೆ. ನ್ಯಾಯಾಲಯದ ಮೂಲಕ ಮಾಲೀಕರು ವಾಹನಗಳನ್ನು ಬಿಡಿಸಿಕೊಳ್ಳಬೇಕು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ರೈಲು ನಿಲ್ದಾಣದಲ್ಲೂ ಜನ:ಮೆಜೆಸ್ಟಿಕ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಕರ್ಫ್ಯೂ ಆರಂಭವಾದಾಗಿನಿಂದಲೂ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಹೋಗಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ರಾತ್ರಿ ನಿಲ್ದಾಣದಿಂದ ಹೊರಡುವ ರೈಲುಗಳಲ್ಲಿ ಸೀಟು ಕಾಯ್ದಿರಿಸಿರುವ ಪ್ರಯಾಣಿಕರು, ಬೆಳಿಗ್ಗೆಯೇ ನಿಲ್ದಾಣಕ್ಕೆ ಬಂದು ಕಾಯುತ್ತಿದ್ದಾರೆ. ಇದರಿಂದಾಗಿಯೇ ನಿಲ್ದಾಣದಲ್ಲಿ ಜನರ ಸಂಖ್ಯೆ ಹೆಚ್ಚಿದ್ದು, ಅಂತರವೂ ಇಲ್ಲದಂತಾಗಿದೆ. ಮಾಸ್ಕ್ ಧರಿಸದ ಹಲವರು, ನಿಲ್ದಾಣದ ಎಲ್ಲೆಂದರಲ್ಲಿ ಮಲಗುತ್ತಿರುವ ದೃಶ್ಯಗಳು ಕಂಡುಬರುತ್ತವೆ.

ನಗರ ಸುತ್ತಾಡಿದ ಕಮಿಷನರ್:‘ಕರ್ಫ್ಯೂ ನಿಯಮಗಳನ್ನು ಜನ ಪಾಲಿಸುತ್ತಿಲ್ಲ ಹಾಗೂ ವಾಹನಗಳ ಓಡಾಟ ಹೆಚ್ಚಾಗಿದೆ’ ಎಂಬ ದೂರುಗಳು ಬಂದಿದ್ದರಿಂದ ಪೊಲೀಸ್ ಕಮಿಷನರ್ ಕಮಲ್ ಪಂತ್ ನಗರದಲ್ಲಿ ಶುಕ್ರವಾರ ಸುತ್ತಾಡಿದರು. ಕಾರ್ಪೋರೇಷನ್ ವೃತ್ತದಲ್ಲಿ ನಿಂತಿದ್ದ ಕಮಲ್ ಪಂತ್, ವಾಹನಗಳ ಪರಿಶೀಲನೆ ನಡೆಸಿದರು.

17,362 ಪ್ರಕರಣದಲ್ಲಿ ದಂಡ ಸಂಗ್ರಹ:‘ಮಾಸ್ಕ್‌ ಧರಿಸದ, ಅಂತರ ಕಾಯ್ದುಕೊಳ್ಳದವರ ವಿರುದ್ಧ ಏ. 1ರಿಂದ 29ರವರೆಗೆ 17,362 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವರಿಂದ ₹ 2.57 ಕೋಟಿ ದಂಡ ಸಂಗ್ರಹಿಸಲಾಗಿದೆ’ ಎಂದೂ ಪೊಲೀಸ್ ಅಧಿಕಾರಿ ಹೇಳಿದರು.

‘ಮಳಿಗೆ, ಹೋಟೆಲ್, ಶಾಪಿಂಗ್ ಮಾಲ್‌.. ಹೀಗೆ ಹಲವರ ವಿರುದ್ಧವೂ ಪ್ರಕರಣ ದಾಖಲಾಗಿದೆ’ ಎಂದೂ ತಿಳಿಸಿದರು.

735 ಪೊಲೀಸರಿಗೆ ಕೊರೊನಾ; 8 ಸಾವು
‘ಎರಡನೇ ಅಲೆಯಲ್ಲಿ ನಗರದ 602 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು, ಆ ಪೈಕಿ 8 ಮಂದಿ ಸಾವನ್ನಪ್ಪಿದ್ದಾರೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘ಚಿಕಿತ್ಸೆಯಿಂದ 125 ಪೊಲೀಸರು ಗುಣಮುಖರಾಗಿದ್ದಾರೆ. 578 ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದಾರೆ. 24 ಮಂದಿ ಆಸ್ಪತ್ರೆ ಸಾಮಾನ್ಯ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ಕುಟುಂಬದ 25 ಮಂದಿಯಲ್ಲೂ ಸೋಂಕು ಕಾಣಿಸಿಕೊಂಡಿದ್ದು, ಅವರಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ’ ಎಂದೂ ಹೇಳಿದರು.

‘3 ಸಾವಿರ ಸೋಂಕಿತರು ನಾಪತ್ತೆ; ಮುಂದುವರೆದ ಹುಡುಕಾಟ’
‘ಕೊರೊನಾ ಸೋಂಕು ತಗುಲಿದ್ದ 3 ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಮಾಹಿತಿ ನೀಡಿದ್ದು, ಅಂಥವರಿಗಾಗಿ ಹುಡುಕಾಟ ನಡೆದಿದೆ’ ಎಂದು ಪೊಲೀಸರು ಹೇಳಿದರು.

‘ಸೋಂಕಿನ ಪರೀಕ್ಷೆ ಮಾಡಿಸಿಕೊಂಡಿದ್ದವರು, ವರದಿ ಬಂದ ನಂತರ ನಾಪತ್ತೆಯಾಗಿದ್ದಾರೆ. ಅವರು ನಗರದಲ್ಲಿ ಇದ್ದಾರೆಯೇ ಅಥವಾ ಬೇರೆ ಊರಿಗೆ ಹೋಗಿದ್ದಾರೆಯೇ? ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದೂ ತಿಳಿಸಿದರು.

ಗುಂಪು ಸೇರಿಸಿ ತರಕಾರಿ ವಿತರಿಸುತ್ತಿದ್ದವರ ವಿರುದ್ಧ ಪ್ರಕರಣ
ಅನುಮತಿ ಇಲ್ಲದೇ ಜನರ ಗುಂಪು ಸೇರಿಸಿ ತರಕಾರಿ ವಿತರಣೆ ಮಾಡುತ್ತಿದ್ದವರ ವಿರುದ್ಧ ವಿಲ್ಸನ್ ಗಾರ್ಡನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮುಖಂಡರೊಬ್ಬರು ಹಾಗೂ ಅವರ ಬೆಂಬಲಿಗರು, ವಾಹನದಲ್ಲಿ ತರಕಾರಿ ತಂದು ಉಚಿತವಾಗಿ ವಿತರಣೆ ಮಾಡುತ್ತಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನ, ಅಂತರವನ್ನೂ ಪಾಲಿಸಿರಲಿಲ್ಲ. ಕೆಲವರು ಮಾಸ್ಕ್ ಸಹ ಧರಿಸಿರಲಿಲ್ಲ. ಸ್ಥಳಕ್ಕೆ ಹೋಗಿ ಜನರನ್ನು ಚದುರಿಸಿ ತರಕಾರಿ ಜಪ್ತಿ ಮಾಡಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT