ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮುಂದೆ ವಾಹನ ನಿಲುಗಡೆಗೆ ಬೇಕು ಪರವಾನಗಿ!

ಸ್ವಂತ ವಾಹನ ನಿಲ್ಲಿಸಲು ಸ್ವಂತ ಜಾಗ ಹೊಂದಿಲ್ಲದ ಮಂದಿ ನಿದ್ದೆಗೆಡಿಸಿದೆ ಹೊಸ ನಿಯಮ
Last Updated 11 ಫೆಬ್ರುವರಿ 2021, 18:41 IST
ಅಕ್ಷರ ಗಾತ್ರ

ಬೆಂಗಳೂರು: ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್‌) ಅಂತಿಮಗೊಳಿಸಿರುವ ‘ವಾಹನ ನಿಲುಗಡೆ ನೀತಿ 2.0’ಯಲ್ಲಿ ತುಂಬಾ ಚರ್ಚೆಗೆ ಗ್ರಾಸವಾಗುತ್ತಿರುವುದು ನಗರದ ನಿವಾಸಿಗಳು ಮನೆ ಬಳಿಯ ರಸ್ತೆಯನ್ನು ತಮ್ಮ ವಾಹನ ನಿಲ್ಲಿಸಲು ಬಳಸಿಕೊಂಡರೆ ಅದಕ್ಕೆ ಶುಲ್ಕ ಪಾವತಿಸಬೇಕು ಎಂಬ ಅಂಶ.

ಸ್ವಂತ ವಾಹನ ನಿಲ್ಲಿಸಲು ಸ್ವಂತ ಜಾಗ ಹೊಂದಿಲ್ಲದ ಮಂದಿಯ ನಿದ್ದೆಗೆಡಿಸಲು ಕಾರಣವಾಗಿದೆ ಈ ನಿಯಮ. 80 ಲಕ್ಷಕ್ಕೂ ಅಧಿಕ ವಾಹನಗಳನ್ನು ಹೊಂದಿರುವ ನಗರದಲ್ಲಿ ಈ ನಿಯಮವೇನಾದರೂ ಕಟ್ಟುನಿಟ್ಟಾಗಿ ಜಾರಿಯಾಯಿತೆಂದರೆ ಅದಕ್ಕೆ ನಗರದ ಬಹುತೇಕ ನಿವಾಸಿಗಳು ಬೆಲೆ ತೆರಲೇಬೇಕಾಗುತ್ತದೆ.

‘ನಗರದ ವಸತಿ ಪ್ರದೇಶದ ರಸ್ತೆಗಳು ದಶಕದ ಹಿಂದಿನವರೆಗೂ ನೆರೆಹೊರೆಯ ಸ್ಥಳೀಯರ ಓಡಾಟಕ್ಕೆಂದೇ ಮೀಸಲಿದ್ದವು. ಚಿಣ್ಣರು ನಿರ್ಭೀತಿಯಿಂದ ಇವುಗಳಲ್ಲಿ ಆಡುತ್ತಾ ಕಾಲ ಕಳೆಯಬಹುದಿತ್ತು. ಆದರೆ, ಈಗ ವಸತಿ ಪ್ರದೇಶಗಳ ಬಹುತೇಕ ರಸ್ತೆಗಳನ್ನು ವಾಹನ ನಿಲುಗಡೆ ಪ್ರದೇಶದಂತೆ ಬಳಸಲಾಗುತ್ತಿದೆ. ಈ ರಸ್ತೆಗಳೀಗ ಅಸುರಕ್ಷಿತವಾಗಿರುವುದಷ್ಟೇ ಅಲ್ಲ, ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್‌ ಅಥವಾ ಅಗ್ನಿಶಾಮಕ ವಾಹನ ಸಕಾಲದಲ್ಲಿ ಸ್ಥಳಕ್ಕೆ ತಲುಪಲು ಸಾಧ್ಯವಾಗದ ಸ್ಥಿತಿಯಲ್ಲಿವೆ.’

‘ವಸತಿ ಪ್ರದೇಶದ ರಸ್ತೆಗಳಲ್ಲಿ ವಾಹನ ನಿಲುಗಡೆ ನಿರ್ಬಂಧಿಸಲು ಸದ್ಯಕ್ಕೆ ಯಾವುದೇ ನಿಯಮಗಳಿಲ್ಲ. ಆಸ್ತಿ ಮಾಲೀಕರು ತಮ್ಮ ಜಾಗದಲ್ಲೇ ವಾಹನ ನಿಲುಗಡೆಗೆ ಅಗತ್ಯವಿರುವಷ್ಟು ಜಾಗವನ್ನೂ ಮೀಸಲಿಡುವುದು ನಗರ ಮಹಾ ಯೋಜನೆಯ ವಲಯ ನಿಬಂಧನೆಗಳ ಪ್ರಕಾರ ಕಡ್ಡಾಯ. ಆದರೂ ಇದರ ಪಾಲನೆ ಆಗದಿರುವುದು ಸಮಸ್ಯೆ ಸೃಷ್ಟಿಸಿದೆ. ಹಾಗಾಗಿ ರಸ್ತೆಯಲ್ಲೇ ವಾಹನ ನಿಲ್ಲಿಸುವ ಪರಿಪಾಠಕ್ಕೆ ಇಂದಲ್ಲದಿದ್ದರೆ ನಾಳೆಯಾದರೂ ಇತಿಶ್ರಿ ಹಾಡಬೇಕಿದೆ. ಈ ರಸ್ತೆಗಳನ್ನು ಸಾರ್ವಜನಿಕ ಉದ್ದೇಶಕ್ಕೆಂದು ಮೀಸಲಿಡಬೇಕಿದೆ. ವಾಹನ ನಿಲ್ಲಿಸಲು ರಸ್ತೆಯನ್ನು ಕಬಳಿಸುವವರು ಇದಕ್ಕೆ ಬೆಲೆ ತೆರಬೇಕೇ ಹೊರತು ಪೌರಾಡಳಿತ ಸಂಸ್ಥೆಯಲ್ಲ’ ಎನ್ನುವ ಮೂಲಕ ‘ಪಾರ್ಕಿಂಗ್‌ ನೀತಿ’ಯು ವಸತಿ ಪ್ರದೇಶದ ರಸ್ತೆಯಲ್ಲಿ ನಿಲ್ಲಿಸುವ ವಾಹನಗಳಿಗೆ ಶುಲ್ಕ ವಿಧಿಸುವುದನ್ನು ಸಮರ್ಥಿಸಿಕೊಳ್ಳುತ್ತದೆ.

‘ಪಾರ್ಕಿಂಗ್‌’ಗೆ ಪರವಾನಗಿ

ವಸತಿ ಪ್ರದೇಶದ ರಸ್ತೆಯಲ್ಲಿ ವಾಹನ ನಿಲ್ಲಿಸಲು ಶುಲ್ಕ ತೆತ್ತು ‘ಪರವಾನಗಿ’ ಪಡೆಯುವ ವ್ಯವಸ್ಥೆಯನ್ನು ಪ್ರಾಯೋಗಿಕ ನೆಲೆಯಲ್ಲಿ ಆಯ್ದ ಕೆಲ ಪ್ರದೇಶಗಳಲ್ಲಿ ಜಾರಿಗೆ ತರಬಹುದು. ಮೊದಲೇ ಗೊತ್ತುಪಡಿಸಿದ ಸ್ಥಳದಲ್ಲಿ ವಾಹನ ನಿಲ್ಲಿಸಲು ತ್ರೈಮಾಸಿಕ ಅಥವಾ ವಾರ್ಷಿಕ ಪರವಾನಗಿಗಳನ್ನು ಬಿಬಿಎಂಪಿ ಹಂಚಿಕೆ ಮಾಡಬಹುದು.ಬಿಬಿಎಂಪಿಯು ವಾಹನ ನಿಲುಗಡೆ ಪರವಾನಗಿ ನೀಡುವುದಕ್ಕೆ ಪೂರಕವಾಗಿ ರಸ್ತೆಗಳನ್ನು ವರ್ಗೀಕರಿಸಬಹುದು ಎಂದು ನೀತಿಯಲ್ಲಿ ಹೇಳಲಾಗಿದೆ.

ವಾಹನ ನಿಲುಗಡೆಯಿಂದ ತುರ್ತು ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗುವುದನ್ನು ತಡೆಯುವ ಬಗ್ಗೆ ಎಚ್ಚರ ವಹಿಸಬೇಕು. ಹಾಗಾಗಿ ಪರ್ಮಿಟ್‌ ನೀಡುವುದಕ್ಕೆ ರಸ್ತೆಯ ಅಗಲವನ್ನೂ ಮಾನದಂಡವಾಗಿ ಬಳಸಬಹುದು ಎಂದೂ ಸಲಹೆ ನೀಡಲಾಗಿದೆ.

ಪರವಾನಗಿಯು ಸ್ಥಳಾವಕಾಶವಿದ್ದಲ್ಲಿ ಮಾತ್ರ ವಾಹನ ನಿಲ್ಲಿಸುವ ಅಧಿಕಾರ ನೀಡುತ್ತದೆಯೇ ವಿನಃ, ಅವರಿಗೆ ವಾಹನ ನಿಲ್ಲಿಸಲು ಜಾಗ ಒದಗಿಸುವ ಖಾತರಿಯನ್ನು ನೀಡುವುದಿಲ್ಲ. ನಿರ್ದಿಷ್ಟ ಸ್ಥಳದಲ್ಲಿ ವಾಹನ ನಿಲ್ಲಿಸಲು ನೀಡಲಾದ ಪರವಾನಗಿ ಬಳಸಿ ಬೇರೆ ಜಾಗದಲ್ಲಿ ವಾಹನ ನಿಲ್ಲಿಸುವಂತಿಲ್ಲ.

ಪರವಾನಗಿ ನೀಡಲು ರೂಪಿಸಿರುವ ನಿಯಮಗಳೆಲ್ಲವೂ ಚೆನ್ನಾಗಿಯೇ ಇವೆ. ವಾಹನ ನಿಲುಗಡೆ ನಿಯಮ ಪಾಲನೆ ಮೇಲೆ ನಿಗಾ ಇಡುವ ವ್ಯವಸ್ಥೆಯನ್ನು ಬಿಬಿಎಂಪಿ ರೂಪಿಸದೇ ಇದ್ದರೆ ಪರವಾನಗಿಯೂ ಒಂದು ದಂದೆಯಾಗಿ ಪರಿಣಮಿಸಬಹುದು ಎಂದು ಎಚ್ಚರಿಸುತ್ತಾರೆ ನಗರ ಸಂಚಾರ ತಜ್ಞರು.

‘ವಸತಿ ಪ್ರದೇಶಗಳ ರಸ್ತೆಗಳಲ್ಲಿ ವಾಹನ ನಿಲ್ಲಿಸುವುದಕ್ಕೆ ಶುಲ್ಕ ವಿಧಿಸುವ ಪ್ರಯೋಗ ಸಿಂಗಪುರದಂತಹ ದೇಶಗಳಲ್ಲಿ ನಡೆದಿದೆ. ನಮ್ಮಲ್ಲಿ ಹತ್ತು ವರ್ಷಗಳಿಂದ ಈ ಬಗ್ಗೆ ಚರ್ಚೆ ಆಗುತ್ತಿತ್ತೇ ವಿನಃ ಈ ಕುರಿತ ನೀತಿಯನ್ನು ರೂಪಿಸಿರಲಿಲ್ಲ. ನಗರದ ನಿವಾಸಿಗಳೆಲ್ಲರೂ ಖಾಸಗಿ ವಾಹನ ಖರೀದಿಸಿದರೆ ಅವುಗಳನ್ನು ನಿಲ್ಲಿಸುವುದೆಲ್ಲಿ ಎಂಬುದು ಮುಖ್ಯ ಪ್ರಶ್ನೆ. ಜನರು ಖಾಸಗಿ ವಾಹನ ಖರೀದಿಸದಂತೆ ತಡೆಯುವುದೇ ಈ ನೀತಿಯ ಉದ್ದೇಶ’ ಎನ್ನುತ್ತಾರೆ ನಗರ ಸಂಚಾರ ವ್ಯವಸ್ಥೆ ತಜ್ಞ, ಗುಬ್ಬಿ ಲ್ಯಾಬ್ಸ್‌ನ ಎಚ್‌.ಎಸ್‌.ಸುಧೀರ್‌.

‘ಹೊಸ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಬಿಬಿಎಂಪಿ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಈ ವ್ಯವಸ್ಥೆ ಮತ್ತಷ್ಟು ಅ‌ಧ್ವಾನ ಉಂಟು ಮಾಡಲಿದೆ’ ಎಂದು ಎಚ್ಚರಿಸಿದರು.

ಪಾರ್ಕಿಂಗ್‌ ಪರವಾನಗಿ ಹೇಗೆ?

ಪರವಾನಗಿಯನ್ನು ವಾಹನಕ್ಕೆ ನೀಡಲಾಗುತ್ತದೆಯೇ ವಿನಃ ವ್ಯಕ್ತಿಗಲ್ಲ

ಪರವಾನಗಿ ಪಡೆಯುವ ವಾಹನ ಮಾಲೀಕ ಅದೇ ಬೀದಿಯ ನಿವಾಸಿಯಾಗಿರಬೇಕು

ಒಬ್ಬ ವ್ಯಕ್ತಿ ಒಂದು ವಾಹನ ನಿಲುಗಡೆಗೆ ಮಾತ್ರ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಬಹುದು

ಅರ್ಜಿ ಸಲ್ಲಿಸುವ ವ್ಯಕ್ತಿ ವಾಸವಾಗಿರುವ ಕಟ್ಟಡವನ್ನು ನಿಯಮ ಉಲ್ಲಂಘಿಸಿ ನಿರ್ಮಿಸಿದ್ದರೆ, ಪರವಾನಗಿ ನಿರಾಕರಿಸಲಾಗುತ್ತದೆ

ನೀತಿಯ ಉದ್ದೇಶಗಳು

ನಡಿಗೆ, ಸೈಕಲ್‌ ಬಳಕೆ ಹಾಗೂ ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ

ತುರ್ತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವುದನ್ನು ತಡೆಯುವುದು

ಖಾಸಗಿ ವಾಹನ ಹೊಂದುವ ಪರಿಪಾಠಕ್ಕೆ ಕಡಿವಾಣ ಹಾಕುವುದು

ಪಾರ್ಕಿಂಗ್‌ ನೀತಿ– ಏನು ಎತ್ತ?

‘ಬಡವರು ವಾಹನ ಖರೀದಿಸಬಾರದೇ’

‘ಮನೆ ಎದುರು ರಸ್ತೆಯಲ್ಲಿ ಕಾರು ನಿಲ್ಲಿಸಿದರೆ ಬೇಕಿದ್ದರೆ ಶುಲ್ಕ ವಿಧಿಸಲಿ. ಆದರೆ, ಸ್ಕೂಟರ್‌ ನಿಲ್ಲಿಸುವುದಕ್ಕೂ ಅವಕಾಶ ಕಲ್ಪಿಸದಿದ್ದರೆ ಬಡವರು ಏನು ಮಾಡಬೇಕು. 20x 30 ನಿವೇಶನದಲ್ಲಿ ಮನೆಕಟ್ಟಿಕೊಂಡವರು, ಬಾಡಿಗೆ ಮನೆಯಲ್ಲಿರುವವರು ಈಗಾಗಲೇ ಖರೀದಿಸಿರುವ ವಾಹನ ಎಲ್ಲಿ ನಿಲ್ಲಿಸಬೇಕು. ಬಡವರು ಸ್ಕೂಟರ್‌ ಕೂಡಾ ಖರೀದಿಸಬಾರದೇ’ ಎಂದು ಪ್ರಶ್ನೆ ಮಾಡುತ್ತಾರೆ ಜಯನಗರದ ಶಶಿಕುಮಾರ್‌.

‘ಬಡ ಜನರ ಮೇಲೆ ಸರ್ಕಾರ ನಡೆಸುವ ಮತ್ತೊಂದು ದೌರ್ಜನ್ಯವಿದು. ಬಡವರಿಗೆ ಮತ್ತಷ್ಟು ಕಿರುಕುಳ ನೀಡುವುದೇ ಸರ್ಕಾರದ ಉದ್ದೇಶ ಇದ್ದಂತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಸಾರ್ವಜನಿಕ ಸಾರಿಗೆ ಮೊದಲು ಬಲಪಡಿಸಲಿ’

ವಸತಿ ಪ್ರದೇಶದ ರಸ್ತೆಯಲ್ಲಿ ವಾಹನ ನಿಲ್ಲಿಸುವುದಕ್ಕೆ ಶುಲ್ಕ ವಿಧಿಸುವ ಸರ್ಕಾರ ಜನರು ಕೊನೆಯ ತಾಣ ತಲುಪಲು ಅನುಕೂಲವಾಗುಂತೆ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸುವ ಜವಾಬ್ದಾರಿಯನ್ನೂ ಹೊಂದಿದೆ. ಜನರಿಗೆ ಶುಲ್ಕ ವಿಧಿಸಿ ಸರ್ಕಾರ ಸುಮ್ಮನಾದರೆ ಈ ನೀತಿಯ ಆಶಯ ಈಡೇರದು’ ಎನ್ನುತ್ತಾರೆ ಎಚ್‌.ಎಸ್‌.ಸುಧೀರ್‌.

’ಇದು ಜನವಿರೋಧಿ ನೀತಿ‘

ಮನೆಯ ಮುಂದೆ ನಿಲ್ಲುವ ಕಾರುಗಳಿಗೆ ಕರ ವಿಧಿಸುವುದು ಸರಿ ಅಲ್ಲ. ಇದು ಜನವಿರೋಧಿ ನೀತಿ. ಈ ಯೋಜನೆ ಯಶಸ್ವಿಯಾಗುವುದಿಲ್ಲ. ಅದರ ಬದಲು ಬಡಾವಣೆಗಳಲ್ಲಿ ಸರ್ಕಾರದ ಜಾಗ ಅಥವಾ ಖಾಸಗಿ ನಿವೇಶನಗಳನ್ನು ಖರೀದಿ ಮಾಡಿ ಅಲ್ಲಿ ಪಾರ್ಕಿಂಗ್‌ ಕಟ್ಟಡಗಳನ್ನು ನಿರ್ಮಿಸಿ ಶುಲ್ಕ ವಿಧಿಸಬಹುದು. ಬಡಾವಣೆಗಳಲ್ಲಿ ಖಾಲಿ ನಿವೇಶನಗಳನ್ನು ಬಾಡಿಗೆಗೆ ಪಡೆದು ಅಲ್ಲಿ ಪಾರ್ಕಿಂಗ್ ಮಾಡುವಂತೆ ಪ್ರೇರೇಪಿಸಿ ಶುಲ್ಕ ವಿಧಿಸಬಹುದು.

–ಎನ್‌.ಮುನಿರಾಜು, ಪ್ರದಾನ ಕಾರ್ಯದರ್ಶಿ ಹೆಣ್ಣೂರು ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT