ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸ್ಪಂದನ | ಸಮಸ್ಯೆಗಳ ಸರಮಾಲೆ: ಪರಿಹಾರದ ಆಶಾಕಿರಣ

ಪುಲಿಕೇಶಿನಗರದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್’ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮ
Last Updated 7 ಮೇ 2022, 20:16 IST
ಅಕ್ಷರ ಗಾತ್ರ

ಬೆಂಗಳೂರು: ಕುಡಿಯುವ ನೀರಿನ ಪೂರೈಕೆ ಸಮಸ್ಯೆ, ಹದಗೆಟ್ಟ ರಸ್ತೆ, ಸಂಚಾರ ದಟ್ಟಣೆ, ವಿಲೇವಾರಿಯಾಗದ ಕಸ, ಅವ್ಯವಸ್ಥೆಯಿಂದ ಕೂಡಿರುವ ಪಾದಚಾರಿ ಮಾರ್ಗ... ಹೀಗೆ ಹತ್ತು ಹಲವು ಸಮಸ್ಯೆಗಳಿಂದ ತತ್ತರಿಸಿದ್ದ ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ನಾಗರಿಕರಿಗೆ ಶನಿವಾರ ತುಸು ಸಮಾಧಾನ ದೊರೆಯಿತು.

ಕಚೇರಿಗಳಿಗೆ ಅಲೆದಾಡಿ ಸುಸ್ತಾಗಿದ್ದ ಜನರಲ್ಲಿ ಆಶಾಭಾವ ಮೂಡಿತು. ಇದಕ್ಕೆ ಕಾರಣವಾಗಿದ್ದು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ಪುಲಿಕೇಶಿನಗರದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮ.

ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಕಾರ್ಯಕ್ರಮದಲ್ಲಿ ನಾಗರಿಕರ ದೂರು ದುಮ್ಮಾನ ಆಲಿಸಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಬಹುತೇಕ ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲು ಕ್ರಮಕೈಗೊಂಡರು.

ಜನಸ್ಪಂದನದಲ್ಲಿ ಪ್ರಸ್ತಾವವಾದ ಪ್ರಮುಖ ಅಹವಾಲುಗಳು ಇಂತಿವೆ.

ಅನಂತ್‌: 32ನೇ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಸಾಕಷ್ಟಿದೆ. ರಸ್ತೆ ದುರಸ್ತಿಯಾಗಿಲ್ಲ. ಇಲ್ಲಿನ ಸಮಸ್ಯೆಗಳ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದ್ದೇನೆ. ನಮಗೆ ಭರವಸೆ ನೀಡುವುದು ಬೇಡ. ಸಮಸ್ಯೆ ಬಗೆಹರಿಸಿ.

ಅಖಂಡ ಶ್ರೀನಿವಾಸಮೂರ್ತಿ: ನೀರಿನ ಸಮಸ್ಯೆ ಬಗೆಹರಿಸಲು ಕ್ರಮಕೈಗೊಳ್ಳಲಾಗಿದೆ. ಶೀಘ್ರ ಸಮಸ್ಯೆ ಇತ್ಯರ್ಥಗೊಳಿಸಲಾಗುವುದು.

ದೇವಪ್ಪ: ಕಾವಲ್‌ ಬೈರಸಂದ್ರ ವಾರ್ಡ್‌ನಲ್ಲಿ ಮರಗಳಿಗೆ ವಿದ್ಯುತ್‌ ತಂತಿ ಸ್ಪರ್ಶಿಸುತ್ತಿವೆ. ಮರ ಬಿದ್ದರೆ ವೈರ್‌ಗಳು ತುಂಡಾಗುತ್ತವೆ. ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ ಉಡಾಫೆಯಿಂದ ಏಕವಚನದಲ್ಲಿ ಉತ್ತರ ನೀಡುತ್ತಾರೆ.

ಅರಣ್ಯ ಅಧಿಕಾರಿ ಕೆ.ಎಸ್‌. ರವೀಂದ್ರನಾಥ್‌: ನಾನು ಏಕವಚನದಲ್ಲಿ ಮಾತನಾಡಿಲ್ಲ. ಈ ಸಮಸ್ಯೆಯನ್ನು ತ್ವರಿತಗತಿಯಲ್ಲಿ ಬಗೆಹರಿಸಲಾಗುವುದು.

ಝಕ್ರಿಯಾ ಅನ್ವರ್‌: ಪುಲಿಕೇಶಿ ನಗರದಲ್ಲಿ ಜಲಮಂಡಳಿಯವರು ಒಳಚರಂಡಿ ಪೈಪ್‌ ಅಳವಡಿಸಲು ರಸ್ತೆ ಅಗೆದು ಹಾಗೆಯೇ ಬಿಟ್ಟಿದ್ದಾರೆ. ಹಲವು ತಿಂಗಳಾದರೂ ದುರಸ್ತಿ ಮಾಡಿಲ್ಲ. ನೀರಿನ ಸಮಸ್ಯೆಯೂ ಇದೆ. ಬೀದಿ ದೀಪಗಳು ಸಹ ಇಲ್ಲ.

ಅಖಂಡ ಶ್ರೀನಿವಾಸಮೂರ್ತಿ: ನೀರಿನ ಸಮಸ್ಯೆ ಬಗ್ಗೆ ವಿಧಾನಸಭೆ ಅಧಿವೇಶನದಲ್ಲೂ ಪ್ರಸ್ತಾಪಿಸಲಾಗಿತ್ತು. ಎರಡು ದಿನಕ್ಕೊಮ್ಮೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಕ್ಷೇತ್ರಕ್ಕೆ 50 ಬೀದಿ ದೀಪಗಳು ಮಂಜೂರಾಗಿವೆ. ಹೊಸ ಕೊಳವೆಬಾವಿಗಳನ್ನು ಸಹ ಕೊರೆಯಿಸಲಾಗುವುದು. ಕುಡಿಯುವ ನೀರು ಮತ್ತು ಚರಂಡಿ ಪೈಪ್‌ಲೈನ್‌ ಅಳವಡಿಸಲು ₹65 ಕೋಟಿ ಮಂಜೂರಾಗಿದ್ದು, ಪ್ರತಿ ವಾರ್ಡ್‌ಗೆ ಅಂದಾಜು ₹10 ಕೋಟಿ ಯೋಜನೆ ರೂಪಿಸಲಾಗುವುದು.

ಸಯ್ಯದ್‌: ಕೆಎಚ್‌ಬಿ ಮುಖ್ಯ ರಸ್ತೆಯಲ್ಲಿ ವಿವಿಧ ಟೆಲಿಕಾಂ ಕಂಪನಿಗಳು ಕೇಬಲ್‌ಗಾಗಿ ರಸ್ತೆ ಅಗೆದು ಹಾಳು ಮಾಡುತ್ತಿವೆ. ಆದರೆ, ದುರಸ್ತಿ ಮಾಡುತ್ತಿಲ್ಲ.

ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಬಿ.ಟಿ.ಮೋಹನ್‌ ಕೃಷ್ಣ: ‘ಒಎಫ್‌ಸಿ’ ಅಳವಡಿಕೆಗಾಗಿ ರಸ್ತೆ
ಅಗೆಯುವವರ ವಿರುದ್ಧ ಕ್ರಮಕೈಗೊಂಡಿದ್ದೇವೆ. ಸುಲ್ತಾನಪಾಳ್ಯ ರಸ್ತೆ ಅಭಿವೃದ್ಧಿಗೆ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ₹80 ಕೋಟಿ ಅನುದಾನ ಮಂಜೂರಾಗಿದೆ. ಕ್ರಿಯಾ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಮೋದಿ ಗಾರ್ಡನ್‌ ಕ್ಷೇಮಾಭಿವೃದ್ಧಿ ನಿವಾಸಿಗಳ ಸಂಘದ ಅಧ್ಯಕ್ಷ ಎ.ಆರ್‌. ಸುರೇಶ್‌: ಕಾವೇರಿ ನೀರು ಪೂರೈಕೆಯಾಗುತ್ತಿಲ್ಲ. ರಕ್ಷಣಾ ಇಲಾಖೆಯ ಜಾಗದ ಸಮೀಪದಲ್ಲಿರುವ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. 100 ಮೀಟರ್‌ ಅಂತರದಲ್ಲಿ ಯಾವುದೇ ಕಾರ್ಯ ಕೈಗೊಳ್ಳದಂತೆ ರಕ್ಷಣಾ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ. ಇದರಿಂದ, ಮನೆ ನಿರ್ಮಿಸಲು ಸಹ ತೊಂದರೆಯಾಗುತ್ತಿದೆ.

ಅಖಂಡ ಶ್ರೀನಿವಾಸಮೂರ್ತಿ: ನಾಗರಿಕರಿಗೆ ತೊಂದರೆ ನೀಡದಂತೆ ರಕ್ಷಣಾ ಇಲಾಖೆಯ ಕಮಾಂಡರ್‌ ಜತೆ ಚರ್ಚಿಸಲಾಗುವುದು. ನೀರು ಪೂರೈಸುವ ಕಾಮಗಾರಿ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.

ಶಾಂಪೂರ ನಾಗರಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮುನಿಕೃಷ್ಣ: ಮುನಿವೀರಪ್ಪ ಬಡಾವಣೆಯಲ್ಲಿ ನಾಲ್ಕು ಕೊಳವೆಬಾವಿಗಳಲ್ಲಿ ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಡಿವಿಜಿ ಉದ್ಯಾನದಲ್ಲಿ ವಾಚ್‌ಮನ್‌ ಇಲ್ಲ. ನಾವೇ ಈ ಉದ್ಯಾನ ನಿರ್ವಹಿಸುತ್ತಿದ್ದೇವೆ. ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿರುವುದರಿಂದ ಉದ್ಯಾನಕ್ಕೆ ಭದ್ರತೆ ಹೆಚ್ಚಿಸಿ.

ಅಖಂಡ ಶ್ರೀನಿವಾಸಮೂರ್ತಿ: ಬೆಳಿಗ್ಗೆ ಮತ್ತು ಸಂಜೆ ಹೊಯ್ಸಳ ಗಸ್ತು ಹೆಚ್ಚಿಸಬೇಕು. ಕೊಳವೆಬಾವಿಗಳ ದುರಸ್ತಿಗೆ ಜಲಮಂಡಳಿ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ.

‘ಗಾಂಜಾ, ಚರಸ್‌ ಹಾವಳಿ ನಿಯಂತ್ರಿಸಿ’

‘ಗಾಂಜಾ, ಚರಸ್‌ ಹಾವಳಿಯಿಂದ ಯುವಕರ ಬದುಕು ನಾಶವಾಗುತ್ತಿದೆ. ಉದ್ಯಾನಗಳಲ್ಲಿಯೂ ಕಾನೂನುಬಾಹಿರ ಚಟುವಟಿಕೆ ನಡೆಯುತ್ತಿವೆ. ಇಂತಹ ಚಟುವಟಿಕೆಗೆ ಕಡಿವಾಣ ಹಾಕಿ’ ಎಂದು ಹಲವು ನಾಗರಿಕರು ದೂರಿದರು.

‘ಡಿ.ಜೆ. ಹಳ್ಳಿ ಉರ್ದು ಶಾಲಾ ಆವರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಗಾಂಜಾ, ಡ್ರಗ್ಸ್‌ ಜಾಸ್ತಿ ಇದೆ. ದೂರು ನೀಡಿದರೆ ಬೆದರಿಕೆ ಹಾಕುತ್ತಾರೆ’ ಎಂದು ಅಫ್ರೀನ್ ಖಾನ್ ಗಮನ ಸೆಳೆದರು.

ಪ್ರತಿಕ್ರಿಯಿಸಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ‘ನಾಲ್ಕು ವಾರ್ಡ್‌ಗಳಲ್ಲಿ ಈ ಸಮಸ್ಯೆ ಇದೆ. ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೆ, ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದರು.

ದೂರುಗಳಿಗೆ ಪ್ರತಿಕ್ರಿಯಿಸಿದ ಕೆ.ಜೆ. ಹಳ್ಳಿ ಠಾಣೆಯ ಪಿಎಸ್‌ಐ ಬಾಬುರೆಡ್ಡಿ, ‘2021ರಲ್ಲಿ 120 ಪ್ರಕರಣ ದಾಖಲಿಸಿ 120 ಜನರನ್ನು ಬಂಧಿಸಿದ್ದೇವೆ. ಆದರೆ, ಯಾರನ್ನಾದರೂ ವಶಕ್ಕೆ ಪಡೆದಾಗ ನಾಯಕರು ಎಂದೆನಿಸಿಕೊಂಡ ಸ್ಥಳೀಯರೇ, ‘ಅವರು ನಮ್ಮವರು ಬಿಟ್ಟುಬಿಡಿ’ ಎಂದು ಒತ್ತಡ ಹಾಕುತ್ತಾರೆ. ಮಕ್ಕಳಿಗೆ ತಂದೆ–ತಾಯಿ ಬುದ್ಧಿ ಹೇಳಬೇಕು. ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವವರ ಹೆಸರನ್ನು ಗೋಪ್ಯವಾಗಿರಿಸುತ್ತೇವೆ’ ಎಂದರು.

‘ಮನೆಯನ್ನು ಭೋಗ್ಯಕ್ಕೆ ನೀಡಿ ವಂಚನೆ’

‘ಮನೆ ಮತ್ತು ಫ್ಲ್ಯಾಟ್‌ಗಳನ್ನು ಬಾಡಿಗೆ ಪಡೆದು ಇನ್ನೊಬ್ಬರಿಗೆ ಭೋಗ್ಯಕ್ಕೆ ನೀಡಿ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಭೋಗ್ಯಕ್ಕೆ ನೀಡುವಾಗ ಭಾರಿ ಹಣವನ್ನು ಮುಂಗಡ ಪಡೆಯುತ್ತಿದ್ದಾರೆ. ಆದ್ದರಿಂದ, ಅಪರಿಚಿತರಿಗೆ ಮನೆ ಬಾಡಿಗೆ ನೀಡುವ ಮುನ್ನ ಎಚ್ಚರವಹಿಸಿ. ಅವರ ಸಂಪೂರ್ಣ ವಿವರ ಪಡೆದುಕೊಳ್ಳಬೇಕು’ ಎಂದು ಆರ್‌.ಟಿ. ನಗರ ಠಾಣೆಯ ಇನ್‌ಸ್ಪೆಕ್ಟರ್‌ ಶಿವಕುಮಾರ್‌ ಸಲಹೆ ನೀಡಿದರು.

‘ಖಾಸಗಿ ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವ ಮುನ್ನ ಅವರ ಸಂಪೂರ್ಣ ಹಿನ್ನೆಲೆಯನ್ನು ಪಡೆದುಕೊಳ್ಳಬೇಕು. ಅವರ ಬಗ್ಗೆಯೂ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ನೇಪಾಳ ಮತ್ತು ಉತ್ತರ ಭಾರತದ ಕೆಲವು ಭದ್ರತಾ ಸಿಬ್ಬಂದಿ ಇತ್ತೀಚೆಗೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವರದಿಯಾಗಿದೆ. ಮುನ್ನೆಚ್ಚರಿಕೆ ಅಗತ್ಯ’ ಎಂದರು.

‘ಟ್ಯಾನರಿ ರಸ್ತೆ ವಿಸ್ತರಣೆ ಮಾಡಿ’

ಶಶಾವಲಿ: ಬಹಳ ವರ್ಷಗಳಿಂದ ಟ್ಯಾನರಿ ರಸ್ತೆ ವಿಸ್ತರಣೆಯಾಗಿಲ್ಲ. ಇದರಿಂದ ಬಹಳ ಸಮಸ್ಯೆಯಾಗುತ್ತಿದೆ.

ಅಖಂಡ ಶ್ರೀನಿವಾಸಮೂರ್ತಿ: ಈ ರಸ್ತೆ ವಿಸ್ತರಣೆಗೆ ಹಲವು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಿವೆ. ದಿಣ್ಣೂರು ರಸ್ತೆ ಮತ್ತು ಟ್ಯಾನರಿ ರಸ್ತೆಗೆ ಹೊಸ ಕಾಯಕಲ್ಪ ನೀಡಲಾಗುವುದು.

‘ಮಾಸ್ಟರ್‌ಪ್ಲಾನ್‌ ಜಾರಿಯಾಗಲಿ’

ಮುನಿರೆಡ್ಡಿಪಾಳ್ಯದಿಂದ ಪಾಟರಿಟೌನ್‌ವರೆಗಿನ ರಸ್ತೆ ಅಭಿವೃದ್ಧಿಗೆ ಬಿಡಿಎ 2015ರಲ್ಲಿ ರೂಪಿಸಿದ್ದ ಮಾಸ್ಟರ್‌ಪ್ಲಾನ್‌ ಅನುಷ್ಠಾನಗೊಳಿಸಿದರೆ ಬಹಳಷ್ಟು ಅನುಕೂಲವಾಗುತ್ತದೆ ಎಂದು ನಗರ ಯೋಜನಾ ಇಲಾಖೆಯ ನಿವೃತ್ತ ನಿರ್ದೇಶಕ ಇಜಾಜ್‌ ಅಹ್ಮದ್‌ ಸಲಹೆ ನೀಡಿದರು.

‘30 ಮೀ. ಅಗಲದ ರಸ್ತೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು. ಇದರಿಂದ, ಟ್ಯಾನರಿ ರಸ್ತೆ ಮತ್ತು ನಂದಿದುರ್ಗದ ರಸ್ತೆಯಲ್ಲಿನ ಸಂಚಾರ ದಟ್ಟಣೆ ಕಡಿಮೆಯಾಗುತ್ತದೆ. ಜತೆಗೆ, ಫ್ರೇಜರ್‌ಟೌನ್‌ನಿಂದ ವಿಮಾನ ನಿಲ್ದಾಣದ ರಸ್ತೆಯನ್ನು ಸಂಪರ್ಕಿಸುವುದಕ್ಕೂ ಅನುಕೂಲವಾಗುತ್ತದೆ’ ಎಂದು ಸಲಹೆ ನೀಡಿದರು.

‘ಟ್ಯಾನರಿ ರಸ್ತೆ ವಿಸ್ತರಣೆ ಮಾಡಿ’

ಶಶಾವಲಿ: ಬಹಳ ವರ್ಷಗಳಿಂದ ಟ್ಯಾನರಿ ರಸ್ತೆ ವಿಸ್ತರಣೆಯಾಗಿಲ್ಲ. ಇದರಿಂದ ಬಹಳ ಸಮಸ್ಯೆಯಾಗುತ್ತಿದೆ.

ಅಖಂಡ ಶ್ರೀನಿವಾಸಮೂರ್ತಿ: ಈ ರಸ್ತೆ ವಿಸ್ತರಣೆಗೆ ಹಲವು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಿವೆ. ದಿಣ್ಣೂರು ರಸ್ತೆ ಮತ್ತು ಟ್ಯಾನರಿ ರಸ್ತೆಗೆ ಹೊಸ ಕಾಯಕಲ್ಪ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT