ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಅರವಿಂದ್‌ ಕೇಜ್ರಿವಾಲ್‌ ಬಂಧನ ಖಂಡಿಸಿ ಪ್ರತಿಭಟನೆ

‘ಇಂಡಿಯಾ’ ಒಕ್ಕೂಟದಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ
Published 31 ಮಾರ್ಚ್ 2024, 15:53 IST
Last Updated 31 ಮಾರ್ಚ್ 2024, 15:53 IST
ಅಕ್ಷರ ಗಾತ್ರ

ಬೆಂಗಳೂರು: ‘ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ’ ಎಂದು ಆರೋ‍ಪಿಸಿ, ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಆಮ್‌ ಆದ್ಮಿ ಪಕ್ಷದ(ಎಎಪಿ) ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಅವರ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.

ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ವಿರುದ್ಧ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿ, ಧಿಕ್ಕಾರ ಕೂಗಿದರು.

‘ಮುಖ್ಯಮಂತ್ರಿ’ ಚಂದ್ರು ಅವರು ಮಾತನಾಡಿ, ‘ಜಾರಿ ನಿರ್ದೇಶನಾಲಯ(ಇ.ಡಿ), ಸಿಬಿಐ, ತೆರಿಗೆ ಇಲಾಖೆ ಅಧಿಕಾರಿಗಳು ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ. ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಗುಲಾಮರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ’ ಎಂದು ಆಪಾದಿಸಿದರು.

‘ಕಳೆದ 10 ವರ್ಷಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ನಡೆಸಲಾಗುತ್ತಿದೆ’ ಎಂದು ದೂರಿದರು.

‘ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರ ಮೂಲಕ ಕಡಿವಾಣ ಹಾಕುತ್ತಿದ್ದಾರೆ. ದೆಹಲಿಯಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಮೂಲಕ ರಾಜ್ಯದ ಆಡಳಿತವನ್ನು ಹತೋಟಿಯಲ್ಲಿ ಇಡಲು ಯತ್ನಿಸುತ್ತಿದ್ದಾರೆ. ಜೈಲಿನಲ್ಲಿರಬೇಕಾದ ಕಡುಭ್ರಷ್ಟರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಮಂತ್ರಿ, ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಅದೇ ರಾಜಕೀಯ ಎದುರಾಳಿಗಳನ್ನು ಇ.ಡಿ, ಸಿಬಿಐ, ತೆರಿಗೆ ಇಲಾಖೆ ಮತ್ತಿತರ ತನಿಖಾ ಸಂಸ್ಥೆಗಳ ಮೂಲಕ ಸುಳ್ಳು ಪ್ರಕರಣಗಳಡಿ ಆರೋಪಿಗಳಾಗಿಸಿ ಕಿರುಕುಳ ಕೊಡುತ್ತಿದ್ದಾರೆ’ ಎಂದು ದೂರಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ‘ಬಿಜೆಪಿಯ ಪೂರ್ವಜರು ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್‌ನವರಾಗಿದ್ದಾರೆ. ಅವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರಲ್ಲ. ಮನುವಾದಿ, ಸರ್ವಾಧಿಕಾರಿ ಧೋರಣೆಯಲ್ಲಿ ನಂಬಿಕೆ ಇಟ್ಟವರಾಗಿದ್ದಾರೆ. ಸಂವಿಧಾನ ವಿರೋಧಿಗಳು. ಭಾರತದಲ್ಲಿ ಈಗ ಸರ್ವಾಧಿಕಾರ ಚಾಲ್ತಿಯಲ್ಲಿದೆ’ ಎಂದು ಆಪಾದಿಸಿದರು.

ಸಿಪಿಐಎಂ ಮುಖಂಡ ಜಿ.ಎನ್‌.ನಾಗರಾಜ್‌ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಹಿಂದಿರುವ ಆರ್‌ಎಸ್‌ಎಸ್‌ ಈ ದೇಶವನ್ನು ನಿಯಂತ್ರಿಸುತ್ತಿದೆ. ಮನುವಾದಿ, ಕೋಮು ದ್ವೇಷದ ಚಿಂತನೆಗಳನ್ನು ಹೊಂದಿರುವ, ಸರ್ವಾಧಿಕಾರಿ ಧೋರಣೆ ಆರ್‌ಎಸ್‌ಎಸ್‌ ಕಳೆದ ನೂರು ವರ್ಷಗಳಿಂದ ವ್ಯವಸ್ಥಿತವಾಗಿ ಭಾರತವನ್ನು ತನ್ನ ಕೈವಶ ಮಾಡಿಕೊಳ್ಳುತ್ತ ಬಂದಿದೆ’ ಎಂದು ಹೇಳಿದರು.

ಎಸ್‌ಡಿಪಿಐ ಮುಖಂಡ ಅಬ್ದುಲ್‌ ಮಜೀದ್‌, ಸಾಮಾಜಿಕ ಹೋರಾಟಗಾರ ನೂರ್‌ ಶ್ರೀಧರ್‌, ಸಲೀಲ್‌ ಶೆಟ್ಟಿ, ಎಎಪಿ ರಾಜ್ಯ ಉಪಾಧ್ಯಕ್ಷರಾದ ಮೋಹನ್‌ ದಾಸರಿ, ವಿಜಯ್‌ ಶರ್ಮಾ, ರಮೇಶ್‌ ಬೆಲ್ಲಂಕೊಂಡ, ವೆಂಕಟೇಶ್‌, ಶಾಂತಲಾ ದಾಮ್ಲೆ, ಸಂಪತ್‌ ಶೆಟ್ಟಿ, ನಸೀಮುದ್ದಿನ್‌ ಪಟೇಲ್‌, ರುದ್ರಯ್ಯ ನವಲೀಹೀರೇಮಠ್, ಸುದೇಶ್‌ ರಾಥೋಡ್‌, ವಿವೇಕಾನಂದ ಸಾಲಿನ್ಸ್‌, ಉಮಾಶಂಕರ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್‌ ಸಹಾನಿ, ಪ್ರಕಾಶ್‌ ನಡುಂನುಡಿ, ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್‌ ವಿ. ಸದಂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT