ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಾಕಿ’ ಪಡೆಯಿಂದ ‘ಜುಂಬಾ’ ನೃತ್ಯ!

ಒತ್ತಡ ನಿವಾರಣೆಗೆ ಕುಣಿದು ಸಂಭ್ರಮಿಸಿದ ಪೊಲೀಸ್ ಅಧಿಕಾರಿ, ಸಿಬ್ಬಂದಿ
Last Updated 20 ಫೆಬ್ರುವರಿ 2020, 23:00 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿನಿತ್ಯ ಕರ್ತವ್ಯದ ಜಂಜಾಟ– ಒತ್ತಡದಿಂದ ಸುಸ್ತು ಹೊಡೆಯುವ ‘ಖಾಕಿ’ ಪಡೆಯಲ್ಲಿ ನವ ಚೈತನ್ಯ ಮೂಡಿಸಲು ಮುಂದಾಗಿರುವ ನಗರ ಪೊಲೀಸ್‌ ಕಮಿಷನರ್‌ ಭಾಸ್ಕರ ರಾವ್‌, ಈಶಾನ್ಯ ವಿಭಾಗದ ಪೊಲೀಸರಿಂದ ‘ಜುಂಬಾ’ ನೃತ್ಯ ಮಾಡಿಸಿದರು!

‘ಮೈಂಡ್ ಪಾರ್ಕರ್’ ಸಹಯೋಗದಲ್ಲಿ ನಾಗವಾರ ವರ್ತುಲ ರಸ್ತೆಯ ಮಾನ್ಯತಾ ಟೆಕ್‍ ಪಾರ್ಕ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಈಶಾನ್ಯ ವಿಭಾಗದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಒಟ್ಟು 900 ಮಂದಿ ಭಾಗವಹಿಸಿದರು.

ಪೊಲೀಸ್‌ ಸಿಬ್ಬಂದಿ ತಲಾ 300 ಮಂದಿಯ ಮೂರು ಪ್ರತ್ಯೇಕ ತಂಡಗಳಲ್ಲಿ ನರ್ತಿಸಿ, ಸಂಭ್ರಮಿಸಿದರು. ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಕ್ಕೆ ನಟ ಪುನೀತ್ ರಾಜ್‍ಕುಮಾರ್, ಭಾಸ್ಕರ್ ರಾವ್ ಚಾಲನೆ ನೀಡಿದರು. ‘ಇದು ಚರಿತ್ರೆ ಸೃಷ್ಟಿಸೋ ಅವತಾರ...’ ಸೇರಿದಂತೆ ಹಲವು ಹಾಡುಗಳಿಗೆ ಖಾಕಿ ಪಡೆ ಭರ್ಜರಿ ಹೆಜ್ಜೆ ಹಾಕಿ ಖುಷಿಪಟ್ಟಿತು.

‘ಪ್ರತಿಭಟನೆ, ಸಮಾವೇಶ, ಅಪರಾಧ ಪತ್ತೆ, ಗಸ್ತು ಸೇರಿದಂತೆ ಸದಾ ನಿರಂತರ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವ ಪೊಲೀಸರಲ್ಲಿ ಹುಮ್ಮಸ್ಸು ಮೂಡಿಸಲು ಜುಂಬಾ ಡ್ಯಾನ್ಸ್ ನೆರವಾಗಲಿದೆ. ಈ ನೃತ್ಯ ಮಾಡುವವರ ಒತ್ತಡ ದೂರವಾಗಲಿದ್ದು, ನಿತ್ಯದ ಕೆಲಸ
ಗಳಲ್ಲಿ ಗಮನ ಕೇಂದ್ರೀಕರಿಸಲು ಸಾಧ್ಯವಾಗಲಿದೆ’ ಎಂದು ಭಾಸ್ಕರ್‍ ರಾವ್ ಹೇಳಿದರು.

ಪುನೀತ್ ರಾಜ್‍ಕುಮಾರ್, ‘ನಾವು ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿಗಳ ಪಾತ್ರ ನಿರ್ವಹಿಸುತ್ತೇವೆ. ಅದೇನಿದ್ದರೂ ನಟನೆ. ಪೊಲೀಸರು ನಿಜವಾದ ಹೀರೊಗಳು. ಕಳವು ಸೇರಿದಂತೆ ವಿವಿಧ ಪ್ರಕರಣಗಳನ್ನು ಪತ್ತೆ ಮಾಡಿ ವಸ್ತುಗಳನ್ನು ಕಳೆದುಕೊಂಡವರಿಗೆ ಮರಳಿಸುತ್ತಾರೆ. ಅದರಿಂದ ಜನರಿಗೆ ಸಾಕಷ್ಟು ಖುಷಿಯಾಗುತ್ತದೆ. ಅಲ್ಲದೆ, ಅಪರಾಧ ಕೃತ್ಯಗಳು ನಡೆದಾಗ ಮುಂಚೂಣಿಯಲ್ಲಿ ನಿಂತು ಅವುಗಳನ್ನು ಪತ್ತೆ ಮಾಡುತ್ತಾರೆ. ಹೀಗಾಗಿ, ಪೊಲೀಸರಿಗೆ ನಾವು ಗೌರವ ನೀಡಬೇಕು’ ಎಂದರು.

‘ತಿಂಗಳ ಪೊಲೀಸ್‌’ ಬಹುಮಾನ
ಅತ್ಯುತ್ತಮ ಉತ್ತಮ ಕೆಲಸ ಮಾಡಿದ ಪೊಲೀಸ್‌ ಅಧಿಕಾರಿಗಳಿಗೆ ಪುನೀತ್ ರಾಜ್‍ಕುಮಾರ್ ‘ತಿಂಗಳ ಪೊಲೀಸ್ ಬಹುಮಾನ’ ನೀಡಿ ಗೌರವಿಸಿದರು.

ಬಾಗಲೂರು ಠಾಣೆ ಇನ್‌ಸ್ಪೆಕ್ಟರ್ ರಾಮಮೂರ್ತಿ, ದೇವನಹಳ್ಳಿಯ ಮುತ್ತುರಾಜು, ಸಂಪಿಗೆಹಳ್ಳಿಯ ಬಿ.ಎಸ್. ನಂದಕುಮಾರ್, ಯಲಹಂಕ ಉಪನಗರದ ವಿ. ಅನಿಲ್ ಕುಮಾರ್ ಮತ್ತು ಕೊಡಿಗೇಹಳ್ಳಿಯ ಚೇತನ್‍ ಕುಮಾರ್ ಅವರಿಗೆ ‘ಕಾಪ್ ಆಫ್‍ದ ಮಂಥ್’ ಬಹುಮಾನ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT