ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದು ಕೊರತೆ - ಜನದನಿ | ಮಳೆ ಬಂದರೆ ಕಾಲುವೆಯಾಗುವ ರಸ್ತೆ

Last Updated 12 ಜೂನ್ 2022, 19:33 IST
ಅಕ್ಷರ ಗಾತ್ರ

ಮಳೆ ಬಂದರೆ ಕಾಲುವೆಯಾಗುವ ರಸ್ತೆ

ಮಲ್ಲೇಶ್ವರಂನಿಂದ ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸುವ ರೈಲ್ವೆ ಪ್ಲಾಟ್‌ಫಾರ್ಮ್‌ ರಸ್ತೆಯು ಮಳೆ ಬಂದಾಗ ಕಾಲುವೆಯಾಗುತ್ತದೆ. ದ್ವಿಚಕ್ರ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. 50 ಮೀಟರ್‌ ಅಂತರದಲ್ಲಿ ಇರುವ ರಾಜಕಾಲುವೆಗೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. 10–12 ವರ್ಷಗಳಿಂದ ಚರಂಡಿಯಲ್ಲಿರುವ ಹೂಳು ತೆಗೆದಿಲ್ಲ.

ರಸ್ತೆ ಮತ್ತೊಂದು ಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಅಂಡರ್ ಪೈಪ್‌ ಯೋಜನೆ ಅಪ್ರಯೋಜಕವಾಗಿದೆ. ನೆಹರೂ ವೃತ್ತದಿಂದ ಸ್ವಸ್ಥಿಕ್‌ ವೃತ್ತದವರೆಗೆ ಮಳೆ ನೀರಿನ ಜೊತೆಗೆ ಚರಂಡಿ ನೀರು ರಸ್ತೆಯಲ್ಲಿ ಹರಿಯಲಿದೆ. ಸಂಬಂಧಿತ ಅಧಿಕಾರಿಗಳು ಸ್ವಚ್ಛತೆಯನ್ನು ಕಾಪಾಡುವುದರ ಮೂಲಕ ನಗರದ ಸೌಂದರ್ಯವನ್ನು ಹೆಚ್ಚಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

-ಸುಬ್ರಹ್ಮಣ್ಯ,ಶೇಷಾದ್ರಿಪುರಂ ನಿವಾಸಿ

****

ಮಲ್ಲೇಶಪಾಳ್ಯ ಪಾದಚಾರಿ ಮಾರ್ಗದ ದುಃಸ್ಥಿತಿ

ಮಲ್ಲೇಶಪಾಳ್ಯ ಪಾದಚಾರಿ ಮಾರ್ಗದ ಚರಂಡಿ ಮೇಲ್ಭಾಗವು ಸಂಪೂರ್ಣ ಒಡೆದುಹೋಗಿ ತಿಂಗಳಾದರೂ ಸರಿಪಡಿಸಿಲ್ಲ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಪಾದಚಾರಿ ಮಾರ್ಗ ಸಂಪೂರ್ಣ ಹಾಳಾಗಿದೆ. ಮಕ್ಕಳು, ವೃದ್ಧರು ನಡೆದಾಡುವುದೇ ಕಷ್ಟವಾಗಿದೆ. ಪಾದಚಾರಿ ಮಾರ್ಗವನ್ನು ದುರಸ್ತಿಗೊಳಿಸಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ವೀರೇಶ,ಸ್ಥಳೀಯ ನಿವಾಸಿ

****

‘ತ್ಯಾಜ್ಯ ತೆರವುಗೊಳಿಸಿ’

ಅಬ್ದುಲ್‌ ಬಾರೀಸ್‌ ಆಂಗ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಂಭಾಗದ ಹ್ಯಾನಿಸ್‌ ಮುಖ್ಯರಸ್ತೆಯ ಪಾದಚಾರಿ ಮಾರ್ಗದಲ್ಲಿ ಕಸದ ರಾಶಿ ಹಾಕಲಾಗಿದೆ. ಇಡೀ ಪ್ರದೇಶವೇ ದುರ್ನಾತ ಬಿರುತ್ತಿದ್ದು, ಮೂಗು ಮುಚ್ಚಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಹಲವು ಮನವಿ ಸಲ್ಲಿಸದರೂ ಪ‍್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಇಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಛತೆ ಕಾಯ್ದುಕೊಳ್ಳಲು ಕ್ರಮವಹಿಸೇಕು ಎಂದು ಸಾರ್ವಜನಿಕರ ಆಗ್ರಹ.

-ಫೈಸಲ್‌ ಅಹ್ಮದ್ ಮತ್ತು ಅನ್ವರ್‌, ಸ್ಥಳೀಯ ನಿವಾಸಿಗಳು

***

ಶೌಚಾಲಯ ಸ್ವಚ್ಛಗೊಳಿಸಲು ಆಗ್ರಹ

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಕೃಷ್ಣರಾಜಪುರದ ಪೂರ್ವ ತಾಲ್ಲೂಕು ಕಚೇರಿಯ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯ ನಿರ್ವಹಣೆಯಿಲ್ಲದೆ ದುರ್ನಾತ ಬೀರುತ್ತಿದೆ. ಕಚೇರಿಗೆ ಭೇಟಿ ನೀಡುವ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ ಮತ್ತು ಸಾರ್ವಜನಿಕರಿಗೆ ಶೌಚಾಲಯ ಬಳಸಲು ಕಿರಿಕಿರಿ ಆಗುವ ಸ್ಥಿತಿ ನಿರ್ಮಾಣವಾಗಿದೆ.

ರಾಜ್ಯ ರಾಜಧಾನಿಯ ಸರ್ಕಾರಿ ಕಚೇರಿಗಳಲ್ಲಿರುವ ಶೌಚಾಲಯಗಳ ದುಃಸ್ಥಿತಿಗೆ ಅಧಿಕಾರಿಗಳ ಬೇಜವಾಬ್ದಾರಿತನವೇ ಸಾಕ್ಷಿ. ಸಂಬಂಧಪಟ್ಟ ಸಿಬ್ಬಂದಿ ಶೌಚಾಲಯವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಪಡಿಸುತ್ತೇವೆ.

- ಕಿರಣ್ ಕುಮಾರ್.ಜೆ,ಮೇಡಹಳ್ಳಿ (ಕೆ ಆರ್ ಪುರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT