ಗುರು ರಾಘವೇಂದ್ರ ಬ್ಯಾಂಕ್ ಹಗರಣ: ‘ಸಿಬಿಐಗೆ ವಹಿಸಿದರೆ ಸಾಕ್ಷ್ಯ ನೀಡುತ್ತೇವೆ’

ಬೆಂಗಳೂರು: ‘ಗುರು ರಾಘವೇಂದ್ರ ಬ್ಯಾಂಕ್ ಹಗರಣವನ್ನು ಸಿಬಿಐಗೆ ವಹಿಸುವುದಾಗಿ ಸಹಕಾರ ಸಚಿವರು ಭರವಸೆ ನೀಡಿದ್ದಾರೆ. ಆದರೆ, ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಆಗಿಲ್ಲ’ ಎಂದು ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಹೇಳಿದರು.
ಕೆಪಿಸಿಸಿ ವಕ್ತಾರರಾದ ರಮೇಶ್ ಬಾಬು ಮತ್ತು ಶಂಕರ್ ಗುಹಾ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ಯಾಂಕಿನಲ್ಲಿ ಬಹುತೇಕ ಬೋಗಸ್ ಸಾಲ ನೀಡಲಾಗಿದೆ. ಅವರು ಯಾರು ಎಂದು ಸರ್ಕಾರಕ್ಕೂ ಗೊತ್ತಿದೆ. ವರದಕ್ಷಿಣೆ ಕಿರುಕುಳ ದೂರು ಬಂದರೆ ಇಡೀ ಮನೆಯವರನ್ನು ಪೊಲೀಸರು ಕರೆದೊಯ್ಯುತ್ತಾರೆ. ಆದರೆ, ಇಲ್ಲಿ ಸಾಲ ಮಾಡಿರುವವರ ಮನೆಯವರು ಹಾಗೂ ಅವರ ಆಸ್ತಿ ಯಾಕೆ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ’ ಎಂದರು.
‘ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಸರಿಯಾದ ತನಿಖೆ ಮಾಡಿದರೆ ಸರ್ಕಾರ ಯಾರ ರಕ್ಷಣೆ ಮಾಡುತ್ತಿದೆ ಎಂದು ಗೊತ್ತಾಗುತ್ತದೆ. ಇಲ್ಲಿ ಕಾನೂನಾತ್ಮಕವಾಗಿ ಏನೂ ನಡೆದಿಲ್ಲ. ಇದರಲ್ಲಿ ದೊಡ್ಡವರ ಪಾತ್ರ ಇದೆ. ಸಿಬಿಐ ತನಿಖೆಗೆ ನೀಡಿದರೆ ನಾವು ನಮ್ಮ ಬಳಿ ಇರುವ ಸಾಕ್ಷ್ಯಗಳನ್ನು ನೀಡುತ್ತೇವೆ’ ಎಂದರು.
ಶಂಕರ್ ಗುಹಾ ಮಾತನಾಡಿ, ‘ಬ್ಯಾಂಕಿನಿಂದ ಸಾಲ ತೆಗೆದುಕೊಂಡಿರುವ ದಾಖಲೆ ಇದೆ. ಅದಕ್ಕೆ ನೀಡಿರುವ ಆಸ್ತಿ ದಾಖಲೆಯೂ ಇದೆ. ಆದರೆ, ಸಾಲದ ಹಣ ವರ್ಗಾವಣೆ ಆಗಿರುವ ದಾಖಲೆ ಇಲ್ಲ. ನಾನು ಹಲವು ಬಾರಿ ಸಿಬಿಐಗೆ ವಿಚಾರಣೆ ನೀಡಿ ಎಂದು ಮನವಿ ಮಾಡಿದರೂ ಪರಿಗಣಿಸಲಿಲ್ಲ. ಆದರೆ, ಈಗ ಮುಂದಾಗಿರುವುದು ರಾಜಕೀಯ ಪ್ರೇರಣೆಯೋ, ಅಥವಾ ಇಲ್ಲಿ ಏನೂ ಸಿಗಲ್ಲ ಎಂಬ ಖಚಿತತೆ ಸಿಕ್ಕಿದೆಯೇ ಗೊತ್ತಿಲ್ಲ’ ಎಂದರು.
‘ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ನೀಡಿ ಠೇವಣಿದಾರರಿಗೆ ನ್ಯಾಯ ಒದಗಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಹಾಗೂ ಠೇವಣಿದಾರರಿಗೆ ಹಣ ವಾಪಸ್ ಸಿಗುವಂತೆ ಮಾಡಬೇಕು’ ಎಂದು ರಮೇಶ್ ಬಾಬು ಆಗ್ರಹಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.