ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಮನಸ್ಸುಗಳಿಗೆ ಜಗತ್ತು ಬದಲಿಸುವ ಶಕ್ತಿಯಿದೆ

‘ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿದ್ದ ಕ್ಯಾನ್ಸರ್‌ ಜಾಗೃತಿ ವೆಬಿನಾರ್‌ನಲ್ಲಿ ವೈದ್ಯ ಸೋಮಶೇಖರ್‌ ಹೇಳಿಕೆ
Last Updated 15 ಫೆಬ್ರುವರಿ 2021, 22:04 IST
ಅಕ್ಷರ ಗಾತ್ರ

ಬೆಂಗಳೂರು: ‘ಜಗತ್ತನ್ನು ಬದಲಿಸುವ ಶಕ್ತಿ ಯುವ ಮನಸ್ಸುಗಳಿಗಿದೆ. ಈಗಿನ ಮಕ್ಕಳು ಬೌದ್ಧಿಕವಾಗಿ ಸದೃಢರಾಗಿದ್ದಾರೆ. ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸಲು ಅವರು ಮುಂದಾಗಬೇಕು’ ಎಂದು ಮಣಿಪಾಲ್‌ ಆಸ್ಪತ್ರೆಗಳ ಸಮೂಹದ ಶಸ್ತ್ರಚಿಕಿತ್ಸೆ ಗಂತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್‌.ಪಿ.ಸೋಮಶೇಖರ್‌ ಹೇಳಿದರು.

ವಿಶ್ವ ಕ್ಯಾನ್ಸರ್‌ ದಿನದ ಪ್ರಯುಕ್ತ ‘ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌’, ಮಣಿಪಾಲ್‌ ಆಸ್ಪತ್ರೆಗಳ ಸಮೂಹದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ನಾನು ಮಾಡಬಹುದು ಮತ್ತು ನಾನು ಮಾಡುತ್ತೇನೆ. ಕ್ಯಾನ್ಸರ್‌ ವಿರುದ್ಧ ಯುವ ಮನಸ್ಸುಗಳು ನಿಲ್ಲುತ್ತವೆ’ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ಕ್ಯಾನ್ಸರ್‌ ಕೊನೆಯ ಹಂತ ತಲುಪುವವರೆಗೂ ಅದರ ಯಾವ ಲಕ್ಷಣಗಳೂ ರೋಗಿಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಎಲ್ಲರೂ ವರ್ಷದಲ್ಲಿ ಒಮ್ಮೆ ಕ್ಯಾನ್ಸರ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಾಗಾದಲ್ಲಿ ಈ ರೋಗವನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಮಾಡಬಹುದು. ಜಗತ್ತಿನಲ್ಲಿ ಸುಮಾರು 1.4 ಕೋಟಿ ಯುವಕ, ಯುವತಿಯರು ಈ ರೋಗದಿಂದ ಗುಣಮುಖರಾಗಿದ್ದಾರೆ. ಇದು ವಾಸಿಮಾಡಬಹುದಾದ ಕಾಯಿಲೆ ಎಂಬುದಕ್ಕೆ ಇದೊಂದು ನಿದರ್ಶನ’ ಎಂದು ತಿಳಿಸಿದರು.

ನಟಿ ಶ್ವೇತಾ ಆರ್‌. ಪ್ರಸಾದ್, ‘ತಾರೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹಿಂಬಾಲಕರಿರುತ್ತಾರೆ. ನಾವು ಏನು ಮಾಡುತ್ತೇವೊ ಅದನ್ನು ಅವರು ಅನುಕರಿಸುತ್ತಾರೆ. ಪ್ರತಿಯೊಂದು ಹಂತದಲ್ಲೂ ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಹೀಗಾಗಿ ನಟಿಯಾಗಿ ಯುವ ಸಮುದಾಯಕ್ಕೆ ಸರಿಯಾದ ಮಾರ್ಗ ತೋರಿಸಬೇಕಾದ ಗುರುತರ ಜವಾಬ್ದಾರಿ ನನ್ನ ಮೇಲಿದೆ. ಆ ಕೆಲಸ ನಾನು ಮಾಡುತ್ತಿದ್ದೇನೆ’ ಎಂದು ನುಡಿದರು.

‘ಸರಿಯಾದ ಜೀವನ ಕ್ರಮ ಮತ್ತು ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಕ್ಯಾನ್ಸರ್‌ ರೋಗವನ್ನು ದೂರವಿಡಬಹುದು’ ಎಂದು ಒ.ಪಿ.ಜಿಂದಾಲ್‌ ಗ್ಲೋಬಲ್‌ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿನಿ ಸಂಯುಕ್ತ ಅಯ್ಯರ್‌ ಹೇಳಿದರು.

ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಅಂಜನಾ, ‘ನಾನು ನನ್ನ ಸ್ನೇಹಿತೆಯರನ್ನು ಭೇಟಿ ಮಾಡಿದಾಗ ಅವರು ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್‌ ಬಗ್ಗೆ ಮಾತನಾಡಲು ಹಿಂಜರಿದಿದ್ದನ್ನು ಗಮನಿಸಿದ್ದೇನೆ. ಇಂತಹ ಮನಸ್ಥಿತಿ ದೂರವಾಗಿ ಮುಕ್ತವಾಗಿ ಅನುಭವಗಳನ್ನು ಹಂಚಿಕೊಳ್ಳುವ ವಾತಾವರಣ ನಿರ್ಮಾಣವಾಗಬೇಕು. ಹಾಗಾದಾಗ ಕ್ಯಾನ್ಸರ್‌ಗೆ ಕಡಿವಾಣ ಹಾಕುವುದು ಸುಲಭವಾಗುತ್ತದೆ’ ಎಂದರು.

‘ಎಚ್‌ಪಿವಿ ಲಸಿಕೆ ಬಗ್ಗೆ ಅರಿವು ಇಲ್ಲ’
‘ಮೂರು ವಾರಗಳ ಹಿಂದೆ ನಾನು ಪರೀಕ್ಷೆಗಾಗಿ ಸ್ತ್ರೀರೋಗ ತಜ್ಞೆಯ ಬಳಿ ಹೋಗಿದ್ದೆ. ಆಗ ಅವರು ಎಚ್‌ಪಿವಿ ಲಸಿಕೆ ಹಾಕಿಸಿಕೊಂಡಿದ್ದೀರಾ ಎಂದು ಕೇಳಿದರು. ಆ ಪ್ರಶ್ನೆ ಕೇಳಿ ನನಗೆ ಆಶ್ಚರ್ಯವಾಯಿತು. ಎಚ್‌ಪಿವಿ ಲಸಿಕೆ ಎಂದರೇನು, ಅದನ್ನು ಯಾಕಾಗಿ ತೆಗೆದುಕೊಳ್ಳುತ್ತಾರೆ ಎಂಬುದು ನನಗೆ ಗೊತ್ತೇ ಇರಲಿಲ್ಲ. ಆ ಚುಚ್ಚುಮದ್ದನ್ನು ತೆಗೆದುಕೊಂಡರೆ ಕ್ಯಾನ್ಸರ್‌ ತಗಲುವುದಿಲ್ಲ ಎಂದು ಅವರು ಬಿಡಿಸಿ ಹೇಳಿದರು. ಬಳಿಕ ಲಸಿಕೆಯ ಮೂರು ಡೋಸ್‌ಗಳನ್ನು ಪಡೆದುಕೊಂಡೆ. ನಂತರ ಎಚ್‌ಪಿವಿ ಲಸಿಕೆ ಬಗ್ಗೆ ಮನೆಯವರನ್ನು ಪ್ರಶ್ನಿಸಿದೆ. ಸ್ನೇಹಿತರನ್ನೂ ಕೇಳಿದೆ. ಅವರಿಗೂ ಇದರ ಬಗ್ಗೆ ಎಳ್ಳಷ್ಟೂ ಜ್ಞಾನವಿರಲಿಲ್ಲ. ಬಳಿಕ ನಾನೇ ಲಸಿಕೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟೆ’ ಎಂದು ಸೇಂಟ್‌ ಜೋಸೆಫ್‌ ಕಾಲೇಜಿನ ವಿದ್ಯಾರ್ಥಿನಿ ಅನಿಕಾ ಬೇಬಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT