ಶನಿವಾರ, ಮಾರ್ಚ್ 28, 2020
19 °C

ರಸ್ತೆ ಗುಂಡಿ ಅಪಘಾತ ಪರಿಹಾರದ ವಿವರ ನೀಡದ ಪಾಲಿಕೆ ಮೇಲೆ ಮುಗಿಬಿದ್ದ ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೈಕೋರ್ಟ್‌ ಆದೇಶ ಪಾಲನೆ ಮಾಡದೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಯುಕ್ತರು, ಮೇಯರ್‌, ಉಪ ಮೇಯರ್‌ ಮತ್ತು ವಿರೋಧ ಪಕ್ಷದ ನಾಯಕರ ಜೊತೆ ಸಭೆ ನಡೆಸಿದ ಕಾರ್ಯವೈಖರಿಯ ಬಗ್ಗೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮತ್ತೊಮ್ಮೆ ಕಿಡಿ ಕಾರಿದೆ.

‘ನಗರದಲ್ಲಿನ ರಸ್ತೆ ಗುಂಡಿಗಳಿಂದ ಸಾರ್ವಜನಿಕರು ಸಾವು–ನೋವುಗಳಿಗೆ ಈಡಾಗುತ್ತಿದ್ದಾರೆ’ ಎಂದು ಆಕ್ಷೇಪಿಸಿ ಕೋರಮಂಗಲದ ವಿಜಯನ್ ಮೆನನ್ ಸೇರಿದಂತೆ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌. ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘ಆಯುಕ್ತರಿಗೆ ಕೋರ್ಟ್ ಆದೇಶ ಧಿಕ್ಕರಿಸುವ ಯಾವುದೇ ಉದ್ದೇಶ ಇರಲಿಲ್ಲ. ಕೋರ್ಟ್ ಆದೇಶ ಪಾಲನೆಗೆ ನಿಯಮ ರೂಪಿಸಲು ಸಭೆ ನಡೆಸಲಾಗಿದೆ’ ಎಂದು ಸಮಜಾಯಿಷಿ ನೀಡಿದರು.

ಇದನ್ನು ಬಿಲ್‌ಕುಲ್‌ ಒಪ್ಪದ ಮುಖ್ಯ ನ್ಯಾಯಮೂರ್ತಿಗಳು, ‘2019ರ ಸೆಪ್ಟೆಂಬರ್‌ನಲ್ಲಿ ಕೋರ್ಟ್ ಹೊರಡಿಸಿದ ಆದೇಶ ಪಾಲಿಸುವ ವಿಚಾರವನ್ನು ಕೌನ್ಸಿಲ್ ಸಭೆಯಲ್ಲಿ ಮುಂದಿಡಲು ಸಭೆ ನಡೆಸಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಆಯುಕ್ತರೇ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಇದರಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.

‘ಕೋರ್ಟ್ ಆದೇಶದ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲು ನಿರ್ಣಯ ಕೈಗೊಂಡವರ ವಿವರಗಳನ್ನು ಇನ್ನೂ ಏಕೆ ಒದಗಿಸುತ್ತಿಲ್ಲ, ವಿವರಗಳನ್ನು ಒದಗಿಸುತ್ತಿರೋ ಇಲ್ಲವೇ ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳನ್ನು ನ್ಯಾಯಪೀಠದ ಮುಂದೆ ಖುದ್ದು ಹಾಜರುಪಡಿಸುತ್ತೀರೋ ಹೇಗೆ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಇನ್ನು ಮುಂದೆ ಕೋರ್ಟ್ ಆದೇಶದ ವಿರುದ್ಧ ನಿರ್ಧಾರ ಕೈಗೊಳ್ಳಲು ಇಂತಹ ಸಭೆಗಳನ್ನು ನಡೆಸುವುದಿಲ್ಲ ಎಂದು ಕ್ಷಮೆಯಾಚಿಸಿ ಅವರಿಂದಲೇ ಪ್ರಮಾಣಪತ್ರ ಸಲ್ಲಿಸಿದರೆ ಸರಿ. ಇಲ್ಲವಾದರೆ ಕೋರ್ಟ್‌ ಸೂಕ್ತ ಆದೇಶ ಹೊರಡಿಸುತ್ತದೆ’ ಎಂದು ಆಯುಕ್ತರಿಗೆ ತಾಕೀತು ಮಾಡಿ ವಿಚಾರಣೆಯನ್ನು ಫೆಬ್ರುವರಿ 4ಕ್ಕೆ ಮುಂದೂಡಿದರು.

ಏನದು ಆದೇಶ?: ‘ನಗರದ ರಸ್ತೆ ಗುಂಡಿಗಳಿಂದ ಉಂಟಾದ ಆಪಘಾತಗಳ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಈ ಸಂಬಂಧ ಜಾಹೀರಾತು ಪ್ರಕಟಣೆ ನೀಡಬೇಕು‘ ಎಂದು ಹೈಕೋರ್ಟ್‌, 2019ರ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿಗೆ ನಿರ್ದೇಶಿಸಿತ್ತು.

ಈ ಆದೇಶವನ್ನು ಪಾಲಿಸದ ಬಿಬಿಎಂಪಿ ಆಯುಕ್ತರು, ಮೇಯರ್, ಉಪ ಮೇಯರ್ ಮತ್ತು ವಿರೋಧ ಪಕ್ಷದ ನಾಯಕರ ಜೊತೆ ಸಭೆ ನಡೆಸಿದ್ದರು. ಈ ಕ್ರಮಕ್ಕೆ ವ್ಯಗ್ರವಾಗಿರುವ ನ್ಯಾಯಪೀಠ, ‘ಸಭೆಯಲ್ಲಿ ಭಾಗವಹಿಸಿದ್ದವರ ಹೆಸರು ಹಾಗೂ ವಿಳಾಸಗಳ ವಿವರ ಒದಗಿಸಿ’ ಎಂದು ಈ ಹಿಂದಿನ ವಿಚಾರಣೆ ವೇಳೆ ತಾಕೀತು ಮಾಡಿತ್ತು.

ನ್ಯಾಯಪೀಠದ ಪಟ್ಟು

‘ಕೋರ್ಟ್‌ ಆದೇಶದ ಬಗ್ಗೆ ಚರ್ಚೆ ನಡೆಸುವ ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳ ಹೆಸರುಗಳನ್ನು ಬಿಬಿಎಂಪಿ ಆಯುಕ್ತರು ಕೋರ್ಟ್‌ಗೆ ತಿಳಿಸಬೇಕು’ ಎಂದು ನ್ಯಾಯಪೀಠ ಪಟ್ಟು ಹಿಡಿದಿದೆ.

‘ಒಂದೊಮ್ಮೆ ಅವರು ಕೋರ್ಟ್‌ಗೆ ಹಾಜರಾಗಬಾರದು ಎಂಬುದು ನಿಮ್ಮ ಭಾವನೆಯಾಗಿದ್ದರೆ, ಈ ವಿಚಾರದಲ್ಲಿ ನೀವೇ ತಪ್ಪಿತಸ್ಥರು ಎಂಬುದಾಗಿ ಒಪ್ಪಿಕೊಳ್ಳಬೇಕು’ ಎಂದು ಬಿಬಿಎಂಪಿ ಪರ ವಕೀಲರಿಗೆ ಸೂಚಿಸಿದೆ.

ಆಯುಕ್ತರು ಅನಕ್ಷರಸ್ಥರೇ, ಕೋರ್ಟ್‌ ಆದೇಶ ಸರಿ ಇಲ್ಲ ಎನಿಸಿದರೆ, ಅದನ್ನು ಪ್ರಶ್ನಿಸಬಹುದಾಗಿತ್ತು. ಅದುಬಿಟ್ಟು ಆದೇಶವನ್ನೇ ಧಿಕ್ಕರಿಸಿದರೆ ಸಹಿಸಲಾಗುವುದಿಲ್ಲ

- ಅಭಯ್‌ ಎಸ್‌.ಓಕಾ, ಮುಖ್ಯ ನ್ಯಾಯಮೂರ್ತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು