ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Freedom Parkನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ: ಆದೇಶ ಹಿಂಪಡೆಯಲು ಸೆ.15ರ ಗಡುವು

Published : 12 ಸೆಪ್ಟೆಂಬರ್ 2024, 15:21 IST
Last Updated : 12 ಸೆಪ್ಟೆಂಬರ್ 2024, 15:21 IST
ಫಾಲೋ ಮಾಡಿ
Comments

ಬೆಂಗಳೂರು: ‘ನಗರದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಿರುವ ಆದೇಶವು ಅಸಾಂವಿಧಾನಿಕವಾಗಿದ್ದು, ಇದೇ 15ರೊಳಗೆ (ಅಂತರರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ) ಈ ಆದೇಶವನ್ನು ಹಿಂಪಡೆದುಕೊಳ್ಳಬೇಕು’ ಎಂದು ಹೋರಾಟದ ಹಕ್ಕಿಗಾಗಿ ಜನಾಂದೋಲನ ಸಮಿತಿ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇತಿಹಾಸಕಾರ ರಾಮಚಂದ್ರ ಗುಹಾ, ‘ರಾಜ್ಯ ಸರ್ಕಾರ ಸೆಪ್ಟೆಂಬರ್‌  15ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿರುವುದು ಸ್ವಾಗತಾರ್ಹ. ಆದರೆ, ರಾಜ್ಯ ರಾಜಧಾನಿಯಲ್ಲಿ ಜನಸಾಮಾನ್ಯರಿಗೆ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ಕಸಿದುಕೊಂಡು, ಸ್ವಾತಂತ್ರ್ಯ ಉದ್ಯಾನ ಹೊರತುಪಡಿಸಿದ ಸ್ಥಳಗಳಲ್ಲಿ ಪ್ರತಿಭಟನೆಗೆ ನಿರ್ಬಂಧ ಹೇರಲಾಗಿದೆ. ಇದು ಖಂಡನೀಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಈ ಆದೇಶವನ್ನು ಹಿಂಪಡೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

‌‘ಬೆಂಗಳೂರು ನಗರ ಪ್ರದೇಶದ ಪುರಭವನ, ಮೌರ್ಯ ವೃತ್ತ, ಗಾಂಧಿ ಪ್ರತಿಮೆ, ಮೈಸೂರು ಬ್ಯಾಂಕ್‌ ವೃತ್ತದಂತ ಕೆಲವು ಸಾರ್ವಜನಿಕ ಪ್ರದೇಶಗಳಲ್ಲಿ ಶಾಂತಿಯುತ ಪ್ರತಿಭಟನೆ ಮಾಡಲು ಅವಕಾಶ ಕಲ್ಪಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು’ ಎಂದು ಪ್ರತಿಪಾದಿಸಿದರು.

ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ಎಸ್. ವಿಮಲಾ ಮಾತನಾಡಿ, ‘ಹಿಂದಿನ ಬಿಜೆಪಿ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ಬೆಂಗಳೂರಿನಲ್ಲಿ ಪ್ರತಿಭಟಿಸುವ ಹಕ್ಕನ್ನು ಕಳೆದುಕೊಂಡಿದ್ದೇವೆ. ಕಳೆದ ಎರಡು ವರ್ಷಗಳಿಂದ ಪೊಲೀಸರು ಸ್ವಾತಂತ್ರ್ಯ ಉದ್ಯಾನ ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ಪ್ರತಿಭಟನೆ, ಸಾರ್ವಜನಿಕ ಸಭೆ ಮತ್ತು ಮೆರವಣಿಗೆಗಳಿಗೆ ಅನುಮತಿ ನಿರಾಕರಿಸುತ್ತಿದ್ದಾರೆ. ಇದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದು ದೂರಿದರು.

ಸಾಹಿತಿ ಕೆ. ಮರುಳಸಿದ್ದಪ್ಪ, ಲೇಖಕಿ ವಿಜಯಾ, ಹೋರಾಟಗಾರ್ತಿ ಮೀನಾಕ್ಷಿ ಬಾಳಿ, ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ, ಸೇರಿದಂತೆ 593 ಜನ ಸಹಿ ಮಾಡಿರುವ ಪತ್ರವನ್ನು ಬಿಡುಗಡೆ ಮಾಡಲಾಯಿತು.

ಕಾರ್ಮಿಕ ಸಂಘಗಳ ಜಂಟಿ ಒಕ್ಕೂಟದ ಸಂಚಾಲಕ ಕೆ.ವಿ. ಭಟ್, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾದ ರಾಜ್ಯ ಘಟಕದ ಅಧ್ಯಕ್ಷ ಮೋಹನ್‌ ರಾಜ್, ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷೆ ಮೈತ್ರೇಯಿ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT