ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಧಗೆ ಮುಟ್ಟಿಸಿದ ಚುರುಕು; ಮಳೆ ಪ್ರೀತಿಯ ಹುರುಪು!

Published 3 ಜೂನ್ 2024, 0:42 IST
Last Updated 3 ಜೂನ್ 2024, 0:42 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಬೇಸಿಗೆಯಲ್ಲಿ ಎದುರಾದ ಜಲ ಕ್ಷಾಮಕ್ಕೆ ಬೇಸತ್ತ ಜನ ತಮ್ಮ ಮನೆಗಳಿಗೆ ಸ್ವಯಂಪ್ರೇರಿತರಾಗಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. ಕಾನೂನು, ನಿಯಮಗಳಿಂದ ಸಾಧ್ಯವಾಗದ ಜಲ ಸಂರಕ್ಷಣಾ ಕಾರ್ಯವೊಂದನ್ನು ಈ ವರ್ಷದ ನಾಲ್ಕು ತಿಂಗಳ ಬಿರು ಬೇಸಿಗೆ ಮಾಡಿಸಿದೆ.

ಜಯನಗರದಲ್ಲಿರುವ ಸ‌ರ್ ಎಂ. ವಿಶ್ವೇಶ್ವರಯ್ಯ ಮಳೆ ಸುಗ್ಗಿ ಕೇಂದ್ರದ ಮಾಹಿತಿ ಪ್ರಕಾರ ಕಳೆದ ಐದು ತಿಂಗಳಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಮಂದಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಂಡಿದ್ದಾರೆ. ತಜ್ಞರು, ಪ್ಲಂಬರ್‌ಗಳನ್ನು ಎಡತಾಕಿ ಕೊಳವೆ ಬಾವಿಗೆ ಜಲ ಮರುಪೂರಣ ಮಾಡಿಸಿದ್ದಾರೆ. ಅಪಾರ್ಟ್‌ಮೆಂಟ್‌ ನಿವಾಸಿಗಳು ಇಂಗುಬಾವಿಗಳು, ಭೂಗತ ತೊಟ್ಟಿಗಳನ್ನು ಮಾಡಿಸಿದ್ದಾರೆ. ಕೆಲವರು ಹಳೆಯ ತೆರೆದ ಬಾವಿಗಳನ್ನು ಪುನಶ್ಚೇತನಗೊಳಿಸಿದ್ದಾರೆ.

ಮಳೆ ನೀರು ಸಂಗ್ರಹ ವಿಧಾನ ಅಳವಡಿಕೆ ಬಗ್ಗೆ ಮಾಹಿತಿ ಪಡೆಯಲು ಕಳೆದ ನಾಲ್ಕು ತಿಂಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಈ ಕೇಂದ್ರಕ್ಕೆ (ಥೀಮ್‌ ಪಾರ್ಕ್‌) ಭೇಟಿ ನೀಡಿದ್ದಾರೆ. ಫೆಬ್ರುವರಿ ಒಂದೇ ತಿಂಗಳಲ್ಲಿ ಭೇಟಿ ನೀಡಿರುವವರ ಸಂಖ್ಯೆ 1,600ಕ್ಕೂ ಹೆಚ್ಚು. ಅವರೆಲ್ಲರೂ ಮಳೆನೀರು ಸಂಗ್ರಹದ ಮಾದರಿ ವೀಕ್ಷಿಸಿ, ಅದನ್ನು ಅಳವಡಿಸುವ ತಜ್ಞರ ಸಂಪರ್ಕ ಸಂಖ್ಯೆ ಪಡೆದು, ಅನುಷ್ಠಾನಕ್ಕೂ ಮುಂದಾಗಿದ್ದಾರೆ. 

ಅಪಾರ್ಟ್‌ಮೆಂಟ್‌ಗಳೇ ಹೆಚ್ಚು:

ಮಳೆ ನೀರು ಹಿಡಿಯಲು ಮತ್ತು ಇಂಗಿಸಲು ಆಸಕ್ತಿ ತೋರಿದವರಲ್ಲಿ ಅಪಾರ್ಟ್‌ಮೆಂಟ್‌ ನಿವಾಸಿಗಳೇ ಹೆಚ್ಚು ಎನ್ನುವುದು ಈ ವಿಧಾನ ಅಳವಡಿಸುವ ತಜ್ಞರ ಅಭಿಪ್ರಾಯ. ‘ಫೆಬ್ರುವರಿಯಿಂದ ಈಚೆಗೆ ಸುಮಾರು 300 ಕರೆಗಳು ಬಂದಿವೆ. ಮೂರು ತಿಂಗಳಲ್ಲಿ 80 ಇಂಗುಬಾವಿಗಳು, 50ಕ್ಕೂ ಹೆಚ್ಚು ಮನೆ, ಅಪಾರ್ಟ್‌ಮೆಂಟ್‌ಗಳಿಗೆ ಬೋರ್‌ವೆಲ್ ರೀಚಾರ್ಜ್ ವಿಧಾನ ಅಳವಡಿಸಿದ್ದೇನೆ.‌ ನೂರಕ್ಕೂ ಹೆಚ್ಚು ಮಂದಿಯಿಂದ ಬೇಡಿಕೆ ಬಂದಿದೆ' ಎಂದು ಡ್ರಾಪ್ ಬೈ ಡ್ರಾಪ್ ಸಂಸ್ಥೆಯ ಅಚ್ಚನಹಳ್ಳಿ ಸುಚೇತನ ಹೇಳಿದರು.

‘ಸುಮಾರು ಐವತ್ತಕ್ಕೂ‌ ಹೆಚ್ಚು ಕರೆ ಬಂದಿದ್ದವು. 10–12 ಮನೆ, ಅಪಾರ್ಟ್‌ಮೆಂಟ್‌ಗಳಿಗೆ ಅಳವಡಿಸಿದ್ದೇನೆ’ ಎಂದು ಚಿತ್ರದುರ್ಗದ ಜಲತಜ್ಞ ಎನ್‌. ದೇವರಾಜರೆಡ್ಡಿ ಹೇಳಿದರು.

ಇಂಗು ಬಾವಿಗಳಿಗೆ ಬೇಡಿಕೆ:

ಮಳೆ ನೀರು ಸಂಗ್ರಹಿಸುವ ಜೊತೆಗೆ, ಹೆಚ್ಚಾದ ನೀರನ್ನು ಭೂಮಿಗೆ ಇಂಗಿಸಲು ಆಸಕ್ತಿ ತೋರುತ್ತಿರುವವರೇ ಹೆಚ್ಚು. ‘ಮೂರ್ನಾಲ್ಕು ತಿಂಗಳಲ್ಲಿ ಬೆಂಗಳೂರು ಸುತ್ತ 200ಕ್ಕೂ ಹೆಚ್ಚು ಬಾವಿಗಳ ಕೆಲಸ ಮಾಡಿದ್ದೇವೆ. ಇದರಲ್ಲಿ ಇಂಗುಬಾವಿಗಳು, ತೆರೆದ ಬಾವಿಗಳ ಪುನಶ್ಚೇತನವೂ ಸೇರಿದೆ. ಜಲಮಂಡಳಿ, ಬಯೋಮ್ ಸಂಸ್ಥೆ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಮಾಹಿತಿ ಪಡೆದು ಜನರು ಕರೆ ಮಾಡಿದ್ದಾರೆ’ ಎನ್ನುತ್ತಾರೆ ಇಂಗುಬಾವಿ ತೋಡುವ ಆನೇಕಲ್‌ನ ಶ್ರೀನಿವಾಸ್.

ಇಷ್ಟೆಲ್ಲ ಆಸಕ್ತಿ ತೋರಿದವರಲ್ಲಿ ಅನೇಕರಿಗೆ ಜಲಮರುಪೂರಣ ಅಳವಡಿಕೆಗೆ ಕೆಲವು ತಾಂತ್ರಿಕ ಹಾಗೂ ತಾಂತ್ರಿಕೇತರ ಸಮಸ್ಯೆಗಳೂ ಇವೆ. ಅವುಗಳಿಗೆ ಸೂಕ್ತ ಪರಿಹಾರ ಲಭ್ಯವಾದರೆ, ಇನ್ನಷ್ಟು ಮಂದಿ ಸ್ವಯಂ ಪ್ರೇರಿತರಾಗಿ ಮಳೆ ನೀರು ಸಂಗ್ರಹಕ್ಕೆ ಮುಂದಾಗಬಹುದು ಎಂಬುದು ದೇವರಾಜರೆಡ್ಡಿಯವರ ಅಭಿಪ್ರಾಯ.

ಮಳೆ ನೀರು ಸಂಗ್ರಹ ವಿಧಾನ ಅಳವಡಿಕೆ ಹಾಗೂ ಇದಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಮಾಹಿತಿಗಳು, ಮಾದರಿಗಳು, ಪ್ಲಂಬರ್‌ ದೂರವಾಣಿ ಸಂಖ್ಯೆಗಳು ಜಯನಗರದ ಥೀಮ್ ಪಾರ್ಕ್‌ನಲ್ಲಿ ಲಭ್ಯವಿವೆ. ಕೇಂದ್ರವನ್ನು (ಸಂಪರ್ಕ ಸಂಖ್ಯೆ : 080– 26653666) ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎನ್ನುತ್ತಾರೆ ಜಲಮಂಡಳಿ ಅಧಿಕಾರಿಗಳು. 

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಥೀಮ್ ಪಾರ್ಕ್‌ನಿಂದ ಮಾಹಿತಿ ಪಡೆದು ಅಪಾರ್ಟ್‌ಮೆಂಟ್‌ನಲ್ಲಿ ಇಂಗು ಗುಂಡಿ ಮಾಡಿಸಿದ್ದೇವೆ. ಎರಡ್ಮೂರು ದಿನ ಮಳೆ ಬಂತು. ನೀರು ಭೂಮಿಗೆ ಇಂಗುತ್ತಿದೆ.
ಅಶೋಕ ಚಕ್ರವರ್ತಿ ಲೇಕ್ ವ್ಯೂ ಅಪಾರ್ಟ್‌ಮೆಂಟ್ ಯಡಿಯೂರು ಲೇಕ್ ಜಯನಗರ.

ಈ ಬೇಸಿಗೆಯಲ್ಲಿ ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ವಿಪರೀತ ನೀರಿನ ಸಮಸ್ಯೆ. ಒಂದು ಟ್ಯಾಂಕರ್ ನೀರನ್ನು 16 ಮನೆಯವರು ಬಳಸುವ ಮೂಲಕ ನೀರು ಎಷ್ಟು ಅಮೂಲ್ಯ ಎನ್ನುವ ಪಾಠ ಕಲಿತಂತಾಯ್ತು. ಫೆಬ್ರುವರಿಯಲ್ಲಿ ಕೊಳವೆಬಾವಿ ರೀಚಾರ್ಜ್ ಮಾಡಿಸಿದೆವು‌. ಎರಡು ಮಳೆಗೆ ಬೋರ್‌ವೆಲ್‌ನಲ್ಲಿ ಒಂದಿಷ್ಟು ನೀರುಬಂದಿದೆ. ಅಕ್ಕಪಕ್ಕದ ಮನೆಯವರಿಗೂ ಇದೇ ವಿಧಾನ ಅನುಸರಿಸಲು ಹೇಳುತ್ತಿದ್ದೇವೆ.

-ಕೌಶಲ್ಯ ನಾಗೇಶ್ ಅದಿತಿ ರೆಸಿಡೆನ್ಸಿ ರಾಜರಾಜೇಶ್ವರಿನಗರ

ನಮ್ಮ ಅಪಾರ್ಟ್‌ಮೆಂಟ್‌ನಲ್ಲಿದ್ದ ಎರಡು ಬೋರ್‌ವೆಲ್‌ಗಳಲ್ಲೂ ನೀರು ಬತ್ತಿದವು. ನೀರಿಗೆ ತುಂಬಾ ತೊಂದರೆಯಾಯ್ತು‌. ಮೂರು ತಿಂಗಳು ಟ್ಯಾಂಕರ್ ನೀರಿಗೆ ಮೊರೆ ಹೋದೆವು. ನೀರಿನ ಖರ್ಚು ಹೆಚ್ಚಾಯ್ತು. ಗುಣಮಟ್ಟದ ನೀರು ಸಿಗುತ್ತಿರಲ್ಲಿಲ್ಲ. ಈ ವರ್ಷದ ಮೊದಲ ಮಳೆ ನೀರನ್ನು ಹಿಡಿದು ಬಳಸಬೇಕೆಂದು ತೀರ್ಮಾನಿಸಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿದೆವು. ಇತ್ತೀಚೆಗೆ ನಾಲ್ಕೈದು ದಿನಗಳು ಸುರಿದ ಮಳೆಗೆ ಬೋರ್‌ವೆಲ್‌ಗಳು ಜಲಮರುಪೂರಣಗೊಂಡಿವೆ. ಸಂಪ್‌ನಲ್ಲಿಯೂ ಮಳೆ ನೀರು ಸಂಗ್ರಹಿಸಿ ಬಳಸುತ್ತಿದ್ದೇವೆ.  ‌

-ಅರುಲ್ ಸೆಲ್ವಂ ಅಧ್ಯಕ್ಷರು ವೈಟ್‌ಫೀಲ್ಡ್ ಶ್ರೀಸಾಯಿ ಎಮರಾಲ್ಡ್ ಅಪಾರ್ಟ್‌ಮೆಂಟ್‌ ಅಸೋಸಿಯೇಷನ್

ಕಾರ್ಯಾಗಾರಗಳು ಹೆಚ್ಚಾಗಲಿ…

ಥೀಮ್‌ ಪಾರ್ಕ್‌ನಲ್ಲಿ ಮಳೆ ನೀರು ಸಂಗ್ರಹ ಕುರಿತು ಹೆಚ್ಚು ಅರಿವು ಮೂಡಿಸುವ ಕಾರ್ಯಾಗಾರಗಳನ್ನು ಆಯೋಜಿಸಬೇಕು. ಇದಕ್ಕೆ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ಫೆಡರೇಷನ್‌ ಸದಸ್ಯರನ್ನು ಆಹ್ವಾನಿಸಬೇಕು. ಬಿಬಿಎಂಪಿಯವರು ವಾರ್ಡ್‌ ಸಮಿತಿಗಳನ್ನು ಬಳಸಿಕೊಂಡು ವಾರ್ಡ್‌ ಮಟ್ಟದಲ್ಲಿ ಇಂಥ ಕಾರ್ಯಕ್ರಮಗಳನ್ನು ಆಯೋಜಿಸಬಹುದು.  ಈ ಬಾರಿ ನೀರಿನ ಸಮಸ್ಯೆ ಹೆಚ್ಚಾಗಿ ಕಂಡುಬಂದಿದ್ದು ನಗರದ ಹೊರವಲಯದ ಬಡಾವಣೆಗಳಲ್ಲಿ. ಆ ಭಾಗದಲ್ಲಿರುವ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ನವರಿಗೆ ಈ ಬಗ್ಗೆ ಅರಿವು ಮೂಡಿಸಿ ಕಡ್ಡಾಯವಾಗಿ ಇಂಗು ಬಾವಿ ಕೊಳವೆಬಾವಿ ಮರುಪೂರಣದಂತಹ ಪದ್ಧತಿ ಅಳವಡಿಸಿಕೊಳ್ಳುವಂತೆ ಮಾಡಬೇಕು.

–ಎಸ್. ವಿಶ್ವನಾಥ್ ಬಯೋಮ್ ರಿಸರ್ಚ್‌ ಸೆಂಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT