ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗಮ ಸಂಚಾರಕ್ಕೆ ಲೆವೆಲ್ ಕ್ರಾಸಿಂಗ್ ತೊಡಕು

ನಗರದಲ್ಲಿ 26 ಲೆವೆಲ್‌ ಕ್ರಾಸಿಂಗ್: ಸಂಚಾರ ದಟ್ಟಣೆ ನಡುವೆ ಸಿಲುಕಿ ನಿತ್ಯ ಪರದಾಡುವ ವಾಹನ ಸವಾರರು
Last Updated 23 ಮೇ 2022, 20:06 IST
ಅಕ್ಷರ ಗಾತ್ರ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದಿಗೂ 26 ರೈಲ್ವೆ ಲೆವೆಲ್ ಕ್ರಾಸಿಂಗ್‌ಗಳಿದ್ದು, ರೈಲುಗಳು ಬಂದರೆ ವಾಹನ ಸವಾರರು ಕಾದು ನಿಲ್ಲುವುದು ತಪ್ಪಿಲ್ಲ.

ನಗರದಲ್ಲಿರುವ ಲೆವೆಲ್‌ ಕ್ರಾಸಿಂಗ್‌ಗಳ ಪೈಕಿ ಬಾಣಸವಾಡಿ–ಹೆಬ್ಬಾಳ ನಡುವೆಯೇ ಅತೀ ಹೆಚ್ಚು ಆರು ಲೆವೆಲ್ ಕ್ರಾಸಿಂಗ್‌ಗಳಿವೆ. ಕಾರ್ಮೆಲರಾಮ್ ರೈಲು ನಿಲ್ದಾಣ–ಬೈಯಪ್ಪನಹಳ್ಳಿ, ಹೆಬ್ಬಾಳ–ಯಶವಂತಪುರ, ಚನ್ನಸಂದ್ರ–ಯಲಹಂಕ ನಡುವೆ ತಲಾ ಮೂರು ಲೆವೆಲ್ ಕ್ರಾಸಿಂಗ್‌ಗಳು ಇವೆ.

ನಗರ ಬೆಳೆದಂತೆ ವಾಹನಗಳ ದಟ್ಟಣೆ ಸಮಸ್ಯೆ ನಗರವನ್ನು ಇನ್ನಿಲ್ಲದೆ ಕಾಡುತ್ತಿದೆ. ರೈಲ್ವೆ ಲೆವೆಲ್ ಕ್ರಾಸಿಂಗ್‌ಗಳೂ ಇದಕ್ಕೆ ಕೊಡುಗೆ ನೀಡುತ್ತಿವೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಕೆಂಗೇರಿ ತಲುಪುವಷ್ಟರಲ್ಲಿ ಮೂರು ಲೆವೆಲ್‌ ಕ್ರಾಸಿಂಗ್‌ಗಳು ಸಿಗುತ್ತವೆ.

ನಗರದ ಮಧ್ಯಭಾಗದಲ್ಲೇ ಮಲ್ಲೇಶ್ವರ ರೈಲು ನಿಲ್ದಾಣದ ಪಕ್ಕದಲ್ಲೇ ಲೆವೆಲ್ ಕ್ರಾಸಿಂಗ್ ಉಳಿದುಕೊಂಡಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಯಶವಂತಪುರ ಮಾರ್ಗದಲ್ಲಿ ಸಾಕಷ್ಟು ರೈಲುಗಳು ಸಂಚರಿಸುತ್ತವೆ. ಪ್ರತಿ ರೈಲು ಸಂಚರಿಸುವಾಗಲೂ ಕನಿಷ್ಠ 15ರಿಂದ 20 ನಿಮಿಷ ಕಾಯಬೇಕಾದ ಅನಿವಾರ್ಯತೆ ವಾಹನ ಸವಾರರದ್ದು.

‘ವಾಹನ ದಟ್ಟಣೆ ಹೆಚ್ಚಿದ್ದು ಗೇಟ್ ಹಾಕಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಸಿಗ್ನಲ್ ಸಿಗದೆ ರೈಲುಗಳೂ ಕಾದು ನಿಲ್ಲಬೇಕಾದ ಸ್ಥಿತಿ ಎದುರಾಗುತ್ತದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಯಶವಂತಪುರ ತಲುಪಲು ಒಮ್ಮೊಮ್ಮೆ 20 ನಿಮಿಷ ಆಗುತ್ತದೆ’ ಎಂದು ರೈಲು ಪ್ರಯಾಣಿಕರು ಹೇಳುತ್ತಾರೆ.

‘ತುಮಕೂರು ಕಡೆಯಿಂದ ಬರುವ ರೈಲುಗಳು ವೇಗವಾಗಿ ಬಂದರೂ ನಗರ ವ್ಯಾಪ್ತಿ ಪ್ರವೇಶವಾದ ಬಳಿಕ ಯಶವಂತಪುರ ನಿಲ್ದಾಣ ತಲುಪಲು ಕನಿಷ್ಠ ಅರ್ಧಗಂಟೆ ಬೇಕಾಗುತ್ತದೆ. ಸಿಗ್ನಲ್‌ ಸಿಗುವುದು ವಿಳಂಬವಾಗಲು ಲೆವೆಲ್ ಕ್ರಾಸಿಂಗ್‌ಗಳ ಪಾತ್ರವೂ ಇದೆ’ ಎನ್ನುತ್ತಾರೆ ರೈಲ್ವೆ ಹೋರಾಟಗಾರರು.

ದಿಣ್ಣೂರು ಮುಖ್ಯರಸ್ತೆ, ಫ್ರೇಜರ್ ಟೌನ್, ಪಾಟರಿ ಟೌನ್‌, ಸೋಲದೇವನಹಳ್ಳಿ, ಶೆಟ್ಟಿಹಳ್ಳಿ ಬಳಿಯ ಲೆವೆಲ್ ಕ್ರಾಸಿಂಗ್ ದಾಟಲು ವಾಹನ ಸವಾರರು ನಿತ್ಯ ಪರದಾಡುತ್ತಿದ್ದಾರೆ. ರೈಲು ಹೋಗಲು ಗೇಟ್ ಹಾಕಿದರೆ ಕನಿಷ್ಠ 15ರಿಂದ 20 ನಿಮಿಷ ಕಾಯಲೇ ಬೇಕಾಗುತ್ತದೆ. ತುರ್ತು ಕಾರ್ಯನಿಮಿತ್ತ ಹೊರಟವರ ರೈಲ್ವೆ ಲೆವೆಲ್ ಕ್ರಾಸಿಂಗ್‌ ಬಳಿ ದಟ್ಟಣೆ ನಡುವೆ ಸಿಲುಕಿ ಪರಿತಪಿಸುವುದು ನಿತ್ಯದ ಗೋಳಾಗಿದೆ.

ಲೆವೆಲ್ ಕ್ರಾಸಿಂಗ್ ತೆಗೆದು ರಸ್ತೆ ಮೇಲ್ಸೇತುವೆ ಅಥವಾ ಕೆಳ ಸೇತುವೆ ನಿರ್ಮಿಸುವ ಕಾಮಗಾರಿಯನ್ನು ನೈರುತ್ಯ ರೈಲ್ವೆ ಮತ್ತು ಸ್ಥಳೀಯ ಆಡಳಿತಗಳು ಜಂಟಿಯಾಗಿ ನಿರ್ವಹಿಸಿಕೊಂಡು ಬಂದಿವೆ. ಆದರೂ, ನಗರದಲ್ಲಿ ಇಂದಿಗೂ 26 ಲೆವೆಲ್ ಕ್ರಾಸಿಂಗ್‌ಗಳು ‌‌ಉಳಿದಿರುವುದು ವಿಪರ್ಯಾಸ.

‘ಜನಶತಾಬ್ಧಿಯಂತ ಪ್ರತಿಷ್ಠಿತ ರೈಲು ಸಂಚಾರವನ್ನೇ ಸಿಗ್ನಲ್ ಸಿಗದೆ ನಿಲ್ಲಿಸಿರುವ ಉದಾಹರಣೆಗಳು ಇವೆ. ರಾಮೋಹಳ್ಳಿ ರಸ್ತೆಯಲ್ಲಿ ಲೆವೆಲ್ ಕ್ರಾಸಿಂಗ್ ಇದೆ. ಅಲ್ಲಿ ರಸ್ತೆಯೂ ಕಿರಿದಾಗಿದ್ದು, ವಾಹನ ಸವಾರರು ಅದರಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ಲೆವೆಲ್ ಕ್ರಾಸಿಂಗ್ ಮುಕ್ತಗೊಳಿಸಿದರೆ ರೈಲುಗಳು ಮತ್ತು ಬೇರೆ ವಾಹನಗಳ ಸಂಚಾರ ಸುಗಮ ಆಗಲಿದೆ’ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಕೃಷ್ಣಪ್ರಸಾದ್.

ಎಲ್ಲೆಲ್ಲಿ ಲೆವೆಲ್ ಕ್ರಾಸಿಂಗ್?
ಕಾರ್ಮೆಲರಾಮ್ ರೈಲು ನಿಲ್ದಾಣ– ಬೈಯಪ್ಪನಹಳ್ಳಿ ನಡುವೆ 3 ಲೆವೆಲ್ ಕ್ರಾಸಿಂಗ್, ಬಾಣಸವಾಡಿ–ಬೈಯಪ್ಪನಹಳ್ಳಿ ನಡುವೆ 1, ಬಾಣಸವಾಡಿ– ಹೆಬ್ಬಾಳ ನಡುವೆ 6, ಹೆಬ್ಬಾಳ–ಯಶವಂತಪುರ ನಿಲ್ದಾಣಗಳ ನಡುವೆ 3 ಲೆವೆಲ್ ಕ್ರಾಸಿಂಗ್‌ಗಳಿವೆ.

ಚನ್ನಸಂದ್ರ–ಯಲಹಂಕ ನಡುವೆ 3, ಬೈಯಪ್ಪನಹಳ್ಳಿ-ಕಂಟೋನ್ಮೆಂಟ್ ನಡುವೆ 1, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ– ನಾಯಂಡಹಳ್ಳಿ ನಡುವೆ 1, ನಾಯಂಡಹಳ್ಳಿ– ಕೆಂಗೇರಿ ನಡುವೆ 2, ಯಶವಂತಪುರ– ಚಿಕ್ಕಬಾಣಾವರ ನಡುವೆ 1, ಯಶವಂತಪುರ–ಯಲಹಂಕ ನಡುವೆ 1, ಯಲಹಂಕ–ದೇವನಹಳ್ಳಿ ನಡುವೆ 2 ಲೆವೆಲ್‌ ಕ್ರಾಸಿಂಗ್‌ಗಳು ಇವೆ.

ಮೂರು ಕಡೆ ಸೇತುವೆಗೆ ಯೋಜನೆ
ಮೂರು ಕಡೆ ಕೆಳ ಸೇತುವೆ ನಿರ್ಮಿಸಿ ಲೆವೆಲ್ ಕ್ರಾಸಿಂಗ್ ಮುಕ್ತಗೊಳಿಸಲು ಯೋಜನೆ ಸಿದ್ಧವಾಗಿದೆ.

ಪೂರ್ವ ಬೆಂಗಳೂರಿನ ಫ್ರೇಜರ್ ಟೌನ್, ಪಾಟರಿ ಟೌನ್ ಬಳಿ ರೈಲು ಹಳಿಗೆ ಕೆಳ ಸೇತುವೆಗಳನ್ನು ನಿರ್ಮಿಸಲು ನೈರುತ್ಯ ರೈಲ್ವೆ ವಿಸ್ತೃತ ಯೋಜನೆ(ಡಿ‍ಪಿಆರ್) ಸಿದ್ಧಪಡಿಸಿದ್ದು, ₹15 ಕೋಟಿ ಹಣ ಒದಗಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ(ಬಿಎಂಆರ್‌ಸಿಎಲ್) ಮುಂದಾಗಿದೆ.

ದಿಣ್ಣೂರು ಮುಖ್ಯ ರಸ್ತೆಯಲ್ಲಿ ರೈಲ್ವೆ ಕೆಳಸೇತುವೆಗೆ ಹಣ ಒದಗಿಸಲು ಬಿಬಿಎಂಪಿ ಸಮ್ಮತಿಸಿದೆ.

‘ಹಂತ–ಹಂತವಾಗಿ ಲೆವೆಲ್ಕ್ರಾಸಿಂಗ್‌ಗೆ ಮುಕ್ತಿ’
‘ಗೇಟ್ ಇಲ್ಲದ ಮಾನವ ರಹಿತ ಲೆವೆಲ್ ಕ್ರಾಸಿಂಗ್ ಈಗ ಇಲ್ಲ. ಗೇಟ್‌ ಸಹಿತ ಲೆವೆಲ್ ಕ್ರಾಸಿಂಗ್‌ಗಳಿದ್ದು, ಅವುಗಳ ಸಂಖ್ಯೆಗಳನ್ನೂ ಕಡಿಮೆ ಮಾಡಲು ನೈರುತ್ಯ ರೈಲ್ವೆ ಹಂತ–ಹಂತವಾಗಿ ಪ್ರಯತ್ನಿಸುತ್ತಿದೆ’ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನಿಶ್ ಹೆಗಡೆ ತಿಳಿಸಿದರು.

‘ರೈಲ್ವೆ ಮೇಲ್ಸೇತುವೆ ಅಥವಾ ರೈಲ್ವೆ ಕೆಳ ಸೇತುವೆ ನಿರ್ಮಿಸುವ ಮೂಲಕ ಲೆವೆಲ್ ಕ್ರಾಸಿಂಗ್ ತೆಗೆಯಲಾಗುತ್ತಿದೆ. ರೈಲು ನಿಲ್ದಾಣಗಳ ವ್ಯಾಪ್ತಿಯಲ್ಲಿ ಲೆವೆಲ್ ಕ್ರಾಸಿಂಗ್ ಇದ್ದರೆ ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಸಮಪಾಲು ಹಣ ಒದಗಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ನಿಲ್ದಾಣದ ಹೊರ ಭಾಗದಲ್ಲಿ ಇದ್ದರೆ ಸ್ಥಳೀಯ ಆಡಳಿತದ ಅನುದಾನದಲ್ಲೇ ಕಾಮಗಾರಿ ನಿರ್ವಹಿಸಲಾಗುತ್ತದೆ ಎಂದು ಹೇಳಿದರು.

‘ಬೆಳ್ಳಂದೂರು, ಕೊಳತ್ತೂರು ದಿಣ್ಣೆ ಬಳಿ ಕಾಮಗಾರಿ ಪ್ರಗತಿಯಲ್ಲಿದೆ. ರೈಲ್ವೆ ಮೇಲ್ಸೇತುವೆ ನಿರ್ಮಿಸುವಾಗ ಭೂಸ್ವಾಧೀನ ಸಮಸ್ಯೆಯೂ ಎದುರಾಗುತ್ತದೆ. ನಮ್ಮ ವಲಯ ವ್ಯಾಪ್ತಿಯಲ್ಲಿ 2014ರಿಂದ ಈಚೆಗೆ 77 ರೈಲ್ವೆ ಮೇಲ್ಸೇತುವೆ, 388 ಕೆಳಸೇತುವೆಗಳನ್ನು ನೈರುತ್ಯ ರೈಲ್ವೆ ನಿರ್ಮಿಸಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT