ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ | ರಸ್ತೆ, ಮೇಲ್ಸೇತುವೆಗಳಲ್ಲೇ ನಿಂತ ನೀರು: ಬಿಬಿಎಂಪಿ ಭರವಸೆ ಹುಸಿ

Published 21 ಜೂನ್ 2024, 0:30 IST
Last Updated 21 ಜೂನ್ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹಲವೆಡೆ ಗುರುವಾರ ಸಾಧಾರಣ ಮಳೆಯಾಗಿದೆ. ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ಸಂಕಷ್ಟ ಉಂಟಾಯಿತು. ‘ಯಾವುದೇ ಸಮಸ್ಯೆಯಾಗುವುದಿಲ್ಲ’ ಎಂಬ ಬಿಬಿಎಂಪಿ ಭರವಸೆ ಹುಸಿಯಾಗಿದೆ.

‘ಮಳೆಗಾಲಕ್ಕೆ ಎಲ್ಲ ರೀತಿಯ ಮುಂಜಾಗ್ರತೆ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ರಸ್ತೆಗಳಲ್ಲಿ ನೀರು ನಿಲ್ಲದಂತೆ ಸ್ವಚ್ಛತಾ ಕಾರ್ಯ ನಡೆಸಲಾಗಿದೆ. ಎರಡು ಮೂರು ದಿನ ಮಳೆ ಬಿಡುವು ನೀಡಿದರೂ ಎಲ್ಲ ಮುಂಜಾಗ್ರತೆ, ಸ್ವಚ್ಛತೆ ಕಾರ್ಯ ಮುಗಿಯುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೇರಿದಂತೆ ಉನ್ನತ ಅಧಿಕಾರಿಗಳು ಭರವಸೆ ನೀಡಿದ್ದರು.

ಎಂ.ಜಿ. ರಸ್ತೆಯಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ವೃತ್ತದಲ್ಲಿ ಮಳೆಯಿಂದ ಯಾವಾಗಲೂ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ಇದಕ್ಕೆ ಶಾಶ್ವತ ಪರಿಹಾರ ನೀಡುವುದಾಗಿ ಬಿಬಿಎಂಪಿ ವರ್ಷಗಳಿಂದಲೂ ಹೇಳುತ್ತಿದೆ. ಆದರೆ, ಕಳೆದ ವಾರ ಆರಂಭಿಸಿರುವ ಸ್ವಚ್ಛತಾ ಕಾರ್ಯ ಇನ್ನೂ ಮುಗಿಯದೆ, ಗುರುವಾರ ಮಧ್ಯಾಹ್ನ ಸುರಿದ ಸಾಧಾರಣ ಮಳೆಯಿಂದಲೇ ಸಂಕಷ್ಟ ಉಂಟಾಯಿತು. ಕಾಲುವೆ ಸ್ವಚ್ಛತೆ ಹಾಗೂ ದುರಸ್ತಿಯಿಂದ ನೀರು ಹರಿಯದೆ ಪೂರ್ಣವಾಗಿ ರಸ್ತೆಯಲ್ಲೇ ನಿಂತಿತ್ತು. ಇದರಿಂದ ಎಂ.ಜಿ. ರಸ್ತೆ ಆರಂಭದಿಂದ ಅಂತ್ಯದವರೆಗೂ ನೀರು ನಿಂತಿತ್ತು.

ಕಬ್ಬನ್‌ಪಾರ್ಕ್‌ ನಮ್ಮ ಮೆಟ್ರೊ ನಿಲ್ದಾಣದ ಬಳಿಯೂ ಮಳೆ ನೀರು ಚರಂಡಿಗೆ ಹರಿಯದೆ,  ರಾಜಭವನ ರಸ್ತೆಯಲ್ಲೇ ನಿಂತು ಸಂಚಾರಕ್ಕೆ ಅಡ್ಡಿಯಾಗಿತ್ತು. ಮಳೆ ನಿಂತು ಹಲವು ಗಂಟೆಗಳು ಕಳೆದರೂ ಈ ರಸ್ತೆಗಳಲ್ಲೇ ನೀರು ತುಂಬಿತ್ತು.

ಕಸ್ತೂರಬಾ ರಸ್ತೆಯನ್ನು ‘ಸ್ಮಾರ್ಟ್‌ ಸಿಟಿ’ ಯೋಜನೆಯಲ್ಲಿ ಅಭಿವೃದ್ಧಿ ಮಾಡಲಾಗಿದೆಯಾದರೂ, ಪ್ರತಿ ಮಳೆಗೂ ಇಲ್ಲಿ ಮ್ಯಾನ್‌ಹೋಲ್‌ ತುಂಬಿಹರಿಯುತ್ತದೆ. ಗುರುವಾರ ಮಧ್ಯಾಹ್ನ ಮಳೆ ನೀರಿನ ಜೊತೆಗೆ ಮ್ಯಾನ್‌ಹೋಲ್‌ನಿಂದ ಕೊಳಕು ನೀರು ಹೊರಗೆ ಹರಿದು, ಚರಂಡಿಯಲ್ಲಿ ಸಾಗಲು ಹಾದಿಯಿಲ್ಲದೆ ಕಸ್ತೂರಬಾ ರಸ್ತೆಯಲ್ಲೇ ತುಂಬಿಕೊಂಡಿತ್ತು.

ವಿಂಡ್ಸರ್‌ ಮ್ಯಾನರ್‌ ಮೇಲ್ಸೇತುವೆ, ಸಂಜಯ್‌ನಗರ ಕ್ರಾಸ್‌, ಒಟಿಸಿ ರಸ್ತೆ– ಎನ್‌ಆರ್‌ ಜಂಕ್ಷನ್‌ಗಳಲ್ಲೂ ಮಳೆನೀರು ರಸ್ತೆಯಲ್ಲೇ ನಿಂತು ಸಂಚಾರಕ್ಕೆ ಅಡ್ಡಿಯಾಯಿತು. ವಾಹನದಟ್ಟಣೆ ಉಂಟಾಗಿತ್ತು.

ಸಂಪಂಗಿರಾಮನಗರ, ವಿಧಾನಸೌಧ, ಕಬ್ಬನ್‌ಪಾರ್ಕ್‌, ಇಂದಿರಾನಗರ, ಪೀಣ್ಯಾ ಕೈಗಾರಿಕೆ ಪ್ರದೇಶ ಹಾಗೂ ದಾಸರಹಳ್ಳಿಯ ಸುತ್ತಮುತ್ತ ತಲಾ ಒಂದು ಸೆಂಟಿ ಮೀಟರ್‌ಗೂ ಅಧಿಕ ಮಳೆಯಾಯಿತು. ಪುಲಕೇಶಿನಗರ, ಹೊಯ್ಸಳನಗರ, ಕಾಟನ್‌ಪೇಟೆ, ಎಚ್ಎಎಲ್‌ ವಿಮಾನನಿಲ್ದಾಣ, ದೊಡ್ಡನಕ್ಕುಂದಿ, ನಂದಿನಿ ಲೇಔಟ್‌, ದೊಡ್ಡಬಿದರಕಲ್ಲು, ಮಾರುತಿ ಮಂದಿರದಲ್ಲಿ ಉತ್ತಮ ಮಳೆಯಾಯಿತು.

ಕಸ್ತೂರಬಾ ರಸ್ತೆಯಲ್ಲಿ ಮಳೆನೀರಿನೊಂದಿಗೆ ಮ್ಯಾನ್‌ಹೋಲ್‌ನ ಕೊಳಕು ನೀರೂ ರಸ್ತೆಯಲ್ಲೇ ನಿಂತಿತ್ತು
ಪ್ರಜಾವಾಣಿ ಚಿತ್ರ ಬಿ.ಕೆ. ಜನಾರ್ಧನ
ಕಸ್ತೂರಬಾ ರಸ್ತೆಯಲ್ಲಿ ಮಳೆನೀರಿನೊಂದಿಗೆ ಮ್ಯಾನ್‌ಹೋಲ್‌ನ ಕೊಳಕು ನೀರೂ ರಸ್ತೆಯಲ್ಲೇ ನಿಂತಿತ್ತು ಪ್ರಜಾವಾಣಿ ಚಿತ್ರ ಬಿ.ಕೆ. ಜನಾರ್ಧನ
‘ಎಂಜಿನಿಯರ್‌ಗಳು ರಸ್ತೆಗೆ ಬರಲಿ’
‘ಬಿಬಿಎಂಪಿ ಎಂಜಿನಿಯರ್‌ಗಳು ಆಯುಕ್ತರು ಕಚೇರಿಯಲ್ಲಿ ಕುಳಿತು ಸಿ.ಸಿ. ಕ್ಯಾಮೆರಾದಲ್ಲಿ ನೋಡಿ ಆ‍್ಯಪ್‌ಗಳನ್ನು ತಯಾರಿಸಲು ಆದ್ಯತೆ ನೀಡದೆ ರಸ್ತೆಗೆ ಬಂದು ನೋಡಲಿ. ಸಣ್ಣ ಮಳೆಬಂದರೂ ರಸ್ತೆಯಲ್ಲಿ ನೀರು ನಿಂತು ಸಾಕಷ್ಟು ಸಮಸ್ಯೆಯಾಗುತ್ತಿದೆ. ಎಂಜಿನಿಯರ್‌ಗಳು ಮುಖ್ಯ ಆಯುಕ್ತರು ಮಳೆ ಬಂದಾಗ ರಸ್ತೆಗೆ ಬರಲಿ ಸಮಸ್ಯೆಯ ಅರಿವಾಗುತ್ತದೆ’ ಎಂದು ವಾಹನ ಸವಾರ ರಮೇಶ್‌ ಭಟ್‌ ಆಕ್ರೋಶ ವ್ಯಕ್ತಪಡಿಸಿದರು. ಮೇಲ್ಸೇತುವೆಯಲ್ಲೂ ನೀರು ಟೌನ್‌ಹಾಲ್‌ನಿಂದ ಸಿರ್ಸಿ ವೃತ್ತದವರೆಗಿನ ಮೇಲ್ಸೇತುವೆ ನಾಯಂಡಹಳ್ಳಿ ಮೇಲ್ಸೇತುವೆಗಳ ಮೇಲೆ ಹಾಗೂ ಪ್ರಾರಂಭ ಸ್ಥಳಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ದ್ವಿಚಕ್ರ ವಾಹನಗಳ ಸವಾರರು ಸಾಕಷ್ಟು ಪರದಾಡಿದರು. ‘ಮೇಲ್ಸೇತುವೆಗಳ ಮೇಲೆ ಸ್ವಚ್ಛತಾ ಕಾರ್ಯ ಕೈಗೊಂಡಿಲ್ಲ. ಮಳೆನೀರು ರಸ್ತೆಯಲ್ಲೇ ನಿಲ್ಲುತ್ತಿದೆ. ಮೇಲ್ಸೇತುವೆಗಳ ಮೇಲೆ ದೀಪಗಳೂ ಹಾಳಾಗಿವೆ. ಬಲ್ಪ್‌ಗಳನ್ನೂ ಬದಲಿಸಿಲ್ಲ’ ಎಂದು ವಾಹನ ಸವಾರ ಶ್ರೀನಿವಾಸ್‌ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT