ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾರ್ಥಿನಿ ಕೊಲೆ ಖಂಡಿಸಿ ಪ್ರತಿಭಟನೆ | OPD ಸ್ಥಗಿತ: ವೈದ್ಯಕೀಯ ಸೇವೆ ವ್ಯತ್ಯಯ

ಆಸ್ಪತ್ರೆಗಳಲ್ಲಿ ಸುರಕ್ಷತೆ ಒದಗಿಸಲು ವೈದ್ಯರ ಆಗ್ರಹ
Published 18 ಆಗಸ್ಟ್ 2024, 1:00 IST
Last Updated 18 ಆಗಸ್ಟ್ 2024, 1:00 IST
ಅಕ್ಷರ ಗಾತ್ರ

ಬೆಂಗಳೂರು: ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವ ಪ್ರಕರಣ ಖಂಡಿಸಿ, ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳ ಜತೆಗೆ ಕೆಲ ಸರ್ಕಾರಿ ಆಸ್ಪತ್ರೆಗಳೂ ಒಪಿಡಿ (ಹೊರ ರೋಗಿ ವಿಭಾಗ) ಸೇವೆಯನ್ನು ಶನಿವಾರ ಸ್ಥಗಿತ ಮಾಡಿದ್ದರಿಂದ ಆರೋಗ್ಯ ಸೇವೆಯಲ್ಲಿ ವ್ಯತ್ಯಯವಾಯಿತು.

ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕರ್ನಾಟಕ ಶಾಖೆ ನೇತೃತ್ವದಲ್ಲಿ ವೈದ್ಯರು ಮುಷ್ಕರ ನಡೆಸಿದರು. ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆಯವರೆಗೆ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್‌ ಆಗಿದ್ದರೆ, ಕೆಲ ಸರ್ಕಾರಿ ಆಸ್ಪತ್ರೆಗಳ ಒಪಿಡಿಗಳಲ್ಲಿ ವೈದ್ಯರಿಲ್ಲದೆ ಸೇವೆಯಲ್ಲಿ ವ್ಯತ್ಯಯವಾಯಿತು. ವಿಕ್ಟೋರಿಯಾ ಸೇರಿ ಇನ್ನೂ ಕೆಲ ಸರ್ಕಾರಿ ಆಸ್ಪತ್ರೆಗಳ ಒಪಿಡಿ ವಿಭಾಗ ಮುಚ್ಚಿದ್ದವು. ಇದರಿಂದ ರೋಗಿಗಳು ಸಮಸ್ಯೆ ಎದುರಿಸಿದರು.

ಒಪಿಡಿ ಸೇವೆ ಸ್ಥಗಿತಗೊಳಿಸುವುದಾಗಿ ಖಾಸಗಿ ಆಸ್ಪತ್ರೆಗಳು ಘೋಷಿಸಿದ್ದರೂ ಮಾಹಿತಿ ಕೊರತೆಯಿಂದ ಕೆಲವರು ಚಿಕಿತ್ಸೆಗಾಗಿ ಬಂದು, ಮರಳಿದರು. ತುರ್ತು ಸೇವೆಗಳು ಮಾತ್ರ ಲಭ್ಯವಿದ್ದರಿಂದ ಆಸ್ಪತ್ರೆಗಳಲ್ಲಿ ವೈದ್ಯರ ಸಂಖ್ಯೆಯೂ ಕಡಿಮೆಯಿತ್ತು. ಒಳರೋಗಿಗಳಿಗೆ ಎಂದಿನಂತೆ ಚಿಕಿತ್ಸೆ ಮುಂದುವರಿದರೆ, ತುರ್ತು ಚಿಕಿತ್ಸೆ ವಿಭಾಗದಲ್ಲಿ ಅಗತ್ಯ ಸೇವೆ ಒದಗಿಸಲಾಯಿತು. 

ಮೈಸೂರಿನ ಕೆ.ಆರ್‌ ಆಸ್ಪತ್ರೆ ಹಾಗೂ ಚೆಲುವಾಂಬ ಮಕ್ಕಳ ಆಸ್ಪತ್ರೆಗೆ ದೂರದ ಊರುಗಳಿಂದ ಬಂದ ಜನ ಬೆಳಿಗ್ಗೆಯಿಂದಲೇ ವೈದ್ಯರಿಗಾಗಿ ಕಾಯುತ್ತಾ ಕುಳಿತಿದ್ದರು. ವೈದ್ಯರು ಮಾಹಿತಿ ನೀಡಿದ ಬಳಿಕವೂ, ವೈದ್ಯರು ಬರುತ್ತಾರೆಂದು ಹಲವರು ಅಲ್ಲಿಯೇ ಉಳಿದಿದ್ದರು. ಡಯಾಲಿಸಿಸ್‌ಗಾಗಿ ಬಂದಿದ್ದವರು ಚಿಕಿತ್ಸೆ ಸಿಗದೆ ತೊಂದರೆಗೊಳಗಾದರು.

ಐಎಂಎ ಕರ್ನಾಟಕ ಶಾಖೆಯು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಐಎಂಎ ಹೌಸ್‌ನಲ್ಲಿ ಪ್ರತಿಭಟನಾ ಸಭೆ ನಡೆಸಿತು. ಈ ವೇಳೆ ವೈದ್ಯರು, ‘ಕೋಲ್ಕತ್ತದ ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣದಲ್ಲಿ ನ್ಯಾಯ ಸಿಗಬೇಕು. ವೈದ್ಯರ ಮೇಲಿನ ಹಲ್ಲೆ ತಡೆಗೆ ಕಠಿಣ ಕಾನೂನು ತಂದು, ವೈದ್ಯಕೀಯ ಸಂಸ್ಥೆಗಳಲ್ಲಿ ಸುರಕ್ಷಿತ ವಾತಾವರಣ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಆಂಬುಲೆನ್ಸ್‌ ಎಂದಿನಂತೆ ಸೇವೆ ನೀಡಿದರೆ, ಔಷಧ ಮಳಿಗೆಗಳೂ ಯಥಾ ಪ್ರಕಾರ ಕಾರ್ಯನಿರ್ವಹಿಸಿದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT