ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ವಲ್‌ ವಿರುದ್ಧದ ಪ್ರಕರಣ: ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು

Published 18 ಜೂನ್ 2024, 15:42 IST
Last Updated 18 ಜೂನ್ 2024, 15:42 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಸಂಸದ ‍‍ಪ್ರಜ್ವಲ್‌ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪದ ಪ್ರಕರಣದಲ್ಲಿ; ಸಂತ್ರಸ್ತೆಯೊಬ್ಬರ ಅಪಹರಣದ ಆರೋಪಕ್ಕೆ ಗುರಿಯಾಗಿರುವ ಭವಾನಿ ರೇವಣ್ಣ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಈ ಕುರಿತಂತೆ ಕಾಯ್ದಿರಿಸಿದ್ದ ತೀರ್ಪನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ಪೀಠದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ಮಂಗಳವಾರ, ‘ನಮ್ಮ ಸಂವಿಧಾನ ಇದಿ ಅಮೀನ್‌ (ಮನಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ತನ್ನ ಬಳಿ ಕರೆತರುವಂತೆ ಆದೇಶಿಸುವ) ನ್ಯಾಯಶಾಸ್ತ್ರದ ಆಧಾರದಲ್ಲಿ ನಡೆಯುವುದಿಲ್ಲ. ಮಹಿಳೆಯರ ವಿರುದ್ಧ ಆರೋಪಗಳು ಬಂದಾಗ ಪ್ರಾಸಿಕ್ಯೂಷನ್‌ ಹೆಚ್ಚು ಸಂವೇದನಾಶೀಲತೆಯಿಂದ ವರ್ತಿಸಬೇಕು’ ಎಂದು ಕಿವಿಮಾತು ಹೇಳಿದೆ.

‘ಭವಾನಿ ರೇವಣ್ಣ ಬಲಾಢ್ಯ ರಾಜಕೀಯ ಹಿನ್ನೆಲೆಯುಳ್ಳ ಕುಟುಂಬ ಎಂಬ ಪ್ರಾಸಿಕ್ಯೂಷನ್‌ ವಾದವನ್ನು ಈ ಪ್ರಕರಣಕ್ಕೆ ತಾಳೆ ಮಾಡುವುದು ಇಲ್ಲಿ ಅನಪೇಕ್ಷಿತ. ಯಾಕೆಂದರೆ ಈ ಪ್ರಕರಣ ದಾಖಲಾಗಿರುವುದೇ ಸತೀಶ್‌ ಬಾಬಣ್ಣ ಮತ್ತು ಎಚ್‌.ಡಿ.ರೇವಣ್ಣ ವಿರುದ್ಧ. ಆದರೆ, ಪ್ರಾಸಿಕ್ಯೂಷನ್‌ ಭವಾನಿ ಅವರೇ ಕಿಂಗ್‌ ಪಿನ್‌ ಎಂದು ಹೇಳುತ್ತಿರುವುದಕ್ಕೆ ಮೇಲ್ನಟೋಕ್ಕೆ ಯಾವುದೇ ಆಧಾರವಿಲ್ಲ’ ಎಂದು ಸ್ಪಷ್ಟಪಡಿಸಿದೆ.

‘ಪ್ರಜ್ವಲ್‌ ರೇವಣ್ಣ ವಿರುದ್ಧ ಯಾವೊಬ್ಬ ಸಂತ್ರಸ್ತ ಮಹಿಳೆಯೂ ದೂರು ದಾಖಲು ಮಾಡಿಲ್ಲ ಎಂಬುದು ಗಮನಾರ್ಹ. ಭವಾನಿ ಅವರು ವಿವಾಹಿತ ಮಹಿಳೆ. ಇವರ ಕುಟುಂಬ ಸಮಾಜದಲ್ಲಿ ಆಳವಾದ ಬೇರುಗಳನ್ನು ಒಳಗೊಂಡಿದೆ. ಪ್ರಜ್ವಲ್‌ನ ಕಾಮಕೇಳಿಯನ್ನು ತಡೆಯುವಲ್ಲಿ ಅವರು ವಿಫಲವಾಗಿದ್ದಾರೆ. ಆತ ವಿದೇಶಕ್ಕೆ ಹಾರಿ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬುದು ಅಸಂಬದ್ಧ. ಯಾಕೆಂದರೆ ನಮ್ಮದು ರೋಮನ್‌ ಕಾನೂನು ಪದ್ಧತಿ (ಕುಟುಂಬದ ಯಜಮಾನ ಮಾತ್ರವೇ ಕಾನೂನಿನ ವ್ಯಾಪ್ತಿಗೆ ಒಳಪಡುವುದು; ಸದಸ್ಯರಿಗೆ ಅವನ ಆಣತಿಯೇ ಅಂತಿಮ) ಅನುಸರಿಸುವ ವ್ಯವಸ್ಥೆ ಅಲ್ಲ’ ಎಂದು ನ್ಯಾಯಪೀಠ ಕುಟುಕಿದೆ.

ಏನಿದು ಪ್ರಕರಣ?: ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಅಪಹರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಪ್ರಕರಣದ ಮೊದಲ ಆರೋಪಿ ಎಚ್‌.ಡಿ.ರೇವಣ್ಣ ಬಂಧನಕ್ಕೊಳಗಾಗಿದ್ದರು. ನಂತರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಪ್ರಕರಣದಲ್ಲಿ ಭವಾನಿ ಅವರ ಹೆಸರೂ ಕೇಳಿ ಬಂದ ಕಾರಣ ಭವಾನಿ ನಿರೀಕ್ಷಣಾ ಜಾಮೀನು ಕೋರಿದ್ದರು. ಇದನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು.

ಪ್ರಾಸಿಕ್ಯೂಷನ್‌ ವಾದ ಅರ್ಥಹೀನ...

‘ಪೊಲೀಸರು ಆರೋಪಿಯನ್ನು ಕಸ್ಟಡಿಗೆ ನೀಡುವಂತೆ ಕೇಳಿದರೆ, ನ್ಯಾಯಾಲಯ ಕಣ್ಣು ಮುಚ್ಚಿಕೊಂಡು ಇದನ್ನು ಸಮ್ಮತಿಸಿ ಆದೇಶಿಸಬೇಕು’ ಎಂಬ ಪ್ರಾಸಿಕ್ಯೂಷನ್‌ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ಮಂಡಿಸಿದ್ದ ವಾದವನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌, ’ಇಂತಹ ವಾದವು ಸುಪ್ರೀಂ ಕೋರ್ಟ್ ತೀರ್ಪಿಗೆ ಮತ್ತು ಬ್ಯಾಂಕಾಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯಲ್ಲೂ ಕೈಗೊಂಡ ನಿರ್ಣಯಕ್ಕೆ ಸಂ‍ಪೂರ್ಣ ವಿರುದ್ಧವಾಗಿದೆ’ ಎಂಬ ಪೂರ್ವನಿದರ್ಶನವನ್ನು ತೀರ್ಪಿನಲ್ಲಿ ಉಲ್ಲೇಖಿಸಿದೆ.

‘ಭವಾನಿ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ವಾದವನ್ನು ಒಪ್ಪಲು ಯಾವುದೇ ಪೂರಕ ಆಧಾರಗಳಿಲ್ಲ. ಅವರೀಗಾಗಲೇ ಪೊಲೀಸರು ಕೇಳಿರುವ 80 ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ತನಿಖೆಗೂ ಸಹಕರಿಸುತ್ತಿದ್ದಾರೆ. ಅಷ್ಟಕ್ಕೂ ಪೊಲೀಸರು ಕೇಳುವ ಪ್ರಶ್ನೆಗಳಿಗೆಲ್ಲಾ ಅವರ ಮೂಗಿನ ನೇರಕ್ಕೇ ಉತ್ತರಿಸಬೇಕೆಂಬ ವಾದ ಶುದ್ಧ ಅರ್ಥಹೀನ ಮತ್ತು ತರ್ಕಹೀನ. ಅವರನ್ನು ಬಂಧಿಸಿ ವಶದಲ್ಲಿ ಇರಿಸಿಕೊಂಡೇ ವಿಚಾರಣೆ ನಡೆಸುವ ಅವಶ್ಯಕತೆ ಇದೆ ಎಂಬ ಮಾತಿನಲ್ಲಿ ಯಥಾರ್ಥ ಗೋಚರವಾಗುತ್ತಿಲ್ಲ. ಆದಾಗ್ಯೂ, ಅವರನ್ನು ತನಿಖೆಗಾಗಿ ಮೈಸೂರು, ಹಾಸನ ಹಾಗೂ ಅಗತ್ಯವಿದ್ದ ಕಡೆ ಕರೆದುಕೊಂಡು ಹೋಗಬಹುದಾಗಿದೆ’ ಎಂದು ನ್ಯಾಯಪೀಠ ವಿವರಿಸಿದೆ.’

‘ಮಾಧ್ಯಮ ವಿಚಾರಣೆ ಸಲ್ಲ‘

‘ಸಮಾಜದಲ್ಲಿ ಸಂಚಲನ ಉಂಟು ಮಾಡುವ ಪ್ರಕರಣಗಳಲ್ಲಿ ಮಾಧ್ಯಮಗಳಿಂದ ನಡೆಯುವ ವಿಚಾರಣೆ ಸಲ್ಲದು’ ಎಂಬ ಸುಪ್ರೀಂ ಕೋರ್ಟ್ ತೀರ್ಪು ಮತ್ತು ‘ಅಮೆರಿಕದ ಸಂವಿಧಾನಕ್ಕೆ ತಿದ್ದುಪಡಿ ತಂದು ಮಾಧ್ಯಮಗಳ ವಿಚಾರಣೆಗೆ ನಿರ್ಬಂಧ ವಿಧಿಸಲಾಗಿದೆ’ ಎಂಬ ಎರಡು ಅಂಶಗಳನ್ನು ತೀರ್ಪು ಪ್ರಕಟಿಸುವ ವೇಳೆ ವಿವರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರು, ‘ಸಾಮಾನ್ಯ ಜನರು ಪತ್ರಿಕೆಗಳನ್ನು ಓದಿ ಅದರಲ್ಲಿ ಬಂದದ್ದನ್ನೇ ನಂಬುತ್ತಾರೆ. ಮನೆಗಳಲ್ಲಿದ್ದಾಗ, ವಾಕಿಂಗ್‌  ಮಾಡುವಾಗ ಆ್ಯಂಕರ್‌ಗಳ ಮಾತುಗಳನ್ನೇ ಮುಂದು ಮಾಡಿಕೊಂಡು ಮಾತನಾಡುತ್ತಾರೆ. ಇವರ‌್ಯಾರೂ ಪ್ರಕರಣದ ದಾಖಲೆಗಳನ್ನು ಓದಿರುವುದಿಲ್ಲ. ಆದ್ದರಿಂದ, ಪತ್ರಿಕೆಗಳ ವರದಿ ಆಧರಿಸಿ ನಾವು ಪ್ರಕರಣವನ್ನು ನಿರ್ಧರಿಸಲಾಗದು’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದರು.

‘ಪತ್ರಕರ್ತರು ಎರಡೂ ಬದಿಯ ಅಂಶಗಳನ್ನು ಬರೆಯುತ್ತಾರೆ. ಆದರೆ, ಮಹಿಳೆಯರು ವಿರುದ್ಧ ಆರೋಪ ಕೇಳಿ ಬಂದಾಗ, ಮಾಧ್ಯಮಗಳೇ ಪರ್ಯಾಯ ವಿಚಾರಣೆ (ಮೀಡಿಯಾ ಟ್ರಯಲ್‌) ನಡೆಸುವಾಗ ಸಂಯಮ ಪ್ರದರ್ಶಿಸಬೇಕು. ನಾಗರಿಕ ಸಮಾಜವೂ ತನ್ನ ಮಿತಿಯಲ್ಲಿ ಸಾರ್ವಜನಿಕ ಅಭಿಪ್ರಾಯ ಹೊರಹಾಕಬೇಕು. ತಕ್ಷಣಕ್ಕೇ ನಾವು ಆರೋಪಿಯನ್ನು ಅಪರಾಧಿ ಎಂದು ಬಿಂಬಿಸಿದರೆ ಸಮಾಜದ ಸ್ವಾಸ್ಥ್ಯಕ್ಕೆ ಹಾನಿ ಉಂಟಾಗುತ್ತದೆ. ಕೋರ್ಟ್‌ ವಿಚಾರಣೆಯಲ್ಲಿ ಮಾತ್ರವೇ ಆರೋಪಿಯು ಅಪರಾಧಿ ಹೌದೊ ಅಥವಾ ಅಲ್ಲವೊ ಎಂಬುದು ನಿರ್ಧಾರವಾಗಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT