ಬೆಂಗಳೂರು: ‘ಸರ್ಕಾರಗಳು ನೀಡುವ ಪ್ರಶಸ್ತಿಗಳು ಇತ್ತೀಚೆಗೆ ಪಾರದರ್ಶಕತೆ ಕಳೆದುಕೊಳ್ಳುತ್ತಿವೆ. ಜಾತಿ ಮೊದಲಾದ ಮಾನದಂಡಗಳ ಆಧಾರದಲ್ಲಿ ಆಯ್ಕೆ ಮಾಡುತ್ತಿರುವುದೇ ಇದಕ್ಕೆ ಕಾರಣ’ ಎಂದು ರಂಗಕರ್ಮಿ ಮಾಲತೇಶ್ ಬಡಿಗೇರ್ ತಿಳಿಸಿದರು.
ಪ್ರವರ ಥಿಯೇಟರ್ ನಗರದಲ್ಲಿ ಶನಿವಾರ ಹಮ್ಮಿಕೊಂಡ 11ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನಟ, ರಂಗನಿರ್ದೇಶಕ ಪ್ರದೀಪ್ ಚಂದ್ರ ಕುತ್ಪಾಡಿ ಅವರಿಗೆ ‘ಪ್ರವರ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
‘ಸರ್ಕಾರಗಳು ಗುರುತಿಸದ ನೈಜ ಸಾಧಕರನ್ನು ಸಂಘ–ಸಂಸ್ಥೆಗಳು ಗುರುತಿಸಿ, ಗೌರವಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.
ಪ್ರದೀಪ್ ಚಂದ್ರ ಕುತ್ಪಾಡಿ, ‘ಎಡ–ಬಲ ಪಂಥಗಳ ನಡುವೆ ನಾವು ನಾಟಕ ಪಂಥವನ್ನು ಕಂಡುಕೊಂಡಿದ್ದೇವೆ. ರಾಜಕೀಯ ಮಾಡಲು ಹೊರಗಡೆ ಬೇಕಾದಷ್ಟು ಅವಕಾಶಗಳಿವೆ. ಕಲೆಗೆ ಸಂಬಂಧಿಸಿದಂತೆ ಯಾವುದೇ ಪಂಥಕ್ಕೆ ಒಳಗಾಗದೆ, ಪ್ರದರ್ಶನ ನೀಡಿದರೆ ಎಲ್ಲರೂ ನಮ್ಮನ್ನು ಒಪ್ಪಿಕೊಳ್ಳುತ್ತಾರೆ’ ಎಂದು ತಿಳಿಸಿದರು.
‘ನಾಟಕ ಕಲಾವಿದರು ತಿಂಗಳಾನುಗಟ್ಟಲೆ ರಂಗಾಭ್ಯಾಸ ಮಾಡುತ್ತಾರೆ. ಪ್ರದರ್ಶನದ ದಿನ ಪ್ರೇಕ್ಷರಿಲ್ಲದಿದ್ದರೆ ನಿರಾಶೆಯಾಗುತ್ತದೆ. ಕಲಾ ಪೋಷಕರು ತಂಡಕ್ಕೆ ಬೆನ್ನು ತಟ್ಟಿದಾಗ ಅದು ಗಟ್ಟಿಯಾಗಿ ನಿಲ್ಲುತ್ತದೆ’ ಎಂದು ಹೇಳಿದರು.
ಪ್ರವರ ಥಿಯೇಟರ್ ಸಂಸ್ಥಾಪನಾ ನಿರ್ದೇಶಕ ಹನು ರಾಮಸಂಜೀವ ಅವರು ತಮ್ಮ ತಂಡ ಬೆಳೆದು ಬಂದ ಬಗೆ ಹಾಗೂ ನೀಡಿದ ಪ್ರದರ್ಶನಗಳ ಬಗ್ಗೆ ವಿವರಿಸಿದರು.
ಬಳಿಕ ಪ್ರವರ ತಂಡದಿಂದ ‘ಅಣು ರೇಣು ತೃಣ ಕಾಷ್ಠ’ ನಾಟಕ ಪ್ರದರ್ಶನ ಕಂಡಿತು.