ಬೆಂಗಳೂರು: ನಗರದ ಬಹುತೇಕ ಪ್ರದೇಶಗಳಲ್ಲಿ ಮಂಗಳವಾರ ಸಂಜೆ ಉತ್ತಮ ಮಳೆಯಾಯಿತು.
ಸಂಜೆ 5 ಗಂಟೆಯಿಂದ ಆರಂಭವಾದ ಮಳೆ ಕೆಲವು ಪ್ರದೇಶಗಳಲ್ಲಿ ಬಿರುಸಾಗಿತ್ತು. 100 ವಾರ್ಡ್‌ಗಳಲ್ಲಿ ಮಳೆಯಾಗಿದ್ದು, ಹೆಮ್ಮಿಗೆಪುರದಲ್ಲಿ ಅತಿ ಹೆಚ್ಚು ಅಂದರೆ 1.6 ಸೆಂ.ಮೀ ಮಳೆಯಾಯಿತು.
ವೀರಣ್ಣಪಾಳ್ಯ ಸರ್ವೀಸ್ ರಸ್ತೆಯಿಂದ ಹೆಬ್ಬಾಳ ವೃತ್ತ, ದೇವಿನಗರ ಕ್ರಾಸ್‌ನಿಂದ ಹೆಬ್ಬಾಳ ವೃತ್ತ, ಹುಣಸೆಮಾರನಹಳ್ಳಿಯಿಂದ ವಿಮಾನ ನಿಲ್ದಾಣ ರಸ್ತೆ, ನಾಗವಾರ ಜಂಕ್ಷನ್ ಮತ್ತು ಹೆಬ್ಬಾಳ ನಡುವಿನ ಹೊರ ವರ್ತುಲ ರಸ್ತೆ, ಬಿಇಎಲ್ ಜಂಕ್ಷನ್‌ನಿಂದ ಹೆಬ್ಬಾಳ, ಸಂಜಯನಗರ ಕ್ರಾಸ್, ಹೆಣ್ಣೂರು– ಬಾಗಲೂರು ರಸ್ತೆ, ಗೆದ್ದಲಹಳ್ಳಿ ರೈಲ್ವೆ ಕೆಳಸೇತುವೆಗಳಲ್ಲಿ ರಸ್ತೆಯಲ್ಲೇ ಮಳೆ ನೀರು ನಿಂತಿದ್ದರಿಂದ ವಾಹನ ಸಂಚಾರ ನಿಧಾನಗತಿಯಲ್ಲಿತ್ತು.
ಪದ್ಮನಾಭನಗರ, ಬನಶಂಕರಿ, ಬಸವನಗುಡಿ, ರಾಜರಾಜೇಶ್ವರಿನಗರ, ಕೆಂಗೇರಿಯಲ್ಲಿ ಹೆಚ್ಚು ಮಳೆಯಾಗಿದೆ. ಪಶ್ಚಿಮ ಕಾರ್ಡ್ ರಸ್ತೆಯ ಸಿಟಿ ಆಸ್ಪತ್ರೆ ಬಸ್ ನಿಲ್ದಾಣದ ಬಳಿ ಮರ ಉರುಳಿ ಬಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.
ಸೋಮವಾರ ತಡ ರಾತ್ರಿವರೆಗೆ ಸುರಿದ ಭಾರಿ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಹೈರಾಣಾಗಿದ್ದರು. ನಗರದ 198 ವಾರ್ಡ್‌ಗಳಲ್ಲೂ ಮಳೆ ಸುರಿದಿದೆ. ಒಂದು ಸೆಂ.ಮೀನಿಂದ 9 ಸೆಂ.ಮೀಟರ್‌ವರೆಗೂ ಮಳೆಯಾಗಿದೆ. 10 ವಾರ್ಡ್‌ಗಳಲ್ಲಿ ಅತಿಹೆಚ್ಚು ಮಳೆ ಸುರಿದಿದೆ.
ವಿದ್ಯಾಪೀಠ, ಕತ್ರಿಗುಪ್ಪೆ, ಹೊಸಕೆರೆಹಳ್ಳಿ, ಬಸವನಗುಡಿ, ಯಲಚೇನಹಳ್ಳಿ, ಗಣೇಶ ಮಂದಿರ, ಬನಶಂಕರಿ ದೇವಸ್ಥಾನ, ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಚಿಕ್ಕಲ್ಲಸಂದ್ರ ಪ್ರದೇಶದಲ್ಲಿ ತಲಾ 9.6 ಸೆಂ.ಮೀ ಮಳೆಯಾಗಿದೆ.
ಜ್ಞಾನಭಾರತಿ, ಹೆಮ್ಮಿಗೆಪುರ, ರಾಜರಾಜೇಶ್ವರಿನಗರ, ಕೆಂಗೇರಿ, ನಾಯಂಡಹಳ್ಳಿ, ಎಸ್.ಕೆ. ಗಾರ್ಡನ್, ಪುಲಕೇಶಿನಗರ, ಹೆಬ್ಬಾಳ, ಗಂಗಾನಗರ, ಜೆ.ಸಿ.ನಗರ, ದೇವರಜೀವನಹಳ್ಳಿ, ಕಾವಲ್‌ಬೈರಸಂದ್ರ, ವಿಶ್ವನಾಥ ನಾಗೇನಹಳ್ಳಿ, ಗಂಗೇನಹಳ್ಳಿ, ಉಲ್ಲಾಳು ಸುತ್ತಮುತ್ತ ತಲಾ 6.6 ಸೆಂ.ಮೀ ಮಳೆಯಾಗಿದೆ.
ಆಗಸ್ಟ್ 10ರವರೆಗೂ ನಗರದಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.