ಬೆಂಗಳೂರು: ಅಪ್ರಾಪ್ತರಿಗೆ ಮದ್ಯ ಹಾಗೂ ತಂಬಾಕು ಉತ್ಪನ್ನ ಮಾರುತ್ತಿದ್ದ ಮಾಹಿತಿ ಮೇರೆಗೆ ನಗರದ 633 ಸ್ಥಳಗಳ ಮೇಲೆ ಪೊಲೀಸರು ದಾಳಿ ಮಾಡಿದ್ದು, ನಿಯಮ ಉಲ್ಲಂಘನೆ ಆರೋಪದಡಿ 136 ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಪಬ್ ಸೇರಿದಂತೆ 633 ಸ್ಥಳಗಳ ಮೇಲೆ ಶನಿವಾರ ಹಾಗೂ ಭಾನುವಾರ ದಾಳಿ ಮಾಡಿ ಪರಿಶೀಲಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘18 ವರ್ಷ ಒಳಗಿನ ಮಕ್ಕಳಿಗೆ ಹಲವೆಡೆ ತಂಬಾಕು ಉತ್ಪನ್ನ ಹಾಗೂ ಮದ್ಯವನ್ನು ಮಾರಲಾಗುತ್ತಿದೆ. ಇದರಿಂದಾಗಿ ಶಾಲೆ ವಿದ್ಯಾರ್ಥಿಗಳು ದುಶ್ಚಟಕ್ಕೆ ದಾಸರಾಗುತ್ತಿದ್ದಾರೆ. ಈ ಬಗ್ಗೆ ಪೋಷಕರು ಹಾಗೂ ಶಾಲಾ ಶಿಕ್ಷಕರು, ನಿರಂತರವಾಗಿ ದೂರು ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ಪ್ರತ್ಯೇಕ ತಂಡಗಳನ್ನು ರಚಿಸಿ, ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದರು.
‘ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಇಂದಿರಾನಗರ, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್, ಎಂ.ಜಿ.ರಸ್ತೆ ಹಾಗೂ ಇತರೆ ಪ್ರದೇಶಗಳಲ್ಲಿರುವ 633 ಸ್ಥಳಗಳಲ್ಲಿ ಶೋಧ ನಡೆಸಲಾಯಿತು. ಬಹುತೇಕ ಕಡೆ ಅಪ್ರಾಪ್ತರಿಗೆ ಪ್ರವೇಶ ನೀಡಿದ್ದು ಕಂಡುಬಂತು. ಅವರಿಗೆ ಮದ್ಯ ಹಾಗೂ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವುದು ಪತ್ತೆಯಾಯಿತು’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
‘ನಿಯಮ ಉಲ್ಲಂಘಿಸಿದ್ದವರ ವಿರುದ್ದ ಐಪಿಸಿ, ಬಾಲ ನ್ಯಾಯ ಕಾಯ್ದೆ, ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನಿರ್ಬಂಧಿತ ಸ್ಥಳಗಳಲ್ಲಿ ಧೂಮಪಾನ ಮಾಡಿದ್ದ ಸಂಬಂಧ 2,426 ಲಘು ಪ್ರಕರಣಗಳನ್ನು ಪ್ರತ್ಯೇಕವಾಗಿ ದಾಖಲಿಸಿಕೊಳ್ಳಲಾಗಿದ್ದು, ತಪ್ಪಿತಸ್ಥರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗಿದೆ. ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ’ ಎಂದರು.
‘ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಪಬ್ ಸೇರಿದಂತೆ ವಿವಿಧ ಸ್ಥಳಗಳ ಕೆಲ ಮಾಲೀಕರು ಹಾಗೂ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. ಪದೇ ಪದೇ ನಿಯಮ ಉಲ್ಲಂಘನೆ ಮಾಡುವುದು ಕಂಡುಬಂದರೆ, ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ’ ಎಂದು ಅಧಿಕಾರಿ ಹೇಳಿದರು.
ಧೂಮಪಾನದ ವಿರುದ್ಧ ಕ್ರಮ: ‘ಸಾರ್ವಜನಿಕ ಸ್ಥಳ ಹಾಗೂ ನಿರ್ಬಂಧಿತ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಶಾಲೆ ಅಕ್ಕ–ಪಕ್ಕದಲ್ಲೂ ತಂಬಾಕು ಉತ್ಪನ್ನ ಮಾರಾಟ ನಿರ್ಬಂಧಿಸಲಾಗಿದೆ. ಯಾರಾದರೂ ಈ ನಿಯಮ ಉಲ್ಲಂಘಿಸಿದರೆ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.