-‘ರಾಜಕಾಲುವೆ ಸ್ವಚ್ಛಗೊಳಿಸಿ’
ಆರ್.ಟಿ. ನಗರದ ಸೀತಪ್ಪ ಬಡಾವಣೆಯ ಆರನೇ ಅಡ್ಡರಸ್ತೆಯ ರಾಜಕಾಲುವೆಯಲ್ಲಿ ಸ್ಥಳೀಯ ನಿವಾಸಿಗಳು ಪ್ರತಿನಿತ್ಯ ಕಸ ಹಾಕುತ್ತಿದ್ದಾರೆ. ಇದರಿಂದ, ರಾಜಕಾಲುವೆಯಲ್ಲಿ ನೀರು ಕಟ್ಟಿಕೊಂಡು ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಸೊಳ್ಳೆಗಳ ಉತ್ಪತ್ತಿ ತಾಣವಾಗಿದ್ದು, ರಾಜಕಾಲುವೆಯ ಅಕ್ಕಪಕ್ಕದಲ್ಲಿರುವ ನಿವಾಸಿಗಳಲ್ಲಿ ಆತಂಕ ಶುರುವಾಗಿದೆ. ರಾಜಕಾಲುವೆ ಪ್ಲಾಸ್ಟಿಕ್ ಚೀಲಗಳಿಂದ ತುಂಬಿ ಹೋಗಿದ್ದು, ಇದನ್ನು ಸ್ವಚ್ಛಗೊಳಿಸುವಂತೆ ಬಿಬಿಎಂಪಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಕೂಡಲೇ ರಾಜಕಾಲುವೆಯ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕು.
-ಮೊಹಮ್ಮದ್ ರಫಿ, ಸೀತಪ್ಪ ಲೇಔಟ್
ಬಾಗಲಗುಂಟೆ: ರಸ್ತೆ ಗುಂಡಿ ಮುಚ್ಚಿ’
ಬಾಗಲಗುಂಟೆ ವ್ಯಾಪ್ತಿಯ ತೋಟದಗುಡ್ಡದಹಳ್ಳಿಯ ಬೈರವೇಶ್ವರ ವೃತ್ತದ ಅಕ್ಷರ ಸಿರಿ ವಿದ್ಯಾಮಂದಿರದ ಮುಂಭಾಗದ ರಸ್ತೆ ಗುಂಡಿಗಳು ಬಿದ್ದು ಸಂಪೂರ್ಣವಾಗಿ ಹಾಳಾಗಿದೆ. ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಹಾಳಾದ ಪರಿಣಾಮ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಮಳೆಯಾದ ಸಂದರ್ಭದಲ್ಲಿ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕು. ಬಿಬಿಎಂಪಿ ಕೂಡಲೇ ಇಲ್ಲಿನ ರಸ್ತೆ ದುರಸ್ತಿಗೆ ಆದ್ಯತೆ ನೀಡಬೇಕು.
-ವೀರಪ್ಪ ಕೆ., ಬಾಗಲಗುಂಟೆ
‘ರಸ್ತೆಯಲ್ಲಿ ಹರಿಯುವ ಚರಂಡಿ ನೀರು’
ಬಿಟಿಎಂ ಲೇಔಟ್ ಎರಡನೇ ಹಂತದ ಶಾಪರ್ಸ್ ಸ್ಟಾಪ್ ಪಕ್ಕದ ಇಂಡಿಯನ್ ಓವರ್‌ಸಿಸ್ ಬ್ಯಾಂಕ್‌ನ ಮುಂಭಾಗದ ಮ್ಯಾನ್‌ಹೋಲ್ ಕಟ್ಟಿಕೊಂಡು ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ, ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 15 ದಿನಗಳಿಂದ ತ್ಯಾಜ್ಯ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಕೂಡಲೇ ಇಲ್ಲಿ ಕಟ್ಟಿಕೊಂಡಿರುವ ಮ್ಯಾನ್‌ಹೋಲ್ ಅನ್ನು ಸರಿಪಡಿಸಬೇಕು.
-ವೇಣು ಕುಮಾರ್, ಯತೀಶ್, ಬಿಟಿಎಂ ಲೇಔಟ್
‘ರಾಜರಾಜೇಶ್ವರಿನಗರ: ಅಗೆದ ಗುಂಡಿ ಮುಚ್ಚಿ’
ರಾಜರಾಜೇಶ್ವರಿನಗರ ಬಿಎಚ್‌ಇಎಲ್ ಲೇಔಟ್‌ನ 2ನೇ ಹಂತದ 7ನೇ ಕ್ರಾಸ್‌ನಲ್ಲಿ ಬೆಂಗಳೂರು ಜಲ ಮಂಡಳಿಯ ಕೊಳವೆ ದುರಸ್ತಿಗೆ ಅಗೆದ ಗುಂಡಿಯನ್ನು ಹಾಗೆಯೇ ಬಿಡಲಾಗಿದೆ. ಕೊಳವೆ ದುರಸ್ತಿ ಕೆಲಸವೂ ಮಾಡಿಲ್ಲ. ರಸ್ತೆಯ ತಿರುವಿನಲ್ಲಿಯೇ ಈ ಗುಂಡಿ ತೆಗೆದಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ಇದರಿಂದ, ವಾಹನ ಸವಾರರು ಹಾಗೂ ಪಾದಚಾರಿಗಳ ಸಂಚಾರಕ್ಕೆ ಸಂಚಕಾರ ಬಂದಿದೆ. ಕಳೆದ ಒಂದು ವಾರದಿಂದ ಈ ಭಾಗದ ನಿವಾಸಿಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡುತ್ತಿಲ್ಲ. ಆದ್ದರಿಂದ, ಸಂಬಂಧಪಟ್ಟ ಅಧಿಕಾರಿಗಳು ಈ ಕೊಳವೆ ದುರಸ್ತಿಗೊಳಿಸಿ, ಗುಂಡಿಯನ್ನು ಮುಚ್ಚಬೇಕು.
-ರವಿ, ರಾಜರಾಜೇಶ್ವರಿನಗರ
‘ರಾಜಾಜಿನಗರ: ರಸ್ತೆ ಸರಿಪಡಿಸಿ’
ರಾಜಾಜಿನಗರದ ಎರಡನೇ ಮುಖ್ಯರಸ್ತೆಯ ನಾಲ್ಕನೇ ಬ್ಲಾಕ್‌ನ ನಾಕೋಡ್ ಜೈನ್ ದೇವಸ್ಥಾನವನ್ನು ಸಂಪರ್ಕಿಸುವ ರಸ್ತೆ ಮತ್ತು ಪಾದಚಾರಿ ಮಾರ್ಗದಲ್ಲಿ ಗುಂಡಿ ಬಿದ್ದಿದೆ. ಇದರಿಂದ, ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಆಗಿದೆ. ರಸ್ತೆಯಲ್ಲಿ ಗುಂಡಿ ಬಿದ್ದ ಪರಿಣಾಮ ಪ್ರತಿನಿತ್ಯ ಸಂಚಾರದಟ್ಟಣೆ ಆಗುತ್ತಿದೆ. ಕೆಲವೊಮ್ಮೆ ಅಪಘಾತಗಳು ಸಂಭವಿಸಿದ ಉದಾಹರಣೆಗಳಿವೆ. ಇತ್ತೀಚೆಗೆ ನಗರದಲ್ಲಿ ಮಳೆ ಆಗುತ್ತಿದೆ. ಇದರಿಂದ, ಗುಂಡಿ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಬಿಬಿಎಂಪಿ ಕೂಡಲೇ ಇಲ್ಲಿನ ರಸ್ತೆ ಗುಂಡಿ ಮುಚ್ಚಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.
-ಶಿವಪ್ರಸಾದ್, ರಾಜಾಜಿನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.