ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಮನದ ಮಾತು’ ಕಾರ್ಯಕ್ರಮದಲ್ಲಿ ಬೆಂಗಳೂರಿನ ‘ಸಂಸ್ಕೃತ ವಾರಾಂತ್ಯ’ ಪ್ರಸ್ತಾಪ

Published 30 ಜೂನ್ 2024, 16:08 IST
Last Updated 30 ಜೂನ್ 2024, 16:08 IST
ಅಕ್ಷರ ಗಾತ್ರ

ಬೆಂಗಳೂರು: ಸಂಸ್ಕೃತದಲ್ಲಿ ಮಾತನಾಡುವವರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಬೆಂಗಳೂರಿನ ಯುವತಿಯೊಬ್ಬರು ಆರಂಭಿಸಿದ್ದ ‘ಸಂಸ್ಕೃತ ವಾರಾಂತ್ಯ’ ಈಗ ಹೊಸ ಮೈಲುಗಲ್ಲು ತಲುಪಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಭಾನುವಾರ ತಮ್ಮ ‘ಮನದ ಮಾತು’ ಕಾರ್ಯಕ್ರಮದಲ್ಲಿ ‘ಸಂಸ್ಕೃತ ವಾರಾಂತ್ಯ’ದ ಬಗ್ಗೆ ಪ್ರಸ್ತಾಪಿಸಿದ್ದಾರೆ.

‘ಬೆಂಗಳೂರಿನಲ್ಲಿ ಕಬ್ಬನ್‌ ಪಾರ್ಕ್‌ ಎಂಬ ಉದ್ಯಾನವೊಂದಿದೆ. ಅಲ್ಲಿ ಕೆಲ ಹಿರಿಯರು–ಕಿರಿಯರು ಪ್ರತಿ ಭಾನುವಾರ ಸೇರುತ್ತಾರೆ ಮತ್ತು ಪರಸ್ಪರ ಸಂಸ್ಕೃತದಲ್ಲಿ ಮಾತನಾಡುತ್ತಾರೆ. ಅಲ್ಲಿ ಸಂಸ್ಕೃತದಲ್ಲೇ ಸಂವಾದಗಳನ್ನು ಆಯೋಜಿಸಲಾಗುತ್ತದೆ. ಸಮಷ್ಠಿ ಗುಬ್ಬಿ ಎಂಬ ಯುವತಿ ಆರಂಭಿಸಿದ ಈ ಕಾರ್ಯಕ್ರಮ ಈಗ ಬೆಂಗಳೂರಿಗರಲ್ಲಿ ಜನಪ್ರಿಯತೆ ಪಡೆಯುತ್ತಿದೆ’ ಎಂದು ಮೋದಿ ಹೇಳಿದ್ದಾರೆ.

ಸಂಸ್ಕೃತದಲ್ಲಿ ಎಂ.ಎ ಪದವಿ ಪಡೆದಿರುವ ಸಮಷ್ಠಿ ಅವರು ‘ಸ್ಥಾಯಿ’ (sthaayi.in) ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಈ ಸಂಸ್ಥೆಯು ಸಂಸ್ಕೃತ ಸಂವಹನ, ಕನ್ನಡ ಸಂವಹನ ಮತ್ತು ಹಿಂದಿ ಸಂವಹನ ಕೋರ್ಸ್‌ಗಳನ್ನು ನಡೆಸುತ್ತದೆ. ಸಂಸ್ಕೃತವನ್ನು ಹೆಚ್ಚು ಜನರು ಮಾತನಾಡಬೇಕು ಎಂಬ ಉದ್ದೇಶದಿಂದ ಸಮಷ್ಠಿ ಅವರು ಸಂಸ್ಕೃತ ನಡಿಗೆ (ವಾರಾಂತ್ಯ ನಡಿಗೆ), ಸಂಸ್ಕೃತ ಓಟ (ಕಿರು ಮ್ಯಾರಥಾನ್‌) ಸಂಸ್ಕೃತ ರೈಡ್ (ಬೈಕಿಂಗ್ ಪ್ರವಾಸ) ಮತ್ತು ಸಂಸ್ಕೃತ ವಾರಾಂತ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಸಂಸ್ಕೃತ ವಾರಾಂತ್ಯ ಕಾರ್ಯಕ್ರಮವನ್ನು ಪುಣೆ, ಮುಂಬೈ ಮತ್ತು ಹೈದರಾಬಾದ್‌ನಲ್ಲಿಯೂ ಆಯೋಜಿಸಲಾಗಿದೆ.

‘ಸಂಸ್ಕೃತ ಮಾತನಾಡುವವರಿಗಾಗಿಯೇ ಬೈಕಿಂಗ್‌ ಆಯೋಜಿಸುತ್ತೇವೆ. ಬಾಲಿವುಡ್‌ ಮತ್ತು ಕನ್ನಡದ ಗೀತೆಗಳನ್ನು ಸಂಸ್ಕೃತಕ್ಕೆ ಭಾಷಾಂತರಿಸಿ ಪ್ರಸ್ತುತಪಡಿಸುವ ತಂಡವೂ ಇದೆ. ಸಂಸ್ಕೃತವನ್ನು ಜನಪ್ರಿಯಗೊಳಿಸಲು ಹಲವು ವರ್ಷಗಳಿಂದ ದುಡಿಯುತ್ತಿದ್ದೇನೆ. ನನ್ನ ಶ್ರಮವನ್ನು ಪ್ರಧಾನಿ ಮೋದಿ ಅವರು ಗುರುತಿಸಿ, ಪ್ರಶಂಸಿಸಿದ್ದಾರೆ. ನನ್ನ ಸಂತೋಷಕ್ಕೆ ಎಲ್ಲೆಯೇ ಇಲ್ಲ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT