ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಾಂತ್ಯದೊಳಗೆ ಬಸ್‌ ಮಾರ್ಗಗಳ ಮರು ಸರ್ವೆ: ಬಿಎಂಟಿಸಿ ಎಂಡಿ

ಪ್ರಯಾಣಿಕರ ಬೇಡಿಕೆ ಆಧರಿಸಿ ಪರಿಷ್ಕೃತ ಮಾರ್ಗ: ಬಿಎಂಟಿಸಿ
Last Updated 24 ನವೆಂಬರ್ 2021, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಕಾಣಿಸಿಕೊಂಡ ಬಳಿಕ ಸಂಚಾರ ಸ್ಥಿತಿಗತಿ ಬದಲಾಗಿದ್ದು, ನಗರದಲ್ಲಿ ಬಿಎಂಟಿಸಿ ಬಸ್‌ಗಳು ಸಂಚರಿಸುವ ಮಾರ್ಗಗಳ ಪರಿಷ್ಕರಣೆಗಾಗಿ ಮರು ಸರ್ವೆ ನಡೆಸಲು ಸಂಸ್ಥೆಯು ಸಿದ್ಧತೆ ನಡೆಸಿದೆ.

‘ಪ್ರಜಾವಾಣಿ ನೇರ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್‌ ಅವರು ಬುಧವಾರ ಈ ವಿಚಾರ ತಿಳಿಸಿದರು.

ರಾಮಮೂರ್ತಿನಗರದ ಸತೀಶ್‌ ಪ್ರಶ್ನೆಗೆ ಉತ್ತರಿಸಿದ ಅವರು, ‘ಎರಡು ವರ್ಷಗಳ ಹಿಂದೆ ಬಸ್‌ ಸಂಚಾರ ಮಾರ್ಗಗಳ ಸರ್ವೆ ನಡೆಸಲಾಗಿತ್ತು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಬಸ್‌ ಸೇವೆ ಆರಂಭಿಸುವಂತೆ ಅನೇಕ ಪ್ರದೇಶಗಳಿಂದ ಬೇಡಿಕೆಗಳು ಬರುತ್ತಿವೆ. ಹಾಗಾಗಿ ಸಂಚಾರ ಮಾರ್ಗಗಳ ಪರಿಷ್ಕರಣೆಗಾಗಿ ಮರು ಸರ್ವೆ ನಡೆಸಲು ನಿರ್ಧರಿಸಿದ್ದೇವೆ. ಈ ವರ್ಷದ ಡಿಸೆಂಬರ್‌ ಅಂತ್ಯದೊಳಗೆ ಸರ್ವೆ ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ’ ಎಂದರು.

‘ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವುದು ನಮ್ಮ ಆದ್ಯತೆ. ಈ ಬಾರಿ ಪ್ರಯಾಣಿಕರ ಅಭಿಪ್ರಾಯ ಆಧರಿಸಿಯೇ ಬಸ್‌ ಮಾರ್ಗಗಳನ್ನು ಪರಿಷ್ಕರಣೆ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಫೀಡರ್‌ ಬಸ್‌ ಶೀಘ್ರ ಹೆಚ್ಚಳ: ವಿಜಯನಗರದ ಅಂಜನಾ ಅವರ ಪ್ರಶ್ನೆಗೆ ಉತ್ತರಿಸಿದ ವ್ಯವಸ್ಥಾಪಕ ನಿರ್ದೇಶಕರು, ‘ನಮ್ಮ ಮೆಟ್ರೊ ರೈಲುಗಳಿಗೆ ಪೂರಕವಾಗಿ ಬಿಎಂಟಿಸಿ ಫೀಡರ್‌ ಬಸ್‌ ಕಾರ್ಯಾಚರಣೆ ನಡೆಸುವುದರಿಂದ ಸಂಸ್ಥೆಗೆ ನಷ್ಟವೇ ಜಾಸ್ತಿ. ಆದರೂ, ಮೆಟ್ರೊ ಸೇವೆ ರಾತ್ರಿ 11.30ರವರೆಗೂ ವಿಸ್ತರಣೆಯಾದ ಬಳಿಕ ಪ್ರಯಾಣಿಕರ ಅನುಕೂಲಕ್ಕಾಗಿ 90 ಫೀಡರ್‌ ಬಸ್‌ಗಳನ್ನು ಆರಂಭಿಸಿದ್ದೇವೆ. ಈ ಸಲುವಾಗಿಯೇ ಖರೀದಿಸಲಾದ 90 ಹೊಸ ಮಿಡಿ ಬಸ್‌ಗಳು 15 ದಿನಗಳಲ್ಲಿ ಸಂಸ್ಥೆಗೆ ಸೇರ್ಪಡೆಯಾಗಲಿವೆ. ಮೆಟ್ರೊ ಸೇವೆ ವಿಸ್ತರಣೆಯಾದಂತೆ ಫೀಡರ್‌ ಬಸ್‌ಗಳನ್ನೂ ಒದಗಿಸುತ್ತೇವೆ’ ಎಂದರು.

ರಾತ್ರಿ ಸೇವೆ ವಿಸ್ತರಣೆ:

ನಗರದ ವಿವಿಧ ಭಾಗಗಳ ತಂಗುದಾಣಗಳಿಗೆ ತಡ ರಾತ್ರಿವರೆಗೂ ಬಸ್‌ ಸೌಕರ್ಯ ಕಲ್ಪಿಸಿ ಅವುಗಳನ್ನು ಅಲ್ಲೇ ನಿಲುಗಡೆ ಮಾಡುವ ವ್ಯವಸ್ಥೆಯನ್ನು ಬಿಎಂಟಿಸಿ ಹೊಂದಿತ್ತು. ಆದರೆ, ಕೋವಿಡ್‌ ಕಾಣಿಸಿಕೊಂಡ ಬಳಿಕ ಇದನ್ನು ಹಿಂಪಡೆದಿತ್ತು. ಕೋವಿಡ್‌ ನಿಯಂತ್ರಣಕ್ಕೆ ಜಾರಿಗೊಳಿಸಿದ್ದ ರಾತ್ರಿ ಕರ್ಫ್ಯೂವನ್ನು ಸರ್ಕಾರ ಹಿಂಪಡೆದ ಬಳಿಕ ರಾತ್ರಿ ನಿಲುಗಡೆ ಸೇವೆಯನ್ನು ವಿಸ್ತರಿಸುವುದಕ್ಕೂ ಬಿಎಂಟಿಸಿ ಆದ್ಯತೆ ನೀಡಿದೆ.

ನಾಗರಬಾವಿಯ ಮಹೇಶ್‌ ಪ್ರಶ್ನೆಗೆ ಉತ್ತರಿಸಿದ ಅನ್ಬುಕುಮಾರ್‌, ‘ಈ ತಿಂಗಳಲ್ಲಿ 200ಕ್ಕೂ ಅಧಿಕ ಕಡೆ ರಾತ್ರಿ ನಿಲುಗಡೆ ವ್ಯವಸ್ಥೆಯನ್ನು ಮರುಸ್ಥಾಪಿಸಿದ್ದೇವೆ. ನಗರದ ಕೇಂದ್ರ ಪ್ರದೇಶದಿಂದ ದೂರ ಇರುವ ಹಳ್ಳಿಗಳಿಗೆ ರಾತ್ರಿವರೆಗೂ ಬಸ್‌ ಸೌಕರ್ಯ ಕಲ್ಪಿಸುವುದು ನಮ್ಮ ಜವಾಬ್ದಾರಿ. ಶೀಘ್ರವೇ ಈ ಬಗ್ಗೆ ಸರ್ವೆ ನಡೆಸಿ ರಾತ್ರಿ ನಿಲುಗಡೆ ಸೇವೆಯನ್ನು ಸಾವಿರಕ್ಕೂ ಅಧಿಕ ತಂಗುದಾಣಗಳಿಗೆ ವಿಸ್ತರಿಸಲು ಕ್ರಮಕೈಗೊಳ್ಳಲಿದ್ದೇವೆ’ ಎಂದು ಭರವಸೆ ನೀಡಿದರು.

‘ಈ ಹಿಂದೆ ಚಾಲಕ ಮತ್ತು ನಿರ್ವಾಹಕರು ತಮ್ಮ ಮಾಮೂಲಿ ಅವಧಿಗಿಂತ ಹೆಚ್ಚು ಕೆಲಸ ಮಾಡುವ ಅವಧಿಗೆ (ಒ.ಟಿ) ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಕೋವಿಡ್‌ ಕಾಣಿಸಿಕೊಂಡ ಬಳಿಕ ಇದನ್ನು ಕೈಬಿಡಲಾಗಿತ್ತು. ಹಾಗಾಗಿ, ಕೆಲವು ಕಡೆ ರಾತ್ರಿ 8.30 ಗಂಟೆ ನಂತರ ಬಸ್‌ ಕಾರ್ಯಾಚರಣೆ ಸ್ಥಗಿತಗೊಂಡಿರಬಹುದು. ಚಾಲಕರೂ ಬೆಳಿಗ್ಗೆಯಿಂದ ರಾತ್ರಿವರೆಗೆ ಕರ್ತವ್ಯ ನಿರ್ವಹಿಸಿ ದಣಿದಿರುತ್ತಾರೆ. ಶೀಘ್ರವೇ ಹೆಚ್ಚುವರಿ ಅವಧಿಯ ಕೆಲಸಕ್ಕೆ ಮತ್ತೆ ಪ್ರೋತ್ಸಾಹಧನ ನೀಡುವ ಮೂಲಕ ರಾತ್ರಿ 8.30ರ ನಂತರದ ಕಾರ್ಯಾಚರಣೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಕೃಷ್ಣ ಅವರ ಪ್ರಶ್ನೆಗೆ ವ್ಯವಸ್ಥಾಪಕ ನಿರ್ದೇಶಕರು ಉತ್ತರಿಸಿದರು.

‘ಮಹಿಳೆಯರ ಸುರಕ್ಷತೆಗೆ ಆದ್ಯತೆ’

‘ಬೆಳಿಗ್ಗೆ ಹಾಗೂ ಸಂಜೆ ದಟ್ಟಣೆ ಅವಧಿಯಲ್ಲಿ ಪ್ರಯಾಣಿಕರ ಬೇಡಿಕೆಗೆ ಕೊರತೆ ಆಗದಂತೆ ಬಸ್‌ ಕಾರ್ಯಾಚರಣೆ ನಡೆಸುವುದು ನಮ್ಮ ಆಶಯ. ಬೆಳಿಗ್ಗೆಯ ಅವಧಿಗಿಂತಲೂ ಸಂಜೆ ದಟ್ಟಣೆ ಅವಧಿಯ ಕಾರ್ಯಾಚರಣೆಯಲ್ಲಿ ಲೋಪ ಆಗದಂತೆ ಹೆಚ್ಚು ಕಾಳಜಿ ವಹಿಸುತ್ತೇವೆ. ಮಹಿಳೆಯರು ಸುರಕ್ಷಿತವಾಗಿ ಮನೆಗೆ ತಲುಪುವುದಕ್ಕೆ ಅನುವಾಗುವಂತೆ ಸೇವೆ ಒದಗಿಸುವುದು ನಮ್ಮ ಕರ್ತವ್ಯ’ ಎಂದು ಅನ್ಬುಕುಮಾರ್‌ ತಿಳಿಸಿದರು.

‘ಹೊಸ ಬಸ್‌ ಖರೀದಿಗೆ ಬಿಎಂಟಿಸಿ ಹಣ ಬಳಸಿಲ್ಲ’

‘ಸಂಸ್ಥೆಯು 643 ಬಿಎಸ್‌–6 ಡೀಸೆಲ್‌ ಎಂಜಿನ್‌ ಬಸ್‌ಗಳನ್ನು, 300 ಎಲೆಕ್ಟ್ರಿಕ್‌ ಬಸ್‌ಗಳು (12 ಮೀ ಉದ್ದ) ಹಾಗೂ 90 ಮಿಡಿ ಬಸ್‌ಗಳನ್ನು (9 ಮೀ ಉದ್ದ) ಖರೀದಿಸುತ್ತಿದೆ. ಡಿಸೆಂಬರ್‌ ತಿಂಗಳಲ್ಲೇ ಹೊಸ ಬಸ್‌ಗಳು ಕಾರ್ಯಾಚರಣೆ ಆರಂಭಿಸಲಿವೆ’ ಎಂದು ಅನ್ಬುಕುಮಾರ್‌ ತಿಳಿಸಿದರು.

ಬಿಎಂಟಿಸಿ ನಷ್ಟದಲ್ಲಿದ್ದರೂ ಹೊಸ ಬಸ್‌ಗಳನ್ನು ಖರೀದಿಸುತ್ತಿರುವುದು ಏಕೆ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಪ‍್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಅನ್ಬುಕುಮಾರ್‌, ‘ಈ ಬಸ್‌ಗಳೆಲ್ಲವನ್ನೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಖರೀದಿ ಮಾಡಲಾಗಿದೆ. ಇವುಗಳನ್ನು ಖರೀದಿ ಮಾಡದೇ ಇರುತ್ತಿದ್ದರೆ ಸರ್ಕಾರದಿಂದ ಮಂಜೂರಾದ ಅನುದಾನ ವಾಪಸ್‌ ಹೋಗುತ್ತಿತ್ತು. ಹೊಸ ಬಸ್‌ಗಳ ಖರೀದಿಗೆ ಬಿಎಂಟಿಸಿ ನಯಾಪೈಸೆ ಬಂಡವಾಳವನ್ನೂ ಹೂಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಮ್ಮಲ್ಲಿರುವ ಬಹುತೇಕ ಬಸ್‌ಗಳು 10 ವರ್ಷಗಳಿಗೂ ಹಳೆಯವು. ಕೆಲವು ಬಸ್‌ಗಳು ಸೋರುತ್ತಿವೆ. ಪದೇ ಪದೇ ಕೆಟ್ಟುಹೋಗುತ್ತಿವೆ ಎಂಬ ದೂರುಗಳಿದ್ದವು. ಕಾರ್ಯಾಚರಣೆಗೆ ಹಳೆಯ ಬಸ್‌ಗಳನ್ನು ಬಳಸಲು ಚಾಲಕರೂ ಹಿಂದೇಟು ಹಾಕುತ್ತಾರೆ. ಹೊಸ ಬಸ್‌ಗಳ ಖರೀದಿ ಬಳಿಕ ಈ ಸ್ಥಿತಿ ಬದಲಾಗಲಿದೆ’ ಎಂದು ಅವರು ಸಮರ್ಥಿಸಿಕೊಂಡರು.

’ಕೋವಿಡ್‌ ಸಂದರ್ಭದಲ್ಲಿ ಟೆಂಡರ್‌ ಆಹ್ವಾನಿಸಿದ್ದರಿಂದ ನಿರೀಕ್ಷೆಗಿಂತಲೂ ಕಡಿಮೆ ದರಕ್ಕೆ ಹೊಸ ಬಸ್‌ಗಳನ್ನು ಪೂರೈಸಲು ಕಂಪನಿಗಳು ಒಪ್ಪಿವೆ. ಇದರಿಂದ ಸಂಸ್ಥೆಗೆ ಹೆಚ್ಚು ಪ್ರಯೊಜನವಾಗಿದೆ. ಈ ಬಸ್‌ಗಳನ್ನು ಈಗಿನ ದರದಲ್ಲಿ ಖರೀದಿಸುವುದಾದರೆ ಹೆಚ್ಚು ಹಣ ವ್ಯಯವಾಗುತ್ತಿತ್ತು’ ಎಂದು ಅವರು ವಿವರಿಸಿದರು.

‘ಮಾರ್ಚ್‌ನಿಂದ ಏಕರೂಪ ಸಂಚಾರ ಕಾರ್ಡ್‌’

ವಿವಿಧ ಮಾದರಿಯ ಸಾರಿಗೆಗಳಲ್ಲಿ ಪ್ರಯಾಣಿಸಲು ‘ರಾಷ್ಟ್ರಿಯ ಏಕರೂಪ ಸಂಚಾರ ಕಾರ್ಡ್‌’ ಬಳಕೆಗೆ ಮುಂದಿನ ಆರ್ಥಿಕ ವರ್ಷದವರೆಗೆ ಕಾಯಬೇಕು. ಈ ಕಾರ್ಡ್‌ ಬಳಕೆಗೆ ಅಗತ್ಯವಿರುವ ಹೊಸ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಇದಕ್ಕೆ ಹೆಚ್ಚಿನ ಬಂಡವಾಳದ ಅಗತ್ಯವೂ ಇದೆ’ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT