ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಹೆಚ್ಚಿದ ಮಹಿಳೆಯರ ಕೊಲೆ: ಉನ್ನತ ಮಟ್ಟದ ಸಮಿತಿ ರಚಿಸಲು ಆಗ್ರಹ

Published 12 ಜೂನ್ 2024, 15:39 IST
Last Updated 12 ಜೂನ್ 2024, 15:39 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರ ಕೊಲೆ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ನಿಯಂತ್ರಣಕ್ಕೆ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಬೇಕು ಎಂದು ‘ನಾವೆದ್ದು ನಿಲ್ಲದಿದ್ದರೆ ಒಕ್ಕೂಟ’, ‘ಮಹಿಳಾ ಮುನ್ನಡೆ’, ‘ಜನವಾದಿ ಮಹಿಳಾ ಸಂಘಟನೆ’ಯ ಸದಸ್ಯರು ಬುಧವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಹಕ್ಕೊತ್ತಾಯ ಸಭೆ ನಡೆಸಿದರು.

‘ರಾಜ್ಯದಲ್ಲಿ ಇತ್ತೀಚೆಗೆ ನಡೆದ ಎಲ್ಲ ರೀತಿಯ ಪ್ರಕರಣಗಳನ್ನು ಅಧ್ಯಯನ ಮಾಡಲು ತಜ್ಞರು, ಕಾನೂನು ಪರಿಣತರು, ಅಧಿಕಾರಿಗಳು ಹಾಗೂ ಸಾಮಾಜಿಕ ಹೋರಾಟಗಾರರನ್ನು ಒಳಗೊಂಡ ಸಮಿತಿ ರಚಿಸಬೇಕು’ ಎಂದು ಹೋರಾಟಗಾರರು ಸಭೆಯಲ್ಲಿ ಒತ್ತಾಯಿಸಿದರು.

ಹೋರಾಟಗಾರ್ತಿ ಬೃಂದಾ ಅಡಿಗೆ, ‘ಇತ್ತೀಚೆಗೆ ನಡೆದ ಬಿಬಿಎ ವಿದ್ಯಾರ್ಥಿನಿ ಆರ್. ಪ್ರಬುದ್ಧಾ ಅವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ 14 ವರ್ಷದ ಬಾಲಕನನ್ನು ಬಂಧಿಸಲಾಗಿತ್ತು. ಆರೋಪಿಯು ಬಾಲಕ ಎಂಬ ಕಾರಣಕ್ಕೆ ಜಾಮೀನು ನೀಡಲಾಗಿದೆ. ಆದರೆ, ಅವನು ಮಾಡಿರುವ ಕೃತ್ಯ ಆತನ ವಯಸ್ಸಿಗೂ ಮೀರಿದ್ದು, ಈ ಪ್ರಕರಣದಲ್ಲಿ ಆರೋಪಿಗೆ ಸಾಮಾನ್ಯರಿಗೆ ಆಗುವ ಶಿಕ್ಷೆ ಆಗಬೇಕಿತ್ತು’ ಎಂದರು.

ಸಾಮಾಜಿಕ ಹೋರಾಟಗಾರ್ತಿ ಸೌಮ್ಯ, ‘ನನ್ನ ಮಗಳು ಪ್ರಬುದ್ಧಾಳನ್ನು ಕೊಲೆ ಮಾಡಿರುವ ಆರೋಪಿ ಬಾಲಕ ಎಂಬ ಕಾರಣಕ್ಕೆ ಅವನ ಹೆಸರು ಸಾರ್ವಜನಿಕವಾಗಿ ಹೇಳಲು ಕಾನೂನಿನಲ್ಲಿ ಅವಕಾಶವಿಲ್ಲ. ಕೊಲೆ ಮಾಡಿದ ಹತ್ತು ದಿನಗಳಲ್ಲಿ ಆರೋಪಿಗೆ ಜಾಮೀನು ಸಿಕ್ಕಿರುವುದು ದುರಂತ. ಇಂತಹ ಕಾನೂನಿಗೆ ತಿದ್ದುಪಡಿ ತರುವ ಮೂಲಕ ನನ್ನ ಮಗಳನ್ನು ಕೊಲೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ನಾಗಲಕ್ಷ್ಮಿ ಅವರು, ‘ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಲೇಖಕಿಯರಾದ ದು. ಸರಸ್ವತಿ, ಕೆ. ಶರೀಫಾ, ಬಿ.ಟಿ. ಲಲಿತಾ ನಾಯಕ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹಕ್ಕೊತ್ತಾಯಗಳು

* ವಿದ್ಯಾರ್ಥಿನಿಯರು ಮಹಿಳೆಯರು ಮತ್ತು ಸಾರ್ವಜನಿಕರು ಯಾವುದೇ ರೀತಿಯ ಸಮಸ್ಯೆಗಳಿಗೆ ಸಿಲುಕಿದ್ದರೆ ಧೈರ್ಯದಿಂದ ಪೊಲೀಸ್‌ ಇಲಾಖೆ ಸಂಬಂಧಪಟ್ಟ ಇತರೆ ಸರ್ಕಾರದ ಘಟಕಗಳನ್ನು ಸಂಪರ್ಕಿಸಲು ಉತ್ತೇಜಿಸುವಂತೆ ಜಾಗೃತಿ ಮೂಡಿಸಬೇಕು.

* ಹದಿಹರೆಯದವರು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದಾಳಿಗಳಾಗದಂತೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಇದರಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಶಿಕ್ಷಣ ಇಲಾಖೆ ಮತ್ತು ಸಾಮಾಜಿಕ ಸಂಘಟನೆಗಳು ಸಕ್ರಿಯವಾಗಿ ಭಾಗವಹಿಸಬೇಕು.

* ಭೀಕರ ದಾಳಿಗಳು ದೌರ್ಜನ್ಯ ಪ್ರಕರಣಗಳು ನಡೆದಾಗ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹಗುರವಾದ ಹೇಳಿಕೆಗಳನ್ನು ನೀಡಬಾರದು. ಸಮಾಜವು ಮೌನ ವಹಿಸದೇ ಇದರ ಬಗ್ಗೆ ಧ್ವನಿ ಎತ್ತಬೇಕು. ನಮ್ಮ ಹೆಣ್ಣುಮಕ್ಕಳನ್ನು ರಕ್ಷಿಸಿಕೊಳ್ಳಲು ಎಲ್ಲರೂ ಹೋರಾಟಕ್ಕೆ ಮುಂದಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT