ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ಮೋದಿ ಭೇಟಿ: ರಸ್ತೆಗಳಿಗೆ ತರಾತುರಿ ಕಾಯಕಲ್ಪ!

ಗಣ್ಯರು ಸಾಗುವ ರಸ್ತೆ ದುರಸ್ತಿ: ಭರದಿಂದ ಸಾಗಿದ ಗುಂಡಿಗಳ ಮುಚ್ಚುವ ಕಾರ್ಯ
Last Updated 8 ನವೆಂಬರ್ 2022, 20:13 IST
ಅಕ್ಷರ ಗಾತ್ರ

ಬೆಂಗಳೂರು:ನಗರಕ್ಕೆ ನ.11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವುದರಿಂದ ಬಿಬಿಎಂಪಿ ತ್ವರಿತಗತಿಯಲ್ಲಿ ರಸ್ತೆಗಳಿಗೆ ಕಾಯಕಲ್ಪ ನೀಡುವ ಕಾರ್ಯದಲ್ಲಿ ತೊಡಗಿದೆ.

ಪ್ರಧಾನಿ ಸಾಗುವ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಪಾಲಿಕೆ ಆದ್ಯತೆ ನೀಡಿದ್ದು, ಸಮರೋಪಾದಿಯಲ್ಲಿ ಈ ಕಾರ್ಯ ನಡೆದಿದೆ. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಗುಬ್ಬಿ ತೋಟದಪ್ಪ ರಸ್ತೆ, ಎಚ್‌ಎಎಲ್ ವಿಮಾನ ನಿಲ್ದಾಣ ರಸ್ತೆ ಮತ್ತು ಓಕಳೀಪುರಂ ರಸ್ತೆ ಸೇರಿ ನಗರದ ವಿವಿಧ ರಸ್ತೆಗಳಿಗೆ ಡಾಂಬರೀಕರಣ ಮತ್ತು ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

‘ಗುಂಡಿಗಳನ್ನು ಮುಚ್ಚುವ ಕಾರ್ಯ ನಿಯಮಿತವಾಗಿ ನಡೆಯುತ್ತಿದೆ. ಅತಿ ಗಣ್ಯರು ಸಂಚರಿಸುವ ಮಾರ್ಗಗಳಲ್ಲಿ ರಸ್ತೆ ದುರಸ್ತಿ ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುತ್ತಿದೆ. ಪ್ರಧಾನಿ ಅವರು ಸಂಚರಿಸುವ ಎಚ್‌ಎಎಲ್‌, ಶಾಸಕರ ಭವನಕ್ಕೆ ತೆರಳುವ ಮಾರ್ಗಗಳು ಮತ್ತು ಕೆಎಸ್‌ಆರ್‌ ರೈಲ್ವೆ ನಿಲ್ದಾಣದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣದವರೆಗೆ ಮಾರ್ಗಗಳು ಬಹುತೇಕ ಉತ್ತಮ ಸ್ಥಿತಿಯಲ್ಲಿವೆ. ಆದರೂ, ಗುಂಡಿಗಳಿದ್ದರೆ ತಕ್ಷಣವೇ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಗೊಳ್ಳಿ ರಾಯಣ್ಣ ವೃತ್ತದಿಂದಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಹಿಂದಿನ ಗೇಟ್‌ಗೆ ತೆರಳಲು ರಸ್ತೆ ನಿರ್ಮಿಸುವ ಕಾರ್ಯವೂ ಭರದಿಂದ ಸಾಗಿದೆ. ಎರಡನೇ ಗೇಟ್‌ಗೆ ತೆರಳುವ ಮಾರ್ಗವನ್ನು ನಿರ್ಮಿಸುವ ಕಾರ್ಯ ಸಹ ನಡೆಯುತ್ತಿದೆ. ಸದ್ಯ, ವಾಹನ ಸವಾರರು ಒಕಳಿಪುರಂ ಜಂಕ್ಷನ್‌ನ ಕೆಳಸೇತುವೆ ಮೂಲಕ ಸಾಗಿ ಎಡಕ್ಕೆ ತಿರುಗಬೇಕಾಗಿದೆ.

ಪ್ರಧಾನಿ ಅವರು ಕೆಎಸ್‌ಆರ್‌ ರೈಲ್ವೆ ನಿಲ್ದಾಣದಿಂದ ವಂದೇ ಭಾರತ್ ಎಕ್ಸ್‌ಪ್ರೆಸ್‌ ಮತ್ತು ಭಾರತ್‌ ಗೌರವ್‌ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ.

ಜೂನ್‌ ತಿಂಗಳಲ್ಲಿ ಪ್ರಧಾನಿ ಅವರು ನಗರಕ್ಕೆ ಭೇಟಿ ನೀಡಿದ್ದಾಗ ಬಿಬಿಎಂಪಿ 14 ಕಿ.ಮೀ. ರಸ್ತೆ ದುರಸ್ತಿಗೆ ₹23 ಕೋಟಿಯಷ್ಟು ವೆಚ್ಚ ಮಾಡಿತ್ತು.

ಎಲ್ಲ ವಲಯಗಳ ಮುಖ್ಯ ಎಂಜಿನಿಯರ್‌ಗಳ ಸಭೆ ನಡೆಸಿರುವ ಮುಖ್ಯ ಆಯುಕ್ತರು, ನ.15ರ ಒಳಗೆ ನಗರದಲ್ಲಿನ ಎಲ್ಲ ಗುಂಡಿಗಳನ್ನು ಮುಚ್ಚಲು ಗಡುವು ನೀಡಿದ್ದಾರೆ.

’ನಗರದ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗಿದೆ.ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಗರದಲ್ಲಿ ಸಾಗುವ ಮಾರ್ಗಗಳಲ್ಲಿ ಬ್ಯಾರಿಕೇಡ್ ಸೇರಿ ಸುರಕ್ಷತಾ ಕ್ರಮ ಅಳವಡಿಸಲು ಕೈಗೊಳ್ಳಲಾಗಿದೆ’ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಿಳಿಸಿದ್ದಾರೆ.

ಶೇ 92ರಷ್ಟು ಗುಂಡಿಗಳನ್ನು ಮುಚ್ಚಲಾಗಿದೆ: ಬಿಬಿಎಂಪಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ವರಿತವಾಗಿ ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತಿದೆ. ಈಗಾಗಲೇ ಶೇ 92ರಷ್ಟು ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

ಮುಖ್ಯ ಆಯಕ್ತ ತುಷಾರ್ ಗಿರಿನಾಥ್ ಅವರು ವಿವಿಧ ವಲಯಗಳಿಗೆ ಭೇಟಿ ನೀಡಿ ನಿರಂತರವಾಗಿ ರಸ್ತೆಗುಂಡಿಗಳನ್ನು ಮುಚ್ಚುತ್ತಿರುವ ಕಾರ್ಯ ಹಾಗೂ ಪಾದಚಾರಿ ಒತ್ತುವರಿ ತೆರವು ತಪಾಸಣೆಯನ್ನು ನಡೆಸುತ್ತಿದ್ದಾರೆ. ಅಲ್ಲದೆ ಆಯಾ ವಲಯ ವ್ಯಾಪ್ತಿಯಲ್ಲಿ ವಲಯ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಪ್ರತಿನಿತ್ಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇರುವ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT