ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯದ ಅಬ್ಬರ ಬೊಬ್ಬಿಡುತ್ತಿದೆ ಪೀಣ್ಯ

ಇನ್ನೂ ಸಿಗದ ಮೂಲಸೌಕರ್ಯ: ಕಾರ್ಮಿಕರ ಅರಣ್ಯ ರೋದನ
Last Updated 8 ಸೆಪ್ಟೆಂಬರ್ 2019, 20:18 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆಯಲ್ಲೇ ರಾಶಿ ಬಿದ್ದಿರುವ ಕಸ, ಅದರಲ್ಲಿ ಹಂದಿ–ನಾಯಿಗಳ ಜಂಗಿ ಕುಸ್ತಿ, ಎಲ್ಲಿ ನೋಡಿದರೂ ದೂಳು ಮತ್ತು ಹೊಗೆಯ ಅಬ್ಬರ, ಉಸಿರು ಬಿಗಿ ಹಿಡಿದರೂ ಬಾಯಿಗೆ ತುಂಬಿಕೊಳ್ಳುವ ದೂಳಿನ ಕಣಗಳು... ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕಂಡುಬರುವ ವಾತಾವರಣವಿದು.

ದಕ್ಷಿಣ ಏಷ್ಯಾದಲ್ಲಿನ ಅತೀ ದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾದ ಈ ಕೈಗಾರಿಕಾ ಪ್ರದೇಶ 45 ಚದರ ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಇಲ್ಲಿರುವ 10 ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳಲ್ಲಿ 12 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಬದುಕು ಕಂಡುಕೊಂಡಿದ್ದಾರೆ.

ಸರ್ಕಾರದ ಬೊಕ್ಕಸಕ್ಕೆ ಭಾರಿ ಕೊಡುಗೆ ನೀಡುತ್ತಿರುವ ಈ ಪ್ರದೇಶದಲ್ಲಿ ರಸ್ತೆ ಸೇರಿದಂತೆ ಸುಸಜ್ಜಿತ ಮೂಲಸೌಕರ್ಯ ಮರೀಚಿಕೆಯಾಗಿದೆ. ಕಾರ್ಖಾನೆಗಳಲ್ಲಿನ ಸರಕು ಸಾಗಿಸಲು ನಿತ್ಯ ನೂರಾರು ದೊಡ್ಡ ಲಾರಿಗಳು, ಬಿಎಂಟಿಸಿ ಬಸ್‌ಗಳು ಇಲ್ಲಿಗೆ ಬಂದು ಹೋಗುತ್ತವೆ. ಕಿರಿದಾದ ರಸ್ತೆಯಲ್ಲಿ ಲಾರಿ ಅಥವಾ ಬಸ್‌ ಬಂದರೆ ಬೇರೆ ವಾಹನಗಳಿಗೆ ಜಾಗವೇ ಇಲ್ಲವಾಗುತ್ತದೆ. ಗುಂಡಿ ಬಿದ್ದಿರುವ ರಸ್ತೆಗಳು ಡಾಂಬರು ಕಂಡು ವರ್ಷಗಳೇ ಕಳೆದಿವೆ.

ಈ ಪ್ರದೇಶದ ಯಾವುದೇ ರಸ್ತೆಯಲ್ಲಿ ಅಡ್ಡಾಡಿದರೂ ದೂಳಿನ ಸ್ನಾನ ತಪ್ಪಿಸಿಕೊಳ್ಳಲಾಗದು. ಕಾರ್ಖಾನೆಗಳು ಮತ್ತು ವಾಹನಗಳು ಉಗುಳುವ ಹೊಗೆಯಲ್ಲಿರುವ ದೂಳಿನ ಕಣಗಳು ಉಸಿರಿನೊಂದಿಗೆ ಶ್ವಾಸಕೋಶವನ್ನು ಸೇರಿಕೊಳ್ಳುತ್ತಿವೆ. ಮೂಗು ಮತ್ತು ಬಾಯಿಗೆ ಬಟ್ಟೆ ಕಟ್ಟಿಕೊಂಡರೂ ದೂಳಿನ ಕಣಗಳು ದೇಹ ಸೇರುವುದನ್ನು ತಪ್ಪಿಸುವುದು ಕಷ್ಟ. ಕಣ್ಣಿಗೆ ನುಗ್ಗುವ ದೂಳನ್ನು ತಡೆಯಲು ಆಗುವುದಿಲ್ಲ. ಇಲ್ಲಿ ಸಾಗುವ ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳ ತೀರದು. ‘ಈ ದೂಳು ಏನೆಲ್ಲಾ ರೋಗಗಳನ್ನು ತಂದೊಡ್ಡುತ್ತದೆಯೋ ಗೊತ್ತಿಲ್ಲ’ ಎನ್ನುತ್ತಾರೆ ಬೈಕ್ ಸವಾರರು.

ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ವರದಿಯ ಪ್ರಕಾರ ಬೆಂಗಳೂರಿನಲ್ಲೇ ಅತೀ ಹೆಚ್ಚು ವಾಯು ಮಾಲಿನ್ಯ ಇರುವ ಪ್ರದೇಶ ಇದು. ವಿಪರೀತ ವಾಯು ಮಾಲಿನ್ಯದಿಂದಾಗಿ ಇಲ್ಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.

ತಿಗಳರಪಾಳ್ಯ ಕೆರೆಯಲ್ಲಿ ತುಂಬಿರುವ ತ್ಯಾಜ್ಯ
ತಿಗಳರಪಾಳ್ಯ ಕೆರೆಯಲ್ಲಿ ತುಂಬಿರುವ ತ್ಯಾಜ್ಯ

ಕೆರೆಗಳೂ ಮಲಿನ: ಇನ್ನು ಕಾರ್ಖಾನೆಗಳು ಹೊರ ಸೂಸುವ ತ್ಯಾಜ್ಯಗಳು ಕೆರೆಗಳನ್ನು ಸೇರಿಕೊಳ್ಳುತ್ತಿವೆ. ಪ್ಲಾಸ್ಟಿಕ್ ಮಿಶ್ರಿತ ಕಸ, ಕಟ್ಟಡದ ಅವಶೇಷಗಳೂ ಜಲಕಾಯಗಳ ಒಡಲು ತುಂಬುತ್ತಿವೆ. ‌

‌ನೆಲಗದರಹಳ್ಳಿ ಕೆರೆ ಅತೀ ಹೆಚ್ಚು ಮಲೀನ ಗೊಂಡಿದೆ. ಮಿಶ್ರಲೋಹ, ಸತು, ನೈಟ್ರೇಟ್‌ನಂತಹ ವಿಷಕಾರಿ ರಾಸಾಯನಿಕಗಳೂ ಈ ಕೆರೆಯನ್ನು ಸೇರುತ್ತಿವೆ. ಈ ರಾಸಾಯನಿಕಗಳು ಬೆಳ್ಳಂದೂರು ಕೆರೆಯಂತೆ ಕಾಣಿಸಿಕೊಳ್ಳುವಂತಹ ಬಿಳಿ ನೊರೆಯನ್ನು ಉತ್ಪತ್ತಿ ಮಾಡುವುದಿಲ್ಲ. ಆದರೆ, ದುರ್ವಾಸನೆ ಹೆಚ್ಚು ಎನ್ನುತ್ತಾರೆ ಸ್ಥಳೀಯರು. ತಿಗಳರಪಾಳ್ಯ, ನಾಗಸಂದ್ರ, ಅಂದ್ರಹಳ್ಳಿ ಕರಿವೋಬನಹಳ್ಳಿ, ಶಿವಪುರ ಕೆರೆಗಳ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ.

ಪಾದಚಾರಿ ಮಾರ್ಗವೇ ಶೌಚಾಲಯ
ಪಾದಚಾರಿ ಮಾರ್ಗವೇ ಶೌಚಾಲಯ

ರಸ್ತೆಯೇ ನಿಲ್ದಾಣ; ಫುಟ್‌ಪಾತೇ ಶೌಚಾಲಯ!
ಪೀಣ್ಯ ಎರಡನೇ ಹಂತದ ಜಂಕ್ಷನ್ ಈ ಕೈಗಾರಿಕಾ ಪ್ರದೇಶದಲ್ಲೇ ಅತೀ ಹೆಚ್ಚು ಜನ ದಟ್ಟಣೆಯ ಜಾಗ. ನಗರದ ವಿವಿಧೆಡೆಯಿಂದ ಪ್ರತಿನಿತ್ಯ 110 ಬಿಎಂಟಿಸಿ ಬಸ್‌ಗಳು ಇಲ್ಲಿಗೆ ಬಂದು ಹೋಗುತ್ತವೆ. ಆದರೆ, ಇಲ್ಲಿ ರಸ್ತೆಯೇ ಬಸ್ ನಿಲ್ದಾಣ.

ರಸ್ತೆಯಲ್ಲೇ ಅಡ್ಡಾದಿಟ್ಟಿಯಾಗಿ ಬಸ್‌ಗಳು ನಿಲ್ಲುತ್ತವೆ. ಬೇರೆ ವಾಹನಗಳು ಬಿಡಿ, ಬೆಳಿಗ್ಗೆ ಮತ್ತು ಸಂಜೆ ಜನ ದಟ್ಟಣೆ ಹೆಚ್ಚಿರುವಾಗ ಪಾದಚಾರಿಗಳ ಇಲ್ಲಿ ಓಡಾಡುವುದೇ ಕಷ್ಟ. ಪಾದಚಾರಿ ಮಾರ್ಗದ ಮೇಲೆಯೇ ಇರುವ ‌ಬಿಎಂಟಿಸಿಯ ಸಂಚಾರ ನಿಯಂತ್ರಣಾಧಿಕಾರಿಯ(ಟಿ.ಸಿ) ತಗಡಿನ ಕೊಠಡಿಗೆ ಬೀಗ ಬಿದ್ದು ಅದೆಷ್ಟೋ ದಿನಗಳಾಗಿವೆ. ರಸ್ತೆ ಬದಿಯ ಮರದ ಕೆಳಗೆ ಕುರ್ಚಿ ಹಾಕಿ ಟಿ.ಸಿ ಕುಳಿತುಕೊಳ್ಳುತ್ತಾರೆ.

ಇನ್ನೊಂದು ಬದಿಯಲ್ಲಿರುವ ಫುಟ್‌ಪಾತ್‌ ಶೌಚಾಲಯದಂತೆ ಬಳಕೆಯಾಗುತ್ತಿದೆ. ರಸ್ತೆಯಲ್ಲಿ ಮಹಿಳೆಯರು, ಮಕ್ಕಳು ಓಡಾಡುತ್ತಿದ್ದರೂ ಚಾಲಕರು– ನಿರ್ವಾಹಕರು, ಪ್ರಯಾಣಿಕರು ಫುಟ್‌ಪಾತ್‌ನಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ದುರ್ವಾಸನೆ ನಡುವೆ ಜನ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ.

‘ಪಕ್ಕದಲ್ಲೇ ಸಾರ್ವಜನಿಕ ಶೌಚಾಲಯ ಇದೆ. ಇಲ್ಲಿ ₹5ರಿಂದ ₹10 ಪಾವತಿಸಬೇಕು. ಹೀಗಾಗಿ, ಪಾದಚಾರಿ ಮಾರ್ಗವನ್ನೇ ಜನ ಶೌಚಾಲಯ ಮಾಡಿಕೊಂಡಿದ್ದಾರೆ’ ಎಂದು ಎಳನೀರು ವ್ಯಾಪಾರಿ ಯೋಗೇಶ್ ಹೇಳುತ್ತಾರೆ.

ತಿಗಳರಪಾಳ್ಯ ಮುಖ್ಯ ರಸ್ತೆ ಬದಿ ಬಿದ್ದಿರುವ ಕಸದ ರಾಶಿಯಲ್ಲಿ ಆಹಾರ ಹುಡುಕುತ್ತಿರುವ ಹಂದಿಗಳು
ತಿಗಳರಪಾಳ್ಯ ಮುಖ್ಯ ರಸ್ತೆ ಬದಿ ಬಿದ್ದಿರುವ ಕಸದ ರಾಶಿಯಲ್ಲಿ ಆಹಾರ ಹುಡುಕುತ್ತಿರುವ ಹಂದಿಗಳು

ಕಣ್ಣು ಹಾಯಿಸಿದಲ್ಲೆಲ್ಲ ಕಸದ ರಾಶಿ
ಕೈಗಾರಿಕಾ ಪ್ರದೇಶದಲ್ಲಿ ಕಸ ನಿರ್ವಹಣೆ ಎಲ್ಲೂ ಸಮರ್ಪಕವಾಗಿ ನಡೆಯುತ್ತಿಲ್ಲ. ರಸ್ತೆ ಬದಿಯಲ್ಲೇ ಕಸ ಅಲ್ಲಲ್ಲಿ ರಾಶಿ ಬಿದ್ದಿದೆ.

ರಸ್ತೆ ಬದಿಯ ಖಾಲಿ ಜಾಗ ಮತ್ತು ರಾಜಕಾಲುವೆಗಳು ತಿಪ್ಪೆಗುಂಡಿಯಾಗಿ ಮಾರ್ಪಟ್ಟಿವೆ. ಅವುಗಳಲ್ಲಿ ಬಿದ್ದಿರುವ ರಾಶಿ ನೋಡಿದರೆ ಬಿಬಿಎಂಪಿಯ ಪೌರ ಕಾರ್ಮಿಕರಾಗಲೀ, ಅಧಿಕಾರಿಗಳಾಗಲೀ ಇತ್ತ ಕಾಲಿಟ್ಟಂತೆ ಕಾಣುವುದಿಲ್ಲ.

ತಿಗಳರಪಾಳ್ಯ ಮುಖ್ಯ ರಸ್ತೆಯಲ್ಲಿನ ರಾಜಕಾಲುವೆ ಪಕ್ಕದಲ್ಲಿ ಸುರಿದಿರುವ ಕಸದ ರಾಶಿಯು ಹಂದಿಗಳ ಆವಾಸಸ್ಥಾನವಾಗಿದೆ. ಆಹಾರ ಹುಡುಕುವ ಹಂದಿಗಳು ಕಸವನ್ನು ರಸ್ತೆಗೆ ತಳ್ಳುತ್ತವೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.

ಕತ್ತಲಾದರೆ ಕಳ್ಳರ ಕಾಟ
ಹಗಲಿಡಿ ಜನ ಜಂಗುಳಿ ಇರುವ ಈ ಕೈಗಾರಿಕಾ ಪ್ರದೇಶ ರಾತ್ರಿ ಕಗ್ಗತ್ತಲಿನಲ್ಲಿ ಮುಳುಗುತ್ತದೆ. ಬೀದಿ ದೀಪಗಳಿಲ್ಲದ ರಸ್ತೆಯಲ್ಲಿ ಸಂಚರಿಸಲು ಜನ ಭಯಪಡುತ್ತಾರೆ.

‘ಪೀಣ್ಯ, ಹೆಗ್ಗನಹಳ್ಳಿ ಮುಖ್ಯ ರಸ್ತೆಯಲ್ಲಿ ರಾತ್ರಿ ಓಡಾಡಲು ಬೈಕ್ ಸವಾರರು ಹೆದರುತ್ತಾರೆ. ಏಕಾಂಗಿಯಾಗಿ ಹೋದರೆ ಬೈಕ್ ಅಡ್ಡಗಟ್ಟುವ ಕಳ್ಳರ ಗುಂಪು ಸುಲಿಗೆ ಮಾಡುತ್ತದೆ’ ಎಂದು ಹೆಗ್ಗನಹಳ್ಳಿ ನಿವಾಸಿ ಮಹೇಶ್ ಹೇಳುತ್ತಾರೆ.

‘ಇನ್ನು ಕೈಗಾರಿಕಾ ಪ್ರದೇಶದ ಒಳ ರಸ್ತೆಗಳಲ್ಲಿ ಬೀದಿ ದೀಪಗಳು ಇಲ್ಲದ ಕಾರಣ ಸಂಜೆ ನಂತರ ಯಾರೊಬ್ಬರೂ ಓಡಾಡುವುದಿಲ್ಲ’ ಎಂದು ಅವರು ತಿಳಿಸಿದರು.

‘ಮಂಜೂರಾದ ಅನುದಾನ ಕಿತ್ತುಕೊಂಡರು’
‘ಪೀಣ್ಯ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ₹40 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಮೈತ್ರಿ ಸರ್ಕಾರ ಅನುದಾನ ಕೊಟ್ಟಿತ್ತು. ಆದರೆ, ಈಗಿನ ಸರ್ಕಾರ ಕಿತ್ತುಕೊಂಡಿದೆ’ ಎಂದು ಶಾಸಕ ಆರ್. ಮಂಜುನಾಥ್ ಆರೋಪಿಸಿದರು.

‘ಕೆಲ ರಸ್ತೆಗಳನ್ನು ವಿಸ್ತರಿಸಬೇಕಿದ್ದು, ಇನ್ನೂ ಕೆಲವಕ್ಕೆ ಡಾಂಬರು ಹಾಕಬೇಕಿದೆ. ಬೀದಿ ದೀಪ ಸೇರಿದಂತೆ ಮೂಲಸೌಕರ್ಯ ಕಾಮಗಾರಿಗಳನ್ನು ನವ ಬೆಂಗಳೂರು ಯೋಜನೆಯಡಿ ಕೈಗೊಳ್ಳಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಈ ಅನುದಾನವನ್ನು ಬಿಜೆ‍ಪಿ ಸರ್ಕಾರ ತಡೆ ಹಿಡಿದಿದೆ’ ಎಂದು ಹೇಳಿದರು.

‘ಹೊಸ ಸರ್ಕಾರ ಬಂದ ನಂತರ ವಿರೋಧ ಪಕ್ಷದ ಶಾಸಕರಿಗೆ ಅನುದಾನ ಕಡಿಮೆ ಮಾಡಿದೆ. ಈ ಪ್ರದೇಶದಲ್ಲಿ ಜೆಡಿಎಸ್ ಪಕ್ಷದವರು ಮಾತ್ರ ವಾಸ ಮಾಡುತ್ತಿಲ್ಲ. 8ರಿಂದ 10 ಜಿಲ್ಲೆಯ ಬಡವರು ಉದ್ಯೋಗ ಅರಸಿ ಬಂದು ಇಲ್ಲೇ ನೆಲೆಸಿದ್ದಾರೆ. ಅವರಿಗೆ ಮೂಲಸೌಕರ್ಯ ಒದಗಿಸಲು ನಿಗದಿಯಾಗಿದ್ದ ಹಣ ವಾಪಸ್ ಪಡೆಯಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

*

ಕೈಗಾರಿಕಾ ಪ್ರದೇಶಕ್ಕೆ ರಸ್ತೆ, ಬೀದಿ ದೀಪ ಮುಂತಾದ ಅಗತ್ಯ ಇರುವ ಮೂಲಸೌಕರ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.
-ಎಂ.ಎಂ. ಗಿರಿ, ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ

*
ಕೈಗಾರಿಕಾ ಪ್ರದೇಶದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕಸ ನಿರ್ವಹಣೆಯೂ ಸಮರ್ಪಕವಾಗಿಲ್ಲ, ಬೀದಿ ದೀಪಗಳೂ ಇಲ್ಲ
–ಮಲ್ಯಾದ್ರಿ ರೆಡ್ಡಿ, ಪೀಣ್ಯ ಕೈಗಾರಿಕಾ ಸಂಘದ ನಿಕಟಪೂರ್ವ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT